ಸುಭಾಷ್ ಚಂದ್ರ ಬೋಸ್ -ಜನ್ಮ ದಿನಾಚರಣೆ.


ಸುಭಾಷ್ ಚಂದ್ರ ಬೋಸ್ -ಜನ್ಮ ದಿನಾಚರಣೆ.
ಜನನ ಜನವರಿ ೨೩,೧೮೯೭,ಕಟಕ್, ಒರಿಸ್ಸಾ
ಮರಣ ಆಗಸ್ಟ್ ೧೮, ೧೯೪೫
ಟೈಪೈ, ಟೈವಾನ್ (ಸಂಭಾವಿತ)
ಮರಣದ ಕಾರಣ ವಿಮಾನ ಅಪಘಾತ (ಸಂಭಾವಿತ)
ಇದಕ್ಕೆ ಪ್ರಸಿದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ರಾಷ್ಟ್ರೀಯ ಸೇನೆ
ಶೀರ್ಷಿಕೆ ನೇತಾಜಿ, ಆಜಾದ್ ಹಿಂದ್ ಮುಖ್ಯಸ್ಥ
ರಾಜಕೀಯ ಪಕ್ಷ ಫಾರ್ವರ್ಡ್ ಬ್ಲಾಕ್
ಧರ್ಮ ಹಿಂದು
ಸಂಗಾತಿ(ಗಳು) ಎಮಿಲಿ ಶೆಂಕ್ಲ್
ಮಕ್ಕಳು ಅನಿತ ಬೋಸ್ ಫಾಫ್.
ಸುಭಾಷ್ ಚಂದ್ರ ಬೋಸ್ (সুভাষ চন্দ্র বসু; ಜನನ: ಜನವರಿ ೨೩, ೧೮೯೭ — ಮರಣ (ಸಂಭಾವಿತ): ಆಗಸ್ಟ್ ೧೮, ೧೯೪೫) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.
●ಜನನ, ಜೀವನ
ಸುಭಾಷ್‌ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು, ಒರಿಸ್ಸಾದ ಕಟಕ್‌ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ೯ ಮಕ್ಕಳಲ್ಲಿ ಸುಭಾಷ್ ೬ನೇ ಯವರು.ಕಟಕ್‌ನಲ್ಲಿ ರ‍್ಯಾವೆನ್‌ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್‌ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗ!
೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್!
೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ.೧೯೨೧ರ ಆಗಸ್ಟ್‌ನಿಂದ ಚಿತ್ತರಂಜನ್‌ದಾಸ್‌ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ’ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
●ರಾಷ್ಟ್ರ ನಿರ್ಮಾಣದ ಜವಾಬ್ದಾರಿ.
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.
ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ.
ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರು ಬೋಸ್.
●ಸ್ವರಾಜ್ಯಪಕ್ಷ ಸ್ಥಾಪನೆ
ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್‌ದಾಸ್‌ರಿಂದ ’ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್‌ರು ದಾಸ್‌ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್‌ನಿಂದ ದಾಸ್‌ರು ಸ್ಥಾಪಿಸಿದ್ದ ’ಫಾರ್ವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್‌ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್‌ರ ಬಂಧನ, ಬಿಡುಗಡೆ.
೧೯೨೭ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ.
ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ.
●ರಾಜಕೀಯ ಅನುಭವ-ಒಳನೋಟ
ಕಾಂಗ್ರೆಸ್‌ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವ-ಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್‌ನ ’ಸಂಘ ಶಿಕ್ಷಾವರ್ಗ’ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಸಂಘದ ಧ್ಯೇಯ – ಅನುಶಾಸನ ಕಾರ‍್ಯಪದ್ಧತಿ ಕುರಿತ ಶ್ಲಾಘನೆ.
ಆದರೆ ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ.ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್‌ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ.
’ಫಾರ್‌ವರ್ಡ್ ಬ್ಲಾಕ್’ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ|| ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ|| ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ|| ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ’ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ!
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ. ’ಫ್ರೀ ಇಂಡಿಯಾ ಸೆಂಟರ್’ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ಬೋಸರಿಗೆ ’ನೇತಾಜಿ’ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ.
●ಆಜಾದ್ ಹಿಂದ್ ಸೇನೆ.
ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ  ಇಂಡಿಯನ್ ನ್ಯಾಷನಲ್ ಆರ್ಮಿ (ಐ.ಎನ್.ಎ).
ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್‌ರಿಂದ ಆರ್ಜೀ-ಹುಕುಮಂತ್-ಎ-ಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ; ಐಎನ್‌ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನ.
ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು “ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು”
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ.