ಕೆ.ಎಸ್.ನರಸಿಂಹಸ್ವಾಮಿಯವರ ಭಾವಗೀತೆಗಳು

ಕೆ.ಎಸ್.ನರಸಿಂಹಸ್ವಾಮಿಯವರ ಭಾವಗೀತೆಗಳು

ನದನದಿಗಳ ಗಿರಿವನಗಳ ತಾಯೆ / Nadanadigala girivanagala taaye
ನದನದಿಗಳ ಗಿರಿವನಗಳ ತಾಯೆ ಭರತಮಾತೆ
ಓಂಕಾರದ ಝಂಕಾರದ ನಿನಗಿದೋ ಶುಭಗೀತೆ

ಹಿಮಚು೦ಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು
ಬಿರುಗಾಳಿಯ ಭಿತ್ತಿಯಿಂದ ನೀ ಎಮ್ಮನು ಹರಸು

ಗಂಗೆಯಮುನೆ ಸಂಗಮದಲಿ ನಿನ್ನ ವೇದಘೋಷ
ದೇವದಾರು ವನಗಳಲ್ಲಿ ನಿನ್ನ ಮಂದಹಾಸ

ವಿಂಧ್ಯಾಚಲ ಗೀತೆಯಲ್ಲಿ ಸಂಧ್ಯಾರುಣ ಛಾಯೆ
ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೆ

ಪರ್ವತಗಳ ಶಿಖರದಿಂದ ಕಡಲಂಚಿನ ತನಕ
ತಾಯೆ ನಿನ್ನ ಮುಕುಟದಿಂದ ಹೊಳೆಯಲಿ ಮಣಿಕನಕ.

ಅಂಥಿಂಥ ಹೆಣ್ಣು ನೀನಲ್ಲ / Anthintha hennu neenalla
ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.


ನನ್ನವಳು ನನ್ನೆದೆಯ ಹೊನ್ನಾಡನಾಳುವಳು / Nannavalu nannedeya honnadanaaluvalu
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

ನಗುವಾಗ ನಕ್ಕು / Naguvaaga nakku
ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧ ದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿ ಬಿಳಿಯ ಹಕ್ಕಿ ಹಾರಿ.

ನಸು ನಕ್ಕು ನಾಚಿ ನೀ ಬಳಿಗೆ ಬಂದೆ ಕೆಂಪಾದ ಹೂಗಳಲ್ಲಿ
ಆ ಮೊದಲ ದಿನದ ಅದೆ ನಲಿವ ಕಂಡೆ ಹೂವೆದೆಯ ಹನಿಗಳಲ್ಲಿ.
ನಕ್ಷತ್ರ ಲೋಕ ತೆರೆದಿತ್ತು ಮೇಲೆ ಹೊಸ ಭಾವಗೀತೆಯಂತೆ
ಎದೆಯಾಳದಿಂದ ತುಳುಕಿತ್ತು ಜ್ವಾಲೆ ಬಾಂದಳದ ಮಿಂಚಿನಂತೆ.

ಮೈ ಮೈಗೆ ಸೋಂಕಿ ಆಗಿತ್ತು ಸಂಜೆ ಹುಣ್ಣಿಮೆಯ ತಂಪಿನಲ್ಲಿ
ನಾ ನಿನ್ನ ಕಂಡೆ ನಿನ್ನೊಲವ ಕಂಡೆ ಮಲ್ಲಿಗೆಯ ಕಂಪಿನಲ್ಲಿ.
ಓ ನನ್ನ ನಲ್ಲೆ ನಗುತಿರುವೆಯಲ್ಲೆ ನನ್ನೆದೆಯ ತುಂಬ ನೀನೆ
ಈ ಕತ್ತಲೊಳಗೆ ಹುಡುಕುವುದು ಬೇಡ ಇಲ್ಲಿಹುದು ನಿನ್ನ ವೀಣೆ.

ನೀ ನುಡಿಸಿ ತೆರೆದ ಹೊಂಗನಿಸಲ್ಲಿ ನನಗಿರಲಿ ಒಂದು ತಾಣ
ನಾ ಬಡವನಹುದು ಈಗೇನ ಕೊಡಲಿ ಈ ಮುತ್ತು ನನ್ನ ಪ್ರಾಣ.

ನಿನ್ನ ಪ್ರೀತಿಗೆ, ಅದರ ರೀತಿಗೆ / ninna preetige adara reetige
ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರೆಗೆ
ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ.

ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ ;
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ.

ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ ;
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ.

ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.

ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು ;
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು.

ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು,
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು.

ನಿನ್ನ ಪ್ರೀತಿಗೆ, ಅದರ ರೀತಿಗೆ
ನೀಡಬಲ್ಲೆನೆ ಕಾಣಿಕೆ ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ.

ಹಕ್ಕಿಯ ಹಾಡಿಗೆ ತಲೆದೂಗುವ ಹೂ.. / hakkiya haadige taledooguva hoo
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.

ಆಕಾಶಕ್ಕೆದ್ದು ನಿಂತ.... ನಾವು ಭಾರತೀಯರು / Akaashakkeddu ninta
ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ -

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಬೇರ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷವೇಳುವಲ್ಲಿ
ಕಣ್ಣು ಬೇರೆ ನೋಟವೊಂದು ನಾವು ಭಾರತೀಯರು.

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ
ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಭಾಷೆ ಬೇರೆ ಭಾವವೊಂದು ನಾವು ಭಾರತೀಯರು

ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೇ ಇರಲಿ ನಾವು ಒಂದು ನಾವು ಭಾರತೀಯರು.


ಕಿಟಕಿಯ ಬಾಗಿಲು ತೆರೆದಿತ್ತಂದು / Kitakiya baagilu teredittandu..
ಕಿಟಕಿಯ ಬಾಗಿಲು ತೆರೆದಿತ್ತಂದು,
ಸುತ್ತಲು ಕತ್ತಲೆ ಸುರಿದಿತ್ತಂದು,
ಚಂದಿರನಡಿಯಲಿ ಮೆರೆದಿತ್ತೊಂದು.
ತಾರಕೆ ಬಾನಿನೊಳು.

ಮಂಚದ ಮೇಗಡೆ ಅವಳಿಗೆ ನಿದ್ದೆ,
ನನಗೋ ಎಚ್ಚರ ಓದುತಿದ್ದೆ.
ಬೇಸರವಾಯಿತು ಮಲಗಲು ಎದ್ದೆ,
ಎಲ್ಲವು ಸುಮ್ಮನಿರೆ

ಬಂದಿತು ಮುತ್ತನು ಕದಿಯುವ ಬಯಕೆ,
ಮೋಸವು ತಿಳಿದರೆ ಮುನಿಯಳೆ ಈಕೆ?
ಎನ್ನುವ ಅಂಜಿಕೆ
ಚಂದಿರ, ಜೋಕೆಎಂದೆಚ್ಚರಿಸುತಿರೆ.

ತಾರೆಗಳೆಲ್ಲ ನೋಡುವುದೆಂದು,
ಕಿಟಕಿಯ ಬಾಗಿಲ ಬಂಧಿಸಿ ಬಂದು,
ಉರಿಯುವ ದೀಪವು ಅರಿಯುವುದೆಂದು,
ಆರಿಸಲೆಳೆಸಿದೆನು.

ಕಂಡರೆ ದೀಪವು ಹೇಳುವುದೇನು,
ಎಂದೆನ್ನನು ಮೈ ದಡವಿದುದೆಲರು.
ದೀಪವು ಇನ್ನು ಹೊಸತಿದು ಎಂದು,
ಮೌನದಿ ಬೆಳಗಿದುದು.

ಮೂಡಣ ಬೆಳಕಿನ ಬಾಗಿಲ ತೆರೆದು,
ಬಂದಳು ಉಷೆ ಪನ್ನೀರ್ಮಳೆಗರೆದು.
ನಕ್ಕಳು ಇಂದಿರೆ ಏತಕೆ ಎನಲು,
ದೀಪವ ನೋಡಿದಳು.

ಹತ್ತು ವರ್ಷದ ಹಿಂದೆ... / Hattu varshada hinde
ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈ ಹಿಡಿದವರು ನೀವಲ್ಲವೇ

ಬೆಟ್ಟಗಳಾ ಬೆನ್ನಿನಲಿ ಬೆಟ್ಟಗಳಾ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೇ
ತಿಟ್ಟಿನಲ್ಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತಾ ನಡೆದವರು ನೀವಲ್ಲವೇ

ಬಾಗಿಲಿಗೆ ಬಂದವರು ಬೇಗ ಬಾ ಎಂದವರು
ಬರಬೇಕೆ ಎಂದವರು ನೀವಲ್ಲವೇ
ನೋಡು ಬಾ ಎಂದವರು ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೇ

ಸೆರಗೆಳೆದು ನಿಲ್ಲಿಸಿದವರು, ಜಡೆಯೆಳೆದು ನೋಯಿಸಿದವರು
ಎತ್ತರದ ಮನೆಯವರು ನೀವಲ್ಲವೇ
ನೀನೆ ಬೇಕೆಂದವರು, ನೀನೆ ಸಾಕೆಂದವರು
ಬೆಟ್ಟದಲಿ ನಿಂತವರು ನೀವಲ್ಲವೇ

ಕೈಗೆ ಬಳೆಯೇರದೇ ಅಯ್ಯೋ ನೋವೆಂದಾಗ
ಮಹಡಿಯಿಂದಿಳಿದವರು ನೀವಲ್ಲವೇ
ಬಳೆಗಾರ ಶೆಟ್ಟಿಯನು ಗದರಿಸಿಕೊಂಡವರು
ಬೆತ್ತವನು ತಂದವರು ನೀವಲ್ಲವೇ

ಹೊನ್ನು ಹೊಳೆ ನೀನೆಂದು, ಮುತ್ತು ಮಳೆ ನೀನೆಂದು
ಹಾಡಿ ಕುಣಿದವರು ನೀವಲ್ಲವೇ
ಮಲೆನಾಡ ಹೆಣ್ಣೆಂದು, ಒಲವಿತ್ತ ಹೆಣ್ಣೆಂದು
ಏನೇನೋ ಬರೆದವರು ನೀವಲ್ಲವೇ

ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟವರು ನೀವಲ್ಲವೇ
ಮಲ್ಲಿಗೆಯ ದಂಡೆಯನು ತುರುಬಿಗೆ ಹಿಡಿದವರು
ತುಟಿಗೆ ತುಟಿ ತಂದವರು ನೀವಲ್ಲವೇ

ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗಿ ಮೆರೆವವರು ನೀವಲ್ಲವೇ
ಗಂಡನಿಗೆ ಒಪ್ಪಾಗಿ, ಕಂದನಿಗೆ ದಿಕ್ಕಾಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ / Hendatiyobbalu maneyolagiddare
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ |
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ ||

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ, ಹೋಳಿಗೆ ದೀಪ |
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿಲ್ಲದ ಕೋಪ ||

ಭರಣಿಯ ತೆರೆದರೆ ಅರಿಶಿನ ಕುಂಕುಮ
ಅವಳದು ಈ ಸಂಪತ್ತು |
ತುಟಿಗಳ ತೆರೆದರೆ ತುಳುಕುವುದಿ೦ಪಿನ
ಎರಡೋ ಮೂರೋ ಮುತ್ತು ||

ಕೈ ಹಿಡಿದವಳು, ಕೈ ಬಿಡದವಳು
ಮಾಡಿದಡಿಗೆಯೇ ಚಂದ,
ನಾಗರ ಕುಚ್ಚಿನ ನಿಡುಜಡೆಯವಳು,
ಈಕೆ ಬಂದುದೆಲ್ಲಿಂದ?

ಚಂದಿರನೂರಿನ ಅರಮನೆಯಿಂದ
ಬಂದವರೀಗೆಲ್ಲಿ?
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ?

ಹೆಂಡತಿಯೊಂದಿಗೆ ಬಡತನ ದೊರೆತನ
ಏನೂ ಭಯವಿಲ್ಲ |
ಹೆಂಡತಿಯೊಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ ||

ಏನ ಬೇಡಲಿ ? / Ena bedali?
ದೇವ, ನಿನ್ನ ಮಾಯೆಗಂಜಿ
     ನಡುಗಿ ಬಾಡೆನು;
ನಿನ್ನ ಇಚ್ಛೆಯಂತೆ ನಡೆವ -
     ನಡ್ಡಿ ಮಾಡೆನು.
ಮುಕ್ತಿ! ಮುಕ್ತಿ! - ನನ್ನ ನಾನು.
     ತಿಳಿದುಕೊಳ್ವುದೋ,
ಸಾವಿಗಂಜಿ ನಿನ್ನಡಿಯಲಿ
     ಅಡಗಿಕೊಳ್ವುದೋ?
ಶಕ್ತಿಯಿತ್ತೆ ಮುಕ್ತಿಯನ್ನು
     ಗಳಿಸಿ ಕೊಳ್ಳಲು ;
ನೀರನೆರೆದೆ ಬಳ್ಳಿಯನ್ನು
     ಬೆಳಸಿಕೊಳ್ಳಲು ;
ಜ್ಞಾನರವಿಯನಿತ್ತೆ ಎದೆಯ
     ನೋಡಿಕೊಳ್ಳಲು;
ಗೀತೆಯನ್ನು ಕೊಟ್ಟೆ ಕೊಳಲೊ-
     ಳೂದಿಕೊಳ್ಳಲು.
ಎಲ್ಲವನ್ನು ಕೊಟ್ಟಿರುವೆ ;
     ಏನ ಬೇಡಲಿ !
ಜಗವನೆನಗೆ ಬಿಟ್ಟಿರುವೆ
     ಏಕೆ ಕಾಡಲಿ !
ಹೆಂಡತಿಯ ಕಾಗದ (ತೌರ ಸುಖದೊಳಗೆನ್ನ ...) / Toura sukhadolagenna
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
     ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು,
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
     ಇರುಳಿನಲಿ ಕಾಣುವುದು ನಿಮ್ಮ ಕನಸು.
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
     ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ;
ನೀಲಾಂಬರದ ನಡುವೆ ಚಂದಿರನು ಬಂದಾಗ
     ರೋಹಿಣಿಯು ಬೆಳಗುವಳು ಸನ್ನಿಧಿಯಲಿ.
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ;
     ಇನ್ನು ತಂಗಿಯ ಮದುವೆ ತಿಂಗಳಿಹುದು.
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ,
     ಐದು ತಿಂಗಳ ಕಂದ ನಗುತಲಿಹುದು.
ಕಣ್ಣೆದುರಿಗಿರುವಾಗ ನಿಮ್ಮ ಮನವುಕ್ಕುವುದು
     ಕ್ಷೀರಸಾಗರದಂತೆ ಶಾಂತಿಯೊಳಗೆ.
ಕಣ್ಣ ಮರೆಯಾದಾಗ ಹೂವೆಲ್ಲ ಹಾವೆಂದು
     ಬಿರುನುಡಿಯನಾಡುವುದು ನಿಮಗೆ ತರವೆ?
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
     ಮೈಸೂರ ಸೇರುವುದು ನಾನು ಬಲ್ಲೆ.
ನಾಳೆ ಮಂಗಳವಾರ; ಮಾರನೆಯ ದಿನ ನವಮಿ;
     ಆಮೇಲೆ ನಿಲ್ಲುವೇನೆ ನಾನು ಇಲ್ಲೇ?
ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳುಹುವರು,
     ಕಂದನಿಗೆ ಹೊಸ ಜರಿಯ ಲಂಗವುಡಿಸಿ.
ತಂದೆಯವರೇ ಬಂದು ತಪ್ಪಾಯಿತೆನ್ನುವರು;
     ಹೆಣ್ಣ ಹೆತ್ತವರನ್ನು ದೂರಬೇಡಿ.
ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
    ಅಚ್ಚಮಲ್ಲಿಗೆಯರಳು ಬಿರಿಯುತಿಹುದು.
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ,
    ಚುಚ್ಚದಿರಿ ಮೊನೆಯಾದ ಮಾತನೆಸೆದು.
ಮಾವನ ಮನೆಯಲ್ಲಿ (ರಾಯರು ಬಂದರು ಮಾವನ ಮನೆಗೆ) / Raayaru bandaru maavana manege
ರಾಯರು ಬಂದರು ಮಾವನ ಮನೆಗೆ
    
ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
    
ಚಂದಿರ ಬಂದಿತ್ತು. - ತುಂಬಿದ
    
ಚಂದಿರ ಬಂದಿತ್ತು.

ಮಾವನ ಮನೆಯಲಿ ಮಲ್ಲಿಗೆ ಹೂಗಳ
    
ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
    
ತಂಬಿಗೆ ಬಂದಿತ್ತು - ಒಳಗಡೆ
    
ದೀಪದ ಬೆಳಕಿತ್ತು.

ಘಮಘಮಿಸುವ ಮೃಷ್ಟಾನ್ನದ ಭೋಜನ
    
ರಾಯರ ಕಾದಿತ್ತು.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
    
ರಾಯರ ಕರೆದಿತ್ತು - ಭೂಮಿಗೆ
    
ಸ್ವರ್ಗವೆ ಇಳಿದಿತ್ತು.

ಚಪ್ಪರಗಾಲಿನ ಮಂಚದ ಮೇಗಡೆ
    
ಮೆತ್ತನೆ ಹಾಸಿತ್ತು.
ಅಪ್ಪಟ ರೆಸಿಮೆ ದಿಂಬಿನ ಅಂಚಿಗೆ
    
ಚಿತ್ರದ ಹೂವಿತ್ತು. - ಪದುಮಳು
    
ಹಾಕಿದ ಹೂವಿತ್ತು.

ಚಿಗುರೆಲೆ ಬಣ್ಣದ ಅಡಕೆಯ ತಂದಳು
   
ನಾದಿನಿ ನಗುನಗುತ;
ಬಿಸಿಬಿಸಿ ಹಾಲಿನ ಬಟ್ಟಲ ತಂದರು
   
ಅಕ್ಕರೆಯಲಿ ಮಾವ - ಮಡದಿಯ
   
ಸದ್ದೇ ಇರಲಿಲ್ಲ.

ಮಡದಿಯ ತಂಗಿಯ ಕರೆದಿಂತೆಂದರು;
    "
ಅಕ್ಕನ ಕರೆಯಮ್ಮ"
ಮೆಲುದನಿಯಲಿ ನಾದಿನಿ ಇಂತೆಂದಳು;
    "
ಪದುಮಳು ಒಳಗಿಲ್ಲ" - ನಕ್ಕಳು.
   
ರಾಯರು ನಗಲಿಲ್ಲ.

ಏರುತ ಇಳಿಯುತ ಬಂದರು ರಾಯರು
   
ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
   
ಪದುಮಳು ಒಳಗಿಲ್ಲ - ಪದುಮಳ
   
ಬಳೆಗಳ ದನಿಯಿಲ್ಲ.

ಬೆಳಗಾಯಿತು; "ಸರಿ, ಹೊರಡುವೆ"ನೆಂದರು
   
ರಾಯರು ಮುನಿಸಿನಲಿ.
ಒಳಮನೆಯಲಿ "ನೀರಾಯಿತು!" ಎಂದಳು
   
ನಾದಿನಿ ರಾಗದಲಿ. "ಯಾರಿಗೆ?"
   
ಎನ್ನಲು ಹರುಷದಲಿ.
ಪದುಮಳು ಬಂದಳು ಹೂವನು ಮುಡಿಯುತ
   
ರಾಯರ ಕೋಣೆಯಲಿ.


ತಿಂಗಳಾಯಿತೆ?
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು.

ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ
ವೇಣಿಯಿರಲು ವಸಂತ ಪುಷ್ಪವನದಂತೆ
ಮನಸು ಬಾರದು ನನಗೆ ಅಡಿಯನಿಡೆ ಮುಂದೆ.

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ -
ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು.

ಹಿಂದಿರುಗಿ ಬಂದೆನ್ನ ಒಂದೇ ಮಾತಿನಲಿ
"
ತಿಂಗಳಾಯಿತೆ?" ಎಂದಳೆನ್ನ ಹೊಸ ಹುಡುಗಿ!


ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು....
ನಿನ್ನೊಲುಮೆಯಿಂದಲೆ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೆ.
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ.

ನಿನ್ನ ಕಿರುನಗೆಯಿಂದ, ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ.
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇತ್ತ ಕಡೆಗೇನೆ.


ದೀಪವು ನಿನ್ನದೇ, ಗಾಳಿಯು ನಿನ್ನದೇ
ಆರದಿರಲಿ ಬೆಳಕು.
ಕಡಲು ನಿನ್ನದೇ, ಹಡಗು ನಿನ್ನದೇ,
ಮುಳುಗದಿರಲಿ ಬದುಕು.
ಬೆಟ್ಟವು ನಿನ್ನದೇ, ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ.
ನೆಳಲೋ, ಬಿಸಿಲೋ ಎಲ್ಲವು ನಿನ್ನದೇ
ಇರಲಿ ಏಕರೀತಿ.
ಆಗೊಂದು ಸಿಡಿಲು, ಈಗೊಂದು ಮುಗಿಲು
ನಿನಗೆ ಅಲಂಕಾರ.
ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ.
ಅಲ್ಲಿ ರಣದುಂಧುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ.
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ.
ಸಿರಿಗೆರೆಯ ನೀರಿನಲಿ
ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು.
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು. 
ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು.
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚಿಮ್ಮಿಸಿದ
ಹಾಲಲ್ಲಿ ನಿನ್ನ ಹೆಸರು.
ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು.
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು.
ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ
ಬೆಳ್ದಿಂಗಳೋ ನಿನ್ನ ಹೆಸರು.
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ
ಹೂಬಾಣ ನಿನ್ನ ಹೆಸರು. 
ಬಳೆಗಾರನ ಹಾಡು
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು 
      ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು 
      ಬಳೆಯ ತೊಡಿಸುವುದಿಲ್ಲ ನಿಮಗೆ.
 
ಮುಡಿದ ಮಲ್ಲಿಗೆಯರಳು ಬಾಡಿಲ್ಲ, ರಾಯರೇ,
      ತೌರಿನಲಿ ತಾಯಿ ನಗುತಿಹರು.
ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ,
      ಅಮ್ಮನಿಗೆ ಬಳೆಯ ತೊಡಿಸಿದರು.
ಅಂದು ಮಂಗಳವಾರ ನವಿಲೂರ ಕೇರಿಯಲಿ 
      ಓಲಗದ ಸದ್ದು ತುಂಬಿತ್ತು;
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ 
      ಅಂಗಳದ ತುಂಬಾ ಜನವಿತ್ತು.
.
ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ,
      ಹೊಳೆದಿತ್ತು ಕೊರಳಿನಲಿ ಪದಕ.
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
      ಕಣ್ತುಂಬ ನೋಡಿದೆನು ಮುದುಕ.
ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ,
      ಸೆರಗಿನಲಿ ಕಣ್ಣೀರನೊರಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ
      ದೀಪದಲಿ ಬಿಡುಗಣ್ಣ ನಿಲಿಸಿ.
ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
      ಹೊಸ ಸೀರೆ ರತ್ನದಾಭರಣ;
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
      ನಿಮಗಿಲ್ಲ ಒಂದು ಹನಿ ಕರುಣ.
ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು 
      ಕುದಿಯಬಾರದು ನನ್ನ ದೊರೆಯೆ;
ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು;
      ಒಣಗಬಾರದು ಒಡಲ ಚಿಲುಮೆ.
ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು?
      ನಿಮಗೆತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು 
      ಅಮ್ಮನಿಗೆ ನಿಮ್ಮದೇ ಕನಸು.
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ 
ಬಂಗಾರವಿಲ್ಲದ ಬೆರಳು.
ತಗ್ಗಿರುವ ಕೊರಳಿನ ಸುತ್ತ ಕರಿಮಣಿವೊಂದೇ 
ಸಿಂಗಾರ ಕಾಣದಾ ಹೆರಳು.
ಹೆರಳಿನಾ ಭಾರಕ್ಕೆ ತುಂಬಿರುವ ಕೆನ್ನೆಯಲಿ 
ಹದಿನಾರು ವರುಷದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ 
ಹುಚ್ಚು ಹೊಳೆ ಮುಂಗಾರಿನುರುಳು.
ಕಲ್ಲ ಹರಳನು ಹುಡುಕಿ ಎಲ್ಲಿಗೋ ಎಸೆವಾಗ
ಝಲ್ಲೆನುವ ಬಳೆಯ ಸದ್ದು,
ಅತ್ತ ಯಾರೋ ಹೋದ ಇತ್ತ ಯಾರೋ ಬಂದ 
ಕಡೆಗೆಲ್ಲ ಕಣ್ಣು ಬಿತ್ತು.
ಮನೆಗೆಲಸ ಬೆಟ್ಟದಷ್ಟಿರಲು ಸುಮ್ಮನೆ ಇವಳು 
ಚಿತ್ರದಲಿ ತಂದಂತೆ ಇಹಳು 
ಬೇಸರಿಯ ಕಿರಿಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು.
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
 ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು 
            ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ 
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
            ನಿದ್ದೆ ಬರುವಳು ಕದ್ದು ಮಲಗು ಮಗುವೆ 
ಜೋ ಜೋಜೋ ಜೋ ಜೋ ಜೋಜೋ ಜೋ.
ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
           ಮಲಗು ತೊಟ್ಟಿಲ ಸಿರಿಯೆ, ದೇವರಂತೆ
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,  
           ಮಲಗು ಚಂದಿರನೂರ ಹೋಗುವೆಯಂತೆ .
ತಾರೆಗಳ ಜರತಾರಿಯಂಗಿ ತೊಡಿಸುವರಂತೆ
           ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
          ವೀಣೆ ನುಡಿಸುವರಂತೆ ಸುತ್ತ ನೆರೆದು.   
ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
          ಹಗಲು ಬರುವನು ಬೆಳ್ಳಿ ಮುಗಿಲ ನಡುವೆ 
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ 
          ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು 
          ನಿದ್ದೆ ಬರುವಳು ಹೊದ್ದು ಮಲಗು ಮಗುವೆ 
ಜೋ ಜೋಜೋ ಜೋ ಜೋ ಜೋಜೋ ಜೋ 
ಜೋ ಜೋಜೋ ಜೋ ಜೋ ಜೋಜೋ ಜೋ