ಮಕ್ಕಳ ಮೂಲೆ



ಮಗುವೆಂದರೆ ಯಾರು ?
ಮುಖ್ಯ ಅಂಶಗಳು







ಮಗುವೆಂದರೆ ಯಾರು ?


ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು. ಇದು ಜಗತ್ತಿನಾದ್ಯಂತ ಒಪ್ಪಿತವಾದ ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ .(UNCRC) ಹೊರಹೊಮ್ಮಿದೆ. ಅಂತರಾಷ್ಟ್ರೀಯ ಕಾನೂನು ಸಾಧನ, ಬಹುತೇಕ ರಾಷ್ಟ್ರಗಳ ಒಪ್ಪಿಗೆ ಮತ್ತು ಅನುಮೋದನೆ ಪಡೆದಿದೆ


ಭಾರತವು ೧೮ ವರ್ಷದೊಳಗಿನ ವ್ಯಕ್ತಿಗಳ ಗುಂಪನ್ನು ಸದಾ ಕಾನೂನು ಸಮ್ಮತ ವಿಭಿನ್ನ ಘಟಕ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಅವರು ಮತದಾನದ ಹಕ್ಕು ,ವಾಹನ ಚಾಲನಾ ಪರವಾನಿಗೆ ಅಥವ ಕಾನೂನು ಸಮ್ಮತ ಒಪ್ಪಂದ ಮಾಡಿಕೊಳ್ಳಲು ೧೮ ವರ್ಷ ಪೂರೈಸಿರಬೇಕು. ಹುಡುಗಿಗೆ ೧೮ ವರ್ಷ, ಹುಡುಗನಿಗೆ ೨೧ ವರ್ಷ ಆಗದೆ ಇದ್ದರೆ ಬಾಲ್ಯವಿವಾಹ ಕಾಯಿದೆ೧೯೨೯ರ ಪ್ರಕಾರ ಮದುವೆಯಾಗುವ ಹಾಗಿಲ್ಲ. ಅದೂ ಅಲ್ಲದೆ ೧೯೯೨ ರಲ್ಲಿ UNCRC ಯನ್ನು ಅನುಮೋದನೆ ಮಾಡಿದ ನಂತರ, ಭಾರತವು ಬಾಲಾಪರಾಧ ನ್ಯಾಯಕ್ಕೆ ಅನುಗುಣವಾಗಿ ಕಾಯಿದೆಯನ್ನು ಬದಲಾಯಿಸಿದೆ. ಇದರಿಂದ ೧೮ ವರ್ಷದೊಳಗಿನವರಿಗೆ ಅಗತ್ಯವಾದ ರಕ್ಷಣೆ ಮತ್ತು ಆರೈಕೆಯನ್ನು ದೊರಕುವುದನ್ನು ಖಚಿತ ಪಡಿಸಿಕೊಳ್ಳಲು, ಮತ್ತು ಅದನ್ನು ರಾಜ್ಯದಿಂದ ಪಡೆಯಲು ಅವರಿಗೆ ಅರ್ಹತೆ ಇದೆ. ಆದರೆ ಇನ್ನೂ ಅನೇಕ ಕಾಯಿದೆಗಳು ಮಗುವನ್ನು ವಿಭಿನ್ನವಾಗಿ ಅರ್ಥೈಸಿವೆ. ಮತ್ತು ಅವೆಲ್ಲವನ್ನೂ UNCRC.ಗೆ ಅನುಗುಣವಾಗಿರುವಂತೆ ಮಾಡಬೇಕಿದೆ. ಆದರೆ , ಈ ಮೊದಲೇ ಹೇಳಿದಂತೆ ಕಾನೂನಿನ ಪ್ರಕಾರ ಪ್ರಾಪ್ತ ವಯಸ್ಕರಾಗಲು ಗಂಡುಹುಡುಗರಿಗೆ ೨೧ ವರ್ಷ ಹೆಣ್ಣು ಹುಡುಗಿಯರಿಗೆ ೧೮ ವರ್ಷ ಅಗತ್ಯ.


ಇದರಂತೆ ೧೮ ವರ್ಷದ ಕೆಳಗಿನ ಗ್ರಾಮ / ಪಟ್ಟಣ / ನಗರದಲ್ಲಿನ ಎಲ್ಲ ವ್ಯಕ್ತಿಗಳನ್ನು ಮಕ್ಕಳೆಂದು ಪರಿಗಣಿಸಬೇಕು ಮತ್ತು ನಿಮ್ಮ ಸಹಾಯ ಮತ್ತು ಆಸರೆಯ ಅವರಿಗೆ ಅಗತ್ಯ.


ಒಬ್ಬ ವ್ಯಕ್ತಿಯನ್ನು ಮಗು ಎಂದು ಪರಿಗಣಿಸಲು ಅವನ ವಯಸ್ಸೇ ಅತಿ ಮುಖ್ಯ. ಒಬ್ಬ ೧೮ ವರ್ಷದ ಒಳಗಿನ ವ್ಯಕ್ತಿಯು ಮದುವೆಯಾಗಿ ಮಕ್ಕಳನ್ನು ಪಡೆದಿದ್ದರೂ ಕೂಡಾ ಅಂತರಾಷ್ಟ್ರೀಯ ಮಾಪನಕ್ಕೆ ಅನುಗುಣವಾಗಿ ಅವನನ್ನು ಮಗು ಎಂದೆ ಗುರುತಿಸಲಾಗುವುದು.



ಮುಖ್ಯ ಅಂಶಗಳು
೧೮ ವರ್ಷದೊಳಗಿನ ಎಲ್ಲ ವ್ಯಕ್ತಿಗಳು ಮಕ್ಕಳೇ.
ಬಾಲ್ಯವು ಎಲ್ಲ ವ್ಯಕ್ತಿಗಳೂ ಹಾದು ಹೋಗುವ ಒಂದು ಹಂತ.
ಮಕ್ಕಳಿಗೆ ಬಾಲ್ಯದಲ್ಲಿ ವಿಭಿನ್ನವಾದ ಅನುಭವಗಳಾಗುತ್ತವೆ.
ಎಲ್ಲ ಮಕ್ಕಳಿಗೂ ದುರ್ಬಳಕೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ ಬೇಕಾಗುತ್ತದೆ.

ಮಕ್ಕಳಿಗೆ ವಿಶೇಷ ಗಮನ ಏಕೆ ಬೇಕು?
ಮಕ್ಕಳು ತಾವು ವಾಸಿಸುವಲ್ಲಿನ ಪರಿಸ್ಥಿತಿಯಿಂದ ವಯಸ್ಕರಿಗಿಂತ ಹೆಚ್ಚಾಗಿ ಬೇಗ ಪರಿಣಾಮಕ್ಕೆ ಒಳಗಾಗುತ್ತಾರೆ.
ಅದರಿಂದ ಸರಕಾರದ ಮತ್ತು ಸಮಾಜದ ಕ್ರಿಯೆ ಅಥವ ನಿಷ್ಕ್ರಿಯೆಯಿಂದ ಬೇರೆ ವಯೋಮಾನದವರಿಗಿಂತ ಅವರು ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ.
ನಮ್ಮದೂ ಸೇರಿದಂತೆ ಅನೇಕ ಸಮಾಜಗಳಲ್ಲಿ ಮಕ್ಕಳು ತಾಯಿತಂದೆಯರ ಆಸ್ತಿ ಎಂಬ ಭಾವನೆ ಇದೆ ಅಥವ ಅವರು ಇನ್ನೂ ವಯಸ್ಕರಾಗಬೆಕಾದವರು, ಇಲ್ಲವೆ ಸಮಾಜಕ್ಕೆ ಸದ್ಯಕ್ಕೆ ಯಾವುದೇ ಕೊಡುಗೆ ನೀಡಲಾಗದವರು ಎಂಬ ಭಾವನೆ ಇದೆ.
ಮಕ್ಕಳೂ ಸಹಾ ಅವರದ್ದೆ ಆದ ಮನಸ್ಸಿರುವ, ತಮ್ಮದೆ ಅಭಿಪ್ರಾಯವಿರುವ, ಆಯ್ಕೆಯ ಸಾಮರ್ಥ್ಯವಿರುವ, ತೀರ್ಮಾನ ತೆಗೆದು ಕೊಳ್ಳುವ ಶಕ್ತಿ ಇರುವ ವ್ಯಕ್ತಿಗಳೆಂದು ಪರಿಗಣಿಸುವುದಿಲ್ಲ.
ವಯಸ್ಕರು ಅವರಿಗೆ ಮಾರ್ಗದರ್ಶನ ಮಾಡುವ ಬದಲು, ಅವರ ಜೀವನವನ್ನೇ ನಿರ್ಧರಿಸುವರು.
ಮಕ್ಕಳಿಗೆ ಮತದಾನ ಮಾಡುವ ಹಕ್ಕಿಲ್ಲ,ಅಥವ ರಾಜಕೀಯ ಪ್ರಭಾವ ಇಲ್ಲ, ಆರ್ಥಿಕ ಸ್ವಾತಂತ್ರ ಇಲ್ಲ. ಅನೇಕ ಬಾರಿ ಅವರ ದನಿಯನ್ನು ಕೇಳುವವರೆ ಇರುವುದಿಲ್ಲ.

ವಿಶ್ವ ಮಕ್ಕಳ ದಿನಾಚರಣೆ



20 ನೆ ನವಂಬರ್ ವಿಶ್ವ ಮಕ್ಕಳ ದಿನಾಚರಣೆ . 14 ನೆ ನವಂಬರ್ ಭಾರತದಲ್ಲಿ ಮಕ್ಕಳ ದಿನಾಚರಣೆ


ಪ್ರಪಂಚದಲ್ಲಿ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವರು. ಈ ದಿನವನ್ನು ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣಲು ಆಚರಿಸಲಾಗುವುದು. ಈ ದಿನವನ್ನು ಬಾಲ್ಯದ ಹೆಸರಿನಲ್ಲಿ ಆಚರಿಸಲಾಗುವುದು.

ಮಕ್ಕಳ ದಿನವನ್ನು 1959 ಕ್ಕೆ ಮೊದಲು ಜಗತ್ತಿನಾದ್ಯಂತ ಅಕ್ಟೋಬರ್ ತಿಂಗಳಲ್ಲಿ ಆಚರಿಸುತ್ತಿದ್ದರು. ಈ ದಿನ ವನ್ನು ವಿಶ್ವ ಸಂಸ್ಥೆಯ ಸಾಮಾನ್ಯಸಭೆಯು ತೀರ್ಮಾನಿಸಿದಂತೆ ಪ್ರಥಮ ಬಾರಿಗೆ 1954 ರಲ್ಲಿ ಆಚರಿಸಲಾಯಿತು. ಇದನ್ನು ಮೂಲಭೂತ ಉದ್ಧೇಶ ಸಮುದಾಯದ ವಿನಿಮಯದ ಹೆಚ್ಚಳ ಮತ್ತು ಮಕ್ಕಳ ತಿಳುವಳಿಕೆ ಜಾಸ್ತಿ ಮಾಡುವುದು, ಅಲ್ಲದೆ ಮಕ್ಕಳಿಗೆ ಅನುಕೂಲವಾದ ಕಲ್ಯಾಣ ಕಾರ್ಯಕ್ರಮಗಳನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಆಚರಣೆಯನ್ನು ಪ್ರಾರಂಭಿಸಲಾಯಿತು.


ನವೆಂಬರ್ 20ನ್ನು ವಿಶ್ವ ಮಕ್ಕಳ ದಿನವಾಗಿ ಆರಿಸಲು ಕಾರಣ, ಅದು ವಿಶ್ವ ಸಂಸ್ಥೆಯು ಸಾಮಾನ್ಯ ಸಭೆಯು ಮಕ್ಕಳ ಹಕ್ಕುಗಳ ಘೋಷಣೆಯನ್ನು 1959ರಲ್ಲಿ, ಅಂಗೀಕರಿಸಿದ ದಿನ. ಮಕ್ಕಳ ಹಕ್ಕುಗಳ ಸಮಾವೇಶವು

1989 ರಲ್ಲಿ ಅದಕ್ಕೆ ಸಹಿ ಮಾಡಿತು. ಆಗಿನಿಂದ 191 ದೇಶಗಳು ಇದನ್ನು ಒಪ್ಪಿವೆ.


ಮಕ್ಕಳದಿನಾಚರಣೆಯನ್ನು ವಿಶ್ವಾದ್ಯಂತ 1953, ಅಕ್ಟೋಬರನಲ್ಲಿ ಆಚರಿಸಲಾಯಿತು. ಇದನ್ನು ಜಿನೆವಾದಲ್ಲಿನ ಅಂತರಾಷ್ಟ್ರೀಯ ಮಕ್ಕಳ ಕಲ್ಯಾಣ ಸಮಿತಿಯು ಪ್ರಾಯೋಜಿಸಿತು. ಅಂತರಾಷ್ಟ್ರೀಯ ಮಕ್ಕಳ ದಿನದ ಯೋಜನೆಯು ಶ್ರೀ. ಕೃಷ್ಣ ಮೆನೆನ್ ಅವರಿಂದ ಸೂಚಿಸಿದರು. 1954 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಅದನ್ನು ಅನುಮೋದಿಸಿತು. ನವಂಬರ್ 20 ವಿಶ್ವ ಮಕ್ಕಳ ದಿನ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 1954 ರಲ್ಲಿ ಮಕ್ಕಳ ದಿನಾಚರಣೆ ಮಾಡಲು ಘೋಷಣೆ ಮಾಡಿತು. ಪ್ರಪಂಚದ ಎಲ್ಲ ರಾಷ್ಟ್ರಗಳು ಅದನ್ನು ಆಚರಿಸಲು ಪ್ರೋತ್ಸಾಹಿಸಿತು. ಮಕ್ಕಳಲ್ಲಿ ಪರಸ್ಪರ ವಿನಮಯ ಮತ್ತು ಅರಿವು ಹೆಚ್ಚಿಸಲು, ಮತ್ತು ಮಕ್ಕಳ ಕಲ್ಯಾಣ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಜಗತ್ತಿನಾದ್ಯಂತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು.

ಈಗಾಗಲೇ ತೀಳಿಸಿರುವಂತೆ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಜವಹರಲಾಲ್ ನೆಹರು ಅವರ ಜನ್ಮದಿನವಾದ ನವಂಬರ ೧೪ ರಂದು ಆಚರಿಸಲಾಗುವುದು. ಅಂದು ಮಕ್ಕಳಿಗೆ ಖಷಿಯಿಂದ ಕುಣಿಯುವ ದಿನ, ಬಾಲ್ಯದ ಸೊಗಸು, ಬೆಡಗು , ಬೆರಗು ಮತ್ತು ನೆಹರು ಅವರ ಮಕ್ಕಳ ಮೇಲಿನ ಅಪಾರ ಅಕ್ಕರೆ ಪ್ರೀತಿಯನ್ನು ಸಂಭ್ರಮದಿಂದ ನೆನೆವ ದಿನ. ಭಾರತದಾದ್ಯಂತ “ಮಕ್ಕಳದಿನಾಚರಣೆ “ಯನ್ನು ಬಹು ಸಡಗರ ಮತ್ತು ಸಂಭ್ರಮದಿಂದ ಆಚರಿಸುವರು.

ಮಕ್ಕಳ ದಿನವನ್ನು ಅವರಿಗೆ ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು, ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ. ಆಚರಿಸಲಾಗುವುದು. ನಿಮ್ಮ ಮಕ್ಕಳಿಗೆ ಅದೃಷ್ಟವಶದಿಂದ ತನ್ನಲ್ಲಿರುವುದನ್ನು ಇಲ್ಲದೆ ಇರುವ ಇತರರೊಂದಿಗೆ ಹಂಚಿಕೊಳ್ಳುವುದರ ಮೌಲ್ಯವನ್ನು ತಿಳಿಸಿದರೆ, ಮಗುವು ಹೊಣೆಯರಿತ ಮಾನವನಾಗಿ ಬೆಳೆಯಲು ಅನುವಾಗುವುದು. ಇದರ ಜೊತೆ ಇನ್ನೊಂದು ಮಗುವು ನಿರ್ಲಕ್ಷತೆಯಿಂದ ಬಾಲಾಪರಾಧಿಯಾಗುವುದನ್ನೂ ತಪ್ಪಿಸಿದಂತಾಗುವುದು.ಇದಕ್ಕೆ ಕಾರಣ ನಿಮ್ಮ ಮುಂದಾಲೋಚನೆ ಎಂಬ ತೃಪ್ತಿಯಾಗುವುದು




ಮಕ್ಕಳದಿನಾಚರಣೆಯ ಮಹತ್ವ



ಮಕ್ಕಳದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೆಂದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು. ಈದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು. ಮತ್ತು ಮಕ್ಕಳಿಗೆ ಅವರ ಚಾಚಾ ನಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.


ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ. ಅಲ್ಲದೆ ನೆಹರು ಅವರು ಕೂಡಾ ದೇಶದ ವಿಶೇಷ ಮಗುವೆಂದೆ ಪರಿಗಣಿಸಬಹುದು. ಸ್ವಾತಂತ್ರ ಹೋರಾಟದಲ್ಲಿ ಅಪಾರವಾಗಿ ಬಹುಕಾಲ ಶ್ರಮಿಸಿದವರು. ಆದಕ್ಕೆ ಭಾರತದಲ್ಲಿ 14ನೆ ನವಂಬರ್ ಅನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವರು. ಆ ದಿನ ಭಾರತದ ದಂತ ಕಥೆಯಾದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ ಲಾಲ ನೆಹುರು ಅವರ ಜನ್ಮದಿನ.


ಅವರಿಗೆ ಇರುವ ಮಕ್ಕಳ ಬಗೆಗಿನ ಅಪಾರ ಪ್ರೇಮದ ಪ್ರತೀಕವಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.


ಈದಿನ ನಾವು ಮಕ್ಕಳ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿ ಬದ್ಧತೆಯಿಂದ ಚಾಚಾ ನೆಹರೂ ಅವರ ಕನಸಿನಂತೆ ಮಕ್ಕಳು ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವಾಗುವಂತೆ ಮಾಡಬೇಕು.
ಹೀಗಿರಲಿ ಮಕ್ಕಳ ಆಟಿಕೆ



ಮಕ್ಕಳಿರಲವ್ವ ಮನೆ ತುಂಬ” ಎನ್ನುವುದು ಒಂದು ಜಾನಪದ ರೂಢಿಯ ಮಾತು. “ನಾವಿಬ್ಬರು ನಮಗಿಬ್ಬರು” ಎನ್ನುವುದು ಇಂದಿನ ಆಧುನಿಕ ಶಿಕ್ಷಿತ ಜಗತ್ತಿನ ಒಂದು ಮಂತ್ರ ವಾಕ್ಯ. ಮಕ್ಕಳ ಮನೋರಂಜನೆಗೆ, ಬೌದ್ಧಿಕ ಮನೋ ವಿಕಾಸಕ್ಕೆ, ದೈಹಿಕ ಬೆಳವಣಿಗೆಗೆ ಆಟಿಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಶಹರಗಳಲ್ಲಿ ಕೊಳ್ಳು ಬಾಕ ಸಂಸ್ಕøತಿಯು ತಲೆ ಎತ್ತಿರುವ ಕಾರಣ ಮಕ್ಕಳಿಬ್ಬರಿರಲಿ, ಮೂವರಿರಲಿ, ಒಂದೇ ಮಗುವಿರಲಿ ಶಾಪಿಂಗ್ ಮಾಲ್ ಗಳಲ್ಲಿ ಕಂಡ ಕಂಡ ಆಟಿಕೆಗಳನ್ನು ಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.


ಯಾವ ರೀತಿಯ ಆಟಿಕೆಗಳನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳಬೇಕು? ಎನ್ನುವುದರ ಬಗ್ಗೆ ಚರಕಾಚಾರ್ಯರು “ಚರಕ ಸಂಹಿತೆ” ಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.


“ಕ್ರೀಡನಕಾನಿ ಖಲು ಕುಮಾರಸ್ಯ ವಿಚಿತ್ರಾಣಿ ಘೋಷಮಂತ್ಯಭಿರಾಮಾಣಿ ಚಾಗ್ರರೂಣಿ ಚಾತೀಕ್ಷ್ಣಾಗ್ರಾಣಿ ಚಾನಾಸ್ಯ ಪ್ರವೇಶೀನಿ ಚಾಪ್ರಾಣ ಹರಾಣಿ ಚಾವಿತ್ರಾಸನಾನಿ ಸ್ಯು||”


ವಿಚಿತ್ರಾಣಿ: ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು. ಉದಾರಹರಣೆಗೆ, ಆನೆ, ಹುಲಿ, ಕುದುರೆ, ನಾಯಿ ಇತ್ಯಾದಿ ಪ್ರಾಣಿಗಳನ್ನು ಹೋಲುವಂಥದ್ದಾಗಿರಬೇಕು. ಚಿಕ್ಕ ಚಿಕ್ಕ ಚೆಂಡುಗಳು ವಿವಿಧ ರೀತಿಯ ಟೆಡ್ಡಿಬೇರ್ ಗೊಂಬೆಗಳೂ ಕೂಡ ಮಕ್ಕಳಿಗೆ ಉತ್ತಮ ಆಟಿಕೆ ವಸ್ತುಗಳು.


ಘೋಷವಂತಿ: ಮಕ್ಕಳ ಕಿವಿಗೆ ಹಾನಿಯನ್ನುಂಟುಮಾಡದ ರೀತಿಯಲ್ಲಿ ಶಬ್ದ ಮಾಡುವಂತಿರಬೇಕು. ಅತಿ ಹೆಚ್ಚು, ಅತಿ ಕಡಿಮೆ ಅಥವಾ ಕಿವಿಗಡಚಿಕ್ಕುವ ಕರ್ಕಶ ಶಬ್ದವನ್ನುಂಟು ಮಾಡಬಾರದು.


ಅಭಿರಾಮಾಣಿ: ಆಟಿಕೆಗಳು ನೋಡಲು ಸುಂದರವಾಗಿರಬೇಕು ಮಕ್ಕಳನ್ನು ಆಕರ್ಷಿಸುವಂತಿರಬೇಕು.


ಅಗ್ರರೂಣಿ: ಆಟಿಕೆಗಳು ಹಗುರವಾಗಿರಬೇಕು. ಮಕ್ಕಳು ಅನಾಯಾಸವಾಗಿ ಹಿಡಿದು ಆಡಲು ಅನುಕೂಲವಾಗುವಂತಿರಬೇಕು.


ಅತೀಕ್ಷ್ಣಾಗ್ರಾಣಿ: ಆಟಿಕೆಗಳ ತುಡಿಗಳು ಮೊನಚಾಗಿರಬಾರದು ಆಡುವ ಸಮಯದಲ್ಲಿ ಮೊನಚಾಗಿದ್ದರೆ ಮಕ್ಕಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು.


ಅನಾಸ್ಯ ಪ್ರವೇಶೀನಿ: ಮಕ್ಕಳು ಆಟಿಕೆಗಳನ್ನು ಬಾಯಿಯೊಳಗೆ ಹಾಕಿಕೊಳ್ಳುವಂತಿರಬಾರದು. ಯಾವುದೇ ವಸ್ತುಗಳು ಸಿಕ್ಕಾಗಲೂ ಕೂಡ ಆಡುತ್ತಾ ಬಾಯಿಯೊಳಗೆ ಇಟ್ಟುಕೊಳ್ಳುವಂಥದ್ದು ಮಕ್ಕಳ ಸಹಜ ಸ್ವಭಾವ. ಇತ್ತೀಚಿನ ದಿನಗಳಲ್ಲಿ ಕೆಲವು ಆಟಿಕೆಗಳನ್ನು ಸೀಸ ಹಾಗೂ ಇತರೇ ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ. ಇವುಗಳ ಸೇವನೆಯಿಂದ ಕೆಲವು ಶ್ವಾಸಕೋಶ ಸಂಬಂಧಿ, ಜೀರ್ಣಕ್ರಿಯೆ ಸಂಬಂಧಿ ಹಾಗೂ ಚರ್ಮದ ಸೋಂಕುಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.


ಅಪ್ರಾಣ ಹರಾಣಿ: ಮಕ್ಕಳ ಆಟಿಕೆಗಳು ಮೃತ್ಯುವನನ್ನು ಆಹ್ವಾನಿಸುವಂತಿರಬಾರದು, ಇದರಿಂದ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯುಂಟಾಗಬಾರದು.


ಅವಿತ್ರಾಸನಾನಿ: ಆಟಿಕೆಗಳು ಭಯಾನಕವಾಗಿರಬಾರದು. ಮಕ್ಕಳನ್ನು ಹೆದರಿಸುವಂತಿರಬಾರದು, ಕ್ರೂರವಾಗಿರಬಾರದು.


ಈ ರೀತಿ ಮಕ್ಕಳ ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು




ಮಕ್ಕಳ ಓದಿಗೆ






ದಶಕಗಳೇ ಕಳೆದವು! ಮಕ್ಕಳು ಅಜ್ಜ ಅಜ್ಜಿಗಳಿಂದ ದೂಋವಾಗತೊಡಗಿ, ಚಿಕ್ಕಪ್ಪ ಚಿಕ್ಕಮ್ಮಗಳಿಂದ ಸಂಬಂಧಗಳು ಮುಸಕಾಗತೊಡಗಿ, ಮೊದಲ ಬೆಸ್ಟ್ ಫ್ರೆಂಡ್ ಗಳಾದ 'ಕಸಿನ್' ಗಳ ಜೊತೆ ಇಲ್ಲವಾಗತೊಡಗಿ...! ನಾವು ಕಂಡುಕೊಂಡದ್ದು ನಮ್ಮ ಮಕ್ಕಳು ಕಾಣುತ್ತಿಲ್ಲ. "ನಮಗೆ ಸಿಗದ ಸೌಲಭ್ಯಗಳು ಮಕ್ಕಳಿಗೆ ಸಿಗಲಿ" ಎಂಬ ಮಹಾಕ್ಲೀಷೆಯ ವಾಕ್ಯ ಎರಡನೆಯ ತಲೆಮಾರನ್ನು ದಾಟತೊಡಗಿದೆ. ತಂದೆ ತಾಯಿಗಳು ಮಕ್ಕಳನ್ನು ಅಗತ್ಯಕ್ಕಿಂತ ತೀರಾ ಹೆಚ್ಚು ಸುರಕ್ಷತೆಯ ವಾತಾವರಣದಲ್ಲಿ ಬೆಳೆಸತೊಡಗಿದ್ದಾರೆ. ಬದಲಾದ ಕಾಲಮಾನದಲ್ಲಿ ಅನಿವಾರ್ಯವೆಂಬಂತೆ ಈಗಿನ ಮಕ್ಕಳು ನಮ್ಮಂತೆ ಹೊರಗೆ ಆಟವಾಡಲು ಹೋಗುವುದಿಲ್ಲ. ಇತರ ಮಕ್ಕಳೊಡನೆ ಬೆರೆಯದೇ ಭಾಷೆ ಮತ್ತು ಬೌದ್ಧಿಕ ವಿಕಾಸ ಸಾಧ್ಯವಿಲ್ಲ. ಹಾಗಾಗಿ ಈಗ ಅತೀ ಚಿಕ್ಕ ವಯಸ್ಸಿಗೇ ಮಕ್ಕಳನ್ನು ಪ್ರಿ ನರ್ಸರಿ ಅಥವಾ ಪ್ರೇಗ್ರೂಪ್ ಗೆ ಸೇರಿಸಲಾಗುತ್ತಿದೆ. ಒಬ್ಬಂಟಿಯಾಗಿ ಬೆಳೆಯುವ ಮಗುವಿಗಿಂತ ಪ್ಲೇಗ್ರೂಪ್ ನಲ್ಲಿ ಆಡಿ ಬೆಳೆಯುವ ಮಗು ಹಲವು ಪಟ್ಟು ವೇಗವಾಗಿ ಬೌದ್ಧಿಕ ಬೆಳವಣಿಗೆ ಹೊಂದುತ್ತದೆ ಎಂಬುದು ನಿಜ. ಸಣ್ಣ ಕುಟುಂಬಗಳಿಗೆ ವರದಾನವಾಗಿ ಪರಿಣಮಿಸಿರುವ ಈ ಪ್ರೇಹೋಮ್ ಗಳು ಇನ್ನೊಂದು ರೀತಿಯಲ್ಲಿ ಹಣ ಮಾಡುವ ದಂಧೆಯಾಗಿ ಬದಲಾಗುತ್ತಿರುವುದೂ ಹೌದು!


ಮಕ್ಕಳನ್ನು ತಂದೆ ತಾಯಿಗಳು ಪ್ಲೇಹೋಮ್ ಗಳಿಗೆ ಸೇರಿಸುವ ಮೊದಲ ಉದ್ದೇಶವೆಂದರೆ ಮಕ್ಕಳ ಕಿರಿಕಿರಿಯಿಂದ ಬಿಡುಗಡೆಯಾಗಬಯಸುವುದು. ಮೊದಲಾದರೆ ಜೊತೆಗೆ ಆಡಲು ಅಜ್ಜ ಅಜ್ಜಿ ಮತ್ತಿತರೆ ಸಂಬಂಧಿಗಳಿರುತ್ತಿದ್ದರು. ಆಡಲು ಅಕ್ಕಪಕ್ಕದ ಮನೆಯ ಗೆಳೆಯರಿರುತ್ತಿದ್ದರು. ಈಗ ತಂದೆ ತಾಯಿಗಳಿಬ್ಬರೂ ದುಡಿಯುತ್ತಿರುವುದರಿಂದ ಮಕ್ಕಳು ಒಂಟಿಯಾಗಿಬಿಡುತ್ತವೆ. ಶಾಲೆಗೆ ಹೋಗಿಬಂದ ನಂತರ ಸ್ಕೇಟಿಂಗ್ ಟೆನ್ನಿಸ್ ಇತ್ಯಾದಿ ಆಟದ ಕ್ಲಬ್ ಗಳಿಗೆ ಸೇರಿಸುತ್ತಾರೆ. ಅಲ್ಲಿಗೆ ದೈಹಿಕ ಮಾನಸಿಕ ವಿಕಾಸಕ್ಕೇ ತಕ್ಕಷ್ಟು ಕ್ರಮ ಕೈಗೊಂಡಿದ್ದೇವೆ ಎಂದು ನಿರಾಳರಾಗುತ್ತಾರೆ!


ತಂದೆ ತಾಯಿಗಳು ಮಕ್ಕಳಿಗಾಗಿ ಸಾಕಷ್ಟು ಸಮಯ ಕೊಡಬೇಕು. ಮಕ್ಕಳಿಗಾಗಿಯೇ ಹಣ ಗಳಿಸಲು ಶ್ರಮ ಪಡುತ್ತಿದ್ದೇವೆ ಎಂದ ಮೇಲೆ ಒಂದಷ್ಟು ಸಮಯವನ್ನು ಅವರೊಟ್ಟಿಗೆ ಕಳೆಯಲು ಮಾಡಿಕೊಳ್ಳಬಾರದೆ? ಬರೀ ಹಣದಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುವುದಿಲ್ಲ. ರಜೆ ಬರುತ್ತಿದ್ದಂತೆ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲಾಗುತ್ತದೆ. ಶಿಬಿರಗಳು ಒಳ್ಳೆಯವೇ ಆದರೂ ಎರಡು ತಿಂಗಳ ಸಮಯಾವಕಾಶ ಮಕ್ಕಳನ್ನು ಸೋಮಾರಿಗಳಾಗಿಸಲು, ವಿದ್ಯೆಯಿಂದ ದೂರವಿರಿಸಲು ಸಾಕಷ್ಟು ಅವಕಾಶ ಕೊಡುತ್ತದೆ. ಆದ್ದರಿಂದ ಮಕ್ಕಳಲ್ಲಿ ಶಿಸ್ತುಬೆಳೆಸಲು ತಾಯಂದಿರು ಗಮನ ಕೊಡಬೇಕು. ರಜೆ ಇದ್ದರೂ ಇಲ್ಲದಿದ್ದರೂ ಬೆಳಿಗ್ಗೆ ಸರಿಯಾದ ಸಮಯಕ್ಕೆ ಎಬ್ಬಿಸಿ ನಿತ್ಯಕರ್ಮಗಳನ್ನು ಸ್ವತಃ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳ ಜೊತೆ ಸಂಜೆ ಒಂದೆರಡು ಗಂಟೆ ಕೂತು ಓದಿಸಬೇಕು. ಓದುವಷ್ಟು ಮಗು ದೊಡ್ಡದಾಗಿರದಿದ್ದರೆ ಮಗ್ಗಿಯನ್ನೋ, ಕಾಗುಣಿತಗಳನ್ನೋ ಹೇಳಿಕೊಡಬೇಕು. ಮಲಗುವ ಮುಂಚೆ ಸಾಕಷ್ಟು ಹೊತ್ತು ಕಥೆ ಹೇಳುವುದರಲ್ಲೋ ಅಥವಾ ಲೌಕಿಕ ವಿಷಯಗಳನ್ನು ಮಾತನಾಡುವುದರಲ್ಲೋ ವ್ಯಯಿಸಬೇಕು. ಮಗುವು ದೈಹಿಕ ಆಟಗಳಲ್ಲಿ ತೊಡಗಿಕೊಂಡರೆ ದಣಿದು ಚೆನ್ನಾಗಿ ನಿದ್ದೆ ಮಾಡುತ್ತವೆ. ನಿದ್ದೆ ಮಗುವಿನ ದೈಹಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಸಾಧ್ಯವಾದಷ್ಟು ಮಗು ಬೆಳಿಗ್ಗೆ ಏಳುವುದರೊಳಗೆ ಕೆಲಸ ಮುಗಿಸಿಕೊಂಡರೆ ಮಗುವಿನ ಕಲಿಕೆಗೆ ಗಮನ ಕೊಡಬಹುದು. ಮದ್ಯಾಹ್ನದ ಹೊತ್ತು ಮಗು ಮಲಗಿದಾಗ ತಾಯಿಯೂ ಕೊಂಚ ವಿಶ್ರಾಂತಿ ಪಡೆದು ಉಳಿದ ಕೆಲಸಗಳನ್ನು ಮಾಡಿಕೊಳ್ಳಬಹುದು. ಕೆಲಸದ ಬಾಹುಳ್ಯದ ಕಾರಣ ತಂದೆ ತಾಯಿಗಳು ಮಕ್ಕಳಿಗೆ ಕಾರ್ಟೂನನ್ನೋ ಪೋಗೋ ದಂತಹ ಚಾನೆಲ್ಲನ್ನೋ ಹಾಕಿ ಕೂರಿಸಿಬಿಡುತ್ತಾರೆ. ಇದು ಮಗುವಿನ ದೈಹಿಕ ಬೆಳವಣಿಗೆಗೆ ಅಡ್ಡಿ ತರುತ್ತದೆ. ಮಗು ಟಿ ವಿ ಯಿಂದ ದೂರ ಇದ್ದಷ್ಟೂ ಒಳ್ಳೆಯದು.


ಮಗುವಿನ ಬೆಳವಣಿಗೆ ತಂದೆ ತಾಯಿಗಳಿಗೆ ಹಣ ಮತ್ತು ಟಿವಿಗಿಂತ ಹೆಚ್ಚು ಸುಖ ಕೊಡುತ್ತದೆ ಎಂಬುದನ್ನು ಮರೆಯಬಾರದು. ಮಗುವಿನ ತುಂಟಾಟ,ಮುಗ್ಧತೆ, ಮುದ್ದಾದ ಮಾತುಗಳು ಕೊಡುವ ಖುಷಿಯನ್ನು ಜಗತ್ತಿನ ಯಾವ ದೌಲತ್ತೂ ಸಹ ಕೊಡಲಾಗದು. ಇವುಗಳನ್ನು ನೋಡಿ ಜೀವನದ ಸಂಪೂರ್ಣ ಆನಂದವನ್ನು ಪಡೆಯಬೇಕು. ಏಕೆಂದರೆ ಒಮ್ಮೆ ಮಗು ಹದಿಹರೆಯಕ್ಕೆ ಕಾಲಿಟ್ಟರೆ ಹೊಸ ಜಗತ್ತಿಗೆ ತೆರೆದುಕೊಂಡು ವಸ್ತುತವಾಗಿ ತಂದೆತಾಯಿಗಳಿಂದ ದೂರವಾಗತೊಡಗುತ್ತದೆ. ಮಕ್ಕಳ ಪೋಷಣೆಯನ್ನು ಹೊರೆಯೆಂಬಂತೆ ನೋಡದೇ ಆ ಮಗುವಿನ ಜೊತೆ ಆಟದಲ್ಲಿ ಕಳೆಯುವ ಸಮಯ ಕೊಡುವ ದೈವಿಕ ಆನಂದವನ್ನು ಅನುಭವಿವುವುದರಲ್ಲಿ ತಾಯ್ತನದ ಸಾರ್ಥಕ್ಯವಿದೆ ಎಂಬುದನ್ನು ಅರಿಯಬೇಕು.


ಶಾಲೆಗಳು ಶುರುವಾಗಿ ಇನ್ನೂ ಹದಿನೈದು ದಿನಗಳಾಗಿವೆ. ಮಕ್ಕಳನ್ನು ಓದಿಗೆ ಹದಗೊಳಿಸಲು ಇದು ಸರಿಯಾದ ಸಮಯ. ಇದೊಂದು ಸಮಯದಲ್ಲಿ ಸರಿಯಾದ ಶಿಸ್ತನ್ನು ಮಕ್ಕಳಿಗೆ ರೂಢಿಸಿಬಿಟ್ಟರೆ ಕೆಲಸದ ಒತ್ತಡದಲ್ಲಿರುವ ತಾಯ್ತಂದೆಯರಿಗೆ ಯಾವುದೇ ತೊಂದರೆ ಕೊಡದೆ ಮಕ್ಕಳು ತಮ್ಮ ಓದಿನಲ್ಲಿ ಮುಂದುವರಿಯುತ್ತವೆ.


ಮಕ್ಕಳು ಮದ್ಯಾಹ್ನ ಮೂರು ಗಂಟೆಗೆಲ್ಲ ಶಾಲೆಯನ್ನು ಮುಗಿಸಿಕೊಂಡು ಮನೆಗೆ ಬಂದಿರುತ್ತವೆ. ಬರುತ್ತಿದ್ದಂತೆ ಓದಿಗೋ ಟಿವಿಯ ಮುಂದೋ ಕೂರಿಸಬಾರದು. ಮೊದಲು ಪೌಷ್ಟಿಕವಾದ ಆಹಾರ,ಹಾಲು ಕೊಟ್ಟು ಕೊಂಚ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಬೇಕು. ಒಂದು ಅರ್ಧ ಗಂಟೆ ನಿದ್ದೆ ಮಾಡಿದರೂ ಸರಿಯೆ! ಪೌಷ್ಟಿಕ ಆಹಾರದಲ್ಲಿ ಮೆಕ್ ಡೊನಾಲ್ಡ್, ಪಿಜ್ಜಾ ಸಮೋಸಗಳು ಕಡಿಮೆ ಇದ್ದಷ್ಟೂ ಒಳ್ಳೆಯದು. ನಿದ್ದೆಯಾದ ಮೇಲೆ ಇಳಿಸಂಜೆಯಲ್ಲಿ ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಒಂದೆರಡು ತಾಸು ದೇಹವನ್ನು ತಣಿಸುವ ಆಟಗಳು. ಆಟಕ್ಕೆ ಅಕ್ಕಪಕ್ಕದ ಮನೆಯ ಮಕ್ಕಳಿದ್ದರೂ ಸರಿ. ಇತ್ತೀಚಿನ ದಿನಗಳಲ್ಲಿ ಅಕ್ಕಪಕ್ಕದ ಮಕ್ಕಳು ಆಟಕ್ಕೆ ಸಿಗುವುದು ಅಪರೂಪವಾದ ಕಾರಣ ಪಾರ್ಕಿಗೋ ಆಟದ ಮೈದಾನಕ್ಕೋ ಕರೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಮಗುವನ್ನು ಆಡಲು ಬಿಟ್ಟು ಒಂದಿಷ್ಟು ಹೊತ್ತು ಹಿರಿಯರು ವಾಕಿಂಗ್ ಹೋಗಿ ತಮ್ಮ ಮನಸ್ಸನ್ನೂ ದೇಹವನ್ನೂ ಪ್ರಫುಲ್ಲಿತಗೊಳಿಸಿಕೊಳ್ಳಬಹುದು. ಒಂದಿಷ್ಟು ದೊಡ್ಡ ಹುಡುಗರಾದರೆ ತಾವೇ ಹೋಗಿ ಆಟ ಆಡಿಕೊಂಡು ಬರುತ್ತವೆ. ಆಟದಿಂದ ಮನೆಗೆ ಬರುವ ಸಮಯವನ್ನು ಸರಿಯಾಗಿ ಪಾಲಿಸುವಂತೆ ಪೋಷಕರು ನೋಡಿಕೊಳ್ಳಬೇಕು.


ಮನೆಯಲ್ಲಿ ಓದಲು ಕೂತಾಗ ಟಿವಿ ಆಫ್ ಆಗಿರಲಿ. ಓದುವುದಕ್ಕಾಗಿ ಯಾವುದೇ ಕಾರ್ಟೂನನ್ನು ತೋರಿಸುವ ಆಮಿಷ ಬೇಡ ಅಥವಾ ತಿಂಡಿ ಚಾಕಲೇಟುಗಳ ಆಮಿಷವೂ ಸಲ್ಲದು! ಮಕ್ಕಳು ಓದುವಾಗ ನಿಮಗ ಅರ್ಥವಾಗಲಿ ಬಿಡಲಿ ಪಕ್ಕಕ್ಕೆ ಕೂರಬೇಕು. ಅರ್ಥವಾಗುವಂತಿದ್ದರೆ ಸಾಧ್ಯವಾದಷ್ಟು ಹೇಳಿಕೊಡಬೇಕು. ಎಷ್ಟೋ ಬಾರಿ ತಾಯ್ತಂದೆಯರಿಗೆ ಮಕ್ಕಳ ಪಾಟಗಳು ಅರ್ಥವಾಗುವುದಿಲ್ಲ. ಆಗ ನುರಿತ ಶಿಕ್ಷಕರ ಬಳಿ ವಾರಕ್ಕೆ ಒಂದೆರಡು ದಿನ ಮನೆ ಪಾಠಕ್ಕೆ ಕಳುಹಿಸಬಹುದು. ಮನೆಪಾಠ ಕಡಿಮೆ ಇದ್ದಷ್ಟೂ ಒಳ್ಲೆಯದು. ಮಗುವಿಗೆ ಹೇಳಿಕೊಡಲು ಸಾಧ್ಯವಾದಗ ವಿಷಯಗಳಿಗಷ್ಟೇ ಮನೆಪಾಠಕ್ಕೆ ವ್ಯವಸ್ಥೆ ಮಾಡಬೇಕು. ಏಕೆಂದರೆ ಎಷ್ಟೇ ಒಳ್ಳೆಯ ಶಾಲೆಯಾಗಲಿ, ಮನೆಪಾಠವಾಗಲಿ ಹಲವಾರು ಮಕ್ಕಳಿರುವುದರಿಂದ ಒಂದು ಮಗುವಿಗೆ ಗಮನ ನೀಡಿ ಹೇಳಿಕೊಡಲು ಸಾಧ್ಯವಾಗುವುದಿಲ್ಲ. ತಮ್ಮ ಮಗುವಿನ ದೌರ್ಬಲ್ಯಗಳನ್ನು ಅರಿಯುವುದು ಮತ್ತದಕ್ಕೆ ಮದ್ದು ನೀಡುವುದು ತಂದೆತಾಯಂದಿರಿಂದ ಮಾತ್ರ ಸಾಧ್ಯ.


ಮಕ್ಕಳು ಮೊದಮೊದಲು ಜೋರಾಗಿ ಓದುವಂತೆ ಪ್ರೇರೇಪಿಸಬೇಕು, ನಂತರ ಮನಸ್ಸಲ್ಲೇ ಓದಿಕೊಳ್ಳುವ ಅಭ್ಯಾಸ ಮಾಡಿಸಬೇಕು. ತಂದೆ ತಾಯಿಗಳಿಗೆ ಇಂತಹ ವಿಷಯ ಗೊತ್ತಿಲ್ಲ ಎಂಬುದು ಮಕ್ಕಳಿಗೆ ಗೊತ್ತಾಗುವ ಹಾಗೆ ನಡೆದುಕೊಳ್ಳಬಾರದು. ಮಕ್ಕಳು ತಮ್ಮ ಬಳಿ ಶಾಲೆಯ ಮತ್ತು ಮನೆಪಾಠದ ವಿಷಯಗಳನ್ನು ಸಾಧ್ಯವಾದಷ್ಟು ಹಂಚಿಕೊಳ್ಳುವಂತೆ ಹೇಳಬೇಕು. ಇದರಿಂದ ಮಕ್ಕಳು ಯಾವ ಕ್ಷೇತ್ರದಲ್ಲಿ ಹಿನ್ನಡೆಯನ್ನನುಭವಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಅಲ್ಲದೇ ಮಕ್ಕಳೊಡನೆ ಯಾವುದಾದರೂ ಅಹಿತಕರ ಘಟನೆ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ. ಹಾಗೆಯೇ ಮಕ್ಕಳಿಗೆ ತಮ್ಮ ಕಷ್ಟ ಕೇಳುವವರು ಈ ಜಗತ್ತಿನಲ್ಲಿ ಇದ್ದಾರೆ ಎಂಬ ಸುರಕ್ಷಿತ ಭಾವನೆಯೂ ಮೂಡುತ್ತದೆ. ಎಲ್ಲಾ ಮಕ್ಕಳೂ ಒಂದೇ ವೇಗದಲ್ಲಿ ಕಲಿಯುವುದಿಲ್ಲ. ಕಡಿಮೆ ವೇಗದಲ್ಲಿ ಕಲಿಯುವ ಮಕ್ಕಳ ತಂದೆತಾಯಿಗಳಿಗೆ ಹೆಚ್ಚು ತಾಳ್ಮೆ ಇರಬೇಕಾಗುತ್ತದೆ. ಅವರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಮಕ್ಕಳು ಹಿಂದಿರುವ ವಿಷಯದ ಬಗ್ಗೆ ಶಿಕ್ಷಕರೊಡನೆ ಚರ್ಚಿಸಿ ಆ ವಿಷಯವಾಗಿ ಮನೆಯಲ್ಲಿ ಹೇಗೆ ಹೆಚ್ಚು ಗಮನ ನೀಡಬೇಕೆಂಬುದನ್ನು ತಿಳಿದುಕೊಂಡು ಅದನ್ನು ಅನುಸರಿಸಬೇಕು. ಮಕ್ಕಳು ತಾವೇ ಓದಿಕೊಳ್ಳುವಷ್ಟು ದೊಡ್ಡವರಾದ ಮೇಲೆ ಪಕ್ಕದಲ್ಲಿ ಮನೆ ಹಿರಿಯರೂ ತಾವೂ ಯಾವುದೋ ಒಂದು ಒಳ್ಳೆಯ ಪುಸ್ತಕವನ್ನೋ, ಪತ್ರಿಕೆಯನ್ನೋ ಓದುತ್ತಾ ಕುಳಿತು ಮಕ್ಕಳಿಗೆ ಓದುವುದರಲ್ಲಿ ಕಂಪನಿ ಕೊಡಬೇಕು. ತಾವು ಟಿ ವಿ ನೋಡುತ್ತಾ ಮಕ್ಕಳಿಗೆ ಓದುವಂತೆ ಬೈಯುವುದು ಅತ್ಯಂತ ಅಪಾಯಕಾರಿ. ಇದು ಮಕ್ಕಳಿಗೆ ಏಕಾಗ್ರತೆ ಕೆಡಲು ಮತ್ತು ತಾಯ್ತಂದೆಯರ ಬಗ್ಗೆ ಅಸಡ್ಡೆ ಮೂಡಲೂ ಕಾರಣವಾಗುತ್ತದೆ. ಪರೀಕ್ಷೆಗಾಗಿ ಶಿಕ್ಷಕರು ಬರೆಸುವ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಿಸಬಾರದು. ಪಾಠದಲ್ಲಿರುವ ಮುಖ್ಯವಾದ ಅಂಶಗಳನ್ನು ಗುರುತಿಸುವುದನ್ನು ಹೇಳಿಕೊಡಬೇಕು. ಅವುಗಳನ್ನು ಪೆನ್ಸಿಲ್ ಮೂಲಕ ಗುರುತಿಸಿ ಪರೀಕ್ಷೆಯ ಸಮಯದಲ್ಲಿ ಹೆಚ್ಚು ಗಮನ ನೀಡಿ ಓದುವಂತೆ ಹೇಳಬೇಕು.


ಪಠ್ಯದಲ್ಲಿರುವ ವಿಷಯವಲ್ಲದೇ ಪಠ್ಯಕ್ಕೆ ಪೂರಕವಾದ ಇತರ ಮಾಹಿತಿಯನ್ನು ಇಂಟರೆ ನೆಟ್ ಮೂಲಕ ಅಥವಾ ಪತ್ರಿಕೆಗಳ ಮೂಲಕ ತಿಳಿದುಕೊಂಡು ಮಕ್ಕಳಿಗೆ ವಿವರಿಸಬೇಕು. ಆಗ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚುತ್ತದೆ. ಈ ವಿಷಯವಾಗಿ ಎಲ್ಲರೊಡನೆ ಚರ್ಚಿಸುವ ಅವಕಾಶ ಕೊಡಬೇಕು. ಮಕ್ಕಳಿಗೆ ಇಂಟರ್ ನೆಟ್ ಬ್ರೌಸಿಂಗ್ ಮಾಡುವ ಅಭ್ಯಾಸವಿದ್ದರೆ ಅವರು ಬಳಸುವ ಕಂಪ್ಯೂಟರನ್ನು ಅವರ ಕೋಣೆಯಲ್ಲಿ ಇರಿಸದೇ ಯಾವಾಗಲೂ ಎಲ್ಲರಿಗೂ ಕಾಣುವಂತೆ ನಡುಮನೆಯಲ್ಲಿ ಇಟ್ಟಿರಬೇಕು. ಇದರಿಂದ ಅನೈತಿಕ ಯೋಚನೆಗಳನ್ನು ಬಿತ್ತುವ ಜಾಲತಾಣಗಳನ್ನು ಮಕ್ಕಳಿಂದ ದೂರ ಇಡಲು ಸಹಾಯವಾಗುತ್ತದೆ. ಈಗ ಮಕ್ಕಳ ಜಗತ್ತು ದೊಡ್ಡದಾಗುತ್ತಿದೆ. ದಶಕಗಳ ಹಿಂದಿನ ಮಕ್ಕಳು ಜಗತ್ತಿಗೆ ತೆರೆದುಕೊಳ್ಳುವುದಕ್ಕಿಂತ ಬಹಳ ಚಿಕ್ಕ ವಯಸ್ಸಿನಲ್ಲಿ ಈಗಿನ ಮಕ್ಕಳು ಜಗತ್ತಿಗೆ ತೆರೆದುಕೊಳ್ಳುತ್ತಾರೆ. ಜೀವನದ ವೇಗ ಹೆಚ್ಚಿದೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ತಾಯ್ತಂದೆಯರು ಮಾಡಿಕೊಳ್ಳಬೇಕು ಹಾಗೂ ಮಕ್ಕಳನ್ನು ಅಣಿಗೊಳಿಸಬೇಕು!