ಸ್ವಚ್ಚ ಭಾರತ , ಅಚ್ಚಾ ಭಾರತ


ಮುಂದಿನ ವರ್ಷದ ಮತ್ತೊಂದು ಸಂಕಲ್ಪ “ ಸ್ವಚ್ಚ ಭಾರತ , ಅಚ್ಚಾ ಭಾರತ “

ಕೆಲದಿನಗಳ ಹಿಂದೆ ಬಹುರಾಷ್ಟ್ರೀಯ ಸಂಸ್ಥೆಗೆ ಸೇರಿದ ಉದ್ಯೋಗಿಗಳ ಗುಂಪೊಂದು ಬಾಯಿಗೆ ಬಟ್ಟೆ ಕಟ್ಟಿಕೊಂಡು ಕೈಗೆ ಗ್ಲೌಸ್ ಹಾಕಿಕೊಂಡು ರಸ್ತೆಯಲ್ಲಿ ಬಿದ್ದಿದ್ದ ಕಸವನೆಲ್ಲ ನಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾ “ ತಾವು ಹೊರದೇಶದಲ್ಲಿ ಇದ್ದಾಗ ಹೇಗೆ ಕಸವನ್ನು ಎಲ್ಲೆಲ್ಲಿ ಬೇಕೋ ಹಾಗೆ ಬಿಸಾಕುವುದಿಲ್ಲವೋ ಹಾಗೆ ನಮ್ಮ ದೇಶದಲ್ಲಿಯೂ ಸಹ ಇರಿ “ ಎಂದು ಬೋರ್ಡ್ ಹಿಡಿದು ಎಲ್ಲರ ಗಮನ ಸೆಳೆಯುತ್ತಿದ್ದರು. ಕಡೆಗಾದರೂ ನಮ್ಮವರಿಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂಬ ಅರಿವು ಮೂಡಿದ್ದು ಅಲ್ಲದೆ ಎಲ್ಲರಿಗೂ ಅರಿವು ಮೂಡಿಸುವಂತೆ ಮಾಡುವ ಪ್ರಯತ್ನಕ್ಕೆ ನಾವು ಸಹ ಕೈಜೋಡಿಸಿದರೆ ನಿಮ್ಮ ಮತ್ತೊಂದು ಸಂಕಲ್ಪ ಗೊತ್ತಿಲ್ಲದೆಯೇ ನೆರೆವೇರಿದಂತೆ. ಜಾಸ್ತಿ ತಲೆ ಕೆಡಿಸಿಕೊಳ್ಳದೆ ಮಾಡಬಹುದಾದ ಸಂಕಲ್ಪವಿದು ಆದರೆ ಮಾಡುವ ಇಚ್ಛಾಶಕ್ತಿ ನಿಮ್ಮಲ್ಲಿ ಇರಬೇಕು ಅಷ್ಟೇ. 
ಸ್ವಚ್ಚ ಭಾರತ ರಾಷ್ಟ್ರಪಿತ ಮಾಹಾತ್ಮ ಗಾಂಧೀಜಿ ಅವರ ಕನಸು ಸಹ, ಗಾಂಧೀಜಿಯಯವರು ತಾವು ಹೋದ ಕಡೆಯಲ್ಲ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದಲ್ಲದೆ ತಾವು ಕಸವನ್ನು ಗುಡಿಸಿ ಸ್ವಚ್ಚ ಮಾಡುತಿದ್ದರು. ಗಾಂಧೀಜಿಯವರ ಈ ಕಾಯಕಕ್ಕೆ  ಅವರ ಅನುಯಾಯಿಗಳು ಸಹ ಸಾಥ್ ನೀಡುತಿದ್ದರು ಕೆಲವರು ಗುಡಿಸಿ ಗುಂಪು ಹಾಕಿದರೆ ಮತ್ತೆ ಕೆಲವರು ಕಸವನ್ನು ಹೊತ್ತು ಬೇರೆಕಡೆಗೆ ಸಾಗಿಸುತ್ತಿದ್ದರು.  ಒಮ್ಮೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಗಾಂಧೀಜಿಯವರ ಜೊತೆ ಹಳ್ಳಿಗೆ ಹೋಗಿದ್ದಾಗ ಒಂದು ಮನೆಯ ಹೆಣ್ಣು ಮಗಳು ಬಂದು “ ನೋಡಿ  ಇಲ್ಲಿ ಕಸ ಗುಡಿಸಿ, ಇಲ್ಲೇ ಬಿಟ್ಟು ಹೋಗಿದ್ದಾರೆ “ ಎಂದು ಗಾಂಧೀಜಿಯವರನ್ನು ಆಕ್ಷೇಪಿಸಿದರು. ಪಟೇಲರಿಗೆ ಇವಳು ಗಾಂಧೀಜಿಯವರನ್ನು ಕಸ ಎತ್ತಿ ಬೇರೆ ಕಡೆಗೆ ಹಾಕಿ ಎಂದು  ಹೇಳುತ್ತಿದ್ದಳಲ್ಲಾ ಎಂದು ಕೋಪವುಕ್ಕಿ ಬಂದು ಅವಳ ಕಡೆಗೆ ಧಾವಿಸಲು ಹೊರಟರು. ತಕ್ಷಣ ಗಾಂಧೀಜಿಯವರು “ ಇವರಿಗೆ ಸ್ವಚ್ಛತೆಯ ಬಗ್ಗೆ ಆರಿವಿಲ್ಲ, ಅರಿವಿದ್ದಿದ್ದರೆ ನಾವು ಇಲ್ಲಿಗೆ ಬರುವ ಅಗತ್ಯವಿರುತ್ತಿರಲಿಲ್ಲ ಅಲ್ಲವೇ “ ಎಂದು ಪಟೇಲರಿಗೆ ಹೇಳುತ್ತಾ ಪರಿಸ್ಥಿತಿಯನ್ನು ತಿಳಿಗೊಳಿಸಿ ತಾವೇ ಕಸವನ್ನು ಎತ್ತಿ ಹಾಕಿದರಂತೆ. ಹಾಗಾಗಿ ನೀವು ಸಹ ಪೌರ ಕಾರ್ಮಿಕರು ಬಂದು ನಿಮ್ಮ ಮನೆಯ ಸುತ್ತ ಗುಡಿಸಲಿ ಎನ್ನುವ ಬದಲಿಗೆ ನೀವೇ ಗುಡಿಸಿಬಿಡಿ. ಬಹುಶ ನೀವು ಹಳ್ಳಿಗಳಿಗೆ ಭೇಟಿ ನೀಡಿರಬಹುದು ಇಲ್ಲವೇ ನೀವೆಲ್ಲರೂ ಹಳ್ಳಿಗಳಲ್ಲಿ ಹುಟ್ಟಿಬೆಳೆದವರು ಇರಬಹುದು, ನೀವು ಗಮನಿಸಿರಬೇಕು ಹಳ್ಳಿಗಳಲ್ಲಿ ದಿನಬೆಳಗ್ಗೆದ್ದು ಮನೆಯ ಮುಂದೆ ಮನೆಯವರೆ ಗುಡಿಸಿ , ಸಗಣಿಯಿಂದ ಸಾರಿಸಿ ಎಷ್ಟು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ ಆದರೆ ನಗರವಾಸಿಗಳಲ್ಲಿ ಏಕೆ ಈ ಭಟ್ಟಂಗಿತನ.
ಕಸ-ವರ ಅರ್ಥಾತ್ ಚಿನ್ನ :   
ಕಸವನ್ನು ಕಸವೆಂದು ಹೇಗೆಬೇಕೂ ಹಾಗೆ ಬಿಸಾಕಬೇಡಿ, ಕಸವನ್ನು ವರವಾಗಿ ಪರಿವರ್ತಿಸಿ ಅರ್ಥಾತ್ ಚಿನ್ನವೆಂದು ಭಾವಿಸಿ. ಶಾಲಾ ದಿನಗಳಲ್ಲಿ ನಮ್ಮ ಶಿಕ್ಷಕರು ಹೇಳಿದ ಉದಾಹರಣೆ ಕೊಡುತ್ತೇನೆ. ಭಾರತೀಯನೋರ್ವ ಕಬ್ಬನ್ನು ಚೆನ್ನಾಗಿ ಸಿಗಿದು, ಅಗಿದು ಕಬ್ಬಿನ ರಸವನ್ನು ತನ್ನ ಜಠರಕ್ಕೆ ಕಳುಹಿಸಿ ನಂತರ ರೈಲ್ವೇ ನಿಲ್ದಾಣದ ತುಂಬಾ ಕಬ್ಬಿನ ಜಲ್ಲೆಯನ್ನು  ಉಗಿದು ಹೋದನಂತೆ. ಅಲ್ಲಿದ್ದ ಎಲ್ಲರೂ ಆ ಜಾಗದಲ್ಲಿ ನಿಲ್ಲಲು ಆಗದಷ್ಟು ಜಲ್ಲೆ ಹರಡಿದನಂತೆ , ಕಡೆಗೆ ಅಲ್ಲಿಗೆ ಬಂದ ವಿದೇಶಿಯವನೊಬ್ಬ ಒಂದೊಂದು ಜಲ್ಲೆಯನ್ನು ಪೋಣಿಸಿ ಒಂದು ಸುಂದರವಾದ ಹಾರವನ್ನು ಮಾಡಿ ಕಬ್ಬು ತಿಂದವನಿಗೆ ಮಾರಿ 5 ರೂಪಾಯಿ ಜೇಬಿಗಿಳಿಸಿಕೊಂಡು ಹೋದನಂತೆ. ಶಾಲಾ ದಿನಗಳಲ್ಲಿ ಪುಸ್ತಕದಿಂದ ಒಂದು ಕಾಗದ ಹರಿದರೆ ಸಾಕು ಶಿಕ್ಷಕರು ಇದರಿಂದ ನೀನು ಒಂದು ಮರವನ್ನು ಕೆಡವಿದಂತೆ ಎಂದು ಅರಿವು ಮೂಡಿಸುವ ಬೆತ್ತದೇಟು ನೀಡುತ್ತಿದ್ದದು ಇಂದಿಗೂ ನೆನಪಿದೆ. ೨೦ ವರ್ಷಗಳ ಹಿಂದೆಯೇ ನಮ್ಮ ಶಿಕ್ಷಕರಲ್ಲಿ ಪರಿಸರದ ಬಗ್ಗೆ ಅಷ್ಟು ಕಾಳಜಿಯಿತ್ತು ಎಂದು ಹೇಳುವುದಕ್ಕೆ ಇಂದಿಗೂ ನನಗೆ ಹೆಮ್ಮೆ ಆಗುತ್ತದೆ ಸಚ್ ಆ ವಂಡರ್ಫುಲ್ ಟೀಚರ್ಗಳು ಅವರು – “ ಗುರು ದೇವೋ ಭವ “  
ಕಸ ಉಪಯೋಗಕ್ಕೆ ಬಾರದ ವಸ್ತುವಲ್ಲ , ಮತ್ತೆ ಮರು ಬಳಕೆ ಮಾಡಬಹುದಾದ ವಸ್ತು ಸಹ.. ಪೇಪರ್, ಪ್ಲಾಸ್ಟಿಕ್, ಲೋಹಗಳನ್ನು ಮಾರಾಟ ಮಾಡಿದರೆ ಬೆಲೆ ಬಾಳುತ್ತವೆ ಹಾಗೂ ಮರು ಬಳಕೆ ಮಾಡುತ್ತಾರೆ. ಹಾಗಾಗಿ ಘನ ಮತ್ತು ದ್ರವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ನಿಮ್ಮ ಸಂಕಲ್ಪ.  ಹಿಂದೆ ಗೋಬರ್ ಗ್ಯಾಸ್ ಇತ್ತು ಇಂದು ಬಯೋ ಗ್ಯಾಸ್ ಬಂದಿದೆ, ಬಯೋ ಗ್ಯಾಸ್ಗೆ ಅಡುಗೆ ಮನೆಯ ತ್ಯಾಜ್ಯಗಳನ್ನೂ ಕಚ್ಚಾ ಸಾಮಗ್ರಿಯಾಗಿ ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಮೀಂಬಲೆಯನ್ನು ಕ್ಲಿಕ್ಕಿಸಿ.  
ನಿಮಗೆ ಗೊತ್ತ ಇದೆಯೂ ಇಲ್ಲವೋ ದೀಪಾವಳಿಯ ದಿನ ಹಳ್ಳಿಗಳಲ್ಲಿ ತಿಪ್ಪೆ ಗುಂಡಿಗಳನ್ನು ಮನೆಯಲ್ಲಿ “ ಕೆರಕಪ್ಪ  “ ನನ್ನು ಇಟ್ಟು ಸಹ ಆರಾಧಿಸುತ್ತಾರೆ. ಹಲವರಿಗೆ ತಿಪ್ಪೆಸ್ವಾಮಿ, ತಿಪ್ಪೆಶ್,ತಿಪ್ಪೆ ರುದ್ರಸ್ವಾಮಿ, ತಿಪ್ಪಾರೆಡ್ಡಿ, ತಿಪ್ಪಮ್ಮ  ಎಂದು ಜನಕ ಜನನಿಯರು ನಾಮಕರಣ ಮಾಡಿ ಖುಷಿಯಿಂದ ಆರಾಧಿಸುತ್ತಾರೆ. ಕಸ ವನ್ನು ವರವಾಗಿ ಪರಿವರ್ತಿಸಿ, ಕಸದಿಂದ ರಸವನ್ನು ತೆಗೆದು ನಿಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಮತ್ತೊಂದು ಸಂಕಲ್ಪವನ್ನು ಹೊಂದಿರಿ.  
“ ಸ್ವಚ್ಚ ಭಾರತ , ಅಚ್ಚಾ ಭಾರತ “  ನೀವು ಮಾಡಬೇಕಾದದು ಇಷ್ಟೇ… 
ಯಾರಾದರೂ ರಸ್ತೆ ಇಲ್ಲವೇ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ  ಮೇಲೆ ಗಲೀಜು/ಕಸವನ್ನು ಹರಡಿದರೆ ಇಲ್ಲವೇ ಹರಡಲು ಮುಂದಾದರೆ ಕಸವನ್ನು ಕಸದ ಡಬ್ಬಿಯಲ್ಲಿ ಹಾಕುವಂತೆ ಮನವಿ ಮಾಡುವುದು, ರಸ್ತೆಗಳನ್ನು  ಸ್ವಚ್ಚಗೊಳಿಸುವುದು,
ಹಳ್ಳಿ/ಪಟ್ಟಣ ಪ್ರದೇಶಗಳಲ್ಲಿ  ಬಯಲು ಮಲ/ಮೂತ್ರ ವಿಸರ್ಜನೆ ಮಾಡುವುದರಿಂದ  ಭೇದಿ, ರಕ್ತ ಭೇದಿ, ಕಾಮಿಣಿ, ವಿಶಮ ಶೀತ ಜ್ವರ, ಕುರುಳಿನ ಕ್ರಿಮಿಗಳ ಉತ್ಪತ್ತಿ ಇತ್ಯಾದಿ ರೋಗಗಳಿಗೆ ಕಾರಣವಾಗುವುದರಿಂದ ಶೌಚಾಲಯವನ್ನು ಕಡ್ಡಾಯವಾಗಿ ನಿರ್ಮಿಸಿಕೊಂಡು ಬಳಸಿ ಬಯಲು ಮಲ ವಿಸರ್ಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಮನವಿ ಮಾಡಬೇಕು,
ನಗರ ಹಾಗೂ ಹಳ್ಳಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು . ಪ್ಲಾಸ್ಟಿಕ್ ಬಳಕೆಯನ್ನು ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ ಪ್ಲಾಸ್ಟಿಕ್  ಮುಕ್ತ ಮನೆ ನಮ್ಮದು ಎಂದು ಹೆಮ್ಮೆಯಿಂದ ಸಾರಿ. ಇಂದು ಶುದ್ದ ಕುಡಿಯುವ ನೀರಿನ ಕೊರತೆಯನ್ನು ನಾವು ಅನುಭವಿಸುತ್ತಿದ್ದೇವೆ, ಹಾಗಾಗಿ ಕುಡಿಯುವ ನೀರನ್ನು ಸುರಕ್ಷಿತ ನಿರ್ವಹಣೆ  ಮಾಡುವ ಹೊಣೆ ನಮ್ಮದು.   
ಸ್ವಚ್ಚ ಭಾರತದ ರಾಷ್ಟ್ರಪಿತನ ಕನಸಿಗೆ ಮರುಜೀವ ನೀಡಿದ ಮಾನ್ಯ ಪ್ರಧಾನಿಯವರಿಗೆ ಧನ್ಯವಾದಗಳನ್ನು ಹೇಳುತ್ತಾ ನಾವು ಸಹ ಕೈ ಜೋಡಿಸೋಣ.