ನೀತಿ ಕಥೆಗಳು

 

ಅಧಿಕಾರದ ಮದದಲ್ಲಿ ತೇಲಬೇಡ



ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ.

ಈಗ ಹೇಳಲಿರುವ ಕಥೆ ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. ಅವನ ಹೆಸರು ಸುಬ್ಬ. ಒಂದು ಮಾಸಲು ಅಂಗಿ, ಅಲ್ಯುಮಿನಿಯಂ ತಟ್ಟೆ ಹಾಗೂ ಮಾರುದ್ದದ ಒಂದು ಕೋಲು. ಇವಿಷ್ಟೂ ಸುಬ್ಬನ ಆಸ್ತಿ. ಬೆಳಗಿನ ಹೊತ್ತು, ಈಶ್ವರನ ದೇವಾಲಯದ ಮುಂದಿನ ಅರಳೀಕಟ್ಟೆಯಲ್ಲಿ ಆತ ಕೂತಿರುತ್ತಿದ್ದ. ದೇವಸ್ಥಾನಕ್ಕೆಂದು ಬಂದವರು ಏನಾದರೂ ಕೊಟ್ಟರೆ ಅದನ್ನು ಪಡೆದುಕೊಳ್ಳುತ್ತಿದ್ದ. ಬೆಳಗ್ಗೆ-ಮಧ್ಯಾಹ್ನ-ಸಂಜೆ ಏನು ಸಿಗುತ್ತಿತ್ತೋ ಅದನ್ನು ಖುಷಿಯಿಂದ ತಿನ್ನುತ್ತಿದ್ದ. ಬಹುಶಃ ಅವನಿಗೆ ಆಸೆಯಿರಲಿಲ್ಲ. ನಾಳೆಗೆ ಕೂಡಿಡುವ ಬುದ್ಧಿಯೂ ಇರಲಿಲ್ಲ. ಹಾಗಾಗಿ ಅವನು ಮನೆಮನೆಯಲ್ಲಿ ಭಿಕ್ಷೆ ಕೇಳಲು ಹೋಗುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಊರಿನ ಯಾರದಾದರೂ ಮನೆಯ ಜಗುಲಿಯಲ್ಲಿ ಮಲಗಿಬಿಡುತ್ತಿದ್ದ. ಬೆಳಗ್ಗೆ ಆದದ್ದೇ ತಡ, ಊರ ಸಮೀಪವಿದ್ದ ಕೆರೆಯ ಬಳಿ ಹೋಗಿ, ನಿತ್ಯಕರ್ಮಗಳನ್ನು ಮುಗಿಸಿ ಸೀದಾ ಬಂದು ಅರಳೀಕಟ್ಟೆಯಲ್ಲಿ ಕೂತುಬಿಡುತ್ತಿದ್ದ.

ಸುಬ್ಬನಿಂದ ಯಾವತ್ತೂ ಯಾರಿಗೂ ತೊಂದರೆಯಾಗಿರಲಿಲ್ಲ. ದಿನವೂ ಒಂದೊಂದು ಮನೆಯ ಜಗುಲಿಯಲ್ಲಿ ಮಲಗುತ್ತಿದ್ದನಲ್ಲ? ಆಗ, ಕೂಡ ಮನೆಯವರಿಗೆ ಯಾವುದೇ ರೀತಿಯ ಕಿರಿಕಿರಿಯಾಗದಂತೆ ಎಚ್ಚರವಹಿಸುತ್ತಿದ್ದ. ಅವನು ಹೊರಗಿದ್ದಾನೆ ಎಂದರೆ, ಮನೆಯ ರಕ್ಷಣೆಗೆ ಒಬ್ಬ ಸಮರ್ಥ ಕಾವಲುಗಾರ ಇದ್ದಂತಾಗುತ್ತಿತ್ತು. ಈ ಕಾರಣದಿಂದ ಊರಿನ ಯಾರೂ ಸುಬ್ಬನನ್ನು ಯಾಕಪ್ಪಾ ಇಲ್ಲಿ ಉಳ್ಕೊಂಡಿದೀಯ ಎಂದು ಕೇಳುತ್ತಿರಲಿಲ್ಲ.

ಹುಟ್ಟು ಸೋಮಾರಿಯಂತಿದ್ದ, ಭಿಕ್ಷೆಯನ್ನೇ ಬದುಕಾಗಿಸಿಕೊಂಡಿದ್ದ ಸುಬ್ಬನಿಗೆ ಒಂದು ವಿಶೇಷ ಗುಣವಿತ್ತು. ಜನ ಏನಾದರೂ ಸಮಸ್ಯೆ ಹೇಳಿದರೆ, ಅವನು ಅದಕ್ಕೆ ಪರಿಹಾರ ಹೇಳುತ್ತಿದ್ದ. ಎಷ್ಟೇ ಕಷ್ಟದ ಸಮಸ್ಯೆ ಅಂದುಕೊಂಡರೂ ಅದನ್ನು ಸುಲಭವಾಗಿ ಬಿಡಿಸುತ್ತಿದ್ದ. ಹೀಗೆ ಪರಿಹಾರ ಹೇಳುತ್ತಿದ್ದನಲ್ಲ? ಅದಕ್ಕೆ ನಯಾಪೈಸೆಯ ಗೌರವಧನವನ್ನೂ ಪಡೆಯುತ್ತಿರಲಿಲ್ಲ. ಬದಲಾಗಿ, ಇದು ನನ್ನ ಆತ್ಮ ಸಂತೋಷದ ಕೆಲಸ ಎಂದು ಬಿಡುತ್ತಿದ್ದ. ರಾಂಪುರದ ಕಡುಬಡವನಿಂದ ಹಿಡಿದು ಪಟೇಲರವರೆಗೆ ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಸುಬ್ಬನ ಬಳಿಗೆ ಸಮಸ್ಯೆಹೊತ್ತುಕೊಂಡು ಬರುತ್ತಿದ್ದರು. ಆತ ಎಲ್ಲವನ್ನೂ ಕೇಳಿಸಿಕೊಂಡು ಐದಾರು ನಿಮಿಷದ ನಂತರ ಪರಿಹಾರ ಹೇಳುವುದನ್ನು ವಿಸ್ಮಯದಿಂದ ಕೇಳುತ್ತಿದ್ದರು. ನಂತರ, ಇಷ್ಟೊಂದು ಬುದ್ಧಿವಂತನಾಗಿದ್ದರೂ ಈತ ಪಟ್ಟಣಕ್ಕೆ ಹೋಗಿ ಕೈ ತುಂಬಾ ಸಂಪಾದಿಸದೆ, ಕುಗ್ರಾಮದಲ್ಲಿ ಭಿಕ್ಷೆ ಬೇಡುವುದಾದರೂ ಏಕೆ ಎಂದು ತಮಗೆ ತಾವೇ ಕೇಳಿಕೊಳ್ಳುತ್ತಿದ್ದರು. ಉತ್ತರ ಹೊಳೆಯದೇ ಹೋದಾಗ ಸುಮ್ಮನಾಗುತ್ತಿದ್ದರು.

ಹೀಗಿರುವಾಗಲೇ ಒಂದು ದಿನ ಮಹಾರಾಜರ ಸವಾರಿ ರಾಂಪುರ ಗ್ರಾಮಕ್ಕೆ ಬಂತು. ಅಂದಮೇಲೆ ಕೇಳಬೇಕೆ? ಈಶ್ವರ ದೇವಾಲಯವನ್ನು ಬಗೆಬಗೆಯಲ್ಲಿ ಅಲಂಕರಿಸಲಾಯಿತು. ಪಟೇಲರೂ ಸೇರಿದಂತೆ ಊರ ಹಿರಿಯರೆಲ್ಲ ಬೆಳಗಿನಿಂದಲೇ ಮಹಾರಾಜರ ದಾರಿ ಕಾಯುತ್ತಿದ್ದರು. ಕಡೆಗೊಮ್ಮೆ ಮಹಾರಾಜರ ಸವಾರಿ ಬಂದೇ ಬಂತು. ಮುಖಂಡರಿಂದ ಮಹಾರಾಜರು ಆತಿಥ್ಯ ಸ್ವೀಕರಿಸಿದರು. ತುಸು ಹೊತ್ತು ವಿಶ್ರಾಂತಿ ಪಡೆದರು. ನಂತರ ಪ್ರಜೆಗಳ ಸುಖ-ದುಃಖ ಕೇಳಲು ಹೊರಟ. ಆ ಸಂದರ್ಭದಲ್ಲಿಯೇ ಅರಳೀ ಕಟ್ಟೆಯಲ್ಲಿ ಒಂದು ಮಾಸಲು ಅಂಗಿ-ಅಲ್ಯುಮಿನಿಯಂ ತಟ್ಟೆ ಹಿಡಿದು ಕೂತಿದ್ದ ಸುಬ್ಬ ಮಹಾರಾಜರ ಕಣ್ಣಿಗೆ ಬಿದ್ದ.

ತಮ್ಮದು ರಾಮರಾಜ್ಯ, ಸುಭಿಕ್ಷಾ ಸಾಮ್ರಾಜ್ಯ ಎಂಬುದು ಮಹಾರಾಜರ ನಂಬಿಕೆಯಾಗಿತ್ತು. ಇಂಥ ಸಂದರ್ಭದಲ್ಲಿ ಭಿಕ್ಷುಕನೊಬ್ಬ ಕಣ್ಣಿಗೆ ಬಿದ್ದುದರಿಂದ ಅವರಿಗೆ ತುಂಬ ಬೇಜಾರಾಯಿತು. ಛೆ, ನಮ್ಮ ರಾಜ್ಯದಲ್ಲಿ ಈಗಲೂ ಭಿಕ್ಷುಕರು ಇದ್ದಾರಲ್ಲ ಎಂದು ನೊಂದುಕೊಂಡರು. ನಂತರ ಪಟೇಲರನ್ನು ಕರೆದು-ಯಾರೀತ? ನೋಡೋಕೆ ಗಟ್ಟಿಮುಟ್ಟಾಗೇ ಇದ್ದಾನೆ. ಇವನಿಗೆ ದುಡಿದು ತಿನ್ನಲು ಏನು ದಾಡಿ ಎಂದು ಪ್ರಶ್ನೆ ಹಾಕಿದರು. ಮಹಾಪ್ರಭುಗಳೆ, ಈತ ಭಿಕ್ಷುಕ ನಿಜ. ಆದರೆ ಇವನು ಅಪಾರ ಬುದ್ಧಿವಂತನೂ ಹೌದು. ಎಂಥ ಸಮಸ್ಯೆಗೂ ಪರಿಹಾರ ಹೇಳಬಲ್ಲ ಶಕ್ತಿ ಈ ಭಿಕ್ಷುಕನಿಗಿದೆ. ಅಂದಹಾಗೆ, ಇವನ ಹೆಸರು ಸುಬ್ಬ. ಇವನನ್ನು ನಮ್ಮ ಊರಿನ ಆಸ್ತಿ ಎಂದು ಕರೆದರೂ ತಪ್ಪಿಲ್ಲ ಸ್ವಾಮಿ…!’ ಪಟೇಲರಿಂದ ಈ ಬಗೆಯ ಉತ್ತರ ಕೇಳಿ ಮಹಾರಾಜರಿಗೆ ಆಶ್ಚರ್ಯವಾಯಿತು. ಹಿಂದೆಯೇ, ಈ ಭಿಕ್ಷುಕನ ಇನ್ನೊಂದು ಮುಖವನ್ನು ನೋಡಿಬಿಡುವ ಆಸೆಯೂ ಬಲಿಯಿತು. ಅದೇ ಸಂದರ್ಭಕ್ಕೆ, ತುಂಬ ದಿನಗಳಿಂದಲೂ ಪರಿಹಾರವಾಗದೆ ತಲೆ ತಿನ್ನುತ್ತಿದ್ದ ಆಡಳಿತಕ್ಕೆ ಸಂಬಂಸಿದ ಸಮಸ್ಯೆಯೊಂದು ನೆನಪಾಯಿತು. ತಕ್ಷಣವೇ ಭಿಕ್ಷುಕನ ಬಳಿ ಹೋದ ಮಹಾರಾಜರು-ನೋಡಯ್ಯ, ನನ್ನದೊಂದು ಸಮಸ್ಯೆ ಇದೆ. ಅದಕ್ಕೆ ಪರಿಹಾರ ಸೂಚಿಸಿದರೆ ನಿನಗೆ ಬಹುಮಾನವಾಗಿ ಒಂದು ಚಿನ್ನದ ನಾಣ್ಯ ಕೊಡ್ತೇನೆ’ ಎಂದರು.

ಈ ಸುಬ್ಬ ತಕ್ಷಣವೇ ಹೀಗೆಂದ: ಮಹಾಪ್ರಭುಗಳೆ, ನನಗೆ ಚಿನ್ನದ ನಾಣ್ಯ ಬೇಡ. ಅದನ್ನು ನೀವೇ ಇಟ್ಟುಕೊಳ್ಳಿ. ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ಏನೆಂದು ಹೇಳಿ…’ ಒಬ್ಬ ಯಃಕಶ್ಚಿತ್ ಭಿಕ್ಷುಕನಿಂದ ಈ ಬಗೆಯ ಉತ್ತರವನ್ನು ಮಹಾರಾಜರು ನಿರೀಕ್ಷಿಸಿರಲಿಲ್ಲ. ಅವರಿಗೆ ತುಂಬ ಬೇಸರವಾಯಿತು. ಆದರೆ ಏನೂ ಮಾಡುವಂತಿರಲಿಲ್ಲ. ಇರಲಿ’ ಎಂದುಕೊಂಡು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

ಭಿಕ್ಷುಕ ಸುಬ್ಬ ಐದಾರು ನಿಮಿಷ ತಲೆ ತಗ್ಗಿಸಿದ್ದ. ಆ ಸಮಯದಲ್ಲಿ ತನ್ನಷ್ಟಕ್ಕೆ ತಾನೇ ಏನೇನೋ ಮಾತಾಡಿಕೊಂಡ. ಕೈ ಬೆರಳುಗಳನ್ನು ಬಿಡಿಸಿ, ಮಡಿಚಿ ಅದೇನೇನೋ ಲೆಕ್ಕಾಚಾರ ಮಾಡಿದ. ನಂತರ ಒಂದು ಪರಿಹಾರ ಹೇಳಿಯೇ ಬಿಟ್ಟ. ಅದು ಮಹಾರಾಜರಿಗೆ ಸರಿ ಕಾಣಿಸಿತು. ಅವರು ಸುಬ್ಬನನ್ನು ಪ್ರೀತಿ, ಅಭಿಮಾನ, ಮೆಚ್ಚುಗೆಯಿಂದ ನೋಡುತ್ತ, ಒಂದು ಚಿನ್ನದ ನಾಣ್ಯವನ್ನು ಅವನ ಮುಂದಿಟ್ಟು: ಇದನ್ನು ನೀನು ಸ್ವೀಕರಿಸಲೇಬೇಕು ಎಂದು ಹೇಳಿ ಅರಮನೆಗೆ ಬಂದರು. ಮರುದಿನ ಮಹಾರಾಜರಿಗೆ, ಆಡಳಿತದ ವಿಷಯಕ್ಕೆ ಸಂಬಂಸಿದಂತೆ ಇನ್ನೊಂದು ಸಮಸ್ಯೆ ತಲೆದೋರಿತು. ಮಂತ್ರಿಮಂಡಲದ ಪ್ರಮುಖರ ಮುಂದೆ ಈ ಸಮಸ್ಯೆ ಇಟ್ಟರು. ಅವರು ಸೂಚಿಸಿದ ಪರಿಹಾರಗಳು ಮಹಾರಾಜರಿಗೆ ಇಷ್ಟವಾಗಲಿಲ್ಲ. ಇಂಥ ಸಂದರ್ಭದಲ್ಲಿ ಸಹಜವಾಗಿಯೇ ಮತ್ತೆ ರಾಂಪುರದ ಭಿಕ್ಷುಕ ಸುಬ್ಬನ ನೆನಪಾಯಿತು. ಅವತ್ತೇ ಸಂಜೆ ಸಮಸ್ಯೆಯೊಂದಿಗೆ ರಾಜ, ಸುಬ್ಬನ ಮುಂದೆ ನಿಂತಿದ್ದ.

ಸುಬ್ಬ ಈ ಬಾರಿಯೂ ಮಹಾರಾಜನಿಗೆ ತುಂಬ ಇಷ್ಟವಾಗುವಂಥ ರೀತಿಯಲ್ಲೇ ಸಮಸ್ಯೆಗೆ ಪರಿಹಾರ ಸೂಚಿಸಿದ. ಅದನ್ನು ಕೇಳಿದ ನಂತರವಂತೂ ಸುಬ್ಬನ ಪ್ರಚಂಡ ಬುದ್ಧಿಶಕ್ತಿಯ ಕುರಿತು ಮಹಾರಾಜರಿಗೆ ಅನುಮಾನವೇ ಉಳಿಯಲಿಲ್ಲ. ಅವರು ಎರಡೇ ಕ್ಷಣದಲ್ಲಿ ಒಂದು ನಿರ್ಧಾರಕ್ಕೆ ಬಂದು ಸುಬ್ಬನನ್ನು ಉದ್ದೇಶಿಸಿ ಹೀಗೆಂದರು: ಸುಬ್ಬು ಅವರೇ, ನೀವು ಒಂದೊಂದು ಸಮಸ್ಯೆಗೂ ಪರಿಹಾರ ಸೂಚಿಸುವ ರೀತಿ ಸೊಗಸಾಗಿದೆ. ಒಬ್ಬ ಮಹಾಮಂತ್ರಿಗೆ ಇರಬೇಕಾದ ಬುದ್ಧಿ ಶಕ್ತಿ ನಿಮಗಿದೆ. ಅದು ಸದುಪಯೋಗ ಆಗಬೇಕು. ಹಾಗಾಗಿ ನೀವು ದಯವಿಟ್ಟು ಅರಮನೆಗೆ ಬನ್ನಿ. ನನ್ನ ವಿಶೇಷ ಸಲಹೆಗಾರರೆಂದು ನೇಮಿಸಿಕೊಳ್ಳುತ್ತೇನೆ. ನಿಮಗೆ ಅರಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ನಿಮಗೆ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ನಮಗೆ ಆಡಳಿತದಲ್ಲಿ ಮಾರ್ಗದರ್ಶನ ಮಾಡಿ…’

ಮಹಾರಾಜರು ಹೇಳಿದ ಮೇಲೆ ಕೇಳಬೇಕೆ? ಅವತ್ತೇ ಅಲ್ಲಲ್ಲಿ ಹರಿದುಹೋಗಿದ್ದ, ಗಬ್ಬುನಾತ ಹೊಡೆಯುತ್ತಿದ್ದ ಶರ್ಟು, ಅಲ್ಯುಮಿನಿಯಂ ತಟ್ಟೆ ಹಾಗೂ ಹಳೆಯ ಊರುಗೋಲಿನೊಂದಿಗೇ ಸುಬ್ಬ ಅರಮನೆಗೆ ಬಂದ. ಮರುದಿನದಿಂದಲೇ ಅವನ ಗೆಟಪ್ಪು ಬದಲಾಗಿಹೋಯಿತು. ಮೊದಲಿಗೆ, ಸುಬ್ಬನ ಹೆಸರು ಸುಬ್ರಾಯ ಶರ್ಮ ಎಂದಾಯಿತು. ಕೆಲವರು ಅವನನ್ನು ಜೋಯ್ಸರೇ ಎನ್ನಲೂ ಶುರುಮಾಡಿದರು. ಮಹಾರಾಜರಂತೂ ತುಂಬ ಪ್ರೀತಿಯಿಂದ ಮಂತ್ರಿಗಳೇ…’ ಎಂದೇ ಕರೆಯುತ್ತಿದ್ದರು. ಮಹಾರಾಜರ ನಿವಾಸದ ಪಕ್ಕದಲ್ಲೇ ಇದ್ದ ಇನ್ನೊಂದು ಸೌಧದಲ್ಲಿ ಸುಬ್ಬುವಿನ ವಾಸಕ್ಕೆ ವ್ಯವಸ್ಥೆ ಮಾಡಲಾಯಿತು. ಒಂದು ಕಾಲದಲ್ಲಿ ವಾರವಿಡೀ ಸ್ನಾನ ಮಾಡದಿದ್ದ ಸುಬ್ಬ, ಈಗ ಪ್ರತಿದಿನವೂ ಸುಗಂಧದ್ರವ್ಯ ಹಾಕಿದ್ದ ನೀರಲ್ಲೆ ಕೈ ತೊಳೆಯುವುದನ್ನು, ದಿನದಿನವೂ ಮಡಿ ವಸ್ತ್ರ ಧರಿಸುವುದನ್ನು; ಅರಮನೆಯ ಶಿಸ್ತು, ಶಿಷ್ಟಾಚಾರದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಂಡ. ಈ ಹಿಂದೆಲ್ಲಾ ರಾಂಪುರದ ಅರಳೀಕಟ್ಟೆಯಲ್ಲಿ ಕೂತು ಅವರಿವರ ಸಂಕಟಗಳಿಗೆ ಪರಿಹಾರ ಹೇಳುತ್ತಿದ್ದವನು, ಈಗ ರಾಜನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹೇಳುವಂಥವನಾದ. ಮಹಾರಾಜರು ಈ ಸುಬ್ರಾಯನನ್ನು ಅದೆಷ್ಟು ಹಚ್ಚಿಕೊಂಡರೆಂದರೆ, ಅರಮನೆಯ ಹಾಗೂ ರಾಜ್ಯದ ಎಲ್ಲ ರಹಸ್ಯಗಳನ್ನೂ ಅವನೊಂದಿಗೆ ಹೇಳಿಕೊಂಡರು.

ಮಹಾರಾಜರು ಮೊನ್ನೆ ಮೊನ್ನೆಯಷ್ಟೇ ಬಂದ ಸುಬ್ರಾಯಶರ್ಮನಿಗೆ ಇನ್ನಿಲ್ಲದ ಪ್ರಾಮುಖ್ಯತೆ ನೀಡಿದ್ದು ಅರಮನೆಯಲ್ಲಿದ್ದ ಉಳಿದ ಮಂತ್ರಿಗಳನ್ನು ಕೆರಳಿಸಿತು. ಹಾಗೆಯೇ ಸುಬ್ರಾಯನ ಅತಿಯಾದ ಬುದ್ಧಿವಂತಿಕೆ ಕಂಡು ಅವರಿಗೆ ಅನುಮಾನವೂ ಬಂತು. ಸಮಯ ನೋಡಿ ಮಹಾರಾಜರಿಂದ ಅವನನ್ನು ದೂರ ಮಾಡಲೇಬೇಕು ಎಂದು ಅವರೆಲ್ಲ ಲೆಕ್ಕ ಹಾಕಿಯೇಬಿಟ್ಟರು. ಸುಬ್ರಾಯನ ಒಂದೇ ಒಂದು ತಪ್ಪಿಗಾಗಿ ಹುಡುಕುತ್ತಿದ್ದವರಿಗೆ, ಕಡೆಗೂ ಅಂಥದೊಂದು ಸಂದರ್ಭ ಒದಗಿಬಂತು. ಈ ವೇಳೆಗೆ ಸುಬ್ರಾಯ ಅರಮನೆಗೆ ಬಂದು ವರ್ಷವೇ ಕಳೆದಿತ್ತು. ಅದೊಂದು ದಿನ ಮಂತ್ರಿಮಂಡಲದ ಎಲ್ಲರೂ ಸೇರಿ ಮಹಾರಾಜರ ಬಳಿ ಹೋದರು. ಪ್ರಭೂ, ನಾವೆಲ್ಲ ನಿಮ್ಮೊಂದಿಗೆ ಒಂದು ಮಹತ್ವದ ವಿಷಯ ಕುರಿತು ಚರ್ಚಿಸಬೇಕಾಗಿದೆ. ಒಂದು ರಹಸ್ಯ ಸಭೆಯ ಏರ್ಪಾಡು ಮಾಡಿ. ಆದರೆ, ಒಂದು ವಿನಂತಿ. ಈ ಸಭೆಗೆ ಸುಬ್ರಾಯ ಶರ್ಮರನ್ನು ಕರೆಯಬಾರದು’ ಎಂದರು.

ಈ ಮಂತ್ರಿಗಳೆಲ್ಲ ಅರಮನೆಯಲ್ಲಿ ದಶಕಗಳಿಂದ ಇದ್ದವರು. ಹಾಗಾಗಿ ಅವರನ್ನು ಸಂದೇಹದಿಂದ ನೋಡಲು ರಾಜನಿಗೆ ಮನಸ್ಸಾಗಲಿಲ್ಲ. ವಿಷಯ ಮಹತ್ವದ್ದೇ ಇರಬೇಕು. ಹೇಗಿದ್ದರೂ ದಿನವೂ ಸಂಜೆ ಸುಬ್ರಾಯ ಶರ್ಮ ಅಂತಃಪುರದಲ್ಲಿ ನಡೆವ ಚರ್ಚೆಗೆ ಬರುತ್ತಾನೆ. ಆಗ ಇದನ್ನೆಲ್ಲ ಹೇಳಿದರಾಯಿತು ಎಂದೇ ರಾಜ ಯೋಚಿಸಿದ. ನಂತರ, ಗುಪ್ತ ಸಭೆಗೆ ದಿನವನ್ನೂ ನಿಗದಿಪಡಿಸಿದ.

ಮಹಾರಾಜರೆ, ನಮ್ಮ ಮಾತನ್ನು ದಯಮಾಡಿ ನಂಬಿ. ನಾವು ಕಳೆದು ಐದು ತಿಂಗಳಿನಿಂದಲೂ ದಿನದಿನವೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ನಂತರವೇ ಈ ಮಾತು ಹೇಳುತ್ತಿದ್ದೇನೆ. ಏನೆಂದರೆ- ಸುಬ್ರಾಯ ಶರ್ಮ ಬೇರೆ ಯಾರೂ ಅಲ್ಲ. ಆತ ಶತ್ರುದೇಶದ ಗೂಢಚಾರಿ. ಅವನಿಗೆ ಸಕಲೆಂಟು ವಿದ್ಯೆಗಳನ್ನು ಕಲಿಸಿದ ನಂತರವೇ ನಮ್ಮ ದೇಶಕ್ಕೆ ಕಳಿಸಲಾಗಿದೆ. ಇಲ್ಲವಾದರೆ, ಒಬ್ಬ ಯಃಕಶ್ಚಿತ್ ಭಿಕ್ಷುಕನಿಗೆ ಇಂಥ ಅಪರೂಪದ ಬುದ್ಧಿವಂತಿಕೆ ಬರಲು ಹೇಗೆ ಸಾಧ್ಯ? ನಾವು ಕಣ್ಣಾರೆ ಕಂಡಿರುವ ಮಾತು ಕೇಳಿ; ಸುಬ್ರಾಯ ಪ್ರತಿದಿನವೂ ಸಂಜೆ ತನ್ನ ಮಹಲಿನ ಸಮೀಪವಿರುವ ಪುಟ್ಟದೊಂದು ಕೋಣೆಗೆ ತಪ್ಪದೇ ಹೋಗುತ್ತಾನೆ. ಒಬ್ಬನೇ ಹೋಗುತ್ತಾನೆ. ಹಾಗೆ ಹೋಗುವ ಮುನ್ನ ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಹಾಗೆ ಕೋಣೆಯ ಒಳಗೆ ಹೋದವನು, ಅರ್ಧ ಗಂಟೆಯ ನಂತರ ಹೊರಗೆ ಬರುತ್ತಾನೆ. ಹಾಗೆ ಹೊರಬಂದವನನ್ನು ಕೋಣೆಯಲ್ಲಿ ಇಷ್ಟು ಹೊತ್ತು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾನೆ. ಬಹುಶಃ ಅವನು ತನ್ನವರಿಗೆ ಆ ಕೋಣೆಯಲ್ಲಿ ನಿಂತು ನಮ್ಮ ರಾಜ್ಯದ ರಹಸ್ಯವನ್ನೆಲ್ಲ ಹೇಳುತ್ತಾನೆ ಅನಿಸುತ್ತೆ. ಆ ಕೋಣೆಯಿಂದ ಹೊರಹೋಗಲು ಸುರಂಗ ಮಾರ್ಗವಿದ್ದರೂ ಇದ್ದೀತು. ಯಾವುದನ್ನೂ ನೀವೇ ಪರಿಶೀಲಿಸಿ ಬೇಕಾದರೆ…’ ಎಂದರು.

ಒಂದು ಅನುಮಾನದ ಅಡ್ಡಗೆರೆ ಎಂಥ ಮಧುರ ಬಾಂಧವ್ಯವನ್ನೂ ಅಳಿಸಿಹಾಕಬಲ್ಲದು. ಮಹಾರಾಜನ ವಿಷಯದಲ್ಲೂ ಹೀಗೇ ಆಯಿತು. ಮಂತ್ರಿಮಂಡಲದ ಸದಸ್ಯರೆಲ್ಲರ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ರಾಜನಿಗೆ ಸುಬ್ರಾಯ ಶರ್ಮ ಒಬ್ಬ ಗೂಢಚಾರಿ ಎಂಬುದು ಗ್ಯಾರಂಟಿಯಾಗಿ ಹೋಯಿತು. ಅದುವರೆಗೆ ಅವನ ಬುದ್ಧಿವಂತಿಕೆಯ ವಿಷಯದಲ್ಲಿ ಇದ್ದ ಅಭಿಮಾನವೆಲ್ಲ ಕ್ಷಣ ಮಾತ್ರದಲ್ಲಿಯೇ ಅನುಮಾನವಾಗಿ ಬದಲಾಯಿತು. ಇರಲಿ. ಎಲ್ಲವನ್ನೂ ಪ್ರತ್ಯಕ್ಷವಾಗಿ ನೋಡೋಣ. ಆನಂತರವೇ ಸುಬ್ರಾಯನನ್ನು ಶಿಕ್ಷಿಸೋಣ ಎಂದು ನಿರ್ಧರಿಸಿದ ರಾಜ. ಅದೊಂದು ಸಂಜೆ ಸುಬ್ರಾಯ ಆ ಕೋಣೆಗೆ ಹೋದ ಹತ್ತು ನಿಮಿಷದ ನಂತರ ತಾನೂ ಹೋಗಲು ನಿರ್ಧರಿಸಿದ. ಕೋಣೆಯ ಸುತ್ತಲೂ ಮಾರುವೇಷದಲ್ಲಿ ಸೈನಿಕರನ್ನು ಬಿಟ್ಟು ಒಳಗಿನಿಂದ ಯಾರೇ ಅಪರಿಚಿತರು ಬಂದರೂ ಹಿಂದೆ ಮುಂದೆ ನೋಡದೆ ಕತ್ತರಿಸಿ ಹಾಕಿ ಎಂದು ಸೈನಿಕರಿಗೆ ತನ್ನ ಆದೇಶ ನೀಡಿದ.

ಕಡೆಗೂ, ಎಲ್ಲರೂ ಅಂದುಕೊಂಡಿದ್ದ ಸಮಯ ಬಂತು. ಸುಬ್ರಾಯ ಶರ್ಮ ಅವಸರದಲ್ಲಿ ಎಂಬಂತೆ ತನ್ನ ಮನೆಗೆ ಸಮೀಪದ ಕೋಣೆ ಹೊಕ್ಕ. ಸ್ವಲ್ಪ ದೂರದಲ್ಲಿ ಮಾರು ವೇಷದಲ್ಲಿದ್ದ ರಾಜ ಇದನ್ನು ಗಮನಿಸಿದ. ಸುಬ್ರಾಯ, ಕಳ್ಳನಂತೆ ಸುತ್ತಮುತ್ತ ನೋಡಿ ಕೊಣೆ ಪ್ರವೇಶಿಸಿದನಲ್ಲ? ಅದನ್ನು ಕಂಡು ರಾಜನ ರಕ್ತ ಕುದಿಯಿತು. ಅವನ ದೇಶದ್ರೋಹ ಏನಿರಬಹುದು ಎಂದು ನೆನಪು ಮಾಡಿಕೊಂಡು ನಿಂತಲ್ಲೇ ಕಟಕಟನೆ ಹಲ್ಲು ಕಡಿದ. ನಂತರ, ತನ್ನನ್ನು ತಾನೇ ನಿಗ್ರಹಿಸಿಕೊಂಡು, ಸಮಾಧಾನ ಮಾಡಿಕೊಂಡು ಸದ್ದಾಗದಂತೆ ಆ ಕೋಣೆಯ ಬಳಿ ಬಂದು, ದಬದಬನೆ ಬಾಗಿಲು ಬಡಿದ.

ಯಾರದು?’ ಎಂದ ಸುಬ್ರಾಯನ ತಣ್ಣಗಿನ ದನಿಗೆ ನಾನು. ಬಾಗಿಲು ತೆಗೆ’ ಎಂದ ರಾಜ. ಬಾಗಿಲು ತೆರೆಯಿತು. ರಾಜ ಕತ್ತಿ ಹಿಡಿದುಕೊಂಡೇ ಒಳಗೆ ಬಂದ. ಸುಬ್ರಾಯನನ್ನು ಬಿಟ್ಟು ಯಾವ ಕುನ್ನಿಯೇ ಕಂಡರೂ ಅದರ ತಲೆ ಹಾರಿಸಬೇಕು ಎಂಬುದು ರಾಜನ ಎಣಿಕೆಯಾಗಿತ್ತು. ಆದರೆ, ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ. ಬದಲಿಗೆ ಸುಬ್ರಾಯನ ಹಳೆಯ ಸಂಗಾತಿಗಳಾದ ಹರಕು ಬಟ್ಟೆ, ಅಲ್ಯುಮಿನಿಯಂ ತಟ್ಟೆ ಹಾಗೂ ಊರುಗೋಲಿತ್ತು. ಅವನನ್ನೇ ಬೆರಗಿನಿಂದ ನೋಡಿದ ರಾಜ-ನೀನು ದಿನಾಲೂ ಇಲ್ಲಿಗೆ ಬರ್‍ತೀಯಂತೆ. ಸ್ವಲ್ಪ ಹೊತ್ತು ಇಲ್ಲೇ ಇರ್‍ತೀಯಂತೆ. ಇಲ್ಲಿ ನೀನು ಏನು ಮಾಡ್ತಿರ್‍ತೀಯ? ಹೇಳು…’ ಅಂದ.

ಮಹಾಪ್ರಭುಗಳೆ, ಒಂದು ಕಾಲದಲ್ಲಿ ಬೀದೀಲಿ ಕೂತು ಭಿಕ್ಷೆ ಬೇಡುತ್ತಿದ್ದವ ನಾನು. ಅಂಥವನಿಗೆ ಈಗ ರಾಜ ಮರ್ಯಾದೆ ಸಿಗುತ್ತಿದೆ. ಅಧಿಕಾರದ ಅಮಲಿನಲ್ಲಿ ತೇಲಬೇಡ. ಈ ಹಿಂದೆ ನೀನು ಏನಾಗಿದ್ದೆ ಎಂಬುದನ್ನು ಮರೆಯಬೇಡ ಎಂದು ನನಗೆ ನಾನೇ ಹೇಳಿಕೊಳ್ಳುವ ಸಲುವಾಗಿ ದಿನವೂ ಕೋಣೆಗೆ ಬರುತ್ತಿದ್ದೆ. ಈ ಹಳೆಯ ಸಂಗಾತಿಗಳ ಮುಂದೆ ನಿಂತು ಆ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ನೀವು ಯಾರನ್ನೋ ಬೇಟೆಯಾಡಲು ಬಂದಂತಿದೆಯಲ್ಲ, ಯಾರ ನಿರೀಕ್ಷೆಯಲ್ಲಿ ಬಂದಿರಿ ಮಹಾಪ್ರಭು ಎಂದ ಸುಬ್ಬ ಉರುಫ್ ಸುಬ್ರಾಯ ಶರ್ಮ.

ಈ ಮಾತು ಕೇಳಿ ರಾಜನಿಗೆ ತನ್ನ ಕುರಿತು ನಾಚಿಕೆಯಾಯಿತು. ಸುಬ್ರಾಯನ ವಿಷಯವಾಗಿ ಏನೇನೋ ಕಲ್ಪಿಸಿಕೊಂಡಿದ್ದಕ್ಕೆ ಅಸಹ್ಯ ಅನ್ನಿಸಿತು. ಆತ ಏನೊಂದೂ ಮಾತಾಡದೆ, ಸುಬ್ರಾಯನನ್ನು ಬಾಚಿ ತಬ್ಬಿಕೊಂಡ. ಆ ಅಪ್ಪುಗೆ, ಅದರ ಬಿಸುಪು ಜತೆಗೇ ಇದ್ದ ಮೌನ-ಅದೆಷ್ಟೊ ಪ್ರಶ್ನೆಗಳಿಗೆ ಉತ್ತರ ಹೇಳಿತು…

ಹೆಸರಿನಲ್ಲಿ ಏನಿದೆ?

ಮಹಾತ್ಮರಿಗೊಬ್ಬ ಶಿಷ್ಯನಿದ್ದ. ಅವನ ಹೆಸರು ದುಷ್ಟ ಅಂತ. ಆ ಶಿಷ್ಯನಿಗೆ ತನ್ನ ಹೆಸರಿನ ಬಗ್ಗೆ ಅತೀವವಾದ ನೋವಿತ್ತು. ಕೆಟ್ಟ ಕೆಲಸ ಮಾಡದಿದ್ದರೂ ಲೋಕದ ದೃಷ್ಟಿಯಲ್ಲಿ ದುಷ್ಟನಾದೆನಲ್ಲ ಎಂಬ ಕೊರತೆ ಅವನನ್ನು ಕಾಡುತಿತ್ತು. ಒಂದು ದಿನ ಆತ ಗುರುಗಳ ಬಳಿ ಹೋದ. ತನ್ನ ಸಂಕಟವನ್ನು ತೋಡಿಕೊಂಡ. ಗುರುಗಳು ನಕ್ಕು ನುಡಿದರು. ಹೊರಗಿನ ಪ್ರಪಂಚವನ್ನು ಒಮ್ಮೆ ಸುತ್ತಿ ಬಾ. ಯಾರ್ಯಾರ ಹೆಸರು ಹೇಗಿದೆ ಎಂಬುದನ್ನು ತಿಳಿದುಕೊಂಡು ಬಾ ಎಂದರು.

ಗುರುಗಳ ಆಜ್ಞೆಯಂತೆ ಶಿಷ್ಯನು ಲೋಕಸಂಚಾರಕ್ಕೆ ಹೊರಟ. ಮಾರ್ಗಮಧ್ಯೆ ಬಿಕ್ಷುಕನೊಬ್ಬ ಎದುರಾದ. ಅವನೋ ದಟ್ಟದರಿದ್ರ ಆದರೆ ಅವನ ಹೆಸರು ಮಾತ್ರ ಶ್ರೀಮಂತನೆಂದಾಗಿತ್ತು. ಮರುದಿನ ಅವನಿಗೆ ದಾರಿಯಲ್ಲಿ ಅಳುತ್ತಿದ್ದ ಯುವಕನೊಬ್ಬ ಎದುರಾದ. ಯಾಕಯ್ಯಾ ಅಳುತ್ತಿದ್ದೀಯಾ? ಎಂದು ಪ್ರಶಿಸಿದ ಆ ಶಿಷ್ಯ. ನನಗೆ ವ್ಯಾಪಾರದಲ್ಲಿ ಅತೀವ ನಷ್ಟವಾಯಿತು. ನನ್ನ ಮಗ ತನ್ನೆಲ್ಲಾ ಸಮಯವನ್ನು ಜೂಜಿನಲ್ಲೇ ವ್ಯಯ ಮಾಡುತ್ತಾನೆ. ನನ್ನ ಹೆಂಡತಿಯೂ ಸದಾ ಕಾಯಿಲೆಯಲ್ಲೇ ನರಳುತ್ತಿರುತ್ತಾಳೆ ಎಂದ ಆ ಯುವಕ.

ಆ ಶಿಷ್ಯನೋ ಕುತೂಹಲದಿಂದ ನಿಮ್ಮ ಹೆಸರೇನು ಎಂದು ಪ್ರಶಿಸುತ್ತಾನೆ. ಆ ಯುವಕ ತನ್ನ ಹೆಸರು ಆನಂದ ಎನ್ನುತ್ತಾನೆ. ಅದೇ ದಿನ ಗುರುಗಳ ಶಿಷ್ಯನ ಕಣ್ಮುಂದೆಯೇ ರಾಜಾಜ್ಞೆಯಂತೆ ಒಬ್ಬನನ್ನು ಮರವೊಂದಕ್ಕೆ ನೇಣು ಹಾಕುತ್ತಾರೆ. ಹೀಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಹೆಸರೋ ಚಿರಂಜೀವಿ ಎಂತಾಗಿರುತ್ತದೆ.

ದೃತಿಗೆಟ್ಟ ಶಿಷ್ಯ ಗುರುಗಳ ಬಳಿ ಹಿಂದಿರುಗುತ್ತಾನೆ. ಏನಯ್ಯಾ ಶಿಷ್ಯ ದಾರಿಯಲ್ಲಿ ಯಾವ್ಯಾವ ಹೆಸರಿನವರನ್ನು ಸಂಧಿಸಿದೆ? ಯಾರಾ ಹೆಸರನ್ನು ಇಟ್ಟುಕೊಳ್ಳಲು ಬಯಸುತ್ತೀಯಾ ಎಂದು ಗುರುಗಳು ಪ್ರಶ್ನೆ ಮಾಡುತ್ತಾರೆ.

ಇಲ್ಲಾ ಗುರುಗಳೇ ನಾನೀಗ ಮನಸ್ಸು ಬದಲಿಸಿಕೊಂಡಿದ್ದೇನೆ. ಕೇವಲ ಹೆಸರನ್ನು ಇಟ್ಟುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ.

ನೀತಿ: ಹೆಸರಿನಿಂದ ಯಾರನ್ನೂ ಅಳೆಯಲು ಸಾಧ್ಯವಿಲ್ಲ.


ವೃದ್ಧೆಯ ಉಪಕಾರ

ಬ್ರಹ್ಮಪುರವೆಂಬ ಪಟ್ಟಣದ ಜನರು ತುಂಬಾ ಭಯಭೀತರಾಗಿದ್ದರು. ಏಕೆಂದರೆ ಸಮೀಪದಲ್ಲಿದ್ದ ಪರ್ವತದ ತುದಿಯಲ್ಲಿ ಘಂಟಾಕರ್ಣನೆಂಬ ರಾಕ್ಷಸನಿರುವನೆಂದು ಅವರು ನಂಬಿದ್ದರು. ಆ ಪ್ರದೇಶದಲ್ಲಿ ಆಗಾಗ ಗಂಟೆಯ ಸಪ್ಪಳವೂ ಕೇಳಿಬರುತ್ತಿತ್ತು. ಆದ್ದರಿಂದ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಘಂಟಾಕರ್ಣನು ಜನರನ್ನು ತಿನ್ನುತ್ತಾನೆ ಎಂಬ ಸುದ್ದಿ ಹಬ್ಬಲು ಜನರು ಊರು ಬಿಟ್ಟು ಹೋಗತೊಡಗಿದರು.

ಅಲ್ಲಿಯ ಅರಸನು ಬಹಳ ಚಿಂತಾಕ್ರಾಂತನಾದನು. ಯಾರಾದರೂ ಘಂಟಾಕರ್ಣನ ಕಾಟವನ್ನು ತಪ್ಪಿಸಿದರೆ ಹೇರಳ ಹಣವನ್ನು ಕೊಡುವುದಾಗಿ ಅರಸ ಡಂಗುರ ಸಾರಿಸಿದನು. ಯಾರು ಆ ಸಾಹಸಕ್ಕೆ ಹೊರಡಲಿಲ್ಲ. ಕೊನೆಗೆ ಒಬ್ಬಳು ವೃದ್ಧೆಗೆ ಡಂಗುರದ ಸುದ್ದಿ ತಿಳಿಯಿತು. ಅವಳು ಜನರ ಮಾತನ್ನು ನಂಬಲಿಲ್ಲ. ತನ್ನ ದೈವವನ್ನು ಪರೀಕ್ಷಿಸಬೇಕೆಂದು ಅವಳು ಧೈರ್ಯದಿಂದ ಕಾಡಿಗೆ ಹೊರಟಳು. ಬಹುದೂರ ನಡೆದಾಗ ದೂರದಲ್ಲಿದ್ದ ಮರದ ಮೇಲಿನ ಮಂಗಗಳು ಗಂಟೆ ಬಾರಿಸುತ್ತಿರುವುದು ಕಣ್ಣಿಗೆ ಬಿತ್ತು. ವೃದ್ಧೆಗೆ ನಿಜಸ್ಥಿತಿಯ ಅರಿವಾಯಿತು.

ಕೂಡಲೇ ವೃದ್ಧೆಯು ರಾಜನ ಬಳಿಗೆ ಬಂದು “ಘಂಟಾಕರ್ಣನ ಕಾಟವನ್ನು ನಾನು ತಪ್ಪಿಸುವೆನು” ಎಂದಳು. ಅರಸನಿಗೆ ಆಶ್ಚರ್ಯವಾಯಿತು. ಏಕೆಂದರೆ ಇಂತಹ ಧೈರ್ಯವನ್ನು ಇದುವರೆಗೆ ಯಾರೂ ಮಾಡಿರಲಿಲ್ಲ. ಆದ್ದರಿಂದ ವೃದ್ಧೆಯ ಮಾತಿಗೆ ಅರಸ ಒಪ್ಪಿದ.

ವೃದ್ಧೆಯು ಅಡವಿಗೆ ಧೈರ್ಯದಿಂದ ನಡೆದಳು. ಈಗಂತೂ ಅವಳಿಗೆ ಯಾವ ಅಂಜಿಕೆಯೂ ಇರಲಿಲ್ಲ. ಗಂಟೆಯನ್ನು ಬಾರಿಸುತ್ತ ಕೋತಿಗಳು ಕುಳಿತ ಮರದಡಿಗೆ ಬಂದು, ನೆಲದ ಮೇಲೆ ಹಣ್ಣು – ಹಂಪಲುಗಳನ್ನು ಹರವಿಡಲು. ಕೂಡಲೇ ಮರದ ಮೇಲಿದ್ದ ಕಪಿಗಳು ಗಂಟೆಯನ್ನು ಎಸೆದು ಹಣ್ಣು ತಿನ್ನಲೆಂದು ಕೆಳಗೆ ಬಂದವು. ವೃದ್ಧೆಯು ಗಂಟೆಯನ್ನು ತೆಗೆದುಕೊಂಡು ಹೋಗಿ ಬಿಟ್ಟಳು. ಅಂದಿನಿಂದ ಮುಂದೆಂದೂ ಗಂಟೆಯ ಸದ್ದು ಯಾರಿಗೂ ಕೇಳಿಬರಲಿಲ್ಲ.

ಅರಸನು ಸಂತುಷ್ಟನಾಗಿ ಅವಳಿಗೆ ಹೇರಳ ಸಂಪತ್ತನ್ನು ನೀಡಿದನು. ಪ್ರಜೆಗಳು ವೃದ್ಧೆಯ ಉಪಕಾರವನ್ನು ನೆನೆಯುತ್ತಾ ನೆಮ್ಮದಿಯಿಂದಿದ್ದರು. ಆದ್ದರಿಂದ ಯಾವುದನ್ನು ಸಂಪೂರ್ಣವಾಗಿ ವಿಚಾರ ಮಾಡದೆ ನಂಬಬಾರದು.


ಆಸೆಯೇ ಅಧಃಪತನಕ್ಕೆ ಕಾರಣ

ಮೋಕ್ಷಪುರ ಎಂಬ ಊರಲ್ಲಿ ರಾಮಯ್ಯಶೆಟ್ಟಿ ಎಂಬ ದುರಾಸೆಯ ವ್ಯಕ್ತಿ ಕಿರಾಣಿ ವ್ಯಾಪಾರ ಮಾಡುತ್ತಿದ್ದನು. ತಾನು ಮಾಡುವ ಸರಕಿನ ಮೇಲೆ ವಿಪರೀತವಾಗಿ ಲಾಭಗಳನ್ನು ಆಶಿಸುತ್ತಾ. ತನಗೆ ಮಾರುವವರಿಗೆ ನಷ್ಟ ಮಾಡಿ ಆನಂದಿಸುವ ಮನಸ್ಸು ಆತನದು. ರಾಮಯ್ಯ ಪಟ್ಟಣದಿಂದ ಸರಕುಗಳನ್ನು ತರುವಾಗ ದಾರಿ ಮಧ್ಯದಲ್ಲಿರುವ ಒಂದು ನದಿಯನ್ನು ತೆಪ್ಪದ ಮೂಲಕ ದಾಟಬೇಕಾಗಿತ್ತು. ತೆಪ್ಪದಲ್ಲಿ ಒಬ್ಬ ಮನುಷ್ಯ ಏರಿದಾಗ ತನ್ನೊಂದಿಗೆ ಒಂದು ಮೂಟೆಯನ್ನು ತೆಗೆದುಕೊಂಡು ಹೋದರೆ ಅದಕ್ಕೆ ಪ್ರತ್ಯೇಕ್ಷ ಹಣ ಸಲ್ಲಿಸುವ ಅವಶ್ಯಕತೆ ಇಲ್ಲ. ಈ ಪದ್ಧತಿ ಬಂಡವಾಳ ಮಾಡಿಕೊಂಡು ರಾಮಯ್ಯಶೆಟ್ಟಿ ಅದರಲ್ಲೆಲ್ಲಾ ಕಿರಾಣಿ ಮೂಟೆಗಳನ್ನು ತುಂಬುತ್ತಿದ್ದನು. ತಾನು ಮಾತ್ರ ತಕ್ಕ ರೂಸುಮು ಸಲ್ಲಿಸಿ, ಸರಕುಗಳಿಗೆ ಯಾವ ವಿಧವಾಗಿ ರೂಸುಮು ಇಲ್ಲದೆ ನದಿ ದಾಟಿಸುತ್ತಿದ್ದ. ತೆಪ್ಪವನ್ನು ನಡೆಸುವ ಮಲ್ಲಯ್ಯ ಎಂಬುವವ ಬಹಳ ಒಳ್ಳೆಯವನು. ಅಲ್ಲದೆ ಅಮಾಯಕ. ರಾಮಯ್ಯಶೆಟ್ಟಿ ತೆಪ್ಪದಲ್ಲಿ ಇತರರಿಗೆ ಸ್ಥಳ ಇಲ್ಲದಂತೆ ಮಾಡುವುದರಿಂದ, ತನಗೆ ನಷ್ಟ ಸಂಭವಿಸುತ್ತಿದ್ದರೂ ಏನೂ ಹೇಳದ ಸಭ್ಯವಂತನು. ಇದರಿಂದ ರಾಮಯ್ಯಶೆಟ್ಟಿ ದುರಾಸೆ ಮತ್ತಷ್ಟು ಹೆಚ್ಚಾಯಿತು.

ಹೀಗಿರಲು ಒಂದು ದಿನ ರಾಮಯ್ಯಶೆಟ್ಟಿ ತೆಪ್ಪದಲ್ಲಿ ಅಗತ್ಯಕ್ಕಿಂತಲೂ ಭಾರದ ಸರಕುಗಳನ್ನು ತುಂಬಿಸಿದನು. ಇದನು ನೋಡಿದ ಮಲ್ಲಯ್ಯ ಏನಾದರೂ ಪ್ರಮಾದ ಜರುಗಬಹುದೆಂಬ ಭಯಪಟ್ಟನು. ಆಗ ಮಲ್ಲಯ್ಯ ರಾಮಯ್ಯಶೆಟ್ಟಿಗೆ “ಇದರಲ್ಲಿನ ಅರ್ಧ ಸರಕುಗಳನ್ನು ತುಂಬಿಸಿದನು. ಇದನ್ನು ನೋಡಿದ ಮಲ್ಲಯ್ಯ ಏನಾದರೂ ಪ್ರಮಾದ ಜರುಗಬಹುದೆಂಬ ಭಯಪಟ್ಟನು. ಆಗ ಮಲ್ಲಯ್ಯ ರಾಮಯ್ಯಶೆಟ್ಟಿಗೆ “ಇದರಲ್ಲಿನ ಅರ್ಧ ಸರಕುಗಳನ್ನು ಕೆಳಗಿಳಿಸಿ, ಮತ್ತರ್ಧ ಸರಕನ್ನು ಮತ್ತೊಮ್ಮೆ ಬಂದು ಕೊಂಡುಹೋಗೋಣ, ದಯಮಾಡಿ ನನ್ನ ಮಾತನ್ನು ಕೇಳಿರಿ” ಎಂದನು.
ಪಿಸುಣಾರಿಗೆ ಖರ್ಚು ಕಡಿಮೆ ಮಾಡುವ ವಿಧಾನವೇ ದೃಷ್ಟಿಯಲ್ಲಿರುವುದರಿಂದ ಹಿತವಚನ ರುಚಿಸುವುದಿಲ್ಲ. ಮೂರ್ಖತ್ವವೆಂಬ ಅಂಧಕಾರ ಉಂಟಾದಾಗ ಜಋುಗೀಹೊಗುವಾ ಪ್ರಮಾದದ ಬಗ್ಗೆ ಯೋಚಿಸುವುದಿಲ್ಲ. ಒಮ್ಮೆ ಮನುಷ್ಯನನ್ನು ತೆಪ್ಪದ ಮೂಲಕ ನದಿಯನ್ನು ದಾಟಿಸಲು ಒಂದು ಕಾಸು ಆಚೆ ದಡದಲ್ಲಿ ಬಿಟ್ಟು ಬಂದ ಅರ್ಧ ಸರಕನ್ನು ತರಲು ಮತ್ತೊಂದು ಕಾಸು, ಅಲ್ಲಿಂದ ತಿರುಗಿಬರಲು ಮತ್ತೊಂದು ಕಾಸು, ಹೀಗಾದರೆ ಮೂರು ಕಾಸು ಖರ್ಚಾಗುತ್ತದೆ. ಒಮ್ಮೆ ಮಾತ್ರ ಹೋಗಿ ಬಂದರೆ ಅದರಿಂದ ಉಳಿಯುವುದು ಎರಡು ಕಾಸು. ಹೀಗೆ ಶೆಟ್ಟಿಯು ದುರಾಸೆಯಿಂದ ಮಲ್ಲಯ್ಯನ ಎಚ್ಚರಿಕೆಯನ್ನು ಲೆಕ್ಕಿಸಲಿಲ್ಲ.

ತೆಪ್ಪ ಅರ್ಧ ದೂರ ಸಾಗುತ್ತಿರಲು ಊಹಿಸಿದಂತೆ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಿತು. ಅದರಿಂದ ತೆಪ್ಪ ಚೂರು ಚೂರಾಗಿ ಅದರಲ್ಲಿನ ಕಿರಾಣಿ ಮೂಟೆಗಳು ನದಿಯಲ್ಲಿ ಕೊಚ್ಚಿಹೋದವು. ನೀರಿನಲ್ಲಿ ಬಿದ್ದು ಈಜು ಬಾರದ ರಾಮಯ್ಯ ನೀರು ಕುಡಿದು ಮೃತ್ಯುವಿಗೆ ಹತ್ತಿರವಾಡನು. ಮಲ್ಲಯ್ಯನು ಶೆಟ್ಟಿಯ ದುಃಸ್ಥಿತಿಯನ್ನು ಭುಜದ ಮೇಲೆ ಹೊತ್ತುಕೊಂಡು ಅತಿ ಕಷ್ಟದಿಂದ ಈಜುತ್ತಾ ದಡ ಸೇರಿಕೊಂಡನು. ಇಬ್ಬರ ಪ್ರಾಣ ಉಳಿಯಿತು.

ಎರಡು ಕಾಸುಗಳಿಗೋಸ್ಕರ ಸಾವಿರಾರು ಕಾಸು ಬೆಲೆ ಬಾಳುವ ಸರಕು ನೀರಲ್ಲಿ ಮುಳುಗಿ ನಷ್ಟವಾಯಿತು. ಜೊತೆಗೆ ಮೂರು ನೂರು ಕಾಸು ಜುಲ್ಮಾನೆಯಲ್ಲಿ ಮಲ್ಲಯ್ಯನಿಗೆ ನೀಡಬೇಕಾಯಿತು. ಇದರಿಂದ ರಾಮಯ್ಯನಿಗೆ ಆದ ಭಯ ಅಷ್ಟಿಷ್ಟಲ್ಲ. ಮಲ್ಲಯ್ಯಗೆ ತನ್ನ ಹಳೇ ತೆಪ್ಪದ ಸ್ಥಾನದಲ್ಲಿ ಹೊಸ ತೆಪ್ಪ ದಕ್ಕಿತ್ತು. ಅದರ ಜೊತೆ ಧನಲಾಭ ಕೂಡ ಲಭಿಸಿತು.

ಮೂರ್ಖ ಮೊಸಳೆ

ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, “ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೇನೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದುಕೊಡೋದು” ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ “ಆಗಲಿ” ಎಂದಿತು.

ನದೀತೀರದ ಮರಳಿನ ಮೇಲೆ ಮೊಸಳೆ ಬಿಸಲಿಗೆ ಮೈ ಕಾಯಿಸಿಕೊಳ್ಳುತ್ತಾ ಮಲಗಿತ್ತು. ನರಿ ಪ್ರಾಣಿಯನ್ನು ಹುಡುಕಿ ಕೊಂಡು ಕಾಡಿನೊಳಗೆ ಹೋಯಿತು. ಅದರ ಎದುರಿಗೆ ಮೊಲವೊಂದು ಸಿಕ್ಕಿದಾಗ ನರಿ, “ಮೊಲರಾಯ, ಮೊಸಳೆ ನಿನ್ನ ಹತ್ತಿರ ಮಾತಾಡಬೇಕಂತೆ. ಬಾ” ಎಂದು ಕರೆಯಿತು. ಇದರಲ್ಲೇನೋ ಮೋಸವಿದೆಯೆಂದು ತಿಳಿದ ಮೊಲ, “ಮೊಸಳೇನ ಕಂಡ್ರೆ ನಂಗೆ ಹೆದರಿಕೆಯಪ್ಪ! ನಾನು ಬರೋಲ್ಲ” ಎಂದು ದೂರದಿಂದಲೇ ಹೇಳಿತು.

ಮರುದಿನ ನರಿ ಒಂದು ಉಪಾಯ ಯೋಚಿಸಿತು. ಮೊಸಳೆಯನ್ನು ಮರವೊಂದರ ಕೆಳಗೆ ಮಲಗಿಸಿ ಅದರ ಮೇಲೆ ಕಾಡಿನ ಹೂಗಳನ್ನು ಹಾಕಿ. “ಮೊಲ ಬಂದಾಗ ನೀನು ಅಲುಗಾಡದೆ ಸತ್ತಹಾಗೆ ಮಲಕ್ಕೊಂಡಿರು. ಅದು ಹತ್ತಿರ ಬಂದಾಗ ಗಬ್ಬಕ್ಕನೆ ತಿನ್ನು” ಎಂದು ಬೋಧಿಸಿತು. ಮೊಸಳೆ ಸಂತೋಷದಿಂದ ಒಪ್ಪಿಕೊಂಡಿತು.

ನರಿ ಮೊಲದ ಬಳಿಗೆ ಹೋಗಿ, “ಮೊಲರಾಯಾ, ನನ್ನ ರಾಜ ಮೊಸಳೆ ಸತ್ತುಹೋಯ್ತು. ಈಗಲಾದರೂ ಅದನ್ನು ಬಂದು ನೋಡು” ಎಂದು ಕಣ್ಣೀರು ಸುರಿಸುತ್ತಾ ಹೇಳಿತು. ಮೊಲ ಅದನ್ನು ನಿಜವೆಂದು ನಂಬಿ, ನರಿಯ ಜೊತೆಗೆ ತುಸು ದೂರಬಂದು ದೂರದಿಂದಲೇ ಮರದ ಕೆಳಗೆ ಮಲಗಿದ್ದ ಮೊಸಳೆಯನ್ನು ದಿಟ್ಟಿಸಿತು. ಅನಂತರ ಕೇಳಿತು: “ನರಿರಾಯಾ, ನೀನು ಹೇಳೋದೆಲ್ಲ ಸರಿಯೇ! ಆದ್ರೆ ನಮ್ಮ ಪೂರ್ವಿಕರು ಹೇಳುತ್ತಿದ್ದರು, ಸತ್ತ ಮೊಸಳೆಗಳು ಬಾಲ ಅಲ್ಲಾಡಿಸ್ತಾ ಇರುತ್ತವೆ ಅಂತ. ಈ ಮೊಸಳೆ ಸುಮ್ಮನೆ ಮಲಕ್ಕೊಂಡಿದೆಯಲ್ಲಾ!”. ಮೊಲ ಅಷ್ಟು ಹೇಳಿದ್ದೆ ತಡ, ಮೊಸಳೆ ತನ್ನ ಬಾಲವನ್ನು ಎತ್ತಿ ಆಡಿಸಲಾರಂಭಿಸಿತು. ನಿಜಸ್ಥಿತಿ ಗೊತ್ತಾದ ಮೊಲ ಕಾಡಿನೊಳಗೆ ಓಟಕಿತ್ತಿತು.

“ನಿನ್ನ ಮೂರ್ಖತನದಿಂದ ನನ್ನ ಶ್ರಮವೆಲ್ಲಾ ನೀರು ಪಾಲಾಯ್ತು” ಎಂದು ನರಿ ಮೊಸಳೆಯನ್ನು ಶಪಿಸಿತು.

ಕತ್ತೆಯ ಉಪಾಯ

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ “ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ.” ಎಂದು ಪರಿಹಾಸ್ಯ ಮಾಡಿ ನಕ್ಕಿತು.

ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಇದರಿಂದ ವ್ಯಾಪಾರಿ ತುಂಬಾ ದಿಗಿಲಾಯಿತು. “ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ” ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ. ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ ಶಿಕ್ಷೆಯಾಯಿತು.

ನೀತಿ: ನಾವು ಇನ್ನೊಬ್ಬರನ್ನು ಅವಮಾನಗೊಳಿಸಿದಾಗ, ಆ ಅವಮಾನದ ಜೊತೆಗೆ ಶಿಕ್ಷೆಯನ್ನು ಸಹ ನಾವು ಒಂದು ದಿನ ಅನುಭವಿಸಬೇಕಾಗಿರುತ್ತದೆ.


ಭೂತದ ಕಾಟ

ರಜೆಯ ಕಾಲ ಎಂದರೆ ಮಾಜದ ಕಾಲ ಎಂದೇ ಪುಟ್ಟಣ್ಣ ಮತ್ತು ಚಿಟ್ಟೆಯ ನಂಬಿಕೆ. ಶಾಲೆಗೆ ರಜೆ ಬಂತೆಂದರೆ ಸಾಕು ಹಳ್ಳಿಯಲ್ಲಿರುವ ಅಜ್ಜನ ಮನೆ ಅವರನ್ನು ಕರೆಯುತ್ತಿತ್ತು. ತೋಟ ಸುತ್ತವ ಕಾಡು ಹಣ್ಣುಗಳನ್ನು ಹೆಕ್ಕುವ, ತೊರೆಯ ನೀರಲ್ಲಿ ಮೀನಾಗಿ ಈಜುವ ಮಕ್ಕಳ ಕನಸು ರಜೆಯಲ್ಲಿ ಸಾಕಾರಗೊಳ್ಳುತ್ತಿತ್ತು.

ಎಂದಿನಂತೆ ಈ ಸಲವೂ ಅಜ್ಜನ ಮನೆ ಸೇರಿದ ಮಕ್ಕಳಿಗೆ ಊರಲ್ಲಿ ಕೇಳಿದ ಹೊಸ ಸುದ್ಧಿ ಹೆದರಿಕೆಯನ್ನು, ಕುತೂಹಲವನ್ನು ಹುಟ್ಟಿಸಿತ್ತು. ಅವರ ಮನೆಯಿಂದ ಒಂದೆರಡು ಫರ್ಲಾಂಗು ದೂರ ಇದ್ದ ಹುಲ್ಲಿನ ಛಾವಣಿಯ ಮನೆಯದು. ಹಗಲು ಹೊತ್ತಿನಲ್ಲಿ ಅಲ್ಲಿ ವಿಶೇಷವೇನೂ ಕಾಣದಿದ್ದರೂ ರಾತ್ರಿ ಹೊತ್ತು ಆ ಮನೆಯ ಮೇಲೆ ಆಗಸದಿಂದ ಕಲ್ಲುಗಳು ಬೀಳುತ್ತಿದ್ದವು. ಮನೆಯೊಳಗೆ ಮರಳು ಸುರಿಯುತ್ತಿತ್ತು. ಆ ಮನೆಯಲ್ಲಿ ವಾಸಿಸುತ್ತಿದ್ದುದು ಸೋಮ ಮತ್ತು ಅವನ ಮೊಮ್ಮಕ್ಕಳಾದ ವೇಣು ಮತ್ತು ದೀನು. ಅವರ ಅಪ್ಪ ಅಮ್ಮ ಕಳೆದ ಕೆಲವು ವರ್ಷಗಳ ಮೊದಲು ಅಪಘಾತದಲ್ಲಿ ತೀರಿ ಹೋಗಿದ್ದರು. ಊರವರೆಲ್ಲವು ಅವರೇ ಭೂತವಾಗಿ ಬಂದಿದ್ದಾರೆ ಎಂದು ಬಲವಾಗಿ ನಂಬಿದ್ದರು. ಮಕ್ಕಳ ಮೇಲೆ ಕರುಣೆ ತೋರಿ ಅವರಿಗೆ ಹಣದ ಸಹಾಯ ಮಾಡುತ್ತಿದ್ದರು. ಅನ್ನದ ಪಾತ್ರೆಗೆ ಮರಳು ಸುರಿಯುತ್ತದೆ ಎಂದು ಊರವರೇ ಊಟ ನೀಡುತ್ತಿದ್ದರು. ದಿನಾ ರಾತ್ರೆ ಅಲ್ಲಿ ಆ ವಿಶೇಷವನ್ನು ನೋಡಲು ಜನರ ಜಾತ್ರೆಯೇ ನೆರೆಯುತ್ತಿತ್ತು. ಕೆಲವೊಮ್ಮೆ ಅವರ ಮೇಲು ಕಲ್ಲುಗಳು ಬೀಳುತ್ತಿದ್ದವು.

[sociallocker]ಚಿಟ್ಟೆ ಮತ್ತು ಪುಟ್ಟಣ್ಣನಿಗೆ ಆ ಮನೆಯನ್ನು ನೋಡಬೇಕೆಂಬ ಆಸೆ ಹುಟ್ಟಿತು. ಅಜ್ಜ ಅಜ್ಜಿಗೆ ಹೇಳಿದರೆ ಬಿಡಲಾರರು ಎಂದು ಸೀಬೆ ಹಣ್ಣು ಕೊಯ್ಯುವ ನೆವಾವೊಡ್ಡಿ ಮನೆಯಿಂದ ಹೊರ ಬಿದ್ದು ಆ ಮನೆಯ ದಾರಿ ಹಿಡಿದಿದ್ದರು. ಇಬ್ಬರೂ ಮೆಲ್ಲನೆ ಆ ಮನೆಯ ಹಿಂಬಾಗಕ್ಕೆ ಬಂದರು. ಅಲ್ಲಿ ತಲಾ ಒಡೆದ ಕೆಲವು ಮಡಕೆಗಳು ಬಿದ್ದಿದ್ದವು. ಅದರ ಅತ್ತಿತ್ತ ಮೆನೆಗೆ ಬೀಳುತ್ತಿದ್ದ ಕಲ್ಲುಗಳು ಕೆಲವಿದ್ದವು.

ಪುಟ್ಟಣ್ಣ ಅಲ್ಲಿದ್ದ ಕಲ್ಲನ್ನು ನೋಡಿ ಚಿಟ್ಟೆ.. ಈ ಕಲ್ಲು ನಮ್ಮ ತೋಟದ ಮೊಲೆಯ ಹೊಳೆಯಲ್ಲಿ ಇರುವಂತಹ ಕಲ್ಲು ಅಲ್ವಾ.. ನೋಡು. ಮೊನ್ನೆ ನಾನು ನೀನು ಆತ ಆಡಲಿಕ್ಕೆ ಹೆಕ್ಕಿದಂತಹಾ ಕಲ್ಲುದುಚಿ ಎಂದ. ಚಿಟ್ಟೆ, ಆತೋಡಿನ ಕಡೆ ನೋಡಿ ಮನೆಗೆ ಹೋಗುವ ಎಂದಳು.

ತೊಡಿಗೆ ಇನ್ನೇನು ಇಳಿಯಬೇಕು ಅನ್ನುವಾಗ ಅಲ್ಲೆಲ್ಲೋ ಪಿಸು ಮಾತಿನ ಸದ್ದು ಕೇಳಿಸಿ ಇಬ್ಬರೂ ಮೌನವಾಗಿ ಮರೆಯಲ್ಲಿ ನಿಂತರು. ಕಲ್ಲುಗಳನ್ಣಾಯುತ್ತಿದ್ದವರನ್ನು ಕಂಡು ಪುಟ್ಟಣ್ಣ ಮತ್ತು ಚಿಟ್ಟೆಗೆ ಇದರಲ್ಲಿ ಏನೋ ಮೋಸವಿದೆ ಅನ್ನಿಸಿತು. ಮನೆಗೆ ಬಂದು ಅಜ್ಜನ ಹತ್ತಿರ ತಾವು ಕಂಡದ್ದನ್ನೆಲ್ಲಾ ಹೇಳಿದರು.

ಆ ದಿನ ರಾತ್ರಿ ಭೂತದ ಮನೆಗೆ ಹೊರಟವರಲ್ಲಿ ಊರವರ ಜೊತೆ ಅಜ್ಜನ ಕೈಹಿಡಿದು ಹೊರಟ ಪುಟ್ಟಣ್ಣ ಮತ್ತು ಚಿಟ್ಟೆಯೂ ಸೇರಿದ್ದರು. ಎಲ್ಲರೂ ಕಲ್ಲು ಬೀಳುತ್ತಿದ್ದ ಮನೆಯ ಎದುರು ಭಾಗದಲ್ಲಿ ಆ ಅಚ್ಚರಿಯನ್ನು ನೋಡಲು ನಿಂತಿದ್ದರು. ಮನೆಯ ಒಳಗೆ ಅಲ್ಲಲ್ಲಿ ಮರಳು ಸುರಿಯುತ್ತಿತ್ತು.

ಪುಟ್ಟಣ್ಣ ಮತ್ತು ಚಿಟ್ಟೆ ಅಜ್ಜನ ಕೈಹಿಡಿದು ಮನೆಯ ಹಿಂಬಾಗಕ್ಕೆ ಕರೆದೊಯ್ದರು. ಟಾರ್ಚಿನ ಬೆಳಕನ್ನು ಮಡಿಕೆಗಳಿದ್ದ ಜಾಗಕ್ಕೆ ಹಾಯಿಸಿದಾಗ ಅಲ್ಲೇನೋ ಇರಲಿಲ್ಲ. ಮತ್ತೆ ಮೆಲ್ಲನೆ ಗುಂಪನ್ನು ಸಿರಿಕೊಂಡರು. ಗುಂಪಿನ ಹಿಂದೆ ನಿಂತಿದ್ದ ವೇಣು ಮತ್ತು ದಿನು ಕಾಣಿಸಿದರು. ಅಜ್ಜ ತಮ್ಮ ಜೊತೆ ಬಂದಿದ್ದ ಒಂದಿಬ್ಬರಿಗೆ ಸೂಚನೆ ನೀಡಿದರು. ಅವರೆಲ್ಲಾ ವೇಣು ಮತ್ತು ದಿನುವಿನ ಹತ್ತಿರ ಸಹಜವೆಂಬಂತೆ ಸಾಗಿ ಅವರ ಕೈಗಳನ್ನು ಹಿಡಿದರು. ತುಂಬುತೋಳಿನ ಅಂಗಿಯ ಕೈಯಳ್ಲೀಲ್ಲಾ ಕಲ್ಲುಗಳು.

ಎಳೆದು ತಂದು ನಡುವಿನಲ್ಲಿ ನಿಲ್ಲಿಸಿ ಕೇಳಿದಾಗ ತಾವೇ ಮಾಡಿದ್ದಾಗಿ ಒಪ್ಪಿಕೊಂಡರು. ಅವರಜ್ಜ ಸೋಮ ಯಾವುದೋ ತಪ್ಪಿಗಾಗಿ ಅವರನ್ನು ದಂಡಿಸಿದಾಗ ಅಜ್ಜನಿಗೆ ಹೆದರಿಸಲು ಈ ನಾಟಕ ಶುರು ಮಾಡಿದ್ದರು. ಅದರಿಂದಾಗುವ ಲಾಭವನ್ನು ಕಂಡು ಅದನ್ನು ಮುಂದುವರೆಸಿದ್ದರು. ತೂತಾದ ಮಡಕೆಯಲ್ಲಿ ಮರಳು ತುಂಬಿ ಕಟ್ಟಲಾದ ಮೇಲೆ ಮರದ ಹಲಗೆಯ ಅಟ್ಟದಲ್ಲಿಡುತ್ತಿದ್ದರು. ಅದು ನಿಧಾನಕ್ಕೆ ಕೆಳಗೆ ಸುರಿಯುತ್ತಾ ಇರುತ್ತಿತ್ತು. ಕಲ್ಲುಗಳನ್ನು ತಮ್ಮ ಅಂಗಿಗಳಲ್ಲೇ ಬಚ್ಚಿಟ್ಟುಕೊಂಡು ಗುಂಪಿನ ಹಿಂದೆ ನಿಂತು ತಾವೇ ಮೇಲಕ್ಕೆ ಎಸೆಯುತ್ತಿದ್ದರು. ಎಲ್ಲರೂ ಕತ್ತಲೆಯಲ್ಲಿ ಬೀಳುತ್ತಿರುವ ಕಲ್ಲನ್ನು ನೋಡಿ ಭಯ ಪಡುತ್ತಿದ್ದರು.

ಪುಟ್ಟಣ್ಣ ಮತ್ತು ಚಿಟ್ಟೆಗೆ ಊರವರಿಂದ ಶಹಬ್ಭಾಸ್ ಸಿಕ್ಕಿತು. ಅಜ್ಜ,’ ನೀವಿನ್ನೂ ಪುಟ್ಟವರು. ಅವಸರಪಟ್ಟು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಾರದು. ದೊಡ್ಡವರನ್ನು ಕರೆದುಕೊಂಡೇ ಸಾಹಸ ಮಾಡಿ’ ಎಂದು ಬುದ್ಧಿವಾದ ಹೇಳುತ್ತಾ ಮಕ್ಕಳ ಜಾಣತನವನ್ನು ಹೊಗಳಿದರು.

ನೀವು ಕೊಟ್ಟದ್ದು ನಿಮಗೇ


ಬಹಳ ಹಿಂದೆ ಶಿವಪುರವೆಂಬ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರಿಗೆ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ಹೇಳುತ್ತಿದ್ದ. ಅವನ ಮನೆಯ ಸಮೀಪದಲ್ಲಿ ಧರ್ಮಯ್ಯನೆಂಬ ಬಡವನಿದ್ದ. ಅವನು ಇತರರಿಗೆ ತನ್ನ ಕೈಲಾದ ನೆರವು ನೀಡುತ್ತಿದ್ದ. ಆಗ ಶ್ರೀಮಂತ ರಾಮಪ್ಪ ಆ ಕೆಲಸದ ಸಹಾಯವನ್ನು ಧರ್ಮಯ್ಯನ ಮೂಲಕ ತಾನೇ ಮಾಡಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಧರ್ಮಯ್ಯ ನಕ್ಕು ಸುಮ್ಮನಾಗುತ್ತಿದ್ದ.

ಶಿವಪುರ ಊರಿನ ಹತ್ತಿರ ಒಂದು ಗುಡ್ಡವಿತ್ತು. ಆ ಗುಡ್ಡದಲ್ಲಿ ಒಬ್ಬ ಸಾಧು ವಾಸವಾಗಿದ್ದ. ಅವನು ಜನರ ಕಣ್ಣಿಗೆ ಬೀಳುತ್ತಿರಲಿಲ್ಲ. ಒಂದು ದಿನ ಆ ಸಾಧು ಊರಿಗೆ ಬಂದ. ಮೊದಲು ಶ್ರೀಮಂತ ರಾಮಪ್ಪನ ಮನೆಗೆ ಬಂದು, ‘ಅಯ್ಯಾ, ಏನಾದರೂ ಸಹಾಯ ಮಾಡಿ. ನೀವು ಕೊಟ್ಟಿದ್ದು ನಿಮಗೇ!’ ಎಂದು ಬೇಡಿದ. ರಾಮಪ್ಪ ಸಾಧುವಿಗೆ ಮರುದಿನ ಬರಲು ಹೇಳಿ ಸಾಗ ಹಾಕಿದ. ಸಾಧು ಧರ್ಮಯ್ಯನ ಮನೆಗೂ ಬಂದು ಅದೇ ರೀತಿ ಬೇಡಿದ. ಧರ್ಮಯ್ಯ ಒಂದಷ್ಟು ಧವಸ, ಧಾನ್ಯ ಹಾಗೂ ಕಂಬಳಿಯನ್ನು ದಾನ ಮಾಡಿದ. ಸಾಧುವು ಯಾರ ಮನೆಯನ್ನೂ ಬಿಡಲಿಲ್ಲ. ಎಲ್ಲರ ಹತ್ತಿರ ಹೋಗಿ, ‘ಏನಾದರೂ ಸಹಾಯ ಮಾಡಿ. ನೀವು ಕೊಟ್ಟದ್ದು ನಿಮಗೇ’ ಎಂದು ಕೇಳಿ ಅವರು ಕೊಟ್ಟದ್ದನ್ನು ತೆಗೆದುಕೊಂಡು ಹೋದ.

[sociallocker]ರಾಮಪ್ಪನ ಮನೆಗೆ ಮತ್ತೆ ಬಂದು ಅದೇ ರೀತಿ ಬೇಡಿದ. ರಾಮಪ್ಪ ಏನೂ ಕೊಡದೆ ಕಳಿಸಿದ. ಆ ಸಾಧು ಪಟ್ಟು ಬಿಡದೆ ಮತ್ತೆ ಬಂದ. ಆಗ ಶ್ರೀಮಂತ, ‘ಏನೋ ಸಾಧು, ನೀನು ಎಲ್ಲರಿಂದ ಹೀಗೆ ಕೇಳಿ ಪಡೆದಿದ್ದೀಯ. ಅದನ್ನೆಲ್ಲ ನಿನಗೆ ಕೊಡಿಸಿದವನು ನಾನೇ! ಹಾಗಿದ್ದರೂ ನನ್ನನ್ನು ಮತ್ತೆ ಬಂದು ಬೇಡುತ್ತಿರುವೆಯಲ್ಲಾ’ ಎಂದು ಕೋಪದಿಂದ ಒಂದು ಹರಕಲು ಬಟ್ಟೆಯನ್ನು ಸಾಧುವಿನತ್ತ ಎಸೆದ. ಸಾಧು ಕೋಪಿಸದೆ ಹರಕಲು ಬಟ್ಟೆಯನ್ನು ಎತ್ತಿಕೊಂಡು, ‘ನಾನೊಬ್ಬ ಸಾಧು. ನಿಮ್ಮ ವಸ್ತುಗಳು ನನಗೇಕೆ? ನೀವು ಕೊಟ್ಟದ್ದು ನಿಮಗೇ’ ಎಂದು ನುಡಿದು ಹೊರಟು ಹೋದ.

ಎರಡು ದಿನಗಳ ನಂತರ ಆ ಊರಿನಲ್ಲಿ ಹಿಂದೆಂದೂ ಕಾಣದ ಮಾಯದಂಥ ಮಳೆ ಬಂತು. ಮನೆಗಳು, ದನಕರುಗಳು, ಜನಗಳು, ಮರಗಳು ಕೊಚ್ಚಿ ಹೋದರು. ಆಗ ಸಾಧು ಮತ್ತೆ ಬಂದ. ಜನರನ್ನು ಗುಡ್ಡದ ಮೇಲೆ ತನ್ನ ಗುಡಿಸಲಿಗೆ ಕರೆದೊಯ್ದ. ಶ್ರೀಮಂತ ರಾಮಪ್ಪ, ಧರ್ಮಯ್ಯರೂ ಸಾಧುವನ್ನು ಹಿಂಬಾಲಿಸಿ ಗುಡ್ಡದ ಮೇಲೆ ಹೋದರು. ಅಲ್ಲಿ ನೋಡಿದರೆ ಮಳೆಯೇ ಇಲ್ಲ! ಸಾಧು ಎಲ್ಲ ಜನರಿಗೆ ಆಶ್ರಯ ನೀಡಿದ. ಅವನು ಜನರಿಗೆ, ‘ನೀವು ನನಗೆ ಕೊಟ್ಟ ಎಲ್ಲ ನಿಮ್ಮ ವಸ್ತುಗಳು ಇಲ್ಲಿವೆ. ಅವುಗಳನ್ನು ನೀವೇ ಉಪಯೋಗಿಸಿಕೊಳ್ಳಿ’ ಎಂದು ನುಡಿದ. ಜನರು ಅವರವರ ವಸ್ತುಗಳನ್ನು ಆಯ್ದು ಉಪಯೋಗಿಸಿಕೊಂಡರು. ಶ್ರೀಮಂತ ರಾಮಪ್ಪನಿಗೆ ಹರಕಲು ಬಟ್ಟೆ ಮಾತ್ರ ಸಿಕ್ಕಿತು. ಆಗ ಅವನಿಗೆ ತುಂಬಾ ನಾಚಿಕೆಯಾಯಿತು. ಧರ್ಮಯ್ಯನು ತನ್ನದೊಂದು ಕಂಬಳಿಯನ್ನು ರಾಮಪ್ಪನಿಗೆ ಕೊಟ್ಟ. ಅವನು ಮತ್ತಷ್ಟು ನಾಚಿಕೆಯಿಂದ ಕುಗ್ಗಿದ.

ಒಂದು ವಾರದ ನಂತರ ಮಳೆಯು ತಗ್ಗಿತು. ಎಲ್ಲರೂ ಊರಿಗೆ ಹೊರಟು ನಿಂತು ಸಾಧುವಿಗೆ ವಂದಿಸಿದರು. ಸಾಧುವು, ‘ನಾನು ಹೇಳಿದ ‘ನೀವು ಕೊಟ್ಟದ್ದು ನಿಮಗೇ’ ಎಂಬ ಮಾತಿನ ಅರ್ಥ ಈಗ ನಿಮಗೆ ತಿಳಿದಿರಬಹುದು. ಭಗವಂತನು ನೀವು ಕೊಟ್ಟದ್ದನ್ನು ನಿಮಗೇ ಕೊಡುತ್ತಾನೆ. ನೀವು ಮಾಡಿದ ಸಹಾಯ ನಿಮ್ಮನ್ನು ಕಷ್ಟಕಾಲದಲ್ಲಿ ಖಂಡಿತ ಕಾಪಾಡುತ್ತದೆ. ಇದನ್ನು ತಿಳಿದು ಬಾಳಿರಿ’ ಎಂದು ನುಡಿದು ಎಲ್ಲರನ್ನೂ ಆಶೀರ್ವದಿಸಿ ಕಳಿಸಿಕೊಟ್ಟ. ಶ್ರೀಮಂತ ರಾಮಪ್ಪ ಅಂದಿನಿಂದ ತನ್ನ ವರ್ತನೆಯನ್ನು ಬದಲಾಯಿಸಿಕೊಂಡು ಎಲ್ಲರಿಗೆ ಉಪಕಾರಿಯಾಗಿ ಬಾಳಿದ. ‘ನೀವು ಕೊಟ್ಟದ್ದು ನಿಮಗೇ’ ಎಂಬ ಮಾತು ಅವನಿಗೆ ಈಗ ತುಂಬ ಚೆನ್ನಾಗಿ ಅರ್ಥವಾಗಿತ್ತು.

ಜೇನು ತಂದ ಸೌಭಾಗ್ಯ

ಬೀಳಿಗಿಯ ಯಂಕಪ್ಪ, ದಿನಾಲೂ ಊರಿನ ದನಗಾಹಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತುಂಬಾ ಬಡತನ. ಹೆಂಡತಿ ಹಾಗೂ ಬೆಳೆದು ನಿಂತ ಮಗಳೊಂದಿಗೆ ಜೀವನ ನಡೆಸುತ್ತಿದ್ದ. ಊರಿನ ಜನ ವರ್ಷಕ್ಕೊಮ್ಮೆ ನೀಡುತ್ತಿದ್ದ ಜೋಳ, ಕಾಳುಕಡಿ, ಅಲ್ಪ ಮೊತ್ತದ ಹಣ, ಜೀವನಕ್ಕೆ ಸಾಲುತ್ತಿರಲಿಲ್ಲ. ದನಗಳು ಹಾಕಿದ ಸೆಗಣಿಯ ಸಂಗ್ರಹದ ಮಾರಾಟದಿಂದ ಬಂದ ಅಲ್ಪಸ್ವಲ್ಪ ಹಣದಿಂದ ಹೊಟ್ಟೆ ಹೊರೆಯಲು ಅನುಕೂಲವಾಗುತ್ತಿತ್ತು. ಬೆಳಗಿನ ಜಾವ ಊರ ಹೊರ ಬಯಲಿನಲ್ಲಿ ಎಲ್ಲಾ ದನಗಳನ್ನು ನಿಲ್ಲಿಸಿ ನಂತರ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಕಾಡಿಗೆ ಮೇಯಿಸಲು ತೆರಳುತ್ತಿದ್ದ.

ಮಧ್ಯಾಹ್ನ ಸಮಯದಲ್ಲಿ, ಹಸಿರು ಮೇಯಿಸಿದ ದನಗಳು ಗಿಡಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ಯಂಕಪ್ಪ ಹಾಗೂ ಅವನ ಗೆಳೆಯನಾದ ರೊಳ್ಳಿ ಊರಿನ ದನಗಾಹಿ ಗಂಗಪ್ಪ ಇಬ್ಬರೂ ಸೇರಿ, ತಾವು ತಂದ ಬುತ್ತಿ ಬಿಚ್ಚಿ ಹಂಚಿಕೊಂಡು ಊಟ ಮಾಡುತ್ತಿದ್ದರು. ನಂತರದ ಸಮಯದಲ್ಲಿ, ದಿನಾಲೂ ಬೆಲ್ಲ ತಿನ್ನುವ ಹವ್ಯಾಸವಿದ್ದ ಯಂಕಪ್ಪ ಕೈತೊಳೆದುಕೊಂಡಾಗ ಬಿದ್ದ ಬೆಲ್ಲದ ನೀರಿಗೆ ಕಾಡಿನ ಅನೇಕ ಜೇನುನೊಣಗಳು ಮುತ್ತಿಗೆ ಹಾಕುವುದನ್ನು ನೋಡಿ ಸಂತೋಷಪಡುತ್ತಿದ್ದ, ಬರು ಬರುತ್ತಾ ಮಣ್ಣಿನ ಫರ‌್ಯಾಣದಲ್ಲಿ ಬೆಲ್ಲದ ನೀರು ಹಾಕಿ ಇಡುವ ಹವ್ಯಾಸ ರೂಢಿಸಿಕೊಂಡ. ಬಹಳ ಸಂಖ್ಯೆಯಲ್ಲಿ ಜೇನು ನೊಣಗಳು ಸಿಹಿ ನೀರಿಗೆ ಮುತ್ತಿಗೆ ಹಾಕಿ ಪಾಕವನ್ನು ಹೀರಿಕೊಂಡು ಗುಂಯ್‌ಗುಟ್ಟುವ ಸದ್ದು ಕೇಳಿ ಸಂತೋಷಪಡುತ್ತಿದ್ದ.

[sociallocker]ಯಂಕಪ್ಪನ ಈ ವಿಚಿತ್ರ ಹವ್ಯಾಸದ ನಡವಳಿಕೆಯು ಗಂಗಪ್ಪನಿಗೆ ಸೋಜಿಗೆ ತಂದಿತ್ತು. ‘ಏಕೆ? ಈ ಕೀಟಗಳ ಬಗ್ಗೆ ಇಷ್ಟೊಂದು ಪ್ರೀತಿ?’ ಎಂದು ಗಂಗಪ್ಪ ಕೇಳಿದಾಗ, ‘ಯಾಕೊ ಏನೋ, ಅವು ಎಲ್ಲಾ ಹೂಗಳ ಮಕರಂದ ಹೀರಿ ಜೇನು ತಯಾರಿಸಿ ಇನ್ನೇನು ಕುಡಿಯಬೇಕು ಎನ್ನುವಷ್ಟರಲ್ಲಿ ನಮ್ಮಂಥ ಜನರ ಪಾಲಾಗುತ್ತದೆ. ಯಾರದೋ ಶ್ರಮ ಯಾರಿಗೋ ಸುಖ. ಎಂಥಾ ಅನ್ಯಾಯ’ ಎಂದು ಮರುಕಪಟ್ಟಿದ್ದ. ಒಂದು ಮಧ್ಯಾಹ್ನ ಊಟಕ್ಕೆ ಕುಳಿತಾಗ ಗಂಗಪ್ಪ ಕೇಳಿದ, ‘ನಿನ್ನ ಮಗಳ ಮದುವೆ ವಿಚಾರ ಏನಾಯಿತು?’ ಅಂದಾಗ ‘ಯಾಕೋ ಏನೋ, ಬಂದ ವರ ನಿಲ್ಲಾವಲ್ಲದು. ಗ್ರಹಗತಿ ಸರಿ ಇಲ್ಲಾ ಅಂತಾ ಮಠದ ಆಚಾರಿಯವರು ಹೇಳ್ಯಾರ, ಎಲ್ಲಾ ದೇವರಿಗೆ ಬಿಟ್ಟಿದ್ದು ‘ ಎಂದು ನಿಟ್ಟುಸಿರು ಬಿಟ್ಟ ಯಂಕಪ್ಪಾ. ಜೇನುನೊಣಗಳಿಗೆ ಬೆಲ್ಲದ ನೀರು ಇಡುವ ಕಾಯಕ ಮುಂದುವರೆದಿತ್ತು.

ಒಂದು ವಾರದ ನಂತರ ಯಂಕಪ್ಪನ ಬಚ್ಚಲ ಮನೆಯಲ್ಲಿ ಜೇನುಗಳು ಗೂಡು ಕಟ್ಟಿದ ಸುದ್ದಿ ಇಡೀ ಊರಿಗೆ ಹಬ್ಬಿತು. ಕೆಲವು ಮಂದಿ, ‘ಹುಷಾರು, ಹುಳಗಳು ಕಚ್ಚಿ ಬಿಟ್ಟಾವು, ಬಿಡಿಸುವುದು ಉತ್ತಮ’ ಎಂದರು. ಇನ್ನು ಕೆಲವರು ಒಳ್ಳೆಯ ಲಕ್ಷಣ ಅಂದರು. ಅಂತೂ ಆಚಾರಿಯವರನ್ನು ಭೇಟಿ ಮಾಡಿದಾಗ ಜೇನಿನ ತಂಟೆಗೆ ಹೋಗದೆ ಇರುವುದೇ ವಾಸಿ ಎಂದು ಬಿಟ್ಟ. ದಿನದಿಂದ ದಿನಕ್ಕೆ ಜೇನು ಗೂಡು ಬೇಳೆಯುತ್ತಾ ಹೋಯಿತು. ಸ್ನಾನ ಮಾಡಲು ಹೋದವರಿಗೂ ಯಾವುದೇ ತೊಂದರೆ ಕೊಡಲಿಲ್ಲ. ಬೀಸಿ ನೀರಿನ ಒಲೆಯಿಂದ ಬರುವ ವಿಪರೀತ ಹೊಗೆಗೂ ಜೇನು ಹುಳುಗಳು ಕಾಲ್ತೆಗೆಯಲಿಲ್ಲ. ಬರುಬರುತ್ತಾ ಗೂಡಿನ ತುಂಬಾ ಜೇನುತುಪ್ಪ ಭರ್ತಿಯಾಯಿತು. ಬಹಳಷ್ಟು ಜನರು ಜೇನು ಬಿಡಿಸಲು ಹಠ ಹಿಡಿದರೂ, ಯಂಕಪ್ಪ ಒಪ್ಪಲಿಲ್ಲ. ಕಾಕತಾಳಿಯವೆಂಬಂತೆ ಕೆಲವೇ ದಿನಗಳಲ್ಲಿ ಪಕ್ಕದ ಸೊನ್ನದ ಊರಿನ ತಿಪ್ಪಣ್ಣನ ಜೊತೆಗೆ ಯಂಕಪ್ಪನ ಮಗಳ ನಿಶ್ಚಯವು ಆಯಿತು. ಸರಳ ರೀತಿಯಲ್ಲಿ ಮದುವೆಯೂ ಆಯಿತು.

ಮಗಳನ್ನು ಗಂಡನ ಮನೆಗೆ ಕಳುಹಿಸುವ ದಿನವೂ ಬಂದಿತು. ಸಿಂಗರಿಸಿದ ಎತ್ತಿನ ಚಕ್ಕಡಿಯಲ್ಲಿ ಕೂಡ್ರಿಸಿ ತಿಳಿ ಹೇಳಿ ಊರಿನ ಸೀಮೆಯತನಕ ಬಿಟ್ಟು, ತುಂಬಿದ ಕಣ್ಣುಗಳಿಂದ ನೋವಿನೊಂದಿಗೆ ಮನೆಯತ್ತ ಮುಖ ಮಾಡಿದ, ಮನೆಯಲ್ಲಿ ಆಶ್ಚರ್ಯ ಕಾದಿತ್ತು. ಮಗಳ ಅಗಲಿಕೆಯ ಜೊತೆಗೆ ಜೇನು ಹುಳುಗಳಿಲ್ಲದ ಬರಿದಾದ ಗೂಡು ಕಂಡು ದು:ಖ ಇಮ್ಮಡಿಯಾಯಿತು. ಬಂದ ಕೆಲಸವಾಯಿತೆಂಬಂತೆ ಕಾಕತಾಳೀಯವಾಗಿ ಜೇನು ಹುಳುಗಳ ಪಲಾಯನವಾದುದು ಅವನಿಗೆ ಸೋಜಿಗ ತಂದಿತ್ತು.

ನಾಯಿಯ ಬುದ್ಧಿ


ಒಂದು ಊರಿನಲ್ಲಿ ಎರಡು ನಾಯಿಗಳು ಇದ್ದವು. ಅವು ತಾವು ಒಳ್ಳೆಯ ಗೆಳೆಯರೆಂದು ಅಂದುಕೊಂಡಿದ್ದವು. ಒಂದು ಬಿಳಿ ಬಣ್ಣದ್ದು ಬಿಳಿಯ, ಇನ್ನೊಂದು ಕಪ್ಪು ಬಣ್ಣದ ಕರಿಯ. ಒಂದು ದಿನ ಕರಿಯ ಮತ್ತು ಬಿಳಿಯ ಎರಡೂ ಸೇರಿ ಊರ ಹೊರತನಕ ಬಂದು ಬಿಟ್ಟವು. ಚೆಂದವಾಗಿ ಆಟವಾಡುತ್ತಾ ಮೈಮರೆತಿದ್ದವು.

ಆಗ ಹತ್ತಿರದ ಪೊದೆಯಲ್ಲಿ ಸದ್ದಾಗಿ ಅವುಗಳಲ್ಲಿನ ಬೇಟೆಗಾರ ಜಾಗ್ರತನಾದ. ಒಮ್ಮೆಲೇ ಪೊದೆಯತ್ತ ದಾಳಿ ಮಾಡಿದರೆ ಸಿಕ್ಕಿತೊಂದು ಕಾಡುಕೋಳಿ. ಒಂದೇ ಹಕ್ಕಿ ಎರಡೂ ನಾಯಿಗಳ ಬಾಯಿಯಲ್ಲಿ. ಅದು ತನ್ನ ಬೇಟೆ ಎಂದು ಎರಡೂ ಕಿತ್ತಾಡುತ್ತಿದ್ದಾಗ ನಡುವೆ ಬಂತೊಂದು ಚಿರತೆ! ಇವುಗಳು ಕುಂಯ್ ಕುಂಯ್ ಎಂದು ದೂರ ಓಡಿ ಹೋಗಲು ಕೋಳಿ ಚಿರತೆಯ ಪಾಲಾಯ್ತು. ‘ಹೀಗಾಗಲು ನೀನೇ ಕಾರಣ’ ಅಂತ ಒಂದಕ್ಕೊಂದು ದೋಷಾರೋಪಣೆ ಮಾಡಿ ಇನ್ನೂ ಮೇಲೆ ಬೇಟೆಯನ್ನು ಜಗಳಾಡದೆ ಹಂಚಿಕೊಂಡು ತಿನ್ನೋಣ ಎಂದು ಒಪ್ಪಂದ ಮಾಡಿಕೊಂಡವು. ಮತ್ತೆ ಗೆಳೆತನಡಾಟ ಮುಂದುವರೆದಿದ್ದಾಗ ಎದುರಿಂದ ಹಾಡು ಹೋಗಿತ್ತೊಂದು ಮೊಲ. ಎರಡೂ ನಾಯಿಗಳು ಸೇರಿ ಆಕ್ರಮಣ ಮಾಡಲು ಮೊಲ ತಪ್ಪಿಸಿಕೊಳ್ಳುವುದುಂಟೆ? ಅವುಗಳ ಬಾಯಿಗೆ ಸಿಕ್ಕಿ ಸತ್ತೇ ಹೋಯಿತು. ಮತ್ತೆ ಬೇಟೆ ‘ನನ್ನದು ತನ್ನದು’ ಎಂದು ಯುದ್ಧ ಆರಂಭ ಮಾಡಿದವು. ಇತ್ತ ಕಳ್ಳ ನರಿಯೊಂದು ಬಂದು ಸತ್ತ ಮೊಲವನ್ನು ಎತ್ತಿಕೊಂಡು ಸದ್ದಿಲ್ಲದೆ ನಡಿಯಿತು. ನಾಯಿಗಳು ಕದನದಲ್ಲಿ ಬಳಲಿ ‘ಇಬ್ಬರೂ ಮೊಲವನ್ನು ಕಚ್ಚಿ ಎಳೆಯುವ. ನಿನಗೆ ಸಿಕ್ಕಿದ್ದು ನಿನಗೆ, ನನ್ನಡೆ ಉಳಿದದ್ದು ನನಗೆ’ ಎಂದು ಮರು ಒಪ್ಪಂದ ಮಾಡಿಕೊಂಡು ಏದುಸಿರು ಬಿಡುತ್ತಾ ಬಂದು ನೋಡಿದರೆ ಅಲ್ಲೇನಿದೆ?

“ಅದಕ್ಕೆ ಹೇಳ್ತಾರೆ ನಮ್ಮದು ನಾಯಿ ಬುದ್ಧಿ ಅಂತ. ಹಂಚಿ ತಿನ್ನುವ ಗುಣವೇ ನಮ್ಮಲಿಲ್ಲ” ಎನ್ನುತ್ತಾ, ಮೈಮೇಲಿನ ಗಾಯಗಳನ್ನು ನೆಕ್ಕಿಕೊಳ್ಳುತ್ತಾ ಮನೆ ಕಡೆ ಹೆಜ್ಜೆ ಹಾಕಿದವು.

ನೀತಿ

ನಮ್ಮ ಪಾಲಿಗೆ ಪಂಚಾಮೃತ ಅನ್ನಬೇಕೆ ವಿನಹ ಎಲ್ಲಾ ನನಗೆ ಬೇಕು ಅನ್ನಬಾರದು.


ಕುರುಬನ ಜಾಣ್ಮೆ


ಚಂದ್ರನಗರದ ಅರಸ ಚಂದ್ರಸೇನನ ಏಕೈಕ ಪುತ್ರಿ ಸುಮತಿ ಎಂಬ ಹುಡುಗಿ ಇದ್ದಳು. ಇವಳು ತುಂಬ ಸುಂದರಳು, ಬುದ್ಧಿವಂತಳು ಆಗಿದ್ದಳು. ತನ್ನ ರೂಪ ಹಾಗೂ ಬುದ್ಧಿವಂತಿಕೆಯ ಬಗ್ಗೆ ಅವಳಿಗೆ ತುಂಬ ಹೆಮ್ಮೆಯಿತ್ತು. ಪ್ರೌಢಾವಸ್ಥೆಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, ‘ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜೊತೆ ಮಾತ್ರ ನಾನು ಮದುವೆಯಾಗುವೆ’ ಎಂದು ಹೇಳಿದಳು.

ಆದರೆ, ಅಂತಹ ಯುವಕನನ್ನು ಹುಡುಕುವುದು ಹೇಗೆ ಎಂದು ಅರಸನಿಗೆ ಚಿಂತೆಯಾಯಿತು. ‘ಅದನ್ನು ನನಗೆ ಬಿಡಿ’ ಎಂದು ಹೇಳಿದ ಸುಮತಿ ಆಳುಗಳ ಅವರ ಸಹಾಯದಿಂದ ಅರಮನೆಯ ಒಂದು ದೊಡ್ಡ ಮರಕ್ಕೆ ತೂಗುವ ಮಂಚವನ್ನು ಕಟ್ಟಿಸಿದಳು.

[sociallocker]ಮರುದಿನ ಮುಂಜಾನೆ ಅರಸ ಮಗಳ ಆದೇಶದಂತೆ ತನ್ನ ರಾಜ್ಯದಲ್ಲಿ ಡಂಗುರ ಸಾರಿಸಿದ, ‘ಯಾರು ರಾಜಕುಮಾರಿ ಹಾಕುವ ಷರತ್ತನ್ನು ಗೆಲ್ಲುವರೋ ಅವರು ರಾಜಕುಮಾರಿಯನ್ನು ವಿವಾಹವಾಗಬಹುದು’ ಎಂದು. ರಾಜಕುಮಾರಿಯ ರೂಪ ಹಾಗೂ ಬುದ್ಧಿವಂತಿಕೆಯ ಖ್ಯಾತಿ ದೂರದವರೆಗೆ ಹರಡಿತ್ತು. ಹೀಗಾಗಿ ರಾಜಕುಮಾರಿಯನ್ನು ವರಿಸುವುದಕ್ಕಾಗಿ ದೂರದ ಊರುಗಳಿಂದ ರಾಜಕುಮಾರರು ಚಂದ್ರನಗರಕ್ಕೆ ಬಂದರು.

ರಾಜಕುಮಾರಿ ಮರಕ್ಕೆ ಕಟ್ಟಿದ ತೂಗುಮಂಚದಿಂದ ನನ್ನನ್ನು ಯಾರೂ ಕೆಳಗೆ ಇಳಿಸುವರೋ ಆ ಯುವಕನನ್ನು ತಾನು ಮದುವೆಯಾಗುವುದಾಗಿ ಅವಳು ಷರತ್ತು ವಿಧಿಸಿದಳು. ಬಂದ ರಾಜಕುಮಾರರೆಲ್ಲ ನಾನಾ ರೀತಿಯಿಂದ ಪ್ರಯತ್ನಿಸಿದರು. ಆದರೆ, ಯಾರಿಗೂ ಅವಳನ್ನು ತೂಗುಮಂಚದಿಂದ ಕೆಳಗಿಳಿಸಲು ಸಾಧ್ಯವಾಗಲಿಲ್ಲ.
ಅವರೆಲ್ಲ ನಿರಾಶರಾಗಿ ಹೊರಟುಹೋದರು. ಹೀಗೆ ಒಂದೆರಡು ದಿನಗಳು ಕಳೆದುಹೋದವು. ಅರಸನಿಗೆ ತುಂಬ ಚಿಂತೆಯಾಗತೊಡಗಿತು.

ಮಾರನೆಯ ದಿನ ಸಂಜೆ ಕುರಿ ಕಾಯುವವನೊಬ್ಬ ಚಂದ್ರನಗರಕ್ಕೆ ಬಂದ. ರಾಜಕುಮಾರಿಯ ಮದುವೆಯ ಸುದ್ದಿ ತಿಳಿದು ಅವನೂ ಅರಮನೆಯತ್ತ ಹೆಜ್ಜೆ ಹಾಕಿದ. ಅವನ ಜೊತೆಯಲ್ಲಿ ಒಂದು ಕುರಿ ಹಾಗೂ ಒಂದು ನಾಯಿ ಇದ್ದವು. ಅವನು ಕುರಿ ಹಾಗೂ ನಾಯಿಯನ್ನು ರಾಜಕುಮಾರಿ ಕುಳಿತ ಮರದ ಬಳಿಯಲ್ಲಿಯೇ ಇದ್ದ ಇನ್ನೊಂದು ಚಿಕ್ಕ ಮರಕ್ಕೆ ಸ್ವಲ್ಪ ಅಂತರದಲ್ಲಿ ಕಟ್ಟಿದ, ಆಮೇಲೆ ತನ್ನ ಜೋಳಿಗೆಯಿಂದ ಸ್ವಲ್ಪ ಮಾಂಸವನ್ನು ತೆಗೆದು ಕುರಿಯ ಮುಂದೆ ಹಾಕಿದನು. ಆಮೇಲೆ ಸ್ವಲ್ಪ ಹುಲ್ಲನ್ನು ತೆಗೆದು ನಾಯಿಯ ಮುಂದೆ ಹಾಕಿದನು. ರಾಜಕುಮಾರಿ ತುಂಬ ಕುತೂಹಲದಿಂದ ಅದನ್ನು ನೋಡುತ್ತಿದ್ದಳು. ರಾಜಕುಮಾರಿಗೆ ಅವನ ಮೂರ್ಖತನವನ್ನು ಕಂಡು ನಗೆ ಬಂತು.

ಅವಳು, ‘ಎಲೋ ಮೂರ್ಖ, ಕುರಿ ಮಾಂಸವನ್ನು, ನಾಯಿ ಹುಲ್ಲನ್ನು ತಿನ್ನುತ್ತವೆಯೇ ಎಂದು ಕೇಳಿದಳು. ಆದರೆ, ಈ ಕುರಿ ಕಾಯುವವನು ಅವಳು ಹೇಳಿದ್ದನ್ನು ಕೇಳಿಸಿಕೊಂಡಿಲ್ಲ ಎಂಬಂತೆ ವರ್ತಿಸಿದನು. ಆಗ ರಾಜಕುಮಾರಿ ಇನಷ್ಟು ಜೋರಾಗಿ ‘ಹುಲ್ಲನ್ನು ಕುರಿಯ ಎದುರಿಗೂ, ಮಾಂಸವನ್ನು ನಾಯಿಯ ಎದುರಿಗೂ ಹಾಕು’ ಎಂದಳು.

ಆಗಲೂ ಆ ಕುರುಬನು ಅದು ತನಗೆ ಏನು ಕೇಳಿಸಿಯೇ ಇಲ್ಲ ಎಂಬಂತೆ ವರ್ತಿಸಿದನು. ಆಗ ರಾಜಕುಮಾರಿಗೆ ತುಂಬ ಕೋಪ ಬಂತು. ‘ನಿನಗೇನು ಕಿವುಡೇ? ನಾನು ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೇ? ಎಂದಳು. ಆಗಲೂ ಅವನು ಮೌನವಾಗಿಯೇ ಇದ್ದನು. ಆಗ ರಾಜಕುಮಾರಿಗೆ ತಡೆದುಕೊಳ್ಳಲಾಗಲಿಲ್ಲ. ಅವಳು ತೂಗುಮಂಚದಿಂದ ಕೆಳಗಿಳಿದು ಅವನ ಬಳಿಗೆ ಬಂದು ಅವನ ಕಿವಿಯ ಬಳಿ ‘ನಾನು ಅಷ್ಟೊತ್ತಿನಿಂದ ಕಿರುಚುತ್ತಿದ್ದೇನೆ.’ ನಿನಗೆ ಕೇಳಿಸುತ್ತಿಲ್ಲವೇ?’ ಎಂದು ಜೋರಾಗಿ ಹೇಳಿದಳು. ಆಗ ಅವನು ಮುಗುಳ್ನಗುತ್ತ ‘ಕೇಳಿಸುತ್ತಿದೆ’ ಎಂದ.

ರಾಜಕುಮಾರಿ ದಿಗ್ಭ್ರಾಂತಳಾಗಿ ಅವನತ್ತ ನೋಡುತ್ತಾ ನಿಂತುಕೊಂಡಳು. ತಟ್ಟನೆ ಅವಳಿಗೆ ತನ್ನ ತಪ್ಪಿನ ಅರಿವಾಯ್ತು. ಮುಟ್ಟದೆ ಕುರಿ ಕಾಯುವವನು ಅವಳನ್ನು ತೂಗುಮಂಚದಿಂದ ಕೆಳಗೆ ಇಳಿಸಿದ್ದನು. ತನ್ನ ಷರತ್ತಿನಂತೆ ರಾಜಕುಮಾರಿ ಅವನ ಕೊರಳಿಗೆ ಮಾಲೆ ಹಾಕಬೇಕಾಯಿತು.


ಮೂರು ಗೆಳೆಯರು

ಒಂದು ಊರಿನಲ್ಲಿ ಕಿಶೋರ, ಕಿರಣ ಮತ್ತು ಕೀರ್ತಿ ಎಂಬ ಮೂರು ಜನ ಆತ್ಮೀಯ ಸ್ನೇಹಿತರಿದ್ದರು. ಆ ಮೂರು ಜನ ಸಹ ಸದಾ ಜೊತೆಯಲ್ಲೇ ಇರುತ್ತಿದ್ದರು. ಆಟ, ಪಾಠ, ಶಾಲೆ, ಓದುವುದರಲ್ಲೂ ಸಹ ಒಟ್ಟಿಗೆ ಇರುತ್ತಿದ್ದರು. ಒಬ್ಬರನೊಬ್ಬರು ಬಿಟ್ಟು ಯಾರು ಇರುತ್ತಿರಲಿಲ್ಲ ಈಥರ ಇರಬೇಕಾದರೆ ಒಮ್ಮೆ ಶಾಲೆಯಲ್ಲಿ ಕಿಶೋರನ ಪೆನ್ನು ಕಳುವಾಯಿತು. ಅದು ಕಿಶೋರಗೆ ಬಹಳ ಅಚ್ಚುಮೆಚ್ಚಿನದಾಗಿತ್ತು. ಯಾಕೆಂದರೆ ಅದನ್ನು ಕಿಶೋರನ ಅಮ್ಮ ಅವನ ಹುಟ್ಟುಹಬ್ಬದಂದು ಅವನಿಗೆ ಉಡುಗರೆಯಾಗಿ ನೀಡಿದ್ದಳು.

ಆ ಪೆನ್ನು ನೋಡುವುದಕ್ಕೆ ತುಂಬಾ ಸುಂದರವಾಗಿರುವುದರಿಂದ ಕಿರಣಗೂ ಆಸೆಯಾಗಿತ್ತು. ಅವನು ಹಿಂದೆ ಒಂದು ದಿನ ಇಥರ ಪೆನ್ನನ್ನು ನಾನು ತೆಗೆದುಕೊಳ್ಳುತ್ತೀನಿ ನೋಡು ಎಂದು ಹೇಳಿದ್ದ. ಆದ್ದರಿಂದ ಕಿಶೋರಗೆ ಅನುಮಾನ ಮೊದಲು ಕಿರಣನ ಮೇಲೆ ಹೋಗಿತು. ಅದರಂತೆ, “ನನ್ನ ಪೆನ್ನನ್ನು ತೆಗೆದುಕೊಂಡಿದ್ದರೆ ದಯವಿಟ್ಟು ಕೊಟ್ಟುಬಿಡು” ಎಂದನು. ಕಿರಣ ನಿಜವಾಗಿಯೂ ನನ್ನ ಎತ್ತಿಕೊಂಡಿಲ್ಲ ಎಂದನು. ‘ಸುಳ್ಳು ಹೇಳಬೇಡ, ಅದರ ಮೇಲೆ ನಿನಗೆ ಕಣ್ಣಿತ್ತು’ ನನಗೆ ಗೊತ್ತು ಎಂದನು. ಆದರೆ ಇದರಿಂದ ಅನುಮಾನಿತನಾಗಿ ಕುಪಿತಗೊಂಡ ಕಿರಣ ಜಗಳವಾಡಲು ಮುಂದಾದನು. ಕೊನೆಗೆ “ಛೀ” ದ್ರೋಹಿ ನಿನ್ನ ಸ್ನೇಹಿತನ ಮೇಲೆ ನೀನು ಸಂಶಯ ಪಡುತ್ತಿಯೇ, ಇನ್ಮೊಂದೆ ನನ್ನೊಂದಿಗೆ ನೀನು ಮಾತನಾಡಬೇಡ ಅಂತ ಹೇಳಿ ಹೊರಟು ಹೋದ. ಪೆನ್ನು ಕಳೆದುಕೊಂಡ ದುಃಖದಲ್ಲಿ ಕಿಶೋರ ಸಹ ನಾನು ಅಷ್ಟೇ ನಿನ್ನ ಜೊತೆ ಮಾತನಾಡುವುದಿಲ್ಲ ಹೋಗು ಎಂದ.

[sociallocker]ಅಂದಿನಿಂದ ಅವರಿಬ್ಬರಿಗೆ ಸಹ ಒಬ್ಬರನೊಬ್ಬರು ನೋಡುತ್ತ ಇದ್ರೆ ಅವರಿಗೆ ಆಗ್ತ ಇರಲಿಲ್ಲ. ಆದರೆ ಇದರಿಂದ ಕೀರ್ತಿಗೆ ತೊಂದರೆಯಾಗುತ್ತಿತ್ತು. ಏಕೆಂದರೆ ಅವನ ಜೊತೆ ಮಾತನಾಡಿದರೆ ಇವನಿಗೆ ಕೋಪಬರುತ್ತಿತ್ತು, ಇವನ ಜೊತೆ ಮಾತನಾಡಿದರೆ ಅವನಿಗೆ ಕೋಪಬರುತ್ತಿತ್ತು.

ಒಂದು ದಿನ ಕಿಶೋರನ ಪಕ್ಕದಲ್ಲಿ ಹಾವು ಇದ್ದಿದ್ದನ್ನು ಕೀರ್ತಿ ಗಮನಿಸಿದ ಆಗ ಒಂದು ಕೋಲನ್ನು ಎಳೆದುಕೊಂಡು ಕಿರಣ್ ಕಡೆ ಎಸೆದನು. ಅಷ್ಟರಲ್ಲಿ ಹಾವು ಸುಮ್ಮನೆ ಮಲಗಿದಿದ್ದನ್ನು ಕಂಡು ಧೈರ್ಯ ತೆಗೆದುಕೊಂಡು ಕಿಶೋರ ಹಾಗೂ ಕಿರಣ ಅದನ್ನು ಬಡಿಯಲು ಆರಂಭಿಸಿದರು. ಆದರೆ ಕೀರ್ತಿ ಮಾತ್ರ ಮನದಲ್ಲಿ ನಗುತ್ತಿದ್ದ. ಏಕೆಂದರೆ ಅವರಿಬ್ಬರನ್ನು ಒಂದುಗೂಡಿಸಲು ಅವನು ಸತ್ತ ಹಾವನ್ನು ಅಲ್ಲಿ ಎಸೆದಿದ್ದ. ನಂತರ. “ಸಾಕು ಬಿಡಿ ಅದು ಸತ್ತಿದೆ.” ಎಂದು ಸಮಾಧಾನಿಸುತ್ತಾ’ ನೋಡಿದ್ಯಾ ಕಿಶೋರ, ಇಂದು ಕಿರಣ ಇಲ್ಲದಿದ್ದರೆ ನಿನ್ನ ಗತಿ ಏನಾಗುತ್ತಿತ್ತು? ಸ್ವಲ್ಪ ಯೋಚನೆ ಮಾಡು ಎಂದು ಹೇಳಿದ. ಅನಂತರ ಅವನು ಇಲ್ಲದಿದ್ದರೂ ಏನು ಆಗುತ್ತಿರಲಿಲ್ಲ” ಎಂದನು. ಇದರಿಂದ ಕುಪಿತಗೊಂಡ ಕಿರಣ, ಹಾವನ್ನು ಹೊಡೆದವನು ನಾನು, ನಾನು ಸರಿಯಾಗಿ ತಲೆಯಮೇಲೆ ಹೊಡೆದಿದ್ದರಿಂದಲೇ ಅದು ಸತ್ತಿರೋದು” ಎಂದು ಮತ್ತೆ ಜಗಳವಾಡಲು ಪ್ರಾರಂಭಿಸಿದರು. ಆದರೆ ಸತ್ತ ಹಾವನ್ನು ಹೊಡೆದು ಹೀಗೆ ರೋಷದಿಂದ ಮಾತನಾಡುತ್ತಿರುವ ಸ್ನೇಹಿತನನ್ನು ನೋಡಿ ಕೀರ್ತಿಗೂ ನಗು ಬಂತು. ಮತ್ತೊಂದಡೆ ನಾನು ಮಾಡಿದ ಉಪಾಯದಿಂದಲೇ ಮತ್ತೆ ಇವರು ಜಗಳವಾಡುತ್ತಿರುವರಲ್ಲ ಎಂದು ಬೇಸರವೂ ಆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಕೀರ್ತಿ ಅವರಿಬ್ಬರನ್ನು ಸಮಾಧಾನ ಮಾಡಿದ.

ಅನಂತರ ನಿಧಾನವಾಗಿ ಕಿಶೋರ ಚೇತರಿಸಿಕೊಂಡನು. ತಾನು ಮಾಡಿದ ತಪ್ಪಿನ ಅರಿವನ್ನು ತಿಳಿದುಕೊಂಡು “ನನ್ನನ್ನು ಕ್ಷಮಿಸು ಬಿಡು ಕಿರಣ ” ಎಂದನು. ಬಿಡು ಕಿಶೋರ, ಸ್ನೇಹದಲ್ಲಿ ಕ್ಷಮೆಗಳೆಲ್ಲ ಬೇಕಿಲ್ಲ. ಇದೆಲ್ಲ ಕೀರ್ತಿಗೆ ಸಲ್ಲಬೇಕು, ಅವನು ಬಂದು ನಿನಗೆ ಹುಷಾರಿಲ್ಲದಿರುವ ವಿಷಯ ನನಗೆ ತಿಳಿಸಿದ, ಈಗಲಾದರೂ ಅವನನ್ನು ಕಂಡು ಸ್ವಾಂತ್ವನ ಹೇಳು. ಇರುವಷ್ಟು ದಿನ ಒಳ್ಳೆಯ ಸ್ನೇಹಿತರಾಗಿ ಬಾಳೋಣ’ ಎಂದು ಬುದ್ಧಿ ಹೇಳಿದ. ಆಗ ಅವನು ನನಗೆ ಈಗ ಗೊತ್ತಾಯಿತು ಏನು ಸ್ನೇಹಿತ ಬೆಲೆ ಅಂತ ಎಂದುಕೊಂಡನು.

ತನ್ನ ಗೆಳೆಯ ಮಾಡಿಯ ಉಪಾಯ ಹಾಗೂ ಉಪಕಾರವನ್ನು ನೆನೆದು ಇಬ್ಬರ ಕಣ್ಣಲ್ಲೂ ಕಂಬನಿ ಮಿಡಿದು ಕೀರ್ತಿಯನ್ನು ತಬ್ಬಿಕೊಂಡರು. ಮೂರು ಜನ ಮತ್ತೆ ಮೊದಲಿನಂತೆ ಸ್ನೇಹದಿಂದ ಶಾಲೆಗೆ ಹೋಗತೊಡಗಿದರು. ಅವರು ಮತ್ತಿನ್ನೆಂದೂ ಜಗಳವಾಡದೆ ಒಂದಾಗಿ ಬಾಳಿದರು.

ನೀತಿ

ಸಂಬಂಧಗಳ ಮುಂದೆ ಯಾವ ವಸ್ತುವು ದೊಡ್ಡದಲ್ಲ


ಕತ್ತೆಯ ಒದೆತ

ಒಂದು ಊರಿನಲ್ಲಿ ಒಂದು ಕತ್ತೆ ವಾಸವಾಗಿತ್ತು. ಅದರ ಹೆಸರು “ಕೆಂಪಿ” ಅದು ತನ್ನ ಮರಿಗಳೊಂದಿಗೆ ಪಾಳು ಬಿದ್ದ ಹೊಲದ ಬಯಲಿನಲ್ಲಿ ಮೊಳೆತಿದ್ದ ಹುಲ್ಲನ್ನು ಮೇಯುತ್ತಿತ್ತು. ಇದನ್ನು ದೂರದಿಂದ ನೋಡಿದ ನರಿಯೊಂದು ದೂರಾಲೋಚನೆಗೈದಿತ್ತು. ಹೇಗಾದರೂ ಮಾಡಿ ಕತ್ತೆಯ ಮರಿಗಳನ್ನು ತಿನ್ನಬೇಕೆಂಬುದೇ ಅದರ ಉಪಾಯವಾಗಿತ್ತು. ಸಮಯ ಸಂದರ್ಭ ನೋಡಿಕೊಂಡು ಕತೆಯ ಸ್ನೇಹ ಗಳಿಸಿಕೊಳ್ಳಬೇಕು. ಅಂದಾಗ ಮಾತ್ರ ತನ್ನ ಕೆಲಸ ಸುಲಭ ಎಂಬುದಾಗಿ ಯೋಚಿಸಿತು.

ಕೆಂಪಿಯ ಬಳಿ ಬಂದ ನರಿಯು “ಕೆಂಪಕ್ಕಾ… ಕೆಂಪಕ್ಕಾ… ಚೆನ್ನಾಗಿರುವೆಯಾ? ನಿನ್ನ ಮಕ್ಕಳೆಲ್ಲಾ ಆರೋಗ್ಯದಿಂದಿವೆಯಾ? ನಿನ್ನ ಒಳ್ಳೆಯ ಸ್ವಭಾವವನ್ನು ಮನಗಂಡಿರುವೆ. ಹಾಗಾಗಿಯೇ ನಿನ್ನ ಸ್ನೇಹ ಬಯಸಿ ಬಂದಿರುವೆ. ನನ್ನನ್ನು ನಿನ್ನ ಮಿತ್ರನಾಗಿ ಸ್ವೀಕರಿಸುವೆಯಾ?” ಎಂದು ಅತಿ ವಿನಯದಿಂದ ನರಿ ಕೇಳಿತು.

“ನರಿಯೇ, ನನ್ನೊಂದಿಗೆ ನಿನ್ನದೇನು ಸ್ನೇಹ, ಮಾತು? ನೀನು ಮೊದಲೇ ಠಕ್ಕ ನರಿ. ನನಗೆ ಮೋಸ ಮಾಡುವ ಉದ್ದೇಶದಿಂದಲೇ ಇಲ್ಲಿಯತನಕ ಬಂದಿರುವೆಯಲ್ಲವೇ? ನನಗೆ ನಿನ್ನ ಸಹವಾಸವೇ ಬೇಡ. ಮೊದಲು ಇಲ್ಲಿಂದ ಹೊರಟು ಹೋಗು” ಹೀಗೆ ಗದರಿಸಿತು ಕೆಂಪಿ.

“ಯಾಕೆ ಕೆಂಪಿ ಹಿಂಗಂತಿಯಾ? ನಾವು ಒಬ್ಬರಿಗೊಬ್ಬರು ಸಹಾಯ, ಸಹಕಾರ ತತ್ವದಡಿಯಲ್ಲಿ ಬಾಳಬೇಕು. ನಾನೀಗ ಮೊದಲಿನಂತಿಲ್ಲ. ತುಂಬಾ ಒಳ್ಳೆಯವನಾಗಿದ್ದೇನೆ. ನನ್ನನ್ನು ನಂಬು” ಎಂದು ನರಿಯೂ ಕೆಂಪಿಯಲ್ಲಿ ವಿನಂತಿಸಿಕೊಂಡಿತು. ಮತ್ತೆ ನರಿಯು “ನಾನೀಗ ಒಳ್ಳೆಯ ಸಲಹೆ ನೀಡಲು ಬಂದಿರುವೆ. ಈ ಪ್ರದೇಶದಲ್ಲಿ ಹುಲ್ಲೇ ಇಲ್ಲವಲ್ಲ! ನೀವೆಲ್ಲಾ ಹಸಿವೆಯಿಂದ ತೀರಾ ಬಡಕಲಾಗಿರುವಿರಿ. ಇಲ್ಲೆ ಸನಿಹದಲ್ಲಿ “ಹಸಿರುವನ” ವೆಂಬ ಸಂಪಾತ್ಬರೀತ ಹುಲ್ಲುಗಾವಲು ಪ್ರದೇಶವಿದೆ. ಬೇಕಾದರೆ ನೀನು ಈಗಲೇ ಹೋಗಿ ನೋಡಿಕೊಂಡು ಬಾ. ಆಗಲಾದರೂ ನನ್ನ ಮೇಲೆ ನಿನಗೆ ನಂಬಿಕೆ ಬಂದಿತು’ ಎಂದು ನರಿ ನಯವಾಗಿ ಹೇಳಿತು.

[sociallocker]”ನಾನು ಇಲ್ಲಿಂದ ಹೋದರೆ ನೀನು ನನ್ನ ಮರಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತೀಯಾ ಎಂಬ ನಂಬಿಕೆ ನನಗಿಲ್ಲ” ಎಂದ ಕೆಂಪಿಗೆ, “ನಿನ್ನ ಮರಿಗಳನ್ನು ನಾನು ನನ್ನ ಸ್ವಂತ ಮಕ್ಕಳಿಗಿಂತಲೂ ಚೆನ್ನಾಗಿ ನೋಡಿಕೊಳ್ಳುವೆ” ಎಂದು ತನ್ನ ಮಾತಿನ ಮೋಡಿಯಿಂದ ಕೆಂಪಿಯನ್ನು ನಂಬಿಸಿದ ನರಿ ಅದನ್ನು ಉಳ್ಳುಗಾವಳಿಗೆ ಕಳುಹಿಸಿತು. ಕೆಂಪಿಯೂ ಹುಲ್ಲುಗಾವಲನ್ನು ನೋಡಿಕೊಂಡು ಬರುವುದರೊಳಗಾಗಿ ಅದರ ಒಂದು ಮರಿಯನ್ನು ಕಾಣದಂತೆ ಮಾಡಿತ್ತು ನಯವಂಚಕ ನರಿ. ಕೆಂಪಿಯೂ ತಿರುಗಿ ಬಂದು ನೋಡಿದಾಗ ಒಂದು ಮರಿ ಕಡಿಮೆ ಇರುವುದು ಗಮನಕ್ಕೆ ಬಂತು.

“ನರಿಯಣ್ಣಾ, ನನ್ನ ಐದು ಮರಿಗಳಲ್ಲಿ ಒಂದು ಮರಿ ಕಾಣಿಸುತ್ತಿಲ್ಲವಲ್ಲಾ! ಎಲ್ಲಿ ಹೋಯಿತು?” ಎಂದು ಆತಂಕದಿನ ಕೇಳಿತು… “ಅಯ್ಯೋ ಕೆಂಪಿ… ನಿನ್ನ ಮರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಳಜಿಯಿಂದ ನೋಡಿಕೊಂಡಿರುವೆ. ಇದ್ದಿದ್ದೇ ನಾಲ್ಕು ಮರಿಗಳು, ನಿನಗೋ ಲೆಕ್ಕ ಸರಿಯಾಗಿ ಬರದು ದಡ್ಡ ಕತ್ತೆ” ಎಂದು ನರಿ ಹಂಗಿಸಿ ನಕ್ಕಿತು.

ಕೆಂಪಿಗೆ ನರಿಯ ಠಕ್ಕತಾಣದ ಅರಿವಿದ್ದರೂ ಪ್ರತ್ಯಕ್ಷ ಕಂಡ ಮೇಲೆ ಸರಿಯಾಗಿ ಬುದ್ಧಿ ಕಳಿಸೋಣವೆಂದು ಸುಮ್ಮನಾಯಿತು. ಮಾರನೇ ದಿನ ಮುಂಜಾನೆ ಕೆಂಪಿಯ ಮನೆಗೆ ಬಂದ ನರಿಯು “ಕೆಂಪಕ್ಕಾ… ಇಂದು ನೀನು ಹಸಿರುವನಕ್ಕೆ ಹೋಗಿ ಆರಾಮಾಗಿ ಹೊಟ್ಟೆ ತುಂಬಾ ತಿಂದುಕೊಂಡು ಬಾ. ನೀನು ಬರುವವರೆಗೂ ನಿನ್ನ ಮರಿಗಳನ್ನು ಜೋಪಾನವಾಗಿ ನೋಡಿಕೊಳ್ಳುವೆ” ಎಂದಿತು. ಕೆಂಪಿಯೂ ಸಹ ನರಿಯ ಮಾತಿಗೆ “ಆಗಲಿ ಹಾಗೆಯೇ ಮಾಡುತ್ತೇನೆ” ಎಂದು ಅಲ್ಲಿಂದ ಮರೆಯಾಯಿತು. ನಿಜವಾಗಿಯೂ ಅಂದು ಕೆಂಪಿಯು ಹುಲ್ಲನ್ನು ಮೇಯಲು ಹೋಗಲಿಲ್ಲ. ಬದಲಾಗಿ ಅಲ್ಲಿಯೇ ಪಕ್ಕದ ಮರೆಯಲ್ಲಿ ಹೊಂಚು ಹಾಕಿ ಕುಳಿತು ನರಿಯೂ ಏನು ಮಾಡುತ್ತದೆಂದು ನೋಡುತ್ತಿತ್ತು.

ನರಿಯು ಕೆಂಪಿಯ ಮರಿಗಳಲ್ಲಿ ಯಾವುದು ಮೃದುವಾಗಿದೆ ಎಂದು ಮುಟ್ಟಿಮುಟ್ಟಿ ನೋಡಿ. ಬಲಾಢ್ಯ ಮರಿಯೊಂದರ ಕೊರಳಿಗೆ ಬಾಯಿ ಹಾಕುವುದರಲ್ಲಿತ್ತು.

ಅಷ್ಟರಲ್ಲಿ ಕೆಂಪಿಯು “ನರಿಯಣ್ಣಾ.. ಬೇಗ ಬಾ ಕಾಲಿಗೆ ಮುಳ್ಳು ಚುಚ್ಚಿಕೊಂಡಿದೆ” ಎಂದು ಜೋರಾಗಿ ಕೂಗಿತು.
ಆಗ ಗಾಬರಿಗೊಂಡ ನರಿಯೂ ಕೆಂಪಿಯ ಮರಿಗಳನ್ನು ಅಲ್ಲಿಯೇ ಬಿಟ್ಟು ಕೆಂಪಿಯ ಬಳಿ ಓಡಿ ಬಂತು. ಆಗ ಕೆಂಪಿಯು “ಕಾಲಿಗೆ ಮುಳ್ಳು ನಾಟಿರುವುದರಿಂದ ನಡೆದಾಡಲಾಗದೇ ಕುಳಿತೆ. ಮುಳ್ಳು ತೆಗೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ನೀನಾದರೂ ಪ್ರಯತ್ನಿಸಿ ನೋಡು” ಎಂದಿತು.

ನರಿಯು “ಯಾವ ಕಾಲು?” ಎಂದು ಕೇಳಿದಾಗ “ಹಿಂದಿನ ಕಾಲು” ಎಂದಿತು ಕೆಂಪಿ.
ಮುಳ್ಳು ತೆಗೆಯಲು ಹಿಂದಿನ ಕಾಲು ಬಳಿ ಬಂದ ನರಿಯು ಮುಳ್ಳನ್ನು ಹುಡುಕುತ್ತಿತ್ತು. ಮರಿಯೊಂದನ್ನು ಕಳೆದುಕೊಂಡ ದುಃಖದಲ್ಲಿ, ತೀವ್ರ ಕೋಪಗೊಂಡು ರೋಷಾವೇಶದಿಂದ ಜೋರಾಗಿ ನರಿಯ ಒದೆಯಿತು. ಮೋಸಗಾರ ನರಿಯ ಕೆಂಪಿಯ ಹೊಡೆತಕ್ಕೆ ಮುಗ್ಗರಿಸಿ ಬಿದ್ದಿದ್ದು ಮತ್ತೆ ಮೇಲೇಳಲಿಲ್ಲ.

ನೀತಿ

ಈ ಕಾಲದಲ್ಲಿ ಯಾರನ್ನೂ ಸಹ ನಂಬಬಾರದು
ನಮಗೆ ನಮ್ಮವರೇ ಆಗೋಲ್ಲ ಅಂದಮೇಲೆ, ಬೇರೆಯವರು ಎಲ್ಲಿ ಆಗುತ್ತಾರೆ?

ಬಚ್ಚಿಟ್ಟಿದ್ದು ಎಂದಾದರೂ ಪರರಿಗೆ


ಮುತ್ತುಕದಹಳ್ಳಿ ಎಂಬ ಊರಿನಲ್ಲಿ ಮುನಿಶಮಪ್ಪ ಮತ್ತು ಗಂಗಮ್ಮ ಎಂಬ ದಂಪತಿ ಇದ್ದರು. ಅವರಿಗೆ ಹಿರಿಯರಿಂದ ಬಂದಂತಹ ಸ್ವಲ್ಪ ಜಮೀನು ಇತ್ತು. ಆ ದಂಪತಿ ಆ ಸ್ವಲ್ಪ ಜಮೀನಿನಲ್ಲಿ ದುಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅವರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಒಂದು ದಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮುನಿಶಮಪ್ಪ ಬಾಳೆಯ ಸಸಿ ನೆಡಬೇಕೆಂದು ನೆಲವನ್ನು ಅಗೆಯುತ್ತಿದ್ದ. ‘ಥನ್’ ಎಂದು ಏನೋ ಶಬ್ದ ಬಂತು. ಆಗ ಮುನಿಶಮಪ್ಪನಿಗೆ ಅನುಮಾನ ಬಂತು ಏನೋ ಇರಬಹುದು ಎಂದು ಮತ್ತೆ ಅಗೆದನು. ಮತ್ತೆ ‘ಥನ್’ ಎಂದು ಮತ್ತು ದೊಡ್ಡ ಸದ್ದು ಬಂದು. ಯಾವುದೋ ದೊಡ್ಡ ಕಲ್ಲಿರಬೇಕೆಂದು ಅದನ್ನು ತೆಗೆದುಹಾಕಬೇಕೆಂದು ಅದನ್ನು ತನ್ನ ಎರಡು ಕೈಗಳನ್ನು ಉಪಯೋಗಿಸಿ ಎಳೆದು ತೆಗೆದನು. ಅದು ತುಂಬಾ ಭಾರವಾಗಿತ್ತು. ಅದರಲ್ಲಿ ಏನಿರಬೇಕೆಂದು ಕುತೂಹಲ ಹುಟ್ಟಿತ್ತು. ಆದರೆ, ಮೇಲಿನ ಮಣ್ಣನ್ನೆಲ್ಲ ತೆಗೆದು ನೋಡಿದನು. ಕೊಪ್ಪರಿಗೆ ತುಂಬೆಲ್ಲಾ ಬಂಗಾರದ ನಾಣ್ಯಗಳು.

ಮುನಿಶಮಪ್ಪ ತುಂಬಾ ಖುಷಿಯಾಯಿತು. ಆದಷ್ಟು ದೇವತೆಯೇ ಒಲಿದು ಬಿಟ್ಟಿದ್ದಾಳೆ ಎನ್ನುತ್ತಾ ತನ್ನ ಹೆಂಡತಿ ಗಂಗಮ್ಮನನ್ನು ಕರೆದನು. ಗಂಗಮ್ಮನಿಗೆ ಚಿನ್ನವನ್ನು ನೋಡಿ ಮತ್ತಷ್ಟು ಖುಷಿಯಾಯಿತು. ಇಷ್ಟೊಂದು ಚಿನ್ನವನ್ನು ಅವಳು ತನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಆಕೆಗೆ ತನ್ನ ಕಣ್ಣನ್ನೇ ಒಮ್ಮೆ ನಂಬಲಾಗಲಿಲ್ಲ. ‘ರೀ. ಇವನ್ನೆಲ್ಲಾ ಕರಗಿಸಿ ಬೇರೆ ಬೇರೆ ರೀತಿಯ ಸರ, ಬಲೆ, ಸೊಂಟದ ಪಟ್ಟಿ, ಕೈಗೆ ವಂಕಿ, ಬಾಜುಬಂದಿ ಎಲ್ಲಾ ಮಾಡಿಸಿಕೊಂಡಿ’ ಎಂದಳು ಆಸೆಯಿಂದ.

[sociallocker]”ಲೇ, ಇದನ್ನ ಯಾರಿಗೂ ಹೇಳೋದು ಬೇಡ. ನಮ್ಮ ಹತ್ತಿರ ಇಷ್ಟೊಂದು ಬಂಗಾರವಿದೆ ಎಂದು ತಿಳಿದರೆ ಎಲ್ಲರ ಕಣ್ಣೂ ನಮ್ಮ ಮೇಲೆ ಇರುತ್ತದೆ. ಅಲ್ಲದೆ ನೋಡಿದ ಜನರಿಗೆಲ್ಲ ನಮ್ಮ ಬಗ್ಗೆ ಅನುಮಾನ ಕೂಡ ಬರುತ್ತದೆ’ ಎಂದನು ಮುನಿಶಮಪ್ಪ. ಗಂಗಮ್ಮ ಗಂಡ ಹೇಳುವುದು ಸರಿ ಎನಿಸಿತು. ‘ಹೋಗಲಿ ನಮ್ಮ ಮಗನಿಗಾದರೂ ಹೇಳೋಣ, ಅವನೂ ಖುಷಿ ಪಡಲಿ’ ಎಂದಳು. ಆಗ ಮುನಿಶಮಪ್ಪ, ‘ಲೇ ಗಂಗಮ್ಮ ಅವನಿಗೆ ಈ ಸುದ್ಧಿಯನ್ನು ಈಗಲೇ ಹೇಳುವುದು ಬೇಡ, ಅವನು ದೊಡ್ಡವನಾದ ಮೇಲೆ ಹೀಗೆ ಭೂಮಿಯನ್ನು ಅಗೆದಾಗ ಅವನಿಗೆ ನಿಧಿ ಸಿಗಬೇಕು. ಆಗ ಅವನಿಗೆ ಸಿಗುವ ಆನಂದವೇ ಬೇರೆ. ನನಗೆ ಸಿಕ್ಕ ಖುಷಿಯೇ ಆ ಆನಂದವೇ ಬೇರೆ. ನನಗೆ ಸಿಕ್ಕ ಖುಷಿಯೇ ಅವನಿಗೂ ಸಿಗಬೇಕು’ ಎಂದನು. ಗಂಗಮ್ಮ ಗಂಡನ ಮಾತಿಗೆ ಎದುರಾಡಲಿಲ್ಲ. ಬಂಗಾರದ ಕೊಪ್ಪರಿಗೆಯನ್ನು ಅಲ್ಲೇ ಇಟ್ಟು ಮಣ್ಣು ಮುಚ್ಚಿದರು.

ಕೆಲವು ವರ್ಷಗಳಲ್ಲೇ ಮುನಿಶಮಪ್ಪ ಮತ್ತು ಅವನ ಹೆಂಡತಿ ತೀರಿಕೊಂಡರು. ಮಗ ನಾರಾಯಣ ಕೊಪ್ಪರಿಗೆ ವಿಚಾರ ತಿಳಿದಿರಲಿಲ್ಲ. ಒಂದು ದಿನ ಹೀಗೆ ತೋಟದಲ್ಲಿ ಯಾವುದೋ ಸಸಿ ನೆಡಲು ಅಗೆಯುವಾಗ ಅದೇ ಬಂಗಾರ ತುಂಬಿದ ಕೊಪ್ಪರಿಗೆ ನಾರಾಯಣನಿಗೆ ಸಿಕ್ಕಿತು. ಅವನು ಸಹ ತಂದೆಯಂತೆ ಆಸೆಪಟ್ಟು ತನ್ನ ಹೆಂಡತಿಗೂ ತೋರಿಸದೆ ಹಾಗೆ ಮುಚ್ಚಿಟ್ಟನು. ಇವನ ಮಗ ನವೀನ ಚೆನ್ನಾಗಿ ಓದಿ ನಗರದಲ್ಲಿ ದೊಡ್ಡ ಕೆಲಸ ಹಿಡಿದುಕೊಂಡನು. ಒಂದು ದಿನ ನವೀನನ ಅಪ್ಪ ಅಮ್ಮ ಇಬ್ಬರೂ ಇದ್ದಕ್ಕಿದ್ದಂತೆ ತೀರಿಕೊಂಡರು.

ತನ್ನ ಜಮೀನಿನಲ್ಲಿ ಬಂಗಾರ ತುಂಬಿದ ಕೊಪ್ಪರಿಗೆ ಇದೆ ಎಂಬ ರಹಸ್ಯ ಅವನಿಗೆ ಗೊತ್ತೇ ಆಗಲಿಲ್ಲ. ಆತ ಒಂದು ದಿನ ತಾನು ಹೇಗಿದ್ದರೂ ನಗರದಲ್ಲಿ ಮನೆ ಮಾಡಿಕೊಂಡು ವಾಸಿಸುವುದು ಎಂದು ನಿರ್ಧರಿಸಿಯಾಗಿದೆ, ಇನ್ನೂ ಈ ಜಮೀನು ಮನೆ ಇಟ್ಟುಕೊಂಡು ಏನು ಮಾಡುವುದು. ಎಂದುಕೊಂಡು ತನ್ನ ಜಮೀನನ್ನು ಬೇರೊಬ್ಬರಿಗೆ ಮಾರಿಬಿಟ್ಟನು.

ಜಮೀನುದಾರರ ಮನೆಯಲ್ಲಿ ದ್ಯಾವಪ್ಪ ಎನ್ನುವ ಒಬ್ಬ ಬಡವ ಕೂಲಿ ಮಾಡುತ್ತಿದ್ದ. ಅವನು ತೋಟದಲ್ಲಿ ಕೆಲಸ ಮಾಡುವಾಗ ಆ ಕೊಪ್ಪರಿಗೆಯನ್ನು ನೋಡಿದ. ಆದರೆ, ಆತ ಆ ಕೊಪ್ಪರಿಗೆಯನ್ನು ತನ್ನ ಯಜಮಾನನಿಗೆ ಒಪ್ಪಿಸಿದ. ದ್ಯಾವಪ್ಪನ ಪ್ರಾಮಾಣಿಕತೆಗೆ ಮೆಚ್ಚಿದ ಆ ಜಮೀನುದಾರನು ಅದರಲ್ಲಿ ಅರ್ಥ ಭಾಗವನ್ನು ದ್ಯಾವಪ್ಪನಿಗೆ ಕೊಟ್ಟು ಉಳಿದ ಅರ್ಥ ಭಾಗವನ್ನು ಬಳಸಿಕೊಂಡನು. ಆಮೇಲೆ ಅವರೆಲ್ಲರೂ ಸುಖವಾಗಿ ಬದುಕು ಸಾಗಿಸಿದರು. ಬಚ್ಚಿಟ್ಟ ನಿಧಿ ಗೊತ್ತಿಲ್ಲದೆ ಬೇರೆಯವರ ಪಾಲಾಯಿತು.

ನೀತಿ

ಕಷ್ಟ ಪಟ್ಟು ದುಡಿದು, ಅದನ್ನು ಖರ್ಚು ಮಾಡದೆ ಇದ್ದಾಗ ಅದು ಪರರಿಗೆ ಸೇರುತ್ತದೆ

ಕೃತಜ್ಞ ನವಿಲು


ಒಂದು ಊರಿನಲ್ಲಿ ಸುರೇಶ – ಸುಧಾ ಎಂಬ ದಂಪತಿ ಇದ್ದರು. ಅವರಿಗೆ ಒಂದು ಸುಂದರವಾದ ತೋಟವಿತ್ತು ಆ ತೋಟದಲ್ಲಿ ಅವರು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು. ಅವರಿಗೆ ಒಂದು ಮುದ್ದಾದ ಮಗು ಇದ್ದಳು ಅವಳ ಹೆಸರು ಸವಿತಾ . ಸುರೇಶ – ಸುಧಾ ಅವರದ್ದು ಚಿಕ್ಕ ಕುಟುಂಬವಾಗಿತ್ತು. ಅವರು ತಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಕುರಿ, ಕೋಳಿ, ಆಕಳು, ಎಮ್ಮೆ ಇನ್ನಿತರೆ ಸಾಕು ಪ್ರಾಣಿಗಳನ್ನು ಸಾಕಿದ್ದರು. ಇದರಿಂದಾಗಿ ಸವಿತಾಗೆ ಪ್ರಾಣಿ – ಪಕ್ಷಿಗಳನ್ನು ಕಂಡರೆ ತುಂಬಾ ಪ್ರೀತಿ. ಅವಳು ಆ ಪ್ರಾಣಿ – ಪಕ್ಷಿಗಳೊಂದಿಗೆ ಪ್ರೀತಿಯಿಂದ ಆಟವಾಡುತ್ತಿದ್ದಳು. ಸವಿತಾ ದೊಡ್ಡವಳಾಗಿ ಶಾಲೆಗೆ ಹೋಗಲಾರಂಭಿಸಿದಳು.

ಒಂದು ದಿನ ನವಿಲೊಂದು ಯಾವುದೋ ಒಂದು ಕಾಡಿನ ಬೇಟೆಗಾರನಿಂದ ತಪ್ಪಿಸಿಕೊಂಡು ಮೈಮೇಲೆ ರಕ್ತ ಹರಿಸಿಕೊಂಡು ನಡುಗುತ್ತಾ ರಸ್ತೆಯ ಪಕ್ಕದಲ್ಲಿ ನಿಂತಿತ್ತು. ಸವಿತಾ ಶಾಲೆಯಿಂದ ಮನೆಗೆ ಮರಳುತ್ತಿರುವಾಗ ಇದನ್ನು ನೋಡಿದಳು. ಆಗ ಸವಿತಾಳಿಗೆ ಅದರ ಮೇಲೆ ಕರುಣೆ ಉಂಟಾಗಿ ಅದನ್ನು ಹಿಡಿದುಕೊಂಡು ತನ್ನ ಮನೆಗೆ ತಂದಳು. ಸವಿತಾಳ ಅಮ್ಮ ಸುಧಾ ಅದನ್ನು ನೋಡಿ “ಒಳ್ಳೆಯದನ್ನೇ ಮಾಡಿರುವೆ ಮಗು. ಇಲ್ಲವಾದರೆ ಈ ಪಕ್ಷಿಯು ಸತ್ತು ಹೋಗುತ್ತಿತ್ತು” ಎಂದಳು.

ಅವರು ಗಾಯಗೊಂಡ ನವಿಲಿಗೆ ಔಷಧಿ ಹಚ್ಚಬೇಕೆಂದು ಸೊಪ್ಪನ್ನು ತಂದು ಕುಟ್ಟಿ ಅದರ ಮೇಲೆ ಲೋಪ ಮಾಡಿ ಆ ನವಿಲಿನ ಗಾಯಕ್ಕೆ ಸವರಿದಳು. ಸಾಯಂಕಾಲ ಅದಕ್ಕೆ ತಿನ್ನಲು ತುಪ್ಪದ ಅನ್ನವನ್ನು ಕೊಟ್ಟಳು. ಅದನ್ನು ತಿಂದ ನವಿಲು ಆ ರಾತ್ರಿ ವಿಶ್ರಾಂತಿ ಪಡೆಯಿತು.. ಒಂದೆರಡು ದಿನಗಳು ಕಾಲ ಅವರಮನೆಯಲ್ಲಿ ಇಟ್ಟುಕೊಂಡು. ಅದು ಗಾಯವನ್ನು ಚೇತರಿಸಿಕೊಂಡು ಆದಮೇಲೆ ಅದನ್ನು ಎತ್ತಿಕೊಂಡು ಹೋಗಿ ನವಿಲಿನ ಗುಂಪಿನಲ್ಲಿ ಸವಿತಾ ಅದನ್ನು ಬಿಟ್ಟು ಬಂದಳು. ಆಗ ಆ ನವಿಲು ಬಹಳ ಹೊತ್ತು ಪ್ರೀತಿಯಿಂದ ಪುಟ್ಟಿಯನ್ನೇ ನೋಡುತ್ತಿತ್ತು.

ಕೆಲವು ದಿನಗಳ ನಂತರ ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಸವಿತಾ ಅಂದು ಹಾವೊಂದನ್ನು ಕಾಣದೆ ಅದನ್ನು ತುಳಿದುಬಿಟ್ಟಳು. ಆಗ ಅವಳು ಗಾಬರಿಯಿಂದ ಓಡತೊಡಗಿದಳು. ಆ ಹಾವು ಸಹ ಅವಳನ್ನು ಹಿಂಬಾಲಿಸ ತೊಡಗಿತು. ಆಗ ಅದೇ ಸಮಯಕ್ಕೆ ಇವಳಿಂದ ಉಪಕಾರ ಪಡೆದ ನವಿಲು ಈ ದೃಶ್ಯವನ್ನು ನೋಡಿತು. ತನ್ನನ್ನು ಕಾಪಾಡಿದ ಸವಿತಾಗೆ ಇಂತಹ ಸಂಕಟವೂ ಬಂದಿದೆಯಲ್ಲ. ಅವರು ನನಗೆ ಮಾಡಿದ ಈ ಉಪಕಾರವನ್ನು ನಾನು ಅವರಿಗೆ ಪ್ರತಿಉಪಕಾರವಾಗಿ ತೀರಿಸಬೇಕೆಂದು ನವಿಲು ಸರ್ರನೆ ಅಲ್ಲಿಗೆ ಬಂದಿತು. ಆ ಹಾವಿನ ಕಣ್ಣುಗಳನ್ನು ತನ್ನ ಕೊಕ್ಕಿನಿಂದ ಕುಕ್ಕಿತು. ಇದಾದ ನಂತರ ಸವಿತಾಳನ್ನೇ ನೋಡುತ್ತ ನಿಂತಿಕೊಂಡಿತು. ಸವಿತಾ ನವಿಲನ್ನು ಅಪ್ಪಿಕೊಂಡು ಮುದ್ದಾಡಿದಳು. ನಂತರ ನವಿಲು ಹಾರಿ ಹೋಗಿ ತನ್ನ ಬಳಗವನ್ನು ಸೇರಿಕೊಂಡಿತು.

ನೀತಿ

ಉಪಕಾರ ಮಾಡಿದವರಿಗೆ ಪ್ರತಿಉಪಕಾರ ಮಾಡಬೇಕು