ಮಕ್ಕಳು ಕಲಿಯಬೇಕಾದ 10 ಕೌಟುಂಬಿಕ ಮೌಲ್ಯಗಳು
ಸಾಮಾಜಿಕ ಮೌಲ್ಯಗಳೊಂದಿಗೆ ಹೊಸ ಪೀಳಿಗೆಯನ್ನು ಸುಧಾರಿಸಬೇಕಾದರೆ ಪೋಷಕರು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಏನು ಕಲಿಸಲಾಗುತ್ತದೆಯಾ ಅದನ್ನೇ ಅವರು ಸಮಾಜಕ್ಕೆ ನೀಡುತ್ತಾರೆ.ಇಂದಿನ ದಿನಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಮತ್ತು ಕುಟುಂಬದ ಮೌಲ್ಯಗಳ ಬಗ್ಗೆ ಹೇಳಲು ಪುರುಸೊತ್ತೊ ಇರುವುದಿಲ್ಲ. ಇದರಿಂದಾಗಿ ವಿಧೇಯವಿಲ್ಲದ ಸಮಾಜ ನಿರ್ಮಾಣವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಹೇಳಿದಾಗ ಸಮಾಜವು ಸುಧಾರಣೆಯಾಗುತ್ತದೆ ಮತ್ತು ಅವರಿಗೂ ಬದಕಲು ಇದು ನೆರವಾಗುತ್ತದೆ.
ಹೆತ್ತವರಿಬ್ಬರು ಉದ್ಯೋಗದಲ್ಲಿರುವ ಕಾರಣ ಕೌಟುಂಬಿಕ ಸಂಬಂಧಗಳು ಅಪಾಯದಲ್ಲಿದೆ. ಪೋಷಕರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ಸಮಯ ತೆಗೆದು ಮಕ್ಕಳೊಂದಿಗೆ ಕಳೆಯಬೇಕು ಮತ್ತು ಅವರಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು. ಕೆಲವೊಂದು ಕೌಟುಂಬಿಕ ಮೌಲ್ಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
ಇದು ಕೇವಲ ಪೋಷಕರ ಕೆಲಸವಲ್ಲ, ಮಕ್ಕಳನ್ನು ಲಾಲನೆಪಾಲನೆ ಮಾಡುವವರು ಮತ್ತು ಶಿಕ್ಷಕರು ಕೂಡ ಇದನ್ನು ಮಾಡಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಬಗ್ಗೆ ತಿಳಿಸಿಕೊಡಬೇಕು. ಅವರು ತಮ್ಮ ಶಿಕ್ಷಕರು ಮತ್ತು ಹತ್ತಿರದವರಿಂದ ಇದನ್ನು ಕಲಿಯುತ್ತಾರೆ. ಇದರಿಂದಾಗಿ ಮಕ್ಕಳು ಯಾರೊಂದಿಗೆ ಹೆಚ್ಚು ಬೆರೆಯುತ್ತಾರೆ ಎನ್ನುವುದನ್ನು ಹೆತ್ತವರು ತುಂಬಾ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳು ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಕೌಟುಂಬಿಕ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.
ಪ್ರಾಮಾಣಿಕತೆ ಮಕ್ಕಳು ಕಲಿಯಬೇಕಾದ ಅತ್ಯಂತ ಮುಖ್ಯ ಕೌಟುಂಬಿಕ ಮೌಲ್ಯ. ಯಾವುದೇ ಪರಿಸ್ಥಿತಿಯಲ್ಲೂ ಸತ್ಯವನ್ನೇ ಹೇಳಬೇಕೆಂದು ಮಕ್ಕಳಿಗೆ ಕಲಿಸಿಕೊಡಬೇಕು. ಸಣ್ಣ ವಯಸ್ಸಿನಲ್ಲಿ ಇದನ್ನು ಕಲಿತಾಗ ಅವರಿಗೆ ವಯಸ್ಸಾದಾಗ ಕೂಡ ಇದು ಮುಂದುವರಿಯುತ್ತದೆ.
ನ್ಯಾಯ
ಯಾವುದೇ ತಪ್ಪು ಮಾಡಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಯಾವುದೇ ಕ್ರಮ ತೆಗೆದುಕೊಳ್ಳಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಕೇವಲ ಕ್ಷಮೆ ಕೇಳಿದರೆ ಮಾತ್ರ ಸಾಲದು. ಕೌಟುಂಬಿಕ ಮೌಲ್ಯಗಳ ವಿಚಾರಕ್ಕೆ ಬಂದರೆ ನ್ಯಾಯವು ಅತೀ ಮುಖ್ಯ ಪಾತ್ರವಹಿಸುತ್ತದೆ.
ನೆರವು
ಸಂಪೂರ್ಣ ಕುಟುಂಬಕ್ಕೆ ಲಾಭವಾಗುವಂತಹ ಸವಾಲನ್ನು ಸ್ವೀಕರಿಸಲು ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಮಕ್ಕಳ ಕೆಲಸಗಳಿಗೆ ಪ್ರಾಮಾಣಿಕ ಮತ್ತು ಬೆಂಬಲ ನೀಡುವಂತಹ ಪ್ರತಿಕ್ರಿಯೆ ನೀಡಿ. ಇದರಿಂದ ಕುಟುಂಬಕ್ಕಾಗಿ ಅವರು ಹೇಗೆ ಕೆಲಸ ಮಾಡಬಹುದು ಎಂದು ಕಲಿಯುತ್ತಾರೆ.
ಪರಿಗಣನೆ
ಪರಿಗಣನೆ ಮಾಡುವುದು ಮಕ್ಕಳು ಕಲಿಯಬೇಕಾದ ಅತ್ಯಂತ ಪ್ರಮುಖ ಕೌಟುಂಬಿಕ ಮೌಲ್ಯ. ಇತರ ಜನರ ಭಾವನೆಗಳನ್ನು ಕೂಡ ಅವರು ಪರಿಗಣನೆಗೆ ಮಾಡಬೇಕು.
ಹಂಚಿಕೊಳ್ಳುವುದು
ಹಂಚಿಕೊಳ್ಳುವುದನ್ನು ನಿಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾದ ಅತ್ಯುತ್ತಮ ಶಿಸ್ತಿನ ವಿಧಾನ. ಇದು ಕುಟುಂಬದಲ್ಲಿಯೇ ಆರಂಭವಾಗಬೇಕು. ಸೋದರ ಅಥವಾ ಸೋದರಿಯರಿದ್ದರೆ ಇದನ್ನು ತಿಳಿಸಿಕೊಡುವುದು ಸುಲಭ.
ಗೌರವ
ಮಕ್ಕಳು ತಮ್ಮ ಹಿರಿಯರನ್ನು ಮತ್ತು ಇತರರನ್ನು ಗೌರವಿಸುವುದನ್ನು ಕಲಿಯಬೇಕು. ಮಕ್ಕಳೊಂದಿಗೆ ಪೋಷಕರು ಗೌರವದಿಂದ ವರ್ತಿಸಿದಾಗ ಈ ಮೌಲ್ಯವು ಅವರಿಗೆ ಸಹಜವಾಗಿಯೇ ಬರುತ್ತದೆ.
ಕರುಣೆ
ಮಕ್ಕಳು ತಿಳಿದುಕೊಳ್ಳಬೇಕಾದ ಮುಖ್ಯ ಕೌಟುಂಬಿಕ ಮೌಲ್ಯವೆಂದರೆ ಕರುಣೆ. ಇದರಿಂದ ಅವರು ಪ್ರೀತಿ ಮತ್ತು ಆಕರ್ಷಣೆ ಬಗ್ಗೆ ತಿಳಿದುಕೊಳ್ಳುತ್ತಾರೆ.
ಧೈರ್ಯ
ಮಕ್ಕಳು ತುಂಬಾ ಧೈರ್ಯವಾಗಿರುವಂತೆ ಪೋಷಕರು ತಮ್ಮ ಮಕ್ಕಳಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳು ಯಾವುದೇ ಪರಿಸ್ಥಿತಿಯನ್ನೂ ತುಂಬಾ ಧೈರ್ಯದಿಂದ ಎದುರಿಸುವಂತಾಗುತ್ತದೆ.
ಉದಾರತೆ
ಮಕ್ಕಳು ತಿಳಿದುಕೊಳ್ಳಬೇಕಾದ ಮತ್ತೊಂದು ಕೌಟುಂಬಿಕ ಮೌಲ್ಯವೆಂದರೆ ಅದು ಉದಾರತೆ. ಅವರು ಸಮಾಜದ ನೋವನ್ನು ತಿಳಿದುಕೊಂಡು ಅದರಂತೆ ನೆರವು ನೀಡಬೇಕು.
ಜವಾಬ್ದಾರಿ
ಜೀವನದಲ್ಲಿ ತೆಗೆದುಕೊಳ್ಳುವ ಯಾವುದೇ ವಿಷಯದಲ್ಲಿ ಅವರು ತುಂಬಾ ಜವಾಬ್ದಾರಿಯಿಂದ ವರ್ತಿಸುವಂತಾಗಬೇಕು. ಇದನ್ನು ಕಲಿಯುವುದರಿಂದ ಅವರು ಜೀವನದಲ್ಲಿ ಆತ್ಮವಿಶ್ವಾಸದಿಂದ ಯಾವುದೇ ಸವಾಲನ್ನು ಸ್ವೀಕರಿಸುವಂತಾಗುತ್ತದೆ.
ನಿತ್ಯ ಜೀವನದ ಪ್ರಯಾಣದಲ್ಲಿ ಪ್ರತಿ ಕ್ಷಣವೂ ಹೊಸ
ಪರಿಚಯ, ಸ್ನೇಹ, ಪರಿಚಿತರ ಬೀಳ್ಕೊಡುಗೆಯೊಂದಿಗೆ ಸಾಗುತ್ತಿರುತ್ತದೆ. ಯಾವ ಪರಿಚಯ,
ಸ್ನೇಹವು ಶಾಶ್ವತವಲ್ಲ. ಮರೆಯುವಂಥದ್ದೂ ಅಲ್ಲ. ಯಾರ ಪ್ರಯಾಣ ಎಂದು ಮುಗಿಯುತ್ತದೆ ಎಂದು
ತಿಳಿಯದ ಒಂದು ಸುಂದರ ಪ್ರಯಾಣ ಈ ನಮ್ಮ ಜೀವನ.
ಪ್ರಯಾಣ ಎಂದಾಕ್ಷಣ ಕೇವಲ ಒಂದು ಕ್ರಿಯೆಯಾಗಿ
ಉಳಿಯದೆ ನಮ್ಮ ಇರುವಿಕೆ ಇಲ್ಲದಿರುವಿಕೆಯ ವ್ಯತ್ಯಾಸ ತಿಳಿಯದಂತಾದಾಗಬೇಕು. ಅರ್ಥಾತ್
ನಮ್ಮ ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಜೀವಿಸುವಂತಿರಬೇಕು. ನಮ್ಮ ಹೆಜ್ಜೆ ಗುರುತನ್ನು
ಉಳಿಸುವ ಒಂದೇ ಅರ್ಥಬದ್ದ ಜೀವನ ನಮ್ಮದಾದರೆ ಅದು ಒಂದು ಸಾರ್ಥಕ ಜೀವನ
ಪ್ರಯಾಣವಾಗುತ್ತದೆ.
ಹೇಗೆ? – ಇದು ಪ್ರತಿ ಮನುಷ್ಯನ ಬುದ್ದಿ, ವಿವೇಚನೆ, ಆಕಾಂಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ.
ಪ್ರಸ್ತುತ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ನಮ್ಮ
ಜನರು ಹೇಳುವುದು, ನಾಗರೀಕತೆ ಬೆಳೆಯುತ್ತ ಮನುಷ್ಯ ತನ್ನ ಮಾನವೀಯ ಗುಣಗಳನ್ನು ಗಾಳಿಗೆ
ತೂರುತ್ತಿದ್ದಾನೆ, ಭಾವನೆಗಳು ನಶಿಸುತ್ತಿವೆ, ಕರ್ತವ್ಯವನ್ನು ಮರೆತು ಯಾಂತ್ರಿಕ ಜೀವನ
ನಡೆಸುತ್ತಿದ್ದಾನೆ ಎಂದು. ಆದರೆ ನಮ್ಮ ಸುತ್ತಲೂ ನಡೆಯುವ ಸಂಗತಿಗಳನ್ನು ಗಮನಿಸಿದಾಗ
ಮಾತ್ರ ನಮಗೆ ಸತ್ಯದ ಅರಿವಾಗುತ್ತದೆ. ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು
ಜನರು ಬದಲಾಗುತ್ತಿರುವರೆಂಬುದು ಸರಿಯೇ?
ನಾಗರೀಕತೆಯ ಕಾರಣದಿಂದಾಗಿ ನಮ್ಮ ಜೀವನ ರೀತಿ
ಸುಲಭ ಹಾಗು ವೈಜ್ಞಾನಿಕವಾಗಿದೆ. ಜೊತೆಯಲ್ಲಿ ಇನ್ನೂ ಸುಲಭಸಾಧ್ಯ ಮಾಡುವ ಹಂಬಲವು ನಮ್ಮ
ಜೀವನದ ಬಿಡುವನ್ನು ತನ್ನ ವಶವಾಗಿಸಿಕೊಂಡಿದೆ. ಆದರೆ ಜೀವನ ತಾನು ಇರುವಂತೆಯೇ ಇದೆ.
ಬದಲಾಗಿರುವುದು ಮನಸ್ಸು.
ಯಾವ ಮಾನವೀಯ ಮೌಲ್ಯಗಳು ಕಳೆದು ಹೋಗಿಲ್ಲ.
ಅದನ್ನು ನೋಡಲು ಬೆeಕಾದ ದೃಷ್ಟಿ ನಮ್ಮಲ್ಲಿ ಇಲ್ಲ. ಮಕ್ಕಳು ತಮ್ಮ ತಂದೆ ತಾಯಿಯನ್ನು
ಆಶ್ರಮಕ್ಕೆ ಬಿಡುತ್ತಾರೆ ಸಾಕಲಾರೆದೆ ಇದು ಸಂಬಂಧಗಳು ಕಳಚುವುದಕ್ಕೆ ಉದಾಹರಣೆ
ಆಗುವುದಾದರೆ, ನಮ್ಮ ಸಮಾಜದಲ್ಲಿ ನೊಂದ ತಂದೆ ತಾಯಿಗಳಿಗಾಗಿ ವೃದ್ದಾಶ್ರಮ ನಡೆಸುವವರಲ್ಲಿ
ಮಾನವೀಯತೆ ಕಾಣುವುದಿಲ್ಲವೇ? ಅಪಘಾತ ನಡೆದಾಗ ದೂರ ಹೋದವರನ್ನು ದೂಷಿಸುವಲ್ಲಿ
ಪಕ್ಕದಲ್ಲೇ ಸಹಾಯ ಮಾಡುವವರು ನಮಗೇಕೆ ಕಾಣುವುದಿಲ್ಲ?
ಮುಂಜಾನೆ ಕವಿದ ಇಬ್ಬನಿ ಇರುವವರೆಗೂ ನಮಗೆ ಕಾಣದ
ಹತ್ತಿರದ ವಸ್ತುಗಳನ್ನು ಇಲ್ಲ ಎಂದು ಹೇಳಲಾಗುವುದೇ? ಅದು ತಾತ್ಕಾಲಿಕ. ಬಿಸಿಲು
ಬೀಳುವವರೆಗೂ ಮಾತ್ರ. ಕ್ಷಣಿಕ ನಡೆಯುವ ವಿಚಾರವನ್ನು ದೊಡ್ಡ ನಿರ್ಧಾರಗಳಿಗಾಗಿ ಬಳಸಿದಾಗ
ಇಂತಹ ಪ್ರಮಾದವಾಗುತ್ತದೆ.
ಪ್ರತಿ ವಸ್ತು ಹಾಗು ಪ್ರತಿ ಘಟನೆಗೂ ನಮಗೆ
ನೇರವಾಗಿ ಕಾಣದ ಇನ್ನೊಂದು ಮುಖವಿರುತ್ತದೆ. ಇಂದಿಗೂ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ
ತಮ್ಮ ಕೊಡುಗೆ ನೀಡುವವರು ನಮ್ಮಲ್ಲಿಯೇ ಇದ್ದಾರೆ. ಗುರುತಿಸುವ ವಿವೇಚನೆಯನ್ನು
ಕಳೆದುಕೊಳ್ಳುವ ಯಾಂತ್ರಿಕ ಜೀವನದಲ್ಲಿ ನಾವಿದ್ದೇವೆ. ಯಾರು ಕರೆಯದೆಯೇ ಸಹಾಯ ಮಾಡುವವರು
ಇಂದಿಗೂ ಇದ್ದಾರೆ. ಆದರೆ ನಾವು ನಮ್ಮ ಕರ್ತವ್ಯದಿಂದ ಹಿನ್ನಡೆದಾಗ ಮುಂದೆ ಚಲಿಸಿದಾಗ
ನಮ್ಮ ಹಿಂದೆ ಮಾನವೀಯತೆ ಮೆರೆದವರು ಕಾಣುವುದಿಲ್ಲ. ನಕಾರಾತ್ಮಕ ಭಾವನೆ ಎನ್ನುವುದು ನಮ್ಮ
ಮನದಲ್ಲಿ ಹುಟ್ಟಿ ಹೆಮ್ಮರವಾಗಿ ಬೆಳೆದು, ಸಕಾರಾತ್ಮಕ ಸಮಾಜದ ಹಿತವಾದ ವಿಷಯಗಳು ನಮಗೆ
ಕಾಣದಂತೆ ಮಾಡಿದೆ. ಸತ್ಯ ಧರ್ಮ, ಪ್ರೀತಿ ವಿಶ್ವಾಸ ಎಲ್ಲ ಕಾಲಕ್ಕೂ ಸಲ್ಲುವ ವಿಷಯಗಳು.
ರೀತಿ ಬೇರೆಯಾಗಬಹುದು. ಆದರೆ ಇವೆಲ್ಲವೂ ಪಕೃತಿಯ ನಿಯಮಗಳು.
ನಮ್ಮ ಸಮಾಜ ಜಾಗೃತವಾಗಿದೆ. ಕರ್ತವ್ಯಗಳ ಅರಿವು
ಹೆಚ್ಚುತ್ತಿದೆ. ವಿಷಯದ ಆಳಕ್ಕೆ ಇಳಿದು ಸತ್ಯ ತಿಳಿಯುವ ಜ್ಞಾನ ನಮ್ಮಲ್ಲಿ ಮೂಡಿದೆ.
ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಎಲ್ಲ ಜ್ಞಾನವು ನಮ್ಮಲ್ಲಿ ಹೆಚ್ಚುತ್ತಿದೆ. ಆದ್ರೆ
ಮನದ ಕಣ್ಣು ತೆರೆದಾಗ ಸುಲಭ ಜೀವನ, ಆಧುನಿಕ ಜೀವನ ಶೈಲಿಯ ಜೊತೆಗೆ ಮಾನವೀಯತೆಯನ್ನು
ತನ್ನಲ್ಲಿ ಅಡಗಿಸಿಕೊಂಡಿರುವ ಒಂದು ಸುಂದರ ನಾಡು ನಮಗೆ ಕಾಣುತ್ತದೆ.
ದ್ರಾಕ್ಷಿ ಸಿಗದ ನರಿ ಹಣ್ಣು ಹುಳಿ ಎಂದ ಹಾಗೆ,
ಮನದ ಕಣ್ಣು ತೆರೆಯದೆ ನಾಗರೀಕತೆಯನ್ನು ದೂಷಿಸುವ ನಮ್ಮ ನಿಲುವು ಬದಲಾಗಬೇಕಿದೆ. ಮಾನವೀಯ
ಮೌಲ್ಯಗಳನ್ನು ಜೀವಂತವಾಗಿಡುವಲ್ಲಿ ನಮ್ಮ ಪಾತ್ರ ದೊಡ್ಡದಾಗಿದೆ. ಅದನ್ನರಿತು ಸುಂದರ
ಸ್ವಸ್ಥ ಕುಟುಂಬ, ಸಮಾಜ, ನಾಡು, ದೇಶ ಕಟ್ಟುವಲ್ಲಿ ಪ್ರಯತ್ನಿಸೋಣ.
ಹಸುವನ್ನು ಉಳಿಸಿ ಬೆಳೆಸಿ ಅದರ ಮರ್ಯಾದೆ ಉಳಿಸಲು ಪ್ರಯತ್ನಿಸುತ್ತಾರೆ. ಆದರೆ ತಾಯಿ, ತಂಗಿ, ಅಕ್ಕ, ಪತ್ನಿಯಾಗಿರುವಂತೆ ಹೆಣ್ಣಿನ ಮಾನ ಹರಾಜಾದರೆ ಪರ್ವಾಗಿಲ್ಲ. ಗೋವಿನ ಮಾನ ಪ್ರಾಣ ಮರ್ಯಾದೆ ಉಳಿಸಬೇಕು. ಎಂತಹ ಕಾಲ ಬಂತು ಭಾರತಕ್ಕೆ “ಯಂತ್ರಿ ನಾರ್ಯಂತೆ ಪೂಜ್ಯಂತೆ” ಎನ್ನುತ್ತಿದ್ದರೋ ಅದೇ ದೇಶದಲ್ಲಿ ಇಂದು ಆಕೆಯ ಸ್ಥಿತಿ ಹಸುವಿಗಿಂತಲೂ ಕಡೆಯಾಗಿದೆ ಎಂದರೆ ಆಕೆಯ ಸ್ಥಿತಿ ಹೇಗಿರುವುದು ಎಂದು ಯೋಚಿಸಿರಿ.
ನಿಜವಾಗಲೂ ಸ್ವಾತಂತ್ರ್ಯ ನಮಗೆ 1947 ಅಗೋಸ್ಟ್ 15 ರಂದು ಬಂದಿಲ್ಲ. ನಿಜವಾದ ಸ್ವಾತಂತ್ರ್ಯ ದೇಶಕ್ಕೆ 21ನೇ ಶತಮಾನದಲ್ಲಿ ಬಂದಿದೆ ಎಂದರೆ ಸುಳ್ಳಲ್ಲ. ಏಕೆಂದರೆ ನೀವೇ ಊಹಿಸಿ ನೋಡಿ: ಇಂದು ಯಾವ ವ್ಯಕ್ತಿಯೂ ಕಾನೂನಿನ ಭಯವಾಗಲಿ ಇಲ್ಲದೆ ಮಾಡಿದ ತಪ್ಪನ್ನೇ ಮಾಡುತ್ತಾ ಇದ್ದು, ಆತ ಮಾಡಿರುವುದು ಮತ್ತು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಅವರನ್ನೇ ತಮ್ಮ ನಾಯಕನನ್ನಾಗಿ ಮಾಡಿಕೊಂಡು ಹೋಗ್ತಾ ಇದ್ರೆ ನಮ್ಮ ದೇಶ ಅಭಿವೃದ್ಧಿಗೊಳ್ಳುವುದು ಹೇಗೆ? ಪರಿಸ್ಥಿತಿ, ಹಣ, ಹೆಣ್ಣು, ಮಣ್ಣಿಗಾಗಿ ಸಂಬಂಧಗಳನ್ನು ಲೆಕ್ಕಿಸದೇ ಏನನ್ನಾದರೂ ಮಾಡಲು ಸಿದ್ಧರಿರುತ್ತಾರೆ. ಇದಕ್ಕೆಲ್ಲಾ ಕಾರಣವೇನು, ಪರಿಸ್ಥಿತಿ ಇಷ್ಟು ಹದಗೆಡುವುದಕ್ಕೆ ತಪ್ಪು ಎಲ್ಲಿ ನಡೆದಿದೆ, ಅದನ್ನು ನಾವು ಹೇಗೆ ಸುಧಾರಿಸಬಹುದು, ಅದರಲ್ಲಿ ನಮ್ಮ ಕರ್ತವ್ಯಗಳೇನು ಎಂಬುದರ ಬಗ್ಗೆ ಕೆಲವು ಮಾತುಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತಿದ್ದೇನೆ.
ಇಂದು ನಮ್ಮಲ್ಲಿ, ನಮ್ಮ ಶಾಲೆಗಳಲ್ಲಿ ನಮ್ಮ ಸಮಾಜದಲ್ಲಿ ನೈತಿಕ ಮೌಲ್ಯಗಳು ಅಥವಾ ಮೌಲ್ಯಧಾರಿತ ಶಿಕ್ಷಣದ ಕೊರತೆಯಿಂದ ಇಷ್ಟೆಲ್ಲಾ ಅನಾಹುತಗ ಳಾಗುತ್ತಿವೆ ಎಂದರೆ ತಪ್ಪಿಲ್ಲ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಇಂದು ವ್ಯಕ್ತಿಯ ಜೀವನ ಕೇವಲ ಕೊಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಸೀಮಿತವಾಗಿದೆ.
ಇಂದು ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನ ಯುಕ್ತ ಶಿಕ್ಷಣ ಸಿಗುತ್ತಿದೆ. ಆದರೂ ಏನೋ ಕೊರೆತೆಯಿದೆ ಅನ್ನಿಸುತ್ತೆ ನಿಜ. ಹಿಂದಿನ ಕಾಲದಲ್ಲಿ ಆಶ್ರಮಗಳಲ್ಲಿ, ಮದ್ರಸಾಗಳಲ್ಲಿ ಕೊಡುತ್ತಿದ್ದ ಶಿಕ್ಷಣ ಮಕ್ಕಳ ಮನಸ್ಸಿನಲ್ಲಿ ಕೊನೆಯವರೆಗೂ ಉಳಿಯುತ್ತಿತ್ತು. ಅವರು ಕೊಡುವಂತಹ ಶಿಕ್ಷಣ ಮೌಲ್ಯವುಳ್ಳದ್ದಾಗಿರುತ್ತಿತ್ತು. ಮೌಲ್ಯಗಳೆಂದರೆ ಪ್ರೀತಿ, ಪ್ರೇಮ, ವಿಶ್ವಾಸ, ಸಹೋದರತ್ವ, ಜವಾಬ್ದಾರಿಕೆ, ಪರಸ್ಪರ ಗೌರವ, ಪರಸ್ಪರ ಹೊಣೆಗಾರಿಕೆ, ಸಹಬಾಳ್ವೆ, ಒಬ್ಬರಿಗೊಬ್ಬರು ಕಷ್ಟ ಸುಖ ಹಂಚಿಕೊಳ್ಳುವುದು, ಹಿರಿಯರೊಂದಿಗೆ, ವೃದ್ಧರೊಂದಿಗೆ, ಅನಾಥರೊಂದಿಗೆ, ಅಂಗವಿಕಲರೊಂದಿಗೆ, ವಿಧವೆಯೊಂದಿಗೆ, ಸ್ತ್ರೀಯರೊಂದಿಗೆ ಯಾವ ರೀತಿ ವ್ಯವಹರಿಸಬೇಕು; ತಂದೆ-ತಾಯಿಗಳೊಂದಿಗೆ ತನ್ನ ಕರ್ತವ್ಯ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಅವರಿಗೆ ಅವರ ಕರ್ತವ್ಯವನ್ನು ತಿಳಿಸಲಾಗುತ್ತಿತ್ತು. ಆದ್ದರಿಂದಲೇ ತಂದೆ ಕೊಟ್ಟ ವಚನಕ್ಕಾಗಿ, ಶ್ರೀ ರಾಮ ಕಾಡಿಗೆ ತೆರಳಿದನೆನ್ನಲಾಗಿದೆ. ಶ್ರವಣನ ಪಿತೃಭಕ್ತಿ, ಸತ್ಯ ಹರಿಶ್ಚಂದ್ರನ ಕಥೆ ಓದಿ ತನ್ನ ಜೀವನ
ತಿರುವನ್ನೇ ಬದಲಿಸಿಕೊಂಡ ಗಾಂಧೀಜಿ ಇಡೀ ದೇಶಕ್ಕೆ ಮಾದರಿಯಾದರೂ ಬಹುಶಃ ಅವರೂ ಇಂದಿನಂತೆ ಕೇವಲ ಔಪಚಾರಿಕವಾಗಿ ಕಲಿತು ಮರೆತು ಬಿಡುತ್ತಿದ್ದರೆ, ಇತಿಹಾಸದಲ್ಲಿ ಅವರ ಹೆಸರು ಇರುತ್ತಿರಲಿಲ್ಲ. ಅದೇ ರೀತಿ ತಾನು ತಮ್ಮ ಮನೆಯವರನ್ನು ನರಕಾಗ್ನಿಯಿಂದ ರಕ್ಷಿಸಬೇಕಾದರೆ ಅವರಿಗೆ ನೀತಿಯುಳ್ಳ ಧಾರ್ಮಿಕ ಮತ್ತು ನೈತಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣ ನೀಡಬೇಕೆಂದು ಕುರ್‍ಆನ್ ಆದೇಶಿಸಿದೆ. ಇದು ಅಕ್ಷರಶಃ ಸತ್ಯ. ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದಲೇ ಇಂದು ಎಲ್ಲೆಡೆ ಕೆಡುಕುಗಳು ಹಬ್ಬಿವೆ, ಸಂಬಂಧಗಳಿಗೆ ಯಾವುದೇ ಬೆಲೆಯಿಲ್ಲದಾಗಿದೆ, ರಕ್ತ ಸಂಬಂಧಗಳಿಲ್ಲವಾಗಿದೆ, ಮೊದಲಿನ ಹಾಗೆ ಭಾವನಾತ್ಮಕ ಸಂಬಂಧಗಳಲ್ಲಿ ಶಿಕ್ಷಣದಲ್ಲಿ ಲೌಕಿಕ ಶಿಕ್ಷಣದ ಜೊತೆಗೆ ಮೌಲ್ಯ ಶಿಕ್ಷಣದ ಕೊರತೆ ಇದೆ ಮತ್ತು ಇದರ ಅಗತ್ಯತೆ ಹೆಚ್ಚಿದೆ.
ಅದಲ್ಲದೆ ಇಂದು ಮುಸ್ಲಿಮ್ ಶಿಕ್ಷಣ ಸಂಸ್ಥೆಗಳಲ್ಲಿ ಅವರ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತವಾದ ಲೌಕಿಕ ಶಿಕ್ಷಣ ಕೊಡುವುದಕ್ಕೆ ಪ್ರಯತ್ನಿಸಬೇಕು. ಇದಕ್ಕಾಗಿ ಎಲ್ಲಾ ಮುಸ್ಲಿಮ್ ಶಿಕ್ಷಕ ಶಿಕ್ಷಕಿಯರು ಪ್ರಯತ್ನಿಸಬೇಕು. ಅದಕ್ಕಾಗಿ ಮೊದಲು ನಾವು ನಮ್ಮ ಸಂಸ್ಥೆಗಳಲ್ಲಿ ಯಾವ ರೀತಿ ಇಂತಹ ಶಿಕ್ಷಣವನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಅವರ ಮನಃಪರಿವರ್ತನೆ ಆಗುವಂತೆ, ಅವರ ಜೀವನದಲ್ಲಿ ಕೆಡುಕನ್ನು ಮಾಡುವ ಬಗ್ಗೆ ಯೋಚಿಸುವುದೂ ಸಹ ಪಾಪವೆಂದು ಅವರ ಮನಸ್ಸಿಗೆ ಬರುವಂತೆ ವಿವರಿಸಬೇಕು. ಇದನ್ನು ನಾವು ಅರಿಯಬೇಕು.
ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅಥವಾ ಮೌಲ್ಯ ಶಿಕ್ಷಣವನ್ನು ಚೆನ್ನಾಗಿ ಕೊಡಬಹುದು. ಆದರೆ ಇಂದಿನ ದಿನಗಳಲ್ಲಿ ಕೆಲವು ರಾಜಕೀಯ ಮತ್ತು ಬೌಗೋಳಿಕ ಗೋಡೆಗಳು ಮಾನವೀಯ ಸಂಬಂಧಗಳನ್ನು ಮತ್ತು ಮಾನವೀಯ ಹಕ್ಕುಗಳನ್ನು ಹಾಳು ಮಾಡುತ್ತಿವೆ. ಆದ್ದರಿಂದ ನಾವು ಮಕ್ಕಳಿಗೆ ಸಾಂಸ್ಕ್ರತಿಕ, ಧಾರ್ಮಿಕ ಶಿಕ್ಷಣದ ಮೂಲಕ ಅವರ ಮಧ್ಯೆ ಇರುವ ಗೋಡೆಯನ್ನು ಕೆಡವಲು ಪ್ರಯತ್ನಿಸೋಣ. ಮೊದಲು ನಾವು ನಮ್ಮ ಮಧ್ಯೆ ಇರುವ ಈ ವ್ಯತ್ಯಾಸಕ್ಕೆ ಕಾರಣ ತಿಳಿಯೋಣ. ನಂತರ ಪ್ರತಿಯೊಬ್ಬರು ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಗೌರವ, ಸ್ವಾತಂತ್ರ್ಯ ಜವಾಬ್ದಾರಿ ಇತ್ಯಾದಿಗಳನ್ನೂ ನಮ್ಮ ಮಧ್ಯೆ ಮರೆಯಾಗಿರುವ ಮೌಲ್ಯಗಳನ್ನೂ ಮರು ಸ್ಥಾಪಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಅರಿಯಬೇಕು. ಈ ನಿಟ್ಟಿನಲ್ಲಿ AITA (ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್) ವತಿಯಿಂದ ದೇಶದಾದ್ಯಂತ ನವೆಂಬರ್ 21 ರಿಂದ 30ರ ವರೆಗೆ ‘ಗುಣಮಟ್ಟದ ಶಿಕ್ಷಣ’ ಅನ್ನುವ ಅಭಿಯಾನ ನಡೆಸಲಿದೆ. ಇದರಲ್ಲಿ ದೇಶದಾದ್ಯಂತ ಮುಸ್ಲಿಮ್ ಶಿಕ್ಷಕ ಶಿಕ್ಷಕಿಯರು ಭಾಗವಹಿಸುವ ಮೂಲಕ ನಮ್ಮ ಮಕ್ಕಳನ್ನು ಮಾನಸಿಕವಾಗಿ, ಭೌತಿಕವಾಗಿ, ವೈಚಾರಿಕವಾಗಿ ಸದೃಢಗೊಳಿಸುವುದಕ್ಕೆ ಪ್ರಯತ್ನಿಸಲಬೇಕಾಗಿದೆ.
“ಶಾಂತಿ ಸ್ಥಾಪನೆಗಾಗಿ ಬಂದೂಕು ಬಾಂಬುಗಳು ಬೇಕಿಲ್ಲ. ಪ್ರೀತಿ ಮತ್ತು ದಯೆಯಷ್ಟೇ ಸಾಕು” ಎಂದ ಮದರ್ ತೆರೇಸಾ ಶಾಂತಿಯಿಂದ ಮನಸ್ಸನ್ನು ಗೆದ್ದರು.
ಅದೇ ರೀತಿ
“ಸಾಲುಗಳ ತಿದ್ದುವವ, ಅಳತೆಗೆ
ತಕ್ಕಂತೆ ಆಡುವುದು, ಹಾಡುವುದ
ಕಲಿಸುವವ ಗುರುವಲ್ಲ.
ಮನದಲ್ಲಿ ಮಿಂಚುವವ ಮಾತ್ರ
ಗುರು”
ಈ ಮಿಂಚನ್ನು ತರುವ ಕೆಲಸ ಶಿಕ್ಷಕರ ಹೊರತಾಗಿ ಬೇರೆ ಯಾರಿಂದಲೂ ಈ ಕೆಲಸ ಸಾಧ್ಯವಿಲ್ಲ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ. ಕಳೆದು ಹೋದ ಮೌಲ್ಯಗಳನ್ನು ಹುಡುಕಿ ತರೋಣ. ಸಮಾಜದ ಪಿಡುಗಗಳನ್ನು ತೊಲಗಿಸೋಣ