ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಲೇಖಕರು ವಿವೇಕಾನಂದ. ಹೆಚ್.ಕೆ.

ಲೇಖಕರು
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
👤👤👤👤👤👤👤👤👤👤👤👤👤



ಆಧ್ಯಾತ್ಮ......

ಏನಿದು ಆಧ್ಯಾತ್ಮ ?....

ಇದೊಂದು ದೈವಿಕತೆಯೇ ?
ವಿಶಿಷ್ಟ ಅನುಭವವೇ ?
ಜ್ಞಾನದ ಪರಾಕಾಷ್ಠೆಯೇ ?
ಭಕ್ತಿಯ ತುತ್ತ ತುದಿಯೇ ?
ಧರ್ಮದ ಆಚರಣೆಯೇ ?
ದೇವರ ಸಾನಿಧ್ಯವೇ ?
ನೆಮ್ಮದಿಯ ಹುಡುಕಾಟವೇ ?

ಸಾವಿನ ಭಯ ಗೆಲ್ಲುವ ತಂತ್ರವೇ ?
ಬದುಕಿನ ಉತ್ಸಾಹ ಹೆಚ್ಚಿಸುವ ಮಾರ್ಗವೇ ?
ವಾಸ್ತವ ಎದುರಿಸದೇ ಗೌರವಯುತವಾಗಿ ಪಲಾಯನ ಮಾಡಲು ಕಂಡುಕೊಂಡ ವಿಧಾನವೇ ?

ಆಧ್ಯಾತ್ಮಕ್ಕೆ ವಯಸ್ಸಿನ ಮಿತಿ ಇದೆಯೇ ?
ಆಧ್ಯಾತ್ಮಕ್ಕೆ ಲಿಂಗ ಬೇದ ಇದೆಯೇ ?
ಜಾತಿ ಧರ್ಮ ಭಾಷೆ ಪ್ರದೇಶದ ವ್ಯತ್ಯಾಸ ಇದೆಯೇ ?

ಆಧ್ಯಾತ್ಮ ಕೇವಲ ಜ್ಞಾನಿಗಳಿಗೆ ಮಾತ್ರ ನಿಲುಕುವುದೇ ?
ದೇವರು ಧರ್ಮ ಭಕ್ತಿ ರೀತಿಯ ವಿಷಯಗಳಿಗೆ ಮಾತ್ರ ಆಧ್ಯಾತ್ಮ ಸಂಬಂಧಿಸಿದೆಯೇ ?
ಆಧ್ಯಾತ್ಮಿಕತೆ ಪಡೆಯಲು ಬಹುದೊಡ್ಡ ಸಾಧನೆಯ ಅವಶ್ಯಕತೆ ಇದೆಯೇ ?
ದಿನನಿತ್ಯದ ಬದುಕಿನಲ್ಲಿ ಆಧ್ಯಾತ್ಮಿಕತೆಗೆ ಜಾಗ ಇದೆಯೇ ?
ಆಧ್ಯಾತ್ಮಿಕತೆಯಿಂದ ಮಾಡಬಹುದಾದ ಸಾಧನೆಯಾದರೂ ಏನು ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ, ಸಾಮಾನ್ಯ ಜನರ ಮನಸ್ಸಿನಲ್ಲಿ ಆಧ್ಯಾತ್ಮದ ಬಗ್ಗೆ ಇರುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸರಳವಾಗಿ ಹೇಳುವ ಒಂದು ಸಣ್ಣ ಪ್ರಯತ್ನ......

ನಿಸ್ಸಂದೇಹವಾಗಿ ಆಧ್ಯಾತ್ಮ..
ಸಾವಿನ ಭಯ ಗೆಲ್ಲಲು,
ಸೋಲಿನ ನಿರಾಸೆ ಮರೆಯಲು,
ಸಂಕಷ್ಟಗಳಲ್ಲಿ ಮಾನಸಿಕವಾಗಿ ಕುಸಿಯದಂತೆ ತಡೆಯಲು,
ಬದುಕಿನ ಉತ್ಸಾಹ ಹೆಚ್ಚಿಸಲು,
ಸಾಮಾನ್ಯ ಜನರಲ್ಲಿ ಕೆಲವರು ಮುಖ್ಯವಾಗಿ ಧಾರ್ಮಿಕ ವ್ಯಕ್ತಿಗಳು ಅದೊಂದು ಅತಿಮಾನುಷ ಶಕ್ತಿ ಎಂಬ ಭ್ರಮೆ ಸೃಷ್ಟಿಸಿ ತಮ್ಮ ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು,
ದೇವರು ಮತ್ತು ಧರ್ಮದ ಆಳ ಅರಿಯಲು ಅನುಸರಿಸುವ ಒಂದು ಮಾರ್ಗ....

ಆಧ್ಯಾತ್ಮ ಎಂಬುದು ಒಂದು ಅನುಭಾವ. ಅದರಲ್ಲಿ " ಜ್ಞಾನ ಅನುಭವ ಭಕ್ತಿ ನಂಬಿಕೆ ವೈಚಾರಿಕತೆ ಅಹಂ ತಿಕ್ಕಲುತನ " ಎಲ್ಲವೂ ಸಮ್ಮಿಳಿತವಾಗಿವೆ.

ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗದ ಸಿದ್ದಿಯೂ ಆಧ್ಯಾತ್ಮ,

ಮೋಕ್ಷದತ್ತ ಮುನ್ನಡೆಯುವುದು ಒಂದು ಆಧ್ಯಾತ್ಮ,

ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು ಆಧ್ಯಾತ್ಮ,

ಸ್ಥಿತಪ್ರಜ್ಞತೆಯತ್ತ ಇಡುವ ಹೆಜ್ಜೆ ಆಧ್ಯಾತ್ಮ,

ಸಾಮಾನ್ಯ ಜನರಿಗೆ ಆಧ್ಯಾತ್ಮದ ಒಲವು ಮೂಡುವುದು ತಮ್ಮ ಬದುಕಿನ ಸಂಧ್ಯಾ ಕಾಲದಲ್ಲಿ, ಕೆಲವರಿಗೆ ಸೋಲು ನಿರಾಸೆಯ ನಂತರ , ಮತ್ತೆ ಹಲವರಿಗೆ ಯಶಸ್ಸಿನ ತುತ್ತತುದಿಯಲ್ಲಿರುವಾಗ
ಆಧ್ಯಾತ್ಮದ ಬಗ್ಗೆ ಚಿಂತನೆ ಪ್ರಾರಂಭವಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮದ ಬಗ್ಗೆ ಆಸಕ್ತಿ ಮೂಡುವುದು ಅಪರೂಪ. ಭಾರತೀಯ ಪರಂಪರೆಯಲ್ಲಿ ಸನ್ಯಾಸ ದೀಕ್ಷೆ ಪಡೆವ ಬಾಲಕರಿಗೆ ಆಧ್ಯಾತ್ಮವನ್ನೇ ಶಿಕ್ಷಣವಾಗಿ ಕಲಿಸಲಾಗುತ್ತದೆ.

ವೈಚಾರಿಕವಾಗಿ ಆಧ್ಯಾತ್ಮವನ್ನು ಹೀಗೆ ಅರ್ಥೈಸಬಹುದು.....

" ಆಧ್ಯಾತ್ಮ ಜ್ಞಾನದ ಧ್ಯಾನಸ್ಥ ಸ್ಥಿತಿ " 

ಇದು ಭಕ್ತಿಯ ಭಾವದಿಂದಲೂ ಮೂಡಬಹುದು.
ಜ್ಞಾನದ ಬಲದಿಂದಲೂ ಮೂಡಬಹುದು,
ಇದು ದೇಹ ಮತ್ತು ಮನಸ್ಸಿನ ನಿಯಂತ್ರಣದಿಂದಲೂ ಮೂಡಬಹುದು.
ಕೆಲವು ಅಪರೂಪದ ವ್ಯಕ್ತಿಗಳಲ್ಲಿ ಗುರುವಿನ ಬಲದಿಂದಲೂ ಮೂಡಬಹುದು.

ಸಾಮಾನ್ಯ ಜನರ ಸಾಮಾನ್ಯ ಪರಿಸ್ಥಿತಿಯಲ್ಲಿ ದಿನನಿತ್ಯದ ಅವಶ್ಯಕತೆಗಳಿಗೇ ಸಂಪೂರ್ಣ ಸಮಯ ವಿನಿಯೋಗಿಸುವ ಕಾರಣದಿಂದ ಆಧ್ಯಾತ್ಮ ಕೇವಲ ದೊಡ್ಡ ಜನಗಳಿಗೆ, ಬುದ್ದಿವಂತರಿಗೆ, ಪ್ರಖ್ಯಾತರಿಗೆ, ಸ್ವಾಮೀಜಿಗಳಿಗೆ ಮಾತ್ರ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ.

ಇದು ಅಷ್ಟು ನಿಜವಲ್ಲ. ಪಂಡಿತನಿಂದ ಪಾಮರನವರೆಗೆ ಯಾರು ಬೇಕಾದರೂ ಆಧ್ಯಾತ್ಮಿಕ ಮನಸ್ಥಿತಿ ಅರಿಯಬಹುದು.  ಅದರ ಪ್ರಮಾಣ ರೂಪ ಪ್ರಾಯೋಗಿಕತೆಯಲ್ಲಿ ಒಂದಷ್ಟು ವ್ಯತ್ಯಾಸ ಇರಬಹುದು.

ಆಧ್ಯಾತ್ಮ ಕೆಲವರಿಗೆ ಸೆಳೆತ ಮತ್ತೆ ಕೆಲವರಿಗೆ ಆಕ್ರೋಶ.

ಸೆಳೆತಕ್ಕೆ ಕಾರಣ ಅದರೊಳಗೆ ನೆಮ್ಮದಿಯ ಬದುಕಿಗಾಗಿ ಒಂದಷ್ಟು ಒಳ್ಳೆಯ ಅಂಶಗಳು ಇರಬಹುದು ಎಂದು.

ಆಕ್ರೋಶಕ್ಕೆ ಕಾರಣ ಡೋಂಗಿಗಳು ಆಧ್ಯಾತ್ಮದ ಹೆಸರಿನಲ್ಲಿ ಜನರನ್ನು ಶೋಷಿಸುತ್ತಾರೆ ಮತ್ತು ಮೌಢ್ಯಕ್ಕೆ ಪ್ರಚೋದಿಸುತ್ತಾರೆ ಎಂದು.

ಒಟ್ಟಿನಲ್ಲಿ ಆಧ್ಯಾತ್ಮ ಕೇವಲ ದೈವ ಭಕ್ತಿಯಲ್ಲ. ಅದೊಂದು ಜ್ಞಾನದ ಸಹಜ ಅನುಭಾವ ಎಂದು ಸರಳವಾಗಿ ಹೇಳಬಹುದು.

ಆಧ್ಯಾತ್ಮ ಎಂಬುದು ಆಳವಾದ ಅತ್ಯಂತ ಕಠಿಣ ಚಿಂತನೆ ಎಂದು ಜನರಲ್ಲಿ ಭ್ರಮೆ ಹುಟ್ಟುಹಾಕಿ ಅವರಿಂದ ದೂರ ಸರಿಸುವುದಕ್ಕಿಂತ ಜನಸಾಮಾನ್ಯರ ಭಾಷೆಯಲ್ಲಿ ಅವರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿದರೆ ಅವರು ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಅದನ್ನು ಅರಿಯಲು ಮತ್ತು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ. ತಮ್ಮ ಬದುಕಿನ ನೆಮ್ಮದಿಯ ಕ್ಷಣಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಆಧ್ಯಾತ್ಮದ ಬಗ್ಗೆ ನನ್ನ ಗ್ರಹಿಕೆಗೆ ನಿಲುಕಿದ ವಿಷಯವನ್ನು ಸರಳವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಹೇಳುವ ಒಂದು ಪ್ರಯತ್ನ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನು ಸ್ವಾಗತಿಸುತ್ತಾ......

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.


🌹🌹🌹🌹🌹🌹🌹🌹🌹🌹🌹🌹
ಪ್ರಚೋದನೆ.........

ಪ್ರಚೋದಿಸುತ್ತಲೇ ಇರುತ್ತೇನೆ,
ದ್ವೇಷದ ದಳ್ಳುರಿ ನಶಿಸಿ,
ಪ್ರೀತಿಯ ಒರತೆ ಚಿಮ್ಮುವವರೆಗೂ....

ಪ್ರಚೋದಿಸುತ್ತಲೇ ಇರುತ್ತೇನೆ,
ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ,.....

ಪ್ರಚೋದಿಸುತ್ತಲೇ ಇರುತ್ತೇನೆ,
ಮೌಢ್ಯದ ವಿರುದ್ಧ ವೈಚಾರಿಕ ಪ್ರಜ್ಞೆ  ಬೆಳಗುವವರೆಗೂ,........

ಪ್ರಚೋದಿಸುತ್ತಲೇ ಇರುತ್ತೇನೆ,
ಹಿಂಸೆಯ ವಿರುದ್ಧ ಅಹಿಂಸೆ ಜಯ ಸಾಧಿಸುವವರೆಗೂ,.....

ಪ್ರಚೋದಿಸುತ್ತಲೇ ಇರುತ್ತೇನೆ,
ಸುಳ್ಳಿನ ವಿರುದ್ಧ ಸತ್ಯ ಗೆಲ್ಲುವವರೆಗೂ,....

ಪ್ರಚೋದಿಸುತ್ತಲೇ ಇರುತ್ತೇನೆ ಮುಖವಾಡಗಳು ಬಯಲಾಗಿ ಸಹಜತೆ ಕಾಣುವವರೆಗೂ,.....

ಪ್ರಚೋದಿಸುತ್ತಲೇ ಇರುತ್ತೇನೆ,
ಜಾತಿಯ ಅಸಮಾನತೆ ತೊಲಗುವವರೆಗೂ,.....

ಪ್ರಚೋದಿಸುತ್ತಲೇ ಇರುತ್ತೇನೆ,
ಕುತಂತ್ರಿಗಳ ಮುಖವಾಡ ಬಯಲಾಗುವವರೆಗೂ,.......

ಪ್ರಚೋದಿಸುತ್ತಲೇ ಇರುತ್ತೇನೆ,
ಶೋಷಿತರ ದೌರ್ಜನ್ಯ ನಿಲ್ಲುವವರೆಗೂ........

ಪ್ರಚೋದಿಸುತ್ತಲೇ ಇರುತ್ತೇನೆ,
ಜೀವನಮಟ್ಟ ಸುಧಾರಣೆಯ ಆಗುವವರೆಗೂ,.......

ಪ್ರಚೋದಿಸುತ್ತಲೇ ಇರುತ್ತೇನೆ,
ಯೋಚಿಸುವ ಮನಸ್ಸುಗಳು ವಿಶಾಲವಾಗುವವರೆಗೂ,....

ಪ್ರಚೋದಿಸುತ್ತಲೇ ಇರುತ್ತೇನೆ,
ಜನರ ಕಣ್ಣುಗಳಲ್ಲಿ ನೆಮ್ಮದಿಯ ಆಶಾಕಿರಣ ಕಾಣುವವರೆಗೂ,...

ಪ್ರಚೋದಿಸುತ್ತಲೇ ಇರುತ್ತೇನೆ,
ಹೃದಯಗಳು ಬೆಸೆಯುವವರೆಗೂ,...

ಪ್ರಚೋದಿಸುವುದು,
 ಏನು ಯೋಚನೆ ಮಾಡಬೇಕೆಂದಲ್ಲ,
ಹೇಗೆ ಯೋಚನೆ ಮಾಡಬೇಕೆಂದು.....

ಅಂದರೆ,
ಒಂದು ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಹೇಗೆ ನೋಡಬೇಕೆಂದು,
ಅದರ ಒಳಿತು ಕೆಡುಕುಗಳ ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕೆಂದು,
ಸ್ವಲ್ಪ ಆಸಕ್ತಿ, ಸ್ವಲ್ಪ ಸಹನೆ, ಸ್ವಲ್ಪ ಸಹಾನುಭೂತಿ, ಸ್ವಲ್ಪ ತಾಳ್ಮೆ, ಸ್ವಲ್ಪ ಬುದ್ಧಿವಂತಿಕೆ, ಸ್ವಲ್ಪ ಒಳ್ಳೆಯತನ, ಸ್ವಲ್ಪ ಪ್ರೀತಿ ವಿಶ್ವಾಸ ಕರುಣೆ, ಸ್ವಲ್ಪ ಅಧ್ಯಯನ, ಸ್ವಲ್ಪ ಸ್ಥಿರ ಪ್ರಜ್ಞತೆ, ಸ್ವಲ್ಪ ವಾಸ್ತವಿಕತೆ... 
ಹೀಗೆ ಎಲ್ಲಾ ಆಯಾಮಗಳ ಅವಲೋಕನ.....

ನಮ್ಮ ಸ್ವಾತಂತ್ರ್ಯ ಉಳಿಸಿಕೊಂಡು, ಇತರರ ಸ್ವಾತಂತ್ರ್ಯ ಗೌರವಿಸುತ್ತಾ....

ಪ್ರಚೋದಿಸುತ್ತಲೇ ಇರುತ್ತೇನೆ,
 ಕೊನೆಯ ಉಸಿರೆಳೆಯುವವರೆಗೂ......
ಬರೆಯುವ ಕೈಗಳು ಸ್ತಬ್ಧವಾಗುವವರೆಗೂ.........

ಪ್ರಚೋದನೆ ಸ್ವಾರ್ಥಕ್ಕಾಗಿಯಲ್ಲ,
ಸಮಾಜದ ಸುಧಾರಣೆಗಾಗಿ.....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌳🌳🌹🌹🌹🌹🌹
ನಿರೂಪಕರಾಗಿ ಬದಲಾದ ಪತ್ರಕರ್ತರು......

ವಿದೂಷಕರಾಗಿ ವರ್ತಿಸುವ ಪತ್ರಕರ್ತರು......

ಹೊಗಳು ಭಟ್ಟರು ಅಥವಾ ತೆಗಳು ಭಟ್ಟರ ಪಾತ್ರದಾರಿಗಳಾಗಿ ಬದಲಾದ ಪತ್ರಕರ್ತರು......

ವಿವೇಚನೆಯಿಂದ ವಿಧ್ವಂಸಕ ಮನೋಭಾವಕ್ಕೆ ಬಲಿಯಾದ ಪತ್ರಕರ್ತರು....

ವಿಷಯಕ್ಕಿಂತ ವೇಗಕ್ಕೆ ಸಿಲುಕಿ ನಾಶವಾದ ಪತ್ರಕರ್ತರು......

ಶುದ್ದತೆಯಿಂದ ಮಾಲಿನ್ಯಕ್ಕೆ,
ಬುದ್ಧಿವಂತಿಕೆಯಿಂದ ಮೂರ್ಖತನಕ್ಕೆ ಜಾರಿದ ಪತ್ರಕರ್ತರು.....

ಜನಪ್ರಿಯತೆಯ ಹಿಂದೆ ಬಿದ್ದು ಸತ್ಯವನ್ನು ಸಮಾಧಿ ಮಾಡಿದ ಪತ್ರಕರ್ತರು.....

ಸೂಕ್ಷ್ಮತೆಯಿಂದ ಭಂಡತನಕ್ಕೆ ಜಿಗಿದ ಪತ್ರಕರ್ತರು......

ವೈಚಾರಿಕತೆಯಿಂದ ಮೌಢ್ಯಕ್ಕೆ, ವಾಸ್ತವತೆಯಿಂದ ಭ್ರಮೆಗೆ ಜನರನ್ನು ದೂಡಿದ ಪತ್ರಕರ್ತರು.....

ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಚಿನ್ನದ ಸೂಜಿಯಿಂದ ಕಣ್ಣಿಗೆ ಚುಚ್ಚಿಕೊಂಡು ಕುರುಡಾದ ಪತ್ರಕರ್ತರು.....

ಸಾಕಷ್ಟು ಉದಾಹರಣೆಗಳು ಸಿಗುತ್ತವೆ. 

ಹೊಸ ವರ್ಷದ ಸಂದರ್ಭದಲ್ಲಿ ಅದನ್ನು ಅತ್ಯಂತ ಮಹೋನ್ನತ ಸಂಭ್ರಮ ಎಂದು ವಿಜೃಂಭಿಸುವವರು ಇವರೇ, ಮತ್ತೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳುವವರೂ ಇವರೇ, ಜನರ ಮನರಂಜನೆಯ ಅಭಿವ್ಯಕ್ತಿಗೆ ಯಾವುದೇ ನಿರ್ಭಂದ ಇರಬಾರದು ಎನ್ನುವವರು ಇವರೇ,
ಅಲ್ಲಿ ನಡೆದ ಕೆಲವು ಸಣ್ಣ ಪುಟ್ಟ ಘಟನೆಗಳನ್ನೇ ಮತ್ತೆ ಮತ್ತೆ ಪ್ರದರ್ಶಿಸಿ ಇಡೀ ವಿಶ್ವದಲ್ಲೇ ರಾಜ್ಯಕ್ಕೆ ಆದ ಅವಮಾನ ಎಂದು ಹೇಳುವವರೂ ಇವರೇ.....

ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು, ಆ ವಿಷಯದ ಒಳಗಿನ ಸಂದೇಶ ಏನಾಗಿರಬೇಕು,
ಮೇಲ್ನೋಟದ ಸತ್ಯಕ್ಕಿಂತ ಆಂತರ್ಯದ ಮರ್ಮವೇನು, ಈ ಆಧುನಿಕ ಸಮಾಜದ ಹೆಣ್ಣು ಗಂಡು ಇಬ್ಬರ ಮಾನಸಿಕತೆ ಏನು ಎಂಬುದನ್ನು ಸಂಯಮದಿಂದ ಜವಾಬ್ದಾರಿಯಿಂದ ವಿಮರ್ಶಿಸದೆ ಇವರೂ ಅವರ ತರಹವೇ ಸ್ಟುಡಿಯೋಗಳಲ್ಲಿ ಕುಳಿತು ಆಡುತ್ತಾರೆ.

ಇನ್ನು ಕೆಲವು ಸಿನೆಮಾ ಸ್ಟಾರ್ ಗಳನ್ನು ಸಂದರ್ಶನ ಮಾಡುವಾಗ ಇವರು ಅವರಿಗೆ ಕೊಡುವ ಬಿಲ್ಡಪ್ ಗಳು ನಟನಟಿಯರು ಅತಿಮಾನವರೇ ಇರಬೇಕು ಎನಿಸುತ್ತದೆ.

ಸಿನಿಮಾ ಒಂದು ಮನರಂಜನಾ ಉದ್ಯಮ. ಅದರಲ್ಲಿ ನಟನೆ ಒಂದು ಕಲಾ ಮಾಧ್ಯಮ. ಅದರಲ್ಲಿ ಒಂದಷ್ಟು ಸೌಂದರ್ಯ, ಪ್ರತಿಭೆ, ಶ್ರಮ, ಗಿಮಿಕ್ , ಅದೃಷ್ಟ ಎಲ್ಲವೂ ಸೇರಿ ಜನಪ್ರಿಯತೆ ಗಳಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಯಾವುದೇ ಅತಿ ಅಮಾನುಷ ಶಕ್ತಿ ಅವರಿಗೆ ಇರುವುದಿಲ್ಲ. ಸಹಜವಾಗಿ ಎಲ್ಲಾ ಮನುಷ್ಯ ಪ್ರಾಣಿಗಳಂತೆ ಅವರಿಗೂ ಸಹಜ ಏರಿಳಿತಗಳ ಬದುಕು ಇರುತ್ತದೆ.

ಆದರೆ ಅವರನ್ನು ಮೆಚ್ವಿಸುವ ಭರದಲ್ಲಿ ಕಟ್ಟಾ ಅಭಿಮಾನಿಗಳಿಗಿಂತ ಹೆಚ್ಚಾಗಿ ದೈವಾಂಶ ಸಂಭೂತರಂತೆ ಅವರನ್ನು ವರ್ಣಿಸಿದರೆ ಸಮಾಜಕ್ಕೆ ತಲುಪುವ ಸಂದೇಶವಾದರೂ ಏನು ? ಆ ನಟಿಯ  ಅಭಿನಯ, ಸಾಮಾಜಿಕ ಜವಾಬ್ದಾರಿ, ವೈಯಕ್ತಿಕ ಹೊಣೆಗಾರಿಕೆ, ಅವರ ನಟನೆಯ ದೋಷಗಳು ಎಲ್ಲವನ್ನೂ ಹೇಳುವವರು ಯಾರು. ಜನಪ್ರಿಯತೆಯ ಹಿಂದೆ ಬಿದ್ದು ಪತ್ರಕರ್ತರೇ ಹೊಗಳು ಭಟರಾದರೆ ವಾಸ್ತವಿದ ವಿವರಣೆ ಕೊಡುವವರಾರು....

ರಾಜಕೀಯ ವಿಷಯದಲ್ಲೋ ಸೂಕ್ಷ್ಮತೆ ಕಳೆದುಕೊಂಡು ಬಹಳ ದಿನಗಳಾಗಿವೆ. ತಮ್ಮ ನಿರೂಪಣೆಯಿಂದ, ಬಾಯಿ ಬುಡುಕತನದಿಂದ, ಅಜ್ಞಾನದಿಂದ, ಮಾತುಕತೆಯಿಂದ ಎಲ್ಲರ ನಡುವೆ ಬೆಂಕಿ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಯಾರೋ ಏನೋ ಲೋಕಾಭಿರಾಮವಾಗಿ ಹೇಳಿದ ಮಾತುಗಳನ್ನು, ಅದರ ಹಿನ್ನಲೆಯನ್ನು ಗಮನಿಸದೆ ಹಸಿಹಸಿಯಾಗಿ ಪ್ರಸಾರ ಮಾಡಿ ಇಡೀ ಘಟನೆಗಳ ದಿಕ್ಕನ್ನೇ ತಪ್ಪಿಸುತ್ತಾರೆ. ಸಿನಿಮಾ ಹಾಡುಗಳನ್ನು ರಾಜಕಾರಣಿಗಳ ವ್ಯಕ್ತಿತ್ವ ಅಳೆಯಲು ಉಪಯೋಗಿಸಿ ನಗೆಪಾಟಲು ಮಾಡುತ್ತಾರೆ. ಸಕಾರಾತ್ಮಕ ವಿಮರ್ಶೆಗಳನ್ನು ತುಳಿದು ನಕಾರಾತ್ಮಕ ವಿಷಯಗಳಿಗೆ ಸಂಪೂರ್ಣ ಸಮಯ ಮೀಸಲಿಡುತ್ತಾರೆ.

ಇನ್ನು ಮೌಢ್ಯಗಳ ವಿಷಯದಲ್ಲಿ ಟಿವಿ ನ್ಯೂಸ್ ಮಾಧ್ಯಮಗಳನ್ನು ಸಾಮಾಜಿಕ ಭಯೋತ್ಪಾದಕರೆಂದು ನಿಸ್ಸಂಶಯವಾಗಿ ಕರೆಯಬಹುದು. ಯಾವುದೇ ವೈಚಾರಿಕ ಪ್ರಜ್ಞೆ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗರಿಷ್ಠ ಪ್ರಮಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುವವರು ಪತ್ರಕರ್ತರೆಂಬ ಭ್ರಮೆಗೆ ಒಳಗಾದ ನಿರೂಪಕರು......

ಮೌಢ್ಯಗಳನ್ನು ಬಿತ್ತುವವರು ಇವರೇ, ಮತ್ತೆ ಅದನ್ನು ಮೌಢ್ಯ ಎಂದು ಜರಿಯುವವರು ಇವರೇ, ಒಟ್ಟಿನಲ್ಲಿ ಬೇಜವಾಬ್ದಾರಿಯಿಂದ ಎಲ್ಲವನ್ನೂ ಸುದ್ದಿ ಮಾಡುವವರೂ ಇವರೇ.....

ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತ, ತಿಳಿವಳಿಕೆಯ, ಸೂಕ್ಷ್ಮ ಸಂವೇದನೆಯ ಜನರನ್ನು ಒಳಗೊಂಡಿರಬೇಕು. ಅವರನ್ನು ಪತ್ರಕರ್ತರು ಎಂದು ಕರೆಯಲಾಗುತ್ತದೆ. ಅವರ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ. ಆದರೆ ಈಗ ಟಿವಿ ವಾಹಿನಿಗಳನ್ನು ವೀಕ್ಷಿಸಿದರೆ ಪತ್ರಕರ್ತರೆಂಬ ಪರಿಕಲ್ಪನೆಯೇ ಬದಲಾದಂತೆ ಭಾಸವಾಗುತ್ತಿದೆ.

ಈಗ ಜನರು ಎಚ್ಚೆತ್ತುಕೊಳ್ಳುವ ಮೊದಲು ಮಾಧ್ಯಮಗಳೇ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆದಷ್ಟು ಶೀಘ್ರ ಆ ಬದಲಾವಣೆಯ ನಿರೀಕ್ಷೆಯಲ್ಲಿ......

ಪ್ರಬುದ್ದ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌳🌳🌳🌳🌳🌳🌳🌹🌹🌹
Scotland Scotch Whisky...........

ಮುಂಬಯಿ ಕೊಲಾಬಾದ ಪ್ರತಿಷ್ಠಿತ
 " ತಾಜ್ ಮಹಲ್ ಪ್ಯಾಲೇಸ್ ಹೋಟೆಲ್" ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ ಮೈಸ್ಪರ್ಶದ ಪುಳಕದಲ್ಲಿ, ಆಕಾಶದ ಚೆಂದಿರನ ಬೆಳಕಿನಲ್ಲಿ,....

 ರೌಂಡ್ ಟೇಬಲ್ಲಿನ ಸುತ್ತ, ನಾಲ್ಕು ಹುಡುಗಿಯರು ಕುಳಿತು ಲೇಡಿ ಸಹಾಯಕರು ಕೇಳಿ ಬೆರೆಸುತ್ತಿದ್ದ ನೀರು ಸೋಡಾ ಹಣ್ಣಿನ ರಸದ ಜೊತೆ ಸ್ಕಾಟಿಷ್ ವಿಸ್ಕಿ ಹೀರುತ್ತಾ ಆ ಲಕ್ಸುರಿ ಸೋಫಾದ ಉದ್ದಕ್ಕೂ ಕಾಲುಚಾಚುತ್ತಾ ಮೋಹಕವಾಗಿ ನಗುತ್ತಾ ಹೊಸ ವರ್ಷವನ್ನು ಎಂಜಾಯ್ ಮಾಡುತ್ತಿದ್ದರು........

ವಿಶ್ವವನ್ನೇ ಗೆದ್ದ ಸಂತಸ ಅವರ ಮುಖಗಳಲ್ಲಿ ಕಾಣುತ್ತಿತ್ತು. ಎಲ್ಲವನ್ನೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅವರು ತುಟಿಗೆ ತಾಗಿಸುತ್ತಿದ್ದ ವಿಸ್ಕಿಯ ಗ್ಲಾಸಿನ ಪ್ರತಿ ಗುಟುಕಿನಲ್ಲೂ ಇಡೀ ಬದುಕಿನ ಸ್ವಾದವನ್ನೇ ಹೀರುತ್ತಿರುವಂತೆ ಅನುಭವಿಸುತ್ತಿದ್ದರು........

ಸುಮಾರು 23/25 ವಯಸ್ಸಿನ ಆ ಹುಡುಗಿಯರ ಹಿನ್ನೆಲೆ ಗೊತ್ತಿಲ್ಲ. ಆದರೆ ಅತ್ಯಂತ ಶ್ರೀಮಂತ ಮನೆತನದವರು ಎಂಬುದಕ್ಕೆ ಸಾಕ್ಷಿ ಬೇಕಿರಲಿಲ್ಲ.......

ಜೋರಾಗಿ ಮಾತನಾಡುತ್ತಿದ್ದ ಅವರು..............

ವಿಶ್ವದ ಅತ್ಯಂತ ಶ್ರೀಮಂತ ಸ್ಥಳಗಳು, ವಿಹಾರ ಧಾಮಗಳು, ಲೇಟೆಸ್ಟ್ ಫ್ಯಾಷನ್ ಡಿಸೈನರುಗಳು, ಮೇಕಪ್ ಮತ್ತು ಪರ್ ಪ್ಯೂಮ್ ಗಳ ಹೆಸರುಗಳು, ಆಗೊಮ್ಮೆ ಹೀಗೊಮ್ಮೆ ತಮ್ಮ ಪೋಷಕರ ಬಿಸಿನೆಸ್ ಮತ್ತು ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳ ಸುತ್ತಲೇ ತಿರುಗುತ್ತಿತ್ತು.......

KINGFISHER BEER.......

ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪುರುಷರ ಹಾಸ್ಟೆಲ್.......

ರಾತ್ರಿ 9 ಗಂಟೆ, ಸುಮಾರು 13/15 ಜನ ಹುಡುಗರು ಹೊಸ ವರ್ಷದ ಸಂಭ್ರಮ ಆಚರಿಸಲು ಹಾಲ್ ನಲ್ಲಿ ಕುಳಿತಿದ್ದಾರೆ. ಸುತ್ತಲೂ ಕಿಂಗ್ ಫಿಶರ್ ಬಾಟಲುಗಳಿರುವ ಕ್ರೇಟುಗಳು ಇವೆ.

ಒಂದಿಬ್ಬರು ಹುಡುಗರು ಚಿಪ್ಸ್, ಮಸಾಲೆ ಕಡಲೆಬೀಜ, ಚಿಕನ್ ಕಬಾಬ್ ಅನ್ನು ಪೇಪರ್ ಪ್ಲೇಟುಗಳಲ್ಲಿ ಜೋಡಿಸುತ್ತಿದ್ದರೆ, ಇನ್ನೊಂದಿಬ್ಬರು ಗ್ಲಾಸುಗಳಿಗೆ ಬಿಯರ್ ಹಾಕುತ್ತಿದ್ದಾರೆ.

ಎಲ್ಲವೂ ಸೆಟ್ಲ್ ಆದ ಮೇಲೆ ಮಾತುಗಳು ಜೋರಾಗುತ್ತವೆ. ಅವರ ಸಹಪಾಠಿ ಹುಡುಗಿಯರ ವಿಷಯಗಳು, ಪ್ರೊಫೆಸರ್ ಗಳ ಜಾತಿ ರಾಜಕೀಯ, ಕ್ಯಾಂಪಸ್‌ನ ರೌಡಿಗಳ ಗುಣಗಾನ, ತಂದೆ ತಾಯಿಗಳ ಸಂಕಷ್ಟ, ಭವಿಷ್ಯದ ಕನಸುಗಳೇ ಅವರ ಮಾತಿನ ಮುಖ್ಯ ವಿಷಗಳಾಗಿದ್ದವು.........

KHODAY'S XXX RUM............

ಊರಿನ ಪಾಳು ಬಿದ್ದ ಕಟ್ಟಡದಲ್ಲಿ ಒಂದಷ್ಟು ಜನ ಸೇರಿದ್ದಾರೆ. ಕಲ್ಲು ಮಣ್ಣುಗಳು ಜಾಗದ ಮಧ್ಯೆ ಒಂದು ಚಾಪೆ ಹಾಸಿ ಇಸ್ಪೀಟೆಲೆಗಳನ್ನು ಇಟ್ಟಿದ್ದಾರೆ. ಯಾರದೋ ಮನೆಯಿಂದ ದೊಡ್ಡ ತಪ್ಪಲೆಯಲ್ಲಿ ಮಸಾಲೆ ಹಾಕಿ ಬೇಯಿಸಿದ ಕೋಳಿ ಮಾಂಸದ ಅಡುಗೆ ಇಟ್ಟಿದ್ದಾರೆ. ಪಕ್ಕದಲ್ಲಿ ಒಂದು ರಾಶಿ ಬೇಯಿಸಿದ ಮೊಟ್ಟ ಇದೆ. ಒಂದಷ್ಟು ಈರುಳ್ಳಿ ಮತ್ತು ಸೌತೆಕಾಯಿ ಹೋಳುಗಳನ್ನು ಪೇಪರಿನಲ್ಲಿ ಸುತ್ತಿಟ್ಟಿದ್ದಾರೆ. ಕತ್ತಲೆಯನ್ನು ಹೋಗಲಾಡಿಸಲು ಎಲ್ಲರೂ ಮೊಬೈಲ್‌ ಟಾರ್ಚ್ ಆನ್ ಮಾಡಿದ್ದಾರೆ. ಆ ಬೆಳಕಿನಲ್ಲಿ ದಟ್ಟನೆಯ ಸಿಗರೇಟ್ ಹೊಗೆ ಸುತ್ತಲೂ ಆವರಿಸಿದೆ.

ಯಾರೋ ಒಬ್ಬ ಚಿಕ್ಕ ಹುಡುಗ ಎಲ್ಲರಿಗೂ ಪ್ಲಾಸ್ಟಿಕ್ ಲೋಟಗಳಲ್ಲಿ ಆ ರಮ್ ಅನ್ನು ಅಳತೆಯಲ್ಲಿ ಸುರಿದು ಸುರಿದು ಕೊಡುತ್ತಿದ್ದಾನೆ. ಕುಡಿಯುತ್ತಾ ತಿನ್ನುತ್ತಾ ಇಸ್ಪೀಟು ಆಟ ಶುರುವಾಗುತ್ತದೆ......

ಮೌನವೇ ಹೆಚ್ಚಾಗಿದ್ದರೂ ಆಗಾಗ ಸೋತವರು ಕೆಟ್ಟ ಕೊಳಕ ಭಾಷೆಯಲ್ಲಿ ಅವರ ಅದೃಷ್ಟವನ್ನು ಹಳಿಯುತ್ತಾರೆ. ಕಳೆದುಹೋದ ‌ವರ್ಷದ ಘಟನೆಗಳನ್ನು ನೆನಪಿಸಿಕೊಂಡು ಯಾರಿಗೋ ಶಾಪ ಹಾಕುತ್ತಾರೆ. ಒಬ್ಬ ಕುಡಿತ ಹೆಚ್ಚಾಗಿ ವಾಂತಿ ಮಾಡಿದರೆ ಇನ್ನೊಬ್ಬ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾನೆ. ಉಳಿದವರು ತಮಗೆ ಇದು ಸಂಭಂದವೇ ಇಲ್ಲದಂತೆ ಆಟದಲ್ಲಿ ಮಗ್ನರಾಗಿದ್ದಾರೆ.......

CAKES AND JUICE.......

ಒಂದು ಮನೆಯ ಮಹಡಿಯ ಮೇಲೆ ಸುತ್ತಮುತ್ತಲಿನ ಕೆಲವು ಕುಟುಂಬಗಳು ಮತ್ತು ಅವರ ಸಂಬಂಧಿಗಳು ಒಂದಷ್ಟು ಹಣವನ್ನು ಎಲ್ಲರೂ ಸಮನಾಗಿ ಒಟ್ಟುಗೂಡಿಸಿ ಕೇಕ್, ಮಿಕ್ಸ್ಚರ್, ಜ್ಯೂಸ್ ತಂದು, ಕೆಳಗೆ ಕುಳಿತು ಕೊಳ್ಳಲು ಚಾಪೆಗಳನ್ನು ಹಾಕಿ, ಯಾರದೋ ಮನೆಯಿಂದ ಆಡಿಯೋ ಸಿಸ್ಟಮ್ ತಂದು ಜೋರಾಗಿ ಸಿನಿಮಾ ಹಾಡುಗಳನ್ನು ಹಾಕಿ ಮನಸ್ಸಿಗೆ ಬಂದಂತೆ ಕುಣಿಯುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಕೆಲವರು ಜ್ಯೂಸ್ ಕುಡಿಯುತ್ತಾ ತಾವು ಕುಣಿಯುತ್ತಿದ್ದರೆ ಇನ್ನೊಂದಿಷ್ಟು ಮಕ್ಕಳು ಆ ಜೋರು ಗಲಾಟೆಯಲ್ಲೂ ನಿದ್ದಿಗೆ ಜಾರಿದ್ದಾರೆ. ಒಂದೆರಡು ಸಂಸಾರಗಳಲ್ಲಿ ಗಂಡ ಹೆಂಡತಿಯ ಮುನಿಸು ಕಾಣಿಸುತ್ತಿದೆ. ಅವರು ಸುಮ್ಮನೆ ಕಾಟಾಚಾರಕ್ಕೆ ಕುಳಿತಿದ್ದಾರೆ. 

ಹೀಗೆ ಭಾರತದ ಕೆಲವು ವರ್ಗಗಳ ಹೊಸ ವರ್ಷದ ಸಂಭ್ರಮ  ನಡೆಯುತ್ತದೆ.
ಇದಲ್ಲದೆ ಇನ್ನೂ ಹೇಗೇಗೋ......

ಅರ್ಥಪೂರ್ಣ ಆಚರಣೆಯೂ ಉಂಟು.
ಸಹಜ ಸರಳ ಸ್ವಾಗತವೂ ಕೋರಲಾಗುತ್ತದೆ.
ಹಾಗೇ ಕೆಲವರು ನಿರ್ಲಕ್ಷ್ಯವನ್ನು ತೋರುತ್ತಾರೆ......

ಕ್ಯಾಲೆಂಡರಿನ ಮೊದಲನೇ ದಿನಕ್ಕೆ ಏನೇನು ಅವತಾರಗಳೋ.......

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹🌹🌹🌹
ತೃಪ್ತಿಯೇ ನಿತ್ಯ ಹಬ್ಬ.....

                 ದೀಪದಿಂದ ದೀಪವ                      ಹಚ್ಚಬೇಕು ಮಾನವ..........

ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ  24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ  ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ.

ಪಾಶ್ಚಿಮಾತ್ಯರು  ಜನವರಿ 1 ನ್ನು ವರ್ಷದ ಪ್ರಾರಂಭವೆಂತಲೂ ಡಿಸೆಂಬರ್ 31 ನ್ನು ಕೊನೆಯ ದಿನ ಎಂತಲೂ ಪರಿಗಣಿಸುತ್ತಾರೆ.

ಒಂದೊಂದು ನಾಗರಿಕತೆಯಲ್ಲಿ ಒಂದೊಂದು ದಿನವನ್ನು ಪ್ರಾರಂಭದ ದಿನವಾಗಿ ಗುರುತಿಸಲಾಗಿದೆ. ಭಾರತೀಯ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪ್ರಾರಂಭದ ದಿನವನ್ನು ಹೊಸ ವರ್ಷ ಎಂತಲೂ ಫಾಲ್ಗುಣದ ಕೊನೆಯ ದಿನವನ್ನು ಅಂತ್ಯ ಎಂತಲೂ ಕರೆಯಲಾಗುತ್ತದೆ.

ಸೃಷ್ಟಿಯ ಸಹಜ ಕ್ರಿಯೆಯನ್ನು ಯಾರು ಏನೇ ಕರೆದುಕೊಳ್ಳಲ್ಲಿ ಅಂತಹ ವಿಶೇಷವೇನು ಇಲ್ಲ. ಆದರೆ ರೂಢಿಗತವಾಗಿ ಯುವ ಸಮೂಹ ಕ್ಯಾಲೆಂಡರ್ ನ ಜನವರಿ 1 ಹೊಸ ವರ್ಷದ ಸ್ವಾಗತ ಸಮಾರಂಭವಾಗಿ ಆಚರಿಸುತ್ತಾರೆ. ಸಂಭ್ರಮಕ್ಕೆ ಯಾವ ದಿನವಾದರೇನು....

ನೇಸರನ ಕಿರಣಗಳು,
ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ,
ಗಿಡಮರಬಳ್ಳಿಗಳನ್ನು ಹಾದು,
ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ,
ಇಬ್ಬನಿಯ ಜೊತೆಗೂಡಿ
ಪ್ರತಿಫಲನ ಹೊಂದಿ,
ಧೂಳಿನ ಕಣಗಳನ್ನು ಭೇದಿಸಿ,
ಕಿಟಕಿಯ ಸರಳುಗಳೊಳಗೆ ಹರಿದು,
ಕಣ್ಣ ರೆಪ್ಪೆಯ ಬಳಿ ಸರಿದಾಗ,
ಉದಯವಾಯಿತು,....
2020............

ಆದರೆ, ಇದೇನಿದು. ಹೊಸ ವರ್ಷದ ಆಚರಣೆಯೆಂದರೆ ದುರ್ಘಟನೆಯೇ, ಯುದ್ದವೇ, ಗಂಭೀರ ವಿಷಯವೇ ?

ಪೋಲೀಸ್ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ ನೋಡಿದರೆ ಯಾರೋ ಅನಾಗರಿಕರೋ, ದರೋಡೆಕೋರರೋ ಹೊಸ ವರ್ಷ ಆಚರಿಸಲು ಅಲ್ಲಿ ಸೇರಿದಂತಿದೆ.

ಕುಡಿದು ತೂರಾಡಿ ಅಸಭ್ಯವಾಗಿ ವರ್ತಿಸಿ ಹೊಸ ವರ್ಷ ಸ್ವಾಗತಿಸುವುದಾದರೆ ನಮ್ಮ ಸಮಾಜದ ಯುವಕ ಯುವತಿಯರ ಮನೋವೈಕಲ್ಯದ ಬಗ್ಗೆ ಮರುಕ ಉಂಟಾಗುತ್ತದೆ. ಒಂದು ಸಂಭ್ರಮವನ್ನು ಇತರರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದೆ ಸಂಯಮದ ರೀತಿ ನೀತಿಗಳಂತೆ ಆಚರಿಸಲು ಸಾಧ್ಯವಾಗದಿದ್ದರೆ ಅದನ್ನು ಏನೆಂದು ಅರ್ಥಮಾಡಿಕೊಳ್ಳುವುದು. ಇದು ನಾಚಿಕೆಗೇಡು. ಹೊಸ ವರ್ಷದ ಸ್ವಾಗತ ಉನ್ಮಾದದಿಂದ ಆಗಬಾರದು. ಅದೊಂದು ಹೊಸ ಉತ್ಸಾಹದ ಚಿಲುಮೆಯಂತಿರಬೇಕು.

ಅದಕ್ಕಾಗಿ..........

ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು........

ವಿಷಯ ಯಾವುದೇ ಇರಲಿ,
ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ....

ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ.........

ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ....

ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ.....

ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.....

ಸಭ್ಯತೆ - ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ...

ಆಗ ಮೂಡುವ ಅರಿವಿನಿಂದ.....

ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ.

ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ.

ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ
ಸಾರ್ಥಕತೆಯತ್ತಾ ಸಾಗೋಣ...............

ಹೊಸ ವರುಷ ಎಂಬುದೇನಿಲ್ಲ
ಅರಿತವಗೆ,

" ಕಳೆದುಕೊಳ್ಳುವುದು ಏನೂ ಇಲ್ಲ 
ಪಡೆದುಕೊಳ್ಳುವುದೇ ಎಲ್ಲವೂ.......... "

ಶುಭಾಶಯಗಳು.
ಎಲ್ಲರಿಗೂ ಒಳ್ಳೆಯದಾಗಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹🌹🌹

ವಾದ ವಿವಾದಗಳ ನಂತರ 
NRC - CAA ಬಗ್ಗೆ ಮತ್ತಷ್ಟು ಮಾಹಿತಿ ಮತ್ತು ಪರಿಹಾರದ ಸಲಹೆಗಳು........

ಇಂದಿನಿಂದ ಹಿಂದಿನವರೆಗೆ.......

1) ಗಲಭೆ ಕೋರರನ್ನು ಶಿಕ್ಷಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡುವವರು ದೇಶದ್ರೋಹಿಗಳು.

2) ಹಾಗಾದರೆ ಸಂವಿಧಾನವನ್ನೇ ನಾಶ ಮಾಡಿ ಧರ್ಮದ ಆಧಾರದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಮಾಡಿದ್ದು ಸರಿಯೇ ?

3) ದೇಶ ವಿಭಜನೆಯಾಗಿರುವುದೇ ಧರ್ಮದ ಆಧಾರದ ಮೇಲೆ. ಆದ್ದರಿಂದ ಅಖಂಡ ಭಾರತದ ಹಿಂದೂಗಳಿಗೆ ನೆಲೆ ಒದಗಿಸುವುದು ತಪ್ಪೇ ?

4) ಖಂಡಿತ ಇಲ್ಲ. ಆದರೆ ಅದರಲ್ಲಿ ಹಿಂದೂಯೇತರ ಕ್ರಿಶ್ಚಿಯನ್, ಬೌದ್ಧ, ಸಿಖ್, ಪಾರ್ಸಿ, ಜೈನ್ ಮುಂತಾದ ಎಲ್ಲರನ್ನೂ ಸೇರಿಸಿ, ಅದರಲ್ಲೂ ನಮ್ಮ ಮೇಲೆ ‌ಸ್ವಾತಂತ್ರ್ಯ ಪೂರ್ವದಲ್ಲಿ ದಬ್ಬಾಳಿಕೆ ನಡೆಸಿದ ಕ್ರಿಶ್ಚಿಯನ್ ಧರ್ಮದವರಿಗೂ ಪೌರತ್ವ ನೀಡಿ ಮುಸ್ಲಿಮರನ್ನು ಮಾತ್ರ ಹೊರಗಿಟ್ಟಿದ್ದು ಪಕ್ಷಪಾತವಲ್ಲವೇ ? ಮುಸ್ಲಿಮರಿಗೆ ಮಾಡಿದ ಅವಮಾನವಲ್ಲವೇ ?

5) ಖಂಡಿತ ಇಲ್ಲ. ಮುಸ್ಲಿಮರಿಗೆ ಇತರ ಅನೇಕ ದೇಶಗಳಿವೆ. ಹಿಂದೂಗಳಿಗೆ ಇರುವುದು ಒಂದೇ ದೇಶ. ( ನೇಪಾಳ ತುಂಬಾ ಚಿಕ್ಕದು )

6) ಹಾಗಾದರೆ ಕ್ರಿಶ್ಚಿಯನ್ ಮತ್ತು ಬೌದ್ದರನ್ನು ಸೇರಿಸಿದ್ದು ಏಕೆ ? ಅವರಿಗೂ ಬೇರೆ ದೇಶ ಇದೆಯಲ್ಲವೇ ?

7) ಇಲ್ಲ, ಅವರ ಮೂಲದಲ್ಲಿ ಹಿಂದೂಗಳೇ. ಜೊತೆಗೆ ಈ ಕಾಯಿದೆಯಿಂದ ಇಲ್ಲಿನ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ವಲಸಿಗರಿಗೆ ಮಾತ್ರ ತೊಂದರೆ.

8) ಹೌದೆ, ಹಾಗಾದರೆ ಭಾರತ ದೇಶದಲ್ಲಿ ಅತ್ಯಂತ ಕಡುಬಡತನದಿಂದ ಇರುವವರು ಮುಸ್ಲಿಮರು. ಅವರಲ್ಲಿ ಶೇಕಡಾ 30% ಜನರಿಗಾದರೂ  ತಮ್ಮ ದಾಖಲೆಯನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮುಸ್ಲಿಂ ಹೊರತುಪಡಿಸಿ ಇತರೆ ಯಾವುದೇ ಧರ್ಮದ ವ್ಯಕ್ತಿ ತನ್ನ ದಾಖಲೆ ಒದಗಿಸದಿದ್ದರೆ  ಆತನನ್ನು CAA ಕಾನೂನಿನಡಿ ಮತ್ತೆ ಪೌರತ್ವ ಪಡೆದುಕೊಳ್ಳಬಹುದು. ಆದರೆ ಆತ ಮುಸ್ಲಿಮನಾದರೆ  ಗಡಿಪಾರು ನಿಶ್ಚಿತ. ಇದು ಸರಿಯೇ ?

9) ಇಲ್ಲ, ಅವರನ್ನು ಗಡಿಪಾರು ಮಾಡುವುದಿಲ್ಲ. ಅವರಿಗೆ ತಮ್ಮ ಪೌರತ್ವ ಋಜುವಾತು ಪಡಿಸಲು ನ್ಯಾಯಾಲಯದಲ್ಲಿ ಮತ್ತೊಂದು ಅವಕಾಶ ಕಲ್ಪಿಸಲಾಗುತ್ತದೆ.

10) ಅಂದರೆ ಇಲ್ಲೇ ಹುಟ್ಟಿ ಬೆಳೆದ ಮುಸ್ಲಿಮರು ದಾಖಲೆ ಇಲ್ಲ ಎಂಬ ಒಂದೇ ಕಾರಣದಿಂದ ಊಟಕ್ಕೇ ಇಲ್ಲದಿರುವಾಗ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯುವಂತೆ ಮಾಡುವುದರ ಹಿಂದಿನ ಉದ್ದೇಶವಾದರೂ ಏನು ?

11 ) ಖಂಡಿತ ಇದರ ಹಿಂದೆ ಒಂದು ಒಳ್ಳೆಯ ಉದ್ದೇಶವಿದೆ. ಅನೇಕ ನುಸುಳುಕೋರರು, ಮುಖ್ಯವಾಗಿ ಬಾಂಗ್ಲಾದೇಶೀಯರು ಭಾರತಕ್ಕೆ ಅಕ್ರಮವಾಗಿ ನುಗ್ಗಿದ್ದಾರೆ. ಅವರಿಂದ ನಮ್ಮ ಪ್ರಗತಿಯ ಯೋಜನೆಗಳು ದಾರಿ ತಪ್ಪುತ್ತಿವೆ. ಅಲ್ಲದೆ ಅವರು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಖಚಿತ ಮಾಹಿತಿ ಇದೆ. 

12) ಹೌದಲ್ಲವೇ ? ಆಕ್ರಮ ನುಸುಳುಕೋರರು ಮತ್ತು ಭಯೋತ್ಪಾದಕರನ್ನು ಹೊರಗೆ ಹಾಕಲು ಈಗಲೂ ಸಂವಿಧಾನದಲ್ಲಿ ಕಾನೂನು ರೀತಿಯಲ್ಲಿ ಅನೇಕ ಅವಕಾಶವಿದೆ. ಅವರನ್ನು ಗಡಿಪಾರು ಮಾಡುವುದನ್ನು ಭಾರತೀಯ ಮುಸ್ಲಿಮರು ಸ್ವಾಗತಿಸುತ್ತಾರೆ. ಆದರೆ ಅದಕ್ಕಾಗಿ ಇಡೀ ಮುಸ್ಲಿಂ ಸಮುದಾಯವನ್ನೇ ಗುರಿ ಮಾಡಿ ತಪಾಸಣೆ ಮಾಡಿ ಅವಮಾನ ಮಾಡಿ ಅಭದ್ರತೆ ಸೃಷ್ಟಿಸಿ ಅಪಾರ ಹಣ ಖರ್ಚು ಮಾಡಿ ಇಡೀ ದೇಶದಲ್ಲೇ NRC ಮಾಡುವುದು ಯಾವ ನ್ಯಾಯ. ಅದೇ ಸಂಪನ್ಮೂಲಗಳನ್ನು ಬಳಸಿಕೊಂಡು ಆಕ್ರಮ ನುಸುಳುಕೋರರನ್ನು ಹೊಡೆದಟ್ಟುವ ಸುಲಭ ಉಪಾಯ ಇದ್ದರೂ ಈ ಸಂವಿಧಾನ ಬಾಹಿರ ಕಾನೂನಿನ ಒಳಮರ್ಮ ಏನು ?

13) ಯಾವುದೇ ಒಳಮರ್ಮವಿಲ್ಲ. 
70 ವರ್ಷದಿಂದ ಆಡಳಿತ ನಡೆಸಿದ ಸರ್ಕಾರಗಳು ಓಟಿಗಾಗಿ ಯಾರು ಯಾರಿಗೋ ಒಳನುಸುಳಲು ಅವಕಾಶ ನೀಡಿ ದೇಶವನ್ನೇ ತೊಂದರೆಗೆ ಸಿಲುಕಿಸಿವೆ. ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳ ಹಿಂದೂಗಳ ಪರಿಸ್ಥಿತಿ ಏನಾಗಿದೆ ನಿಮಗೆ ತಿಳಿದಿದೆಯೇ ?

14) ತಿಳಿದಿದೆ. ಅದಕ್ಕಾಗಿ ಇಲ್ಲಿನ ಮುಸ್ಲಿಮರನ್ನು ಹೊಣೆ ಮಾಡುವುದು ಯಾವ ನ್ಯಾಯ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅಂದು ದೇಶ ವಿಭಜನೆಯಾದಾಗ ಪಾಕಿಸ್ತಾನಕ್ಕೆ ತೆರಳದೆ ಭಾರತದ ನೆಲದಲ್ಲಿ ನಮ್ಮ ನಿಷ್ಠೆ ತೋರಿ ಇಲ್ಲಿಯೇ ಉಳಿದು ಸೈನ್ಯವೂ ಸೇರಿ ಎಲ್ಲಾ ರಂಗಗಳಲ್ಲೂ ಜೊತೆಯಾಗಿ ಸೇವೆ ಸಲ್ಲಿಸುತ್ತಿರುವಾಗ ಓಟಿಗಾಗಿ ನಾವು ಅಲ್ಪಸಂಖ್ಯಾತರೆಂದು ದೌರ್ಜನ್ಯ ಮಾಡುವುದು ಸರಿಯೇ ?

15) ಎಲ್ಲಿದೆ ದೌರ್ಜನ್ಯ. ಮುಸ್ಲಿಮರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿಲ್ಲವೇ ? ಎಲ್ಲಾ ರೀತಿಯ ಧಾರ್ಮಿಕ ಸ್ವಾತಂತ್ರ್ಯ ನಿಮಗಿಲ್ಲವೇ ?

16) ಹೌದು, ಇತ್ತು ಈಗ ಇಲ್ಲ. ಮುಸ್ಲಿಮರನ್ನು ದ್ವೇಷಿಸುತ್ತಲೇ ಅಧಿಕಾರಕ್ಕೆ ಬಂದ ಪಕ್ಷದ ಸರ್ಕಾರ ತನ್ನ ನಡೆಯಲ್ಲಿ ಸಂಪೂರ್ಣ ಮುಸ್ಲಿಂ ದ್ವೇಷ ಸಾಧಿಸುತ್ತಿರುವುದು ನಮಗೆ ಮಾತ್ರ ಅರ್ಥವಾಗುತ್ತದೆ. ಮುಸ್ಲಿಂ ದ್ವೇಷದ ಹಿಂದೂಗಳಿಗೆ ಅದು ಅರ್ಥವಾಗುವುದಾದರೂ ಹೇಗೆ. ಅವರಿಗೆ ಇದರಿಂದಾಗಿ ಸಂತೋಷವೇ ಹೆಚ್ಚು.

17) ನಿಮ್ಮ ಅಭಿಪ್ರಾಯ ತಪ್ಪು. ಈಗಲೂ ವಿಶ್ವದಲ್ಲಿ ಅತಿಹೆಚ್ಚು ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿರುವುದು ಭಾರತೀಯ ಮುಸ್ಲಿಮರು.

18) ಅದನ್ನು ಸಂತೋಷದಿಂದ - ಒಮ್ಮತದಿಂದ ಹೇಳಬೇಕಿರುವುದು ಮುಸ್ಲಿಮರೇ ಹೊರತು ಹಿಂದುಗಳಲ್ಲ. ಸ್ವಾತಂತ್ರ್ಯ ಅನುಭವಿಸುವವರು ಅದನ್ನು ಹೇಳಬೇಕು. ಕೊಡುವವರು ಅಲ್ಲ. ಜೊತೆಗೆ ಈ ಕಾನೂನು ಮಾಡಿದವರ ಮೂಲ ಮನಸ್ಥಿತಿ ಮುಸ್ಲಿಮರಿಗೆ ತೊಂದರೆ ಕೊಡವ ಹಿಡನ್ ಅಜೆಂಡಾ ಎಂಬುದು ಸೂಕ್ಷ್ಮ ಮನಸ್ಸಿನ ಯಾರಿಗಾದರೂ ಅರ್ಥವಾಗುತ್ತದೆ.

19) ಇರಲಿ ನಿಮಗೆ ಅಸಮಾಧಾನ ಇದ್ದರೆ ಪ್ರತಿಭಟಿಸುವ ಹಕ್ಕು ನಿಮಗಿದೆ. ಆದರೆ ಈ ಹಿಂಸಾತ್ಮಕ ವಿಧ್ವಂಸಕ ಕೃತ್ಯಗಳು ಏಕೆ ?

20) ನೋಡಿ, ಈಗಲೂ ಈ ದೇಶದ ಅನೇಕ ಬಲಪಂಥೀಯರು ಭಾರತಕ್ಕೆ ಸ್ವಾತಂತ್ರ್ಯ ಬಂದಿರುವುದು ಗಾಂಧಿಯವರ ಅಹಿಂಸೆಯಿಂದ ಅಲ್ಲ. ರಕ್ತ ಕ್ರಾಂತಿಯ ಹೋರಾಟ ಮತ್ತು ಬಲಿದಾನದಿಂದ ಎಂದು ಪ್ರತಿಪಾದಿಸುತ್ತಾರೆ. ಅದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತೇವೆ. 

ಆದರೆ ಸ್ವಾತಂತ್ರ್ಯ ನಂತರದ ಬಹುತೇಕ ಚಳವಳಿಗಳು ಉದಾಹರಣೆಗೆ ದ್ರಾವಿಡ ಚಳವಳಿ, ಭಾಷಾ ಚಳವಳಿ, ಪ್ರತ್ಯೇಕತಾ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ, ವಿದ್ಯಾರ್ಥಿ ಚಳವಳಿ, ದಲಿತ ಚಳವಳಿ, ರಾಮ ಜನ್ಮಭೂಮಿ ಚಳವಳಿ, ದೇಶಾದ್ಯಂತ ನಡೆದ ಹಿಂದುಳಿದ ವರ್ಗಗಳ ಮೀಸಲಾತಿ ಚಳವಳಿ ಹೀಗೆ ಎಲ್ಲದರಲ್ಲೂ ಪ್ರತಿಭಟನೆಯ ಸಂದರ್ಭದಲ್ಲಿ ಒಂದಷ್ಟು ಹಿಂಸೆಗಳು ನಡೆಯುತ್ತಲೇ ಇದೆ. ಗಾಂಧಿ ಮಾರ್ಗವನ್ನು ತ್ಯಜಿಸಿ ಭಾರತ ಬಹಳ ಮುಂದೆ ಬಂದಿದೆ. ಈಗ ಮುಸ್ಲಿಮರಿಗೆ ಮಾತ್ರ ಹಿಂಸಾವಾದಿಗಳು ಎಂಬುದು ಯಾವ ನ್ಯಾಯ ?

21) ನೀವು ಏನೇ ಸಮರ್ಥನೆ ನೀಡಿ ವಿಶ್ವದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ಕಡೆ ಹೊಂದಾಣಿಕೆ ಮಾಡಿಕೊಳ್ಳದೆ ಗಲಭೆ ಸೃಷ್ಟಿಸುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ.

22) ಹೌದು, ಪ್ರಾಮಾಣಿಕವಾಗಿಯೇ ಹೇಳುತ್ತೇವೆ. ಹಿಂದು ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳು ಒಂದಕ್ಕೊಂದು ವಿಭಿನ್ನ ಆಚರಣೆಗಳನ್ನು ಹೊಂದಿವೆ. ಅವುಗಳ ಮಧ್ಯೆ ದ್ವೇಷವೂ ಇದೆ. ಆದ್ದರಿಂದ ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ಕಡೆ ಅವರನ್ನು ಪ್ರಚೋದಿಸಲಾಗುತ್ತದೆ, ಸಣ್ಣ ಔದಾರ್ಯವನ್ನು ದೊಡ್ಡದು ಮಾಡಲಾಗುತ್ತದೆ. ಸಣ್ಣ ಗಲಾಟೆಯನ್ನು ಭಯೋತ್ಪಾದಕ ದಾಳಿ ಎನ್ನಲಾಗುತ್ತದೆ.

23) ಹೌದು, ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಭಯೋತ್ಪಾದಕರು ಮುಸ್ಲಿಮರು ಎಂಬ ಸತ್ಯವನ್ನಾದರೂ ಒಪ್ಪಿಕೊಳ್ಳಿ.

22) ನೋಡಿ, ಮುಸ್ಲಿಮರಲ್ಲಿಯೂ ತಂದೆ ತಾಯಿ ಮಕ್ಕಳು ಅಕ್ಕ ತಂಗಿ ಕುಟುಂಬ ಧರ್ಮ ಕರ್ಮ ಪ್ರೀತಿ ಭಯ ಸಂಸ್ಕಾರ ಎಲ್ಲರಂತೆಯೇ ಇದೆ. ಆದರೆ ಎಲ್ಲರಂತೆ ಬಡತನ ಅಜ್ಞಾನದ ಕಾರಣದಿಂದಾಗಿ ಕೆಲವು ಮೂಲಭೂತವಾದಿಗಳು ಮತ್ತು ಇಸ್ಲಾಂ ವಿರೋಧಿಗಳು ಅಂತಹ ಜನರನ್ನು ದುರುಪಯೋಗ ಪಡಿಸಿಕೊಳ್ಳುವುದು ನಡೆದಿದೆ. ಅದೇ ಭಯೋತ್ಪಾದನೆ. ಇದು ಎಲ್ಲಾ ಧರ್ಮಗಳಲ್ಲೂ ಇದೆ.......

ಹೀಗೆ ಮುಗಿಯದ ಚರ್ಚೆ ನಡೆಯುತ್ತಲೇ ಇದೆ. ಅಪನಂಬಿಕೆಯ ವಾತಾವರಣದಲ್ಲಿ ಈ ರೀತಿಯ ವಾದವಿವಾದಗಳು ನಿರಂತರ.....

ಹಾಗಾದರೆ ಪರಿಹಾರ ಏನು ?????

ಖಂಡಿತವಾಗಿಯೂ ಇದು ಇಷ್ಟೊಂದು ಭುಗಿಲೇಳುವ ಸಮಸ್ಯೆಯೇನಲ್ಲ. ಸ್ವಾರ್ಥ ರಾಜಕಾರಣ ಬಿಟ್ಟರೆ ಮತ್ತೇನು ಇಲ್ಲ.

CAA
******
ಮುಸ್ಲಿಮರನ್ನು ಹೊರತುಪಡಿಸಿ ಪಾಕಿಸ್ತಾನ ಬಾಂಗ್ಲಾದೇಶ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಇತರ ಧರ್ಮದವರಿಗೆ ಕೆಲವು ನಿಯಮದಡಿ ಭಾರತದ ಪೌರತ್ವ ನೀಡುವುದು.

ಮೊದಲಿಗೆ ಈ ಕಾನೂನಿನಿಂದ ಭಾರತದ ಮುಸ್ಲಿಮರು ಸೇರಿ ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ಮುಸ್ಲಿಮರನ್ನು ಹೊರತುಪಡಿಸಿ ಇತರ ಎಲ್ಲಾ ಧರ್ಮಗಳನ್ನು ಸೇರಿಸಿದ್ದು ಕಾರಣವೇನೇ ಇರಲಿ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು.

ಎರಡನೆಯದಾಗಿ,
ಈ ಕಾನೂನಿನ ಅವಶ್ಯಕತೆಯೇ ಇರಲಿಲ್ಲ. ಈಗಾಗಲೇ ಇರುವ ವಲಸೆ ಕಾನೂನು, ವೀಸಾ ಕೊಡುವ ವಿಧಾನಗಳನ್ನು ಬಳಸಿಕೊಂಡು ವಿವೇಚನೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಲ್ಲಿ ತೊಂದರೆ ಇರುವ ಹಿಂದೂಗಳಿಗೆ ಇಲ್ಲಿ ಪೌರತ್ವ ನೀಡಬಹುದು ಮತ್ತು ಅದೇ ಆಧಾರದಲ್ಲಿ ಹಿಂದೂಯೇತರ ಜನರ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಬಳಸಿಕೊಳ್ಳಬಹುದು. ಜೊತೆಗೆ ನನಗೆ ತಿಳಿದಂತೆ ಭಾರತದ ಯಾವುದೇ ಮುಸ್ಲಿಮರು ಇತರೆ ದೇಶಗಳ ಮುಸ್ಲಿಮರಿಗೆ ಪೌರತ್ವ ಕೊಡಿ ಎಂದು ಹೇಳುವುದಿಲ್ಲ ಮತ್ತು ಅದನ್ನು ನಿರಾಕರಿಸಿ ಎಂದೇ ಬಯಸುತ್ತಾರೆ. ಆದರೆ ಸಂವಿಧಾನಾತ್ಮಕ ಪಕ್ಷಪಾತ ಬೇಡ ಎಂಬುದು ಅವರ ಆಗ್ರಹ.

NRC
******
ದೇಶಾದ್ಯಂತ ಎಲ್ಲಾ ಭಾರತೀಯರ ಪೌರತ್ವ ನೋಂದಣಿ. ಅದಕ್ಕಾಗಿ ಕೆಲವು ದಾಖಲೆಗಳನ್ನು ನೀಡಬೇಕು. ಅಕ್ರಮ ವಲಸಿಗರನ್ನು ಗುರುತಿಸುವುದು ಇದರ ಮೂಲ ಉದ್ದೇಶ.

ಮೂಲಭೂತವಾಗಿ ಭಾರತದಲ್ಲಿ ಅಕ್ರಮ ವಲಸೆ ಸಮಸ್ಯೆ ಇರುವುದು ಪೂರ್ವದ ರಾಜ್ಯಗಳಲ್ಲಿ ಮಾತ್ರ. ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಗಡಿಯಂಚಿನ ರಾಜ್ಯಗಳಲ್ಲಿ. ಇತರೆ ಕಡೆ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಅದನ್ನು ಸ್ಥಳೀಯ ಪೋಲೀಸ್ ಮತ್ತು ಆಡಳಿತ ವ್ಯವಸ್ಥೆ ನಿಭಾಯಿಸಬಹುದು. ಆ ಕಾರಣದಿಂದಾಗಿ NRC ದೇಶಾದ್ಯಂತ ವಿಸ್ತರಿಸುವುದು ಬಾಲಿಶ ಕ್ರಮವಾಗುತ್ತದೆ.

ಅದೇ ಸಂಪನ್ಮೂಲಗಳನ್ನು ಬಳಸಿಕೊಂಡು ಪೂರ್ವ ರಾಜ್ಯಗಳಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷತೆಯಿಂದ ಅಕ್ರಮ ವಲಸಿಗರನ್ನು ಗುರುತಿಸಬಹುದು. 

ಇದಕ್ಕಾಗಿ ಭಾರತದ ಚುನಾವಣಾ ಆಯೋಗದ ರೀತಿಯಲ್ಲಿ ಆಕ್ರಮ ನುಸುಳುಕೋರರ ಪತ್ತೆ ಆಯೋಗವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದು ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆ ರಚಿಸಬೇಕು. ಅದರ ಅಡಿಯಲ್ಲಿ ಆಡಳಿತ ಕೆಲಸ ಮಾಡಬೇಕು ಮತ್ತು ಅದು ಸುಪ್ರೀಂ ಕೋರ್ಟ್ ನ ಸಂವಿಧಾನಾತ್ಮಕ ಪೀಠಕ್ಕೆ ಮಾತ್ರ ಉತ್ತರದಾಯಿತ್ವ ಹೊಂದಿರಬೇಕು.

ಅನೇಕ ಪರಿಶೀಲನೆಗಳ ನಂತರ ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಅಕ್ರಮ ಎಂದು ಆ ಆಯೋಗ ಘೋಷಿಸಿದರೆ ಅವರನ್ನು ಈ ಪಟ್ಟಿಯಲ್ಲಿ ಸೇರಿಸಬೇಕು.

ಇಲ್ಲಿನ ಮತ್ತೊಂದು ಸೂಕ್ಷ್ಮ ಅವರನ್ನು ಏನು ಮಾಡಬೇಕು ಎಂಬುದು. ಕೆಲವು ಆಕ್ರೋಶ ಭರಿತ ವ್ಯಕ್ತಿಗಳು  " ಅಕ್ರಮ ನುಸುಳುಕೋರರಿಗೆ ಆಶ್ರಯ ನೀಡಲು ಭಾರತ ಧರ್ಮ ಛತ್ರವಲ್ಲ " ಎಂದು ಹೇಳುತ್ತಾರೆ.

ವಿಶ್ಚಕ್ಕೆ ಧರ್ಮ ಛತ್ರ ಎಂಬ ಅಧ್ಬುತ ಮತ್ತು ಮಾನವೀಯ ಪರಿಕಲ್ಪನೆ ನೀಡಿದ ವಿಷಯವನ್ನು ಈ ಜನ ಮರೆಯುತ್ತಿದ್ದಾರೆ. ಈ ವಿಷಯದಲ್ಲಿ ತುಂಬಾ ಸೂಕ್ತವಾದ ಭಾರತದ ಸಂಸ್ಕೃತಿಗೆ ಭಾರತದ ವಿಶಾಲ ಆಧ್ಯಾತ್ಮಿಕ ಚಿಂತನೆಗೆ ಧಕ್ಕೆಯಾಗದಂತೆ ವಾಸ್ತವಕ್ಕೆ ಹತ್ತಿರದ ನಿರ್ಧಾರ ಕೈಗೊಳ್ಳಬೇಕಿದೆ.

ಕೆಲವರಿಗೆ ಬೇಜಾರಾಗಬಹುದು...
CAA/NRC ಕಾನೂನುಗಳು  ಈಗಿನ ಸರ್ಕಾರದ ಆತುರದ ಮತ್ತು ತಾನೇ ಭಾರತ ಮತ್ತು ಹಿಂದೂಗಳ ರಕ್ಷಕ ಎಂದು ತೋರ್ಪಡಿಸಿಕೊಳ್ಳಲು ಹಾಗೂ ಹಿಂದಿನ ಸರ್ಕಾರಗಳು ಅತ್ಯಂತ ಅದಕ್ಷ ಮತ್ತು ಬೇಜವಾಬ್ದಾರಿ ಎಂದು ಜನರಿಗೆ ಮನವರಿಕೆ ಮಾಡಲು ಈ ಕಾನೂನುಗಳನ್ನು ಅನವಶ್ಯಕವಾಗಿ ಜಾರಿಗೆ ತಂದವು. 

ನೆನಪಡಿ, ಸರಿಯೋ  ತಪ್ಪೋ, ಸುಮಾರು 20 ಕೋಟಿ ಜನಸಂಖ್ಯೆಯ ಅದರಲ್ಲೂ ಹೆಚ್ಚು ಅನಕ್ಷರಸ್ಥರಿರುವ ಒಂದು ಸಮುದಾಯವನ್ನು ಆತಂಕಕ್ಕೆ ದೂಡಿ ಉಳಿದವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ.

 ಒಂದು ಪಕ್ಷ ಮುಸ್ಲಿಮರ ಓಟಿಗಾಗಿ ಬೆಂಕಿ ಹಚ್ಚಿದರೆ ಇನ್ನೊಂದು ಪಕ್ಷ ಹಿಂದೂಗಳ ಓಟಿಗಾಗಿ ಬೆಂಕಿ ಹೆಚ್ಚುತ್ತಿದೆ. ಕೊನೆಗೆ ಸುಡುವುದು ಭಾರತ ಎಂಬ ಅರಿವು ನಮ್ಮ ಜನಸಾಮಾನ್ಯರಿಗೆ ಇಲ್ಲದೆ ಹೋಯಿತಲ್ಲ ಎಂಬ ಆತಂಕ ಕಾಡುತ್ತಿದೆ.

ಇದೀಗ ಭಾರತದ ಮುಂದಿರುವ ಬಹುದೊಡ್ಡ ಸವಾಲು ಆರ್ಥಿಕ ಕುಸಿತ ತಡೆಯುವುದು. ಅದಕ್ಕಾಗಿ ಸರ್ಕಾರ ಅತಿಹೆಚ್ಚು ಶ್ರಮಪಡಬೇಕಿದೆ. ಇಂತಹ ಸಂದರ್ಭಗಳಲ್ಲಿ ಈ ರೀತಿಯ ವಿವಾದಗಳು ಭಾರತವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಬಹುದು. ಅದರ ದುಷ್ಪರಿಣಾಮ ಎದುರಿಸಬೇಕಿರುವುದು ಭಾರತೀಯರಾದ ನಾವುಗಳು ಎಂದು ಎಚ್ಚರಿಸುತ್ತಾ...

ಪ್ರಬುದ್ಧ  ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹🌹🌹🌹

ಹೋಗಿ ಬನ್ನಿ ಅಜ್ಜ.........

ತುಂಬು ಜೀವನ ನಡೆಸಿ, ಬಹುತೇಕ ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ತಮ್ಮ ಮನದ ಬಯಕೆಗಳನ್ನು ತೃಪ್ತಿಪಡಿಸಿಕೊಂಡು, ಸನಾತನ ಧರ್ಮದ ಮೌಲ್ಯಗಳನ್ನು ಮೈಗೂಡಿಸಿಕೊಂಡು, ಜೊತೆಗೊಂದಿಷ್ಟು ಕ್ರಾಂತಿಕಾರಕ ಸಮಾಜ ಸುಧಾರಣೆಯ ಮುಖವಾಡವನ್ನು ಹೊತ್ತು ಬದುಕು ಮುಗಿಸಿದ ನಿಮಗೆ ಹೃದಯ ಪೂರ್ವಕ ಶ್ರದ್ಧಾಂಜಲಿ......

ಕಾಲನ ನಿರ್ಣಯದಲ್ಲಿ ಇಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಪಂಡಿತರಿಂದ ಪಾಮರರವರೆಗೂ...

90 ವರ್ಷಗಳ ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ 7ನೇ ವಯಸ್ಸಿನ  ಬಾಲ್ಯದ ದಿನಗಳಲ್ಲಿಯೇ ಸನ್ಯಾಸ ದೀಕ್ಷೆ ಸ್ವೀಕರಿಸಿ ಈ 90 ವರ್ಷಗಳ ದೀರ್ಘ ಅವಧಿಯಲ್ಲಿ ಅನೇಕಾನೇಕ ಏರಿಳಿತಗಳನ್ನು ನೋಡಿ 2019 ರ ಅಂತಿಮ ದಿನಗಳಲ್ಲಿ ಪ್ರಕ್ಷುಬ್ಧ ಸಾಮಾಜಿಕ ರಾಜಕೀಯ ಪರಿಸ್ಥಿತಿಯಲ್ಲಿ ಅಸ್ತಂಗತರಾದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರೆಂಬ ವೆಂಕಟರಮಣರೇ ನಿಮ್ಮನ್ನು ವಿಮರ್ಶೆಗೆ ಒಳಪಡಿಸುವುದು ಅಷ್ಟು ಸುಲಭವಲ್ಲ. ನೇರವಾಗಿ ಆ ಕಡೆ ಅಥವಾ ಈ ಕಡೆ ಜನರ ಮೆಚ್ಚುಗೆಗಾಗಿ ಏನಾದರೂ ಹೇಳಬಹುದು. ಆದರೆ ನಿಮ್ಮ ನಿರ್ಗಮನದ ಸಂದರ್ಭದಲ್ಲಿ ಕನಿಷ್ಠ ‌ವಸ್ತುನಿಷ್ಠ ವಿಮರ್ಶೆ ಮಾಡುವ ಒಂದು ಸಣ್ಣ ಪ್ರಯತ್ನ.

ಒಬ್ಬ ಪಕ್ಕಾ ಸಂಪ್ರದಾಯಸ್ಥ  ಶಿವಳ್ಳಿ ಮಾಧ್ವ ಕುಟುಂಬವೊಂದರಲ್ಲಿ ಹುಟ್ಟಿ ಯತಿಗಳಾಗಿ ಆಧ್ಯಾತ್ಮಿಕ ಪರಿಸರದಲ್ಲಿ ಬೆಳೆದು ಅದನ್ನು ಉಳಿಸುವ ಮಹತ್ತರ ಪೀಠಾಧಿಪತಿಗಳೆಂಬ ಜವಾಬ್ದಾರಿ ಸ್ಥಾನದಲ್ಲಿ ಕುಳಿತು ವ್ಯವಸ್ಥೆಯ ವಿರುದ್ಧ ಈಜುವ ಮನಸ್ಥಿತಿ ಹೊಂದುವುದು ಅಷ್ಟು ಸುಲಭವಲ್ಲ.

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಚಿಂತನೆ ಅಭಿಪ್ರಾಯ ಬದುಕಿನ ದೃಷ್ಟಿಕೋನ ಎಲ್ಲವೂ ಒಂದು ಸ್ಪಷ್ಟ ರೂಪ ಪಡೆಯುವುದು ಆತನ 20/30 ರ ವಯಸ್ಸಿನಲ್ಲಿ. ಅದು ಬಹುಮುಖ್ಯ ಸಮಯ. 1955 ರಲ್ಲಿ ವಿಶ್ವೇಶ ತೀರ್ಥರ  ವಯಸ್ಸು ಸುಮಾರು 24/25. ಅಂದರೆ ಆಗಿನ ‌ಸಾಮಾಜಿಕ ಧಾರ್ಮಿಕ ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಪೇಜಾವರರ ಚಿಂತನೆಗಳು ಮೂಡಿರುವ ಸಾಧ್ಯತೆ ಇರುತ್ತದೆ.

 ಸ್ವಾತಂತ್ರ್ಯ ಬಂದದ್ದು, ಭಾರತ ವಿಭಜನೆಯಾಗಿದ್ದು, ಉಳಿದ ರಾಜ್ಯಗಳ ಒಕ್ಕೂಟ ವ್ಯವಸ್ಥೆ ಸಂವಿಧಾನದ ರೂಪದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಹಿಂದೂ ಮುಸ್ಲಿಂ ವೈಮನಸ್ಯ, ಗಾಂಧಿ ಹತ್ಯೆ, 
ಸಾರ್ವರ್ಕರ್ ವಿಚಾರಗಳು, ಅಂಬೇಡ್ಕರ್ ಚಿಂತನೆಗಳು, ಜಾತಿ ಪದ್ದತಿ, ನೆಹರು ಆಡಳಿತ, ಭಾರತ ಪಾಕಿಸ್ತಾನ ಯುದ್ಧ, ಚೀನಾ ಯುದ್ಧ, ಅವರ ವೈಯಕ್ತಿಕ ಬದುಕಿನ ವೇದ ಉಪನಿಷತ್ತುಗಳ ಆಧ್ಯಯನ ಇವೆಲ್ಲವೂ ಪ್ರಾರಂಭದ ಹಂತದಲ್ಲಿ ಅವರ ಮೇಲೆ ಪರಿಣಾಮ ಬೀರಿರುತ್ತದೆ.

ಅಲ್ಲಿಂದ ಇಲ್ಲಿಯವರೆಗೂ ಈ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ, ಪ್ರಭಾವಿಗಳಾಗಿ ಭಾಗವಹಿಸಿರುವ ಉಡುಪಿ ಮಠಾಧೀಶರ ವಿವಿಧ ಮುಖಗಳು ನಮಗೆ ಕಾಣ ಸಿಗುತ್ತವೆ.

ಯಾವುದೇ ದೃಷ್ಟಿಕೋನದಿಂದ ಮತ್ತು ಅವರ ಕಾರ್ಯಚಟುವಟಿಕೆಗಳಿಂದ ಗಮನಿಸಿದರೂ ಅವರು ಅಪ್ಪಟ ಸನಾತನ ಧರ್ಮದ ವರ್ಣಾಶ್ರಮ ವ್ಯವಸ್ಥೆಯ ಹಿಂದೂ ಸಂಸ್ಕೃತಿಯ ಪ್ರಬಲ ಪ್ರತಿಪಾದಕರು ಎಂಬುದು ತಿಳಿದುಬರುತ್ತದೆ. ಬಾಬರಿ ಮಸೀದಿ ಕೆಡವಲು ಮತ್ತು ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಅವರ ಭಾಗವಹಿಸುವಿಕೆ ನೇರವಾಗಿಯೇ ಇದ್ದಿತು. ಹಿಂದೂ ಸಮಾಜೋತ್ಸವಗಳಲ್ಲಿ ಅವರದು ಪ್ರಮುಖ ಪಾತ್ರ. ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಸ್ನೇಹ ಸಂಬಂಧ ಇದ್ದರೂ ಹಿಂದುತ್ವದ ಪ್ರತಿಪಾದಕ ಸಂಘ ಪರಿವಾರ, ಭಾರತೀಯ ಜನತಾ ಪಕ್ಷ ಮತ್ತು ಅದರ ನಾಯಕರ ಜೊತೆ ಒಡನಾಟ ತುಸು ಹೆಚ್ಚಾಗಿಯೇ ಇತ್ತು.

ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯ ವಿರುದ್ದ ಯಾವುದೇ ಪ್ರಬಲ ಜಾತಿಯ ಸ್ವಾಮಿಗಳ ಹೋರಾಟ ಇರಲಿಲ್ಲ. ಅಂತಹ ಸಂದರ್ಭದಲ್ಲಿ ದಲಿತ ಕೇರಿಗಳಿಗೆ ಪ್ರವೇಶವನ್ನು ಪೇಜಾವರರ ಕ್ರಾಂತಿ ಕಾರಿ ನಡೆ ಎಂದು ಅರ್ಥೈಸಲಾಯಿತು. ಆದರೆ ಅದು ತೋರಿಕೆಯ ಮುಖವಾಡ ಎಂಬುದು ನಿಸ್ಸಂಶಯ. ಏಕೆಂದರೆ ಮುಸ್ಲಿಮರ ವಿರುದ್ಧದ ಮನಸ್ಥಿತಿಯಲ್ಲಿ ಹಿಂದೂ ಧರ್ಮದ ಅನಿಷ್ಟ ಅಸ್ಪೃಶ್ಯತೆ ಒಂದು ಶಾಪ ಎಂದು ಹೇಳುತ್ತಾ ಒಗ್ಗಟ್ಟಿನ ಮಂತ್ರ ಜಪಿಸುವ ಅನಿವಾರ್ಯ ವಾತಾವರಣ ಸೃಷ್ಟಿಯಾಗಿತ್ತು. ಅಂಬೇಡ್ಕರ್ ವಾದ ಬಂಡಾಯ ಸಾಹಿತ್ಯ ಬೆಳವಣಿಗೆಯ ಹಂತದಲ್ಲಿತ್ತು. ಅದನ್ನು ಬೇಗ ಗ್ರಹಿಸಿದ ಪೇಜಾವರರು ದಲಿತ ಕೇರಿಯ ಪ್ರವೇಶಿಸಿದರು. ನನಗೆ ಇರುವ ನೆನಪಿನ ಪ್ರಕಾರ ಅಲ್ಲಿ ಆಹಾರ ಸೇವಿಸಲಿಲ್ಲ. ಯತಿಗಳ ಆಹಾರ ಕ್ರಮದ ನೆಪದಿಂದ.
ಆದರೆ ನೆನಪಿಡಿ, ಮಠದಲ್ಲಿ ಪಂಕ್ತಿ ಭೇದ ಮಾಡಿ ಹೊರಗಡೆ ಜಾತಿ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಆತ್ಮವಂಚನೆಯಾಗುತ್ತದೆ. ಆದರೆ ಇತರೆ ಸ್ವಾಮಿಗಳ ಹೋಲಿಕೆಯಲ್ಲಿ ಪೇಜಾವರ ಸ್ವಾಮಿಗಳ ಈ ನಡೆ ಮೇಲ್ನೋಟಕ್ಕಾದರೂ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಹಾಗೆಯೇ  ತಾವು ಜಾತ್ಯಾತೀತರು ಎಂಬ ತೋರಿಕೆಗಾಗಿ ಅಪರೂಪಕ್ಕೊಮ್ಮೆ ರಂಜಾನ್ ಹಬ್ಬದ ಸಮಯದಲ್ಲಿ ಇಫ್ತಾರ್ ಕೂಟವನ್ನು ಸಹ ಏರ್ಪಡಿಸಿದ್ದರು. ಆದರೆ ಅದು ಪ್ರಾಮಾಣಿಕ ಪ್ರಯತ್ನವಾಗಿರಲಿಲ್ಲ. ಸಾಮಾನ್ಯವಾಗಿ ಸನಾತನ ಹಿಂದೂ ಧರ್ಮದ ನಂಬಿಕೆಯಿರುವವರು ಮುಸ್ಲಿಮರನ್ನು ಬಂಧುಗಳು ಎಂದು ಆಂತರ್ಯದಲ್ಲಿ ಸ್ವೀಕರಿಸುವುದಿಲ್ಲ.

ಹಾಗೆಂದು ಜಾತಿ ಪದ್ದತಿ ಮತ್ತು ಅಯೋಧ್ಯೆ ರಾಮ ಮಂದಿರದ ಪರವಾಗಿದ್ದರು ಎಂದ ಮಾತ್ರಕ್ಕೆ ಅವರ ಎಲ್ಲಾ ನಡೆಗಳನ್ನು ಟೀಕಿಸಲು ಸಾಧ್ಯವಿಲ್ಲ. ಅವರ ಸ್ವಾತಂತ್ರ್ಯ ಮತ್ತು ಅವರು ಬೆಳೆದು ಬಂದ ಪರಿಸರದಲ್ಲಿ, ಭಾರತೀಯ ಮನಸ್ಥಿತಿಯಲ್ಲಿ ಒಬ್ಬ ಸ್ವಾಮೀಜಿಯಾಗಿ ಅದು  ಸಹಜ. 

ಮಠ ಪರಂಪರೆಯ ವ್ಯವಸ್ಥೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥರು ಸನ್ಯಾಸಾಶ್ರಮದ ಅತ್ಯಂತ ಪ್ರಾಮಾಣಿಕ ಯತಿಗಳು ಎಂದು ಕರೆಯಬಹುದು. 7 ನೆಯ ವಯಸ್ಸಿನಿಂದ ಕೊನೆಯ ಉಸಿರಿರುವವರೆಗೂ ವೈಯಕ್ತಿಕ ಬದುಕಿನಲ್ಲಿ ತಮ್ಮ ನಡವಳಿಕೆಯಲ್ಲಿ ಸಾರ್ವಜನಿಕವಾಗಿ ಯಾವುದೇ ಅಪಚಾರವಾಗದಂತೆ ಜೀವಿಸಿದರು. ಶಿಸ್ತು ಬದ್ಧ ಆರೋಗ್ಯಕರ ಚಟುವಟಿಕೆಯ ಆದರ್ಶಮಯ ಜೀವನ ವಿಧಾನ ಅನುಸರಿಸಿದರು. ಅತ್ಯುತ್ತಮ ವೇದಾಧ್ಯಯನದ ಜ್ಞಾನಿಗಳಾಗಿದ್ದರು.

ಯತಿಗಳೆಂದರ ಪೇಜಾವರರ ರೀತಿಯಲ್ಲಿ ಇರಬೇಕು ಎಂಬಷ್ಟು ಆದರ್ಶಪ್ರಾಯರಾಗಿದ್ದರು.

ಕೊನೆಯದಾಗಿ,
ಯಾವುದೇ ವ್ಯಕ್ತಿಯ ಬದುಕು ಆತನ ತಿಳಿವಳಿಕೆಯ ರೀತಿಯಲ್ಲಿ ಸಾಗುತ್ತದೆ. ಆದು ಆತನ ಸ್ವಾತಂತ್ರ್ಯ. ಹೀಗೆ ಇರಬೇಕು ಎಂದು ಇತರರು ಹೇಳುವುದು ಉಚಿತವಲ್ಲ.

ಆದರೆ ಆತನ ಬದುಕಿನ ರೀತಿಯನ್ನು ನಾವು ನಮ್ಮ ಮಿತಿಯಲ್ಲಿ ಖಂಡಿತ ವಿಮರ್ಶಿಸಬಹುದು ಮತ್ತು ಆ ವ್ಯಕ್ತಿಯ ಬಗ್ಗೆ ಯಾವುದೇ ಅಭಿಪ್ರಾಯ ರೂಪಿಸಿಕೊಳ್ಳಬಹುದು.

ವಿಶ್ವೇಶ ತೀರ್ಥರು ಅವರ ಇಷ್ಟದಂತೆ ಬದುಕಿದರು. ಆ ಬದುಕನ್ನು ನಾವು ನಮ್ಮ ಮಿತಿಯಲ್ಲಿ ಅರ್ಥೈಸಿಕೊಳ್ಳಬಹುದು. ಕೆಲವರಿಗೆ ದೈವ ಸಮಾನರು. ಮತ್ತೆ ಹಲವರಿಗೆ  ಇಷ್ಟವಾಗದೇ ಇರಬಹುದು.

ದೊಡ್ಡ ಪ್ರಜ್ಞಾವಂತ ಯತಿಗಳು ಭಕ್ತಿ ಭಾವಗಳ ಜೊತೆ ಪ್ರಾಮಾಣಿಕವಾಗಿ ಮಾನವ ಧರ್ಮದ ಪ್ರತಿಪಾದಕರಾದರೆ ಅದು ಅವರಿಗೆ ಮತ್ತಷ್ಟು ಮೆರಗು ತರುತ್ತದೆ. ಸಾಮಾನ್ಯರು ಮೀರಲಾಗದ ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಸಾಧಿಸುವುದರ ಜೊತೆಗೆ ವಿಶಾಲ ಮನೋಭಾವ ಬೆಳೆಸಿಕೊಂಡಲ್ಲಿ ಸ್ವಾಮೀಜಿಗಳ ಬದುಕಿನ ಸಾರ್ಥಕತೆ ಮತ್ತಷ್ಟು ಮೆರಗು ನೀಡುತ್ತದೆ. ಎಲ್ಲಾ ಸ್ವಾಮೀಜಿಗಳು ಜಾತಿ ಮತ ಪಂಥ ಭೇದಗಳನ್ನು ಮೀರಿ ವಿಶ್ವ ಮಾನವ ಪ್ರಜ್ಞೆ ಬೆಳೆಸಿಕೊಳ್ಳುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು ‌

ಇರಲಿ,
ಇತಿಹಾಸದ ಪುಟಕ್ಕೆ ಸೇರಿದ ಅಜ್ಜ ನಿಮಗಿದೋ ಅಂತಿಮ ವಿದಾಯ. ಒಂದಷ್ಟು ಸಾರ್ಥಕತೆ, ಒಂದಷ್ಟು ದಾಖಲೆ, ಒಂದಷ್ಟು ಸ್ಪೂರ್ತಿ, ಒಂದಷ್ಟು ಆದರ್ಶ, ಒಂದಷ್ಟು ಆರೋಪಗಳನ್ನು ಹೊತ್ತು, ಅಪಾರ ಜನಪ್ರಿಯತೆ ಪಡೆದು, ಸುದೀರ್ಘ ಬದುಕಿನ ಪುಟಗಳನ್ನು ತಿರುವಿಹಾಕಿ ಬೃಂದಾವನ ಸೇರಿದ ವೆಂಕಟರಮಣರೇ ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹🌹🌹
ಸಾಹಿತ್ಯವೆಂಬ ಸಾಗರದಲ್ಲಿ ಈಜಾಡುತ್ತಾ,
ಅಕ್ಷರಗಳನ್ನು - ಭಾವನೆಗಳನ್ನು ಅರಿಯುತ್ತಾ,
ಓದುತ್ತಾ - ಬರೆಯುತ್ತಾ - ಗ್ರಹಿಸುತ್ತಾ,
ಅನುಭವದಲ್ಲಿ ಮೂಡಿದ ಕೆಲವೇ ಹನಿಗಳಂತ ಒಂದು ಅನಿಸಿಕೆ ಯುವ ಸಾಹಿತ್ಯದ ಬರಹಗಾರರಿಗಾಗಿ.......

ವಿದ್ಯೆಗೆ ವಿನಯವೇ ಭೂಷಣ.
ಅಕ್ಷರಗಳಲ್ಲ......

ಮನದ ಸಹಜ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಾಗ,
ಒಂದಷ್ಟು ಗಟ್ಟಿಯಾದ ಸಾಹಿತ್ಯ ಸೃಷ್ಟಿಯಾಗುತ್ತದೆ. 

ಅಕ್ಷರಗಳಲ್ಲಿಯೇ ಭಾವನೆಗಳನ್ನು ಕಲ್ಪಿಸಿಕೊಂಡು ಮೂಡಿಸಿದಾಗ,
ಕೃತಕವಾದ ಬಾಲಿಶ ಸಾಹಿತ್ಯ ರಚನೆಯಾಗುವ ಸಾಧ್ಯತೆಯಿದೆ.

ಇವುಗಳ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ
ನಮಗೆ ಇದು ಗೋಚರಿಸುತ್ತದೆ. 

ಬರಹಗಾರರು ಅರಿಯಬೇಕಾದ ಬಹುಮುಖ್ಯ ಅಂಶವಿದು.

ಸಾಹಿತ್ಯದ ಬಗ್ಗೆ ಮಾತನಾಡುವಾಗ ಗಟ್ಟಿ ಸಾಹಿತ್ಯ - ಜನಪ್ರಿಯ ಸಾಹಿತ್ಯ - ಜೊಳ್ಳು ಸಾಹಿತ್ಯ ಎಂದು ಗುರುತಿಸುವುದು ಇದೇ ದೃಷ್ಟಿಕೋನದಲ್ಲಿ.

ಸಿನಿಮಾಗಳಲ್ಲಿ ಬಳಸಲ್ಪಡುವ ಬಹುತೇಕ ಸಾಹಿತ್ಯ ( ಕೆಲವೊಂದು ಹೊರತು ಪಡಿಸಿ), ಸಂಗೀತ ಸಂಯೋಜನೆಯ ನಂತರ ಅದರ ಭಾವನೆಗಳಿಗೆ ತಕ್ಕಂತೆ ಅಕ್ಷರ ಜೋಡಿಸುವುದು, ಕೆಲವು ಭಾವಗೀತೆಗಳು, ಒಂದಷ್ಟು ಜನ ಕ್ರೇಜಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವುದು, ಯಾರೋ ಎಲ್ಲೋ ಬರೆದ ಅಥವಾ ಎಂದೋ ಓದಿದ ಸಾಹಿತ್ಯವನ್ನು ಬರೆಯುವ ಕಲಿಯುವ ಆಸೆಯಿಂದ ವಾಕ್ಯ ರಚಿಸುವುದು. ಬರೆಯುವಾಗಲೇ ಮಹತ್ವಾಕಾಂಕ್ಷೆಯ ಮತ್ತು ಪ್ರಶಸ್ತಿ ಸನ್ಮಾನಗಳ ಗುಂಗಿನಲ್ಲಿ ಬರೆಯುವುದು, ಇತರರ ಮೆಚ್ಚುಗೆಗಾಗಿ ಅಕ್ಷರಗಳನ್ನು ಮೂಡಿಸುವುದು,  ಮುಂತಾದವು ಅಕ್ಷರದಿಂದ ಭಾವನೆಗಳನ್ನು ಮೂಡಿಸುವ ಸಾಹಿತ್ಯಕ್ಕೆ ಉದಾಹರಣೆಗಳು.

ಅದೇ ರೀತಿ ಕುವೆಂಪು, ಕಾರಂತ,ಬೇಂದ್ರೆ, ಮಾಸ್ತಿ, ಅಡಿಗ, ಬೈರಪ್ಪ, ಚಿತ್ತಾಲ, ತೇಜಸ್ವಿ, ದೇವನೂರು ಮುಂತಾದವರ ಸಾಹಿತ್ಯ, ಭಾವನೆಗಳಿಗೆ ಅಕ್ಷರ ರೂಪ ಕೊಡುವುದಕ್ಕೆ ಉದಾಹರಣೆಗಳು. 
ಅವರುಗಳು ತಮ್ಮ ಬದುಕಿನ ಅನುಭವದ - ಅರಿವಿನ - ಗ್ರಹಿಕೆಯ ವಿಷಯಗಳನ್ನು ಅಂತರಾಳದ ಭಾವನೆಗಳಿಗೆ ಅಕ್ಷರದ ರೂಪ ನೀಡುತ್ತಾರೆ.

 ಅದು ನಿಜವಾದ ಸಾಹಿತ್ಯಾಸಕ್ತರಿಗೆ ಗಾಡವಾದ ಅನುಭವ ನೀಡುತ್ತದೆ. ಅವರ ಚಿಂತನೆಗಳಲ್ಲಿ, ನಿರೂಪಣೆಯಲ್ಲಿ, ವಿಷಯಗಳಲ್ಲಿ, ಸಾಹಿತ್ಯದ ಪ್ರಕಾರಗಳಲ್ಲಿ ಭಿನ್ನತೆ ಇರಬಹುದು. ಆದರೆ ಅನುಭವ ಸಾಹಿತ್ಯ ಅದಾಗಿರುತ್ತದೆ.

ಕೆಲಮೊಮ್ಮೆ ಅಪರೂಪಕ್ಕೆ ಇದಕ್ಕೆ ವಿರುಧ್ಧವಾದ ರೀತಿಯ ರಚನೆಗಳೂ ಸೃಷ್ಟಿಯಾಗಬಹುದು. ಅಂದರೆ ಭಾವನೆಗಳಲ್ಲಿ ಅತ್ಯುತ್ತಮ ಗಾಢತೆ ಇದ್ದರೂ ಅಕ್ಷರಗಳಲ್ಲಿ ಅವು ಪೇಲವವಾಗಿ ಮೂಡಬಹುದು ಹಾಗೆಯೇ ಅಕ್ಷರಗಳಿಂದಲೇ ಅತ್ಯುತ್ತಮ ಎನ್ನುವ ಭಾವನೆಗಳ ಸಾಹಿತ್ಯವೂ ರಚನೆಯಾಗಬಹುದು. ಕೆಲವು ಸಿನಿಮಾ ಹಾಡುಗಳಲ್ಲಿ ಇದು ಕಂಡುಬರುತ್ತದೆ.
ಆದರೆ ಇದು ಅತಿ ವಿರಳ.

ಓದು ಮುಖ್ಯ. ಗ್ರಹಿಕೆ ಅತಿಮುಖ್ಯ. ಮಾನವೀಯ ಸ್ಪಂದನೆ ಎಲ್ಲಕ್ಕಿಂತ ಮುಖ್ಯ. 

ಇದೊಂದು ಸಣ್ಣ ಮತ್ತು ಸರಳ ಅನಿಸಿಕೆ ಅಷ್ಟೆ. ಸಾಹಿತ್ಯದ ಆಳದಲ್ಲಿ ಅಗಾಧ ನಿಗೂಡತೆ ಮತ್ತು ಕ್ರಿಯಾತ್ಮಕತೆ ಅಡಗಿದೆ.
ಅದನ್ನು ಇಷ್ಟೇ ಎಂದು ಭಾವನೆಗಳಲ್ಲಿ - ಅಕ್ಷರಗಳಲ್ಲಿ ಹಿಡಿದಿಡುವುದು ಅಸಾಧ್ಯ.

" ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆ.( ಮಾತನಾಡುವವರಿಗೆ)
ಆ ಭಾಷೆಯಲ್ಲಿಯೇ ಮತ್ತೊಬ್ಬರ ಆತ್ಮವನ್ನೂ ಪ್ರವೇಶಿಸಬಹುದು.
ಆ ಆತ್ಮದೊಂದಿಗೆ ಬೆರೆತು ಸಂವಾದವನ್ನೂ ನಡೆಸಬಹುದು.
ಆ ಸಂವಾದದಲ್ಲಿ ಆತ್ಮದ ಐಕ್ಯವಾಗಬಹುದು.
ಹಾಗೇ ಆತ್ಮಮಿಲನವಾದ ಸಂಬಂಧಗಳನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ.

ಇದು ಅಕ್ಷರಗಳಲ್ಲಿ ಮೂಡಿದ ಭಾವನೆಯಲ್ಲ,
ಒಡಲಾಳದ ಭಾವನೆಗಳಿಗೆ ನೀಡಿದ ಅಕ್ಷರ ರೂಪ.

ಕುವೆಂಪು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದಷ್ಟು ಸಾಹಿತ್ಯದ ಮಾತುಗಳು....

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹
ತಾಯಿ ಮಮತೆ - ತಂದೆಯ ಜವಾಬ್ದಾರಿ.......

ಭಾರತದ ಸದ್ಯದ ಪರಿಸ್ಥಿತಿಯನ್ನು ರಾಜಕೀಯ ದೃಷ್ಟಿಕೋನದಿಂದ ಸಕಾರಾತ್ಮಕವಾಗಿ ವಿಶ್ಲೇಷಿಸಿದರೆ ಈ ರೀತಿಯ ಅಭಿಪ್ರಾಯ ಮೂಡುತ್ತಿದೆ.

ಮಾತೃ ಹೃದಯಿಗಳು.......

ರಾಷ್ಟ್ರೀಯ ಸ್ವಯಂ ಸೇವಕ ಸಂಘ ( RSS ) - ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಮುಂತಾದ ಸಂಘ ಪರಿವಾರದ ಸಂಘಟನೆಗಳು ಮತ್ತು ಹಿಂದುತ್ವದ ಪರ ಹೆಚ್ಚು ಒಲವಿರುವ ಮನಸ್ಸುಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.

ಡಿಟೋ ತಾಯಿ ಮಗುವನ್ನು ಪ್ರೀತಿಸುವಂತೆ ಹುಚ್ಚು ಹೊಳೆಯಲ್ಲಿ ತೇಲುತ್ತಿದ್ದಾರೆ. ಮುದ್ದು ಮಾಡುತ್ತಿದ್ದಾರೆ. ಮಗುವಿನ ಎಲ್ಲಾ ಚೇಷ್ಟೆಗಳು ಸಹ ತಾಯಿಗೆ ಅಪ್ಯಾಯಮಾನವಾಗಿ ಕಾಣುತ್ತಿದೆ. ಮಗುವಿನ ಹಠ, ಕೋಪ ಅಸೂಯೆ ಕೆಟ್ಟ ಬೈಗುಳ ಎಲ್ಲವೂ ಅದ್ಭುತ ಮತ್ತು ಶ್ರೇಷ್ಠ ಎಂಬಂತೆ ಭಾಸವಾಗುತ್ತಿದೆ.

ತಾಯಿಯ ಅತಿಯಾದ ಪ್ರೀತಿ ಅನೇಕ ವೇಳೆ ಮಗುವನ್ನು ದಿಕ್ಕು ತಪ್ಪಿಸುತ್ತದೆ ಮತ್ತು ಮಗು ದಾರಿ ತಪ್ಪಲು ಕಾರಣವಾಗುತ್ತದೆ ಎಂಬ ಅರಿವು ತಾಯಿಗಿರುವುದಿಲ್ಲ.

ಭಾರತೀಯ ಸಮಾಜದಲ್ಲಿ ತಾಯಿ ಸ್ವಾರ್ಥಿ ಮತ್ತು ಸ್ವಲ್ಪ ಮಟ್ಟಿಗೆ ಅವಿದ್ಯಾವಂತೆ. ನಾಲ್ಕು ಗೋಡೆಗಳ ಮಧ್ಯೆ ತನ್ನ ಗಂಡ ಮಕ್ಕಳು ಎಂದು ಸಂಕುಚಿತವಾಗಿ ಯೋಚಿಸುವ ಸಾಧ್ಯತೆ ಹೆಚ್ಚು. ಆಕೆಗೆ ಹೊರ ಪ್ರಪಂಚದ ಆಗುಹೋಗುಗಳಿಗಿಂತ ತನ್ನ ಕುಟುಂಬದ ಹಿತಾಸಕ್ತಿಯೇ ಹೆಚ್ಚು. ಮಗುವಿಗೂ ತನ್ನ ಎಲ್ಲಾ ಬೇಕು ಬೇಡಗಳನ್ನು ಪೂರೈಸುವ ತಾಯಿಯೆಂದರೆ ಪ್ರಾಣ. ತನ್ನ ಸ್ವೇಚ್ಚಾಚಾರಕ್ಕೆ ತಾಯಿ ಪ್ರೋತ್ಸಾಹ ನೀಡುವುದರಿಂದ ಮಗುವಿಗೆ ತಾಯೆಯೇ ಸರ್ವಸ್ವ. ತಾಯಿಗೆ ಸ್ವಲ್ಪ ನೋವಾದರೆ  ಮಗು ಎಂತಹ ಆಕ್ರಮಣಕ್ಕೂ ಸಿದ್ದ.

 ಮುಂದೆ ಮಗು ದಾರಿ ತಪ್ಪಿದಾಗ ಆಕೆಗೆ ತನ್ನ ತಪ್ಪಿನ ಅರಿವಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ.

ತಂದೆಯ ಜವಾಬ್ದಾರಿ.....

ಅಂಬೇಡ್ಕರ್ ಚಿಂತನೆಗಳಿಂದ ಪ್ರೇರಿತರಾದವರು, ಬಸವಾದಿ ಶರಣರ ನಿಜ ಅನುಯಾಯಿಗಳು, ಬುದ್ದನ ವಿಚಾರಗಳಿಂದ ಪ್ರಭಾವಿತರಾದವರು, ಗಾಂಧಿಯವರ ಹೋರಾಟದಿಂದ ಸ್ಪೂರ್ತಿ ಪಡೆದವರು, ಕಾರ್ಲ್ ಮಾರ್ಕ್ಸ್ ಅವರನ್ನು ಇಷ್ಟಪಡುವವರು, ಪ್ರಗತಿಪರ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಬುದ್ಧಿಜೀವಿಗಳು, ನಿಜ ಜಾತ್ಯಾತೀತ ಮನೋಭಾವದವರು, ರಾಷ್ಟ್ರದ ಏಕತೆ ಬಯಸುವವರು ಇದರ ವ್ಯಾಪ್ತಿಯಲ್ಲಿ ಬರುತ್ತಾರೆ.

ಮಗುವಿನ ಮೇಲೆ ಪ್ರೀತಿ ಇದ್ದರೂ ಅದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳದೆ ಮಗನ ಸಾಮರ್ಥ್ಯಕ್ಕಿಂತ ಆತನ ದೌರ್ಬಲ್ಯಗಳನ್ನೇ ಹೆಚ್ಚು ಗಮನಿಸುವ, ತಿದ್ದುವ, ಆತನನ್ನು ಆಗಾಗ ಗದರಿಸುವ, ಜವಾಬ್ದಾರಿ ನೆನಪಿಸುವ, ತನ್ನ ಮನೆಗಿಂತ ಹೊರಗಿನ ವಿದ್ಯಮಾನಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಮಗುವನ್ನು ಎಚ್ಚರಿಸುವ ಕೆಲಸದಂತೆ ಭಾಸವಾಗುತ್ತದೆ.

ಇದು ಮಗುವಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡುತ್ತಿದೆ. ತಾಯಿಯ ಪ್ರೀತಿಯ ಮುಂದೆ ಅಪ್ಪನ ಶಿಸ್ತು ಮಗುವಿಗೆ ಒಂದು ರೀತಿಯ ಹಿಂಸೆಯ ಅನುಭವವಾಗಿತ್ತಿದೆ. ಅಪ್ಪನ ಮೇಲೆ ಕೋಪ ಬರುತ್ತಿದೆ. ಅಪ್ಪ ತನ್ನ ಸಂತೋಷ ಕಿತ್ತುಕೊಳ್ಳುತ್ತಿದ್ದಾನೆ ಎಂಬ ಭಾವನೆ ಮಗುವಿಗಿದೆ. ಅಪ್ಪ ಪಕ್ಕದ ಮನೆಯ ಮಗುವಿನ ಜೊತೆ ಚೆನ್ನಾಗಿ ಮಾತನಾಡುತ್ತಾನೆ. ನನ್ನ ಜೊತೆ ಅಷ್ಟು ಸಲುಗೆಯಿಂದ ಮಾತನಾಡುವುದಿಲ್ಲ ಎಂದು ಅನಿಸುತ್ತಿದೆ. ಅಪ್ಪನ ಜವಾಬ್ದಾರಿ ಅರಿತುಕೊಳ್ಳುವಷ್ಟು ಬುದ್ದಿ ಇನ್ನೂ ಮಗುವಿಗೆ ಬೆಳೆದಿಲ್ಲ.

ತಾಯಿ ಪ್ರೀತಿ ತಂದೆ ಜವಾಬ್ದಾರಿಯ ಮಧ್ಯೆ ಇರುವ ನಕಾರಾತ್ಮಕ ಅಂಶಗಳನ್ನು ಇಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ತಂದೆಗೆ ತಾನು ಬುದ್ದಿವಂತ, ಸಮಾಜದ ಬಗ್ಗೆ ಅಪಾರ ಜ್ಞಾನ ಉಳ್ಳವನು ಎಂಬ ಅಹಂಕಾರ, ತಾಯಿಗೆ ತನ್ನ ಪ್ರೀತಿಯಿಲ್ಲದೇ ಕುಟುಂಬವೇ ಇಲ್ಲ ಎನ್ನುವ ಅಹಂಕಾರ. ಇವುಗಳ ನಡುವೆ ಇವರಿಗೆ ಅರಿವು ಮೂಡಿಸುವ ಪ್ರಯತ್ನ ಯಾರಿಂದಲೂ ಆಗುತ್ತಿಲ್ಲ.

ಇದರ ಪರಿಣಾಮವಾಗಿ ಪ್ರಕ್ಷುಬ್ಧ ಮನಸ್ಥಿತಿಯಲ್ಲಿ ತೊಳಲಾಡುತ್ತಿರುವುದು, ಭವಿಷ್ಯದ ಅರಿವಿಲ್ಲದೆ ಬೆಳೆಯುತ್ತಿರುವುದು ಭಾರತವೆಂಬ ಮಗು...

ಇತ್ತೀಚೆಗೆ ಈ ತಂದೆ ತಾಯಿಗಳ ನಡುವೆ ನಿಧಾನವಾಗಿ ದ್ವೇಷವೂ ಹುಟ್ಟಿಕೊಂಡಿದೆ. ಅದು ಮಗುವಿನ ಪಾಲನೆ ಪೋಷಣೆಯಲ್ಲಿಯೂ ಕೆಟ್ಟ ಪರಿಣಾಮ ಬೀರುತ್ತಿದೆ. ಮಗು ಹೆಚ್ಚು ಕಡಿಮೆ ದಾರಿ ತಪ್ಪುವ ಹಂತ ತಲುಪಿಯಾಗಿದೆ. ದಂಪತಿಯ ಬದುಕು ವಿಚ್ಚೇದನದ ಹಾದಿಯಲ್ಲಿದೆ.

ಮುಂದೆ.......

ಮಗುವಿನ ಭವಿಷ್ಯದ ಬಗ್ಗೆ ಭಯವಾಗುತ್ತಿದೆ. ಅಪ್ಪ ಅಮ್ಮನಿಗೆ ತಿಳಿವಳಿಕೆ ಹೇಳಿ ಸರಿ ಮಾಡಬೇಕಾದ ಸಮಾಜ ಗೊಂದಲದಲ್ಲಿದೆ. ನಮಗ್ಯಾಕೆ ಇಲ್ಲದ ಉಸಾಬಾರಿ ಎಂಬ ನಿರ್ಲಕ್ಷ್ಯವೂ ಇರಬಹುದು.

ದಯವಿಟ್ಟು ತಾಳ್ಮೆಯಿಂದ ಯೋಚಿಸಿ.
ಕುಟುಂಬವನ್ನು ಮತ್ತೆ ಅರಿವಿನ ಸರಿ ದಾರಿಗೆ ತರಲು ನಾವು ಏನು ಮಾಡಬಹುದೆಂದು.........

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ.
🌹🌹🌹🌹🌹🌹🌹🌹🌹🌹
ಗ್ರಹಣ.........‌

ನಮಗೆ ಖಾಯಿಲೆಯಾದಾಗ ಸಾಮಾನ್ಯವಾಗಿ ನಾವು ಹೋಗುವುದು ಡಾಕ್ಟರ್ ಬಳಿಗೆ,

ನಮ್ಮ ಮನೆಯಲ್ಲಿ ಕಳ್ಳತನ ದರೋಡೆ ಆದಾಗ ಅಥವಾ ನಮಗೆ ಬೆದರಿಕೆ ಉಂಟಾದಾಗ ನಾವು ಸಂಪರ್ಕಿಸುವುದು ಪೋಲಿಸರನ್ನು....

ನಮಗೆ ಯಾವುದೇ ರೀತಿಯ ಅನ್ಯಾಯವಾದರೆ ನಾವು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ.....

ನೀರಾವರಿ ಇಲಾಖೆ, ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ, ಸಂಸ್ಕೃತಿ ಇಲಾಖೆ, ಮಹಿಳಾ ಇಲಾಖೆ, ಮಕ್ಕಳ ಇಲಾಖೆ ಹೀಗೆ ಬದುಕಿಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೂ ಅಧಿಕೃತವಾಗಿ ಸರ್ಕಾರದ ಇಲಾಖೆಗಳು ಇವೆ. ಅವು ನೀಡುವ ಮಾಹಿತಿಯೇ ಬಹಳಷ್ಟು ಸತ್ಯ ಮತ್ತು ಅಂತಿಮ ಹಾಗೂ ವಾಸ್ತವಕ್ಕೆ ಹತ್ತಿರ ಎಂದು ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಪ್ಪಿದ್ದೇವೆ.

ಇಲ್ಲಿಯೂ ಒಂದಷ್ಟು ಅನ್ಯಾಯ ಅಕ್ರಮ ಭ್ರಷ್ಟಾಚಾರ ಇದ್ದರೂ ಇದನ್ನು ಒಪ್ಪದೆ ಬೇರೆ ದಾರಿ ಇಲ್ಲ. ನಾವೇ ಸೃಷ್ಟಿಸಿಕೊಂಡ ಅಧೀಕೃತ ವ್ಯವಸ್ಥೆ ಇದು.

ಹಾಗೆಯೇ ಖಗೋಳ ವಿಜ್ಞಾನದ ಬಗ್ಗೆ ಅಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲು ಇಸ್ರೋ ಎಂಬ ಅಧೀಕೃತ ಸಂಸ್ಥೆ ಇದೆ. ಅದು ತನ್ನ ಸಂಪೂರ್ಣ ಅಧ್ಯಯನದ ಮಿತಿಯಲ್ಲಿ ವಿಶ್ವದ ಎಲ್ಲಾ ಖಗೋಳ ವಿಜ್ಞಾನದ ಸಂಪರ್ಕ ಬಳಸಿ ಮಾಹಿತಿ ಸಂಗ್ರಹಿಸಿ ನಮಗೆ ವಾತಾವರಣದ ಯಾವುದೇ ಏರಿಳಿತಗಳನ್ನು ತಿಳಿಸುತ್ತದೆ.

ಅದರ ಪ್ರಕಾರ,
ಭೂಮಿ, ಚಂದ್ರ, ಸೂರ್ಯನ ಸುತ್ತುವಿಕೆಯ ನಡುವಿನ ನೆರಳು ಬೆಳಕಿನಾಟವೇ ಗ್ರಹಣ. ಇದೊಂದು ಅಂತರಿಕ್ಷದ ಸಹಜ ಕ್ರಿಯೆ. ಅದರಿಂದ ಏನಾದರೂ ಗಂಭೀರವಾದ ಪರಿಣಾಮವಾಗುವುದಿದ್ದರೆ ಅವರೇ ಮಾಹಿತಿ ನೀಡುತ್ತಾರೆ ಮತ್ತು ಎಚ್ಚರಿಸುತ್ತಾರೆ.

ನೋಡಿ, ನಾಗರಿಕತೆಯ ಪ್ರಾರಂಭದಲ್ಲಿ ಡಾಕ್ಟರ್ ಪೋಲೀಸ್ ಸರ್ಕಾರ ಏನೂ ಇಲ್ಲದಿದ್ದ ಸಂದರ್ಭದಲ್ಲಿ ಆಗಿನ ಜನರೇ ಅನುಭವದ ಆಧಾರದ ಮೇಲೆ ತಮ್ಮ ಸಮಸ್ಯೆಗಳನ್ನು ಸಾಧ್ಯವಾದ ಮಟ್ಟಿಗೆ ಬಗೆಹರಿಸಿಕೊಳ್ಳುತ್ತಿದ್ದರು.

ಅದೇ ರೀತಿ ಖಗೋಳದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ತಮ್ಮ ಅನುಭವದ ಜ್ಞಾನದಿಂದಲೇ ಗುರುತಿಸಿ ಮಾಹಿತಿ ನೀಡುತ್ತಿದ್ದರು. ಇದು ಬಹುತೇಕ ನಿಜವೇ ಆಗಿರುತ್ತಿತ್ತು. ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಇದೇ ರೂಡಿಯಲ್ಲಿತ್ತು.

ಗಿಡಮೂಲಿಕೆಗಳೇ ಔಷಧಗಳಾಗಿ, ಪಂಚಾಯತಿ ಕಟ್ಟೆಗಳೇ ನ್ಯಾಯಾಲಯಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.  ಆ ಕಾಲಘಟ್ಟದಲ್ಲಿ ಅವ್ಯವಸ್ಥೆ, ಅನ್ಯಾಯ, ಅಸಮಾನತೆ, ಅಸಮರ್ಪಕ ನಿರ್ವಹಣೆಯ ವಿರುದ್ದವಾಗಿ ಈಗ ಆಧುನಿಕ ಪ್ರಜಾಪ್ರಭುತ್ವ, ತಂತ್ರಜ್ಞಾನ ಮತ್ತು ಅಧೀಕೃತ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಹಿಂದಿನ ವ್ಯವಸ್ಥೆ ಕೆಲವು ಉತ್ತಮ ರೀತಿಯಲ್ಲಿ ಇದ್ದರೂ ಬೃಹತ್ ಜನಸಂಖ್ಯೆಯಲ್ಲಿ ಅವು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಸಾರ್ವತ್ರಿಕ ನ್ಯಾಯ ಕಲ್ಪಿಸುವಲ್ಲಿ ವಿಫಲವಾಗಿವೆ.

ಇದರ ಆಧಾರದಲ್ಲಿ,
ಗ್ರಹಣ ಎಂದರೇನು ?
ಅದು ಹೇಗೆ ಸಂಭವಿಸುತ್ತವೆ ?
ಅದರ ಪರಿಣಾಮಗಳೇನು ?
ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ?
ಎಂದು ಅಧೀಕೃತ ಖಗೋಳ ವಿಜ್ಞಾನಿಗಳು ನೀಡುವ ಮಾಹಿತಿಯೇ ನಮಗೆ ಸದ್ಯದ  ವಾಸ್ತವ.

ಟಿವಿ ಮಾಧ್ಯಮಗಳಲ್ಲಿ ಕುಳಿತು ಕುಂಕುಮ ವಿಭೂತಿ ಕಾಷಯಾ ತೊಟ್ಟು ಶ್ಲೋಕಗಳನ್ನು ಪಠಿಸುತ್ತಾ ಕೊಟ್ಯಾನುಕೋಟಿ ದೂರದ ಖಗೋಳ ವೈಚಿತ್ರ್ಯ ವಿಸ್ಮಯಗಳ ಬಗ್ಗೆ ಮಾತನಾಡುವುದರಲ್ಲಿ ಸ್ವಲ್ಪ ಮಟ್ಟಿಗೆ ನಿಜವಿದ್ದರೂ ಅದು  ಸಾರ್ವತ್ರಿಕವಲ್ಲ, ಅಧೀಕೃತಲ್ಲ, ಸಂಪೂರ್ಣ ನಂಬಿಕೆಗೆ  ಅರ್ಹವಲ್ಲ.

ರಾಶಿಗಳ ಆಧಾರದಲ್ಲಿ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಏನೇನೂ ಬದಲಾವಣೆ ಆಗುತ್ತದೆ. ಇನ್ನೇನೋ ಅವಘಡ ಸಂಭವಿಸುತ್ತದೆ ಎಂದು ಪ್ರಕೃತಿಯ ಸಹಜ ಕ್ರಿಯೆಯನ್ನು ಭೂತ ಮಾಡಲಾಗಿದೆ.
ಸೃಷ್ಟಿಯ ಅಗಾಧತೆ, ವೈವಿಧ್ಯತೆ, ಬೃಹತ್ ಜನಸಂಖ್ಯೆಯ ಬಗ್ಗೆ ಅವರಿಗೆ ಕಲ್ಪನೆ ಇಲ್ಲದೆ ಸಂಕುಚಿತವಾಗಿ ಮಾತನಾಡುತ್ತಾರೆ.

ಮತ್ತೊಮ್ಮೆ ಮಗದೊಮ್ಮೆ ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಹೇಗಿದ್ದರೂ ಆ ಸ್ವಾತಂತ್ರ್ಯ ನಿಮಗಿದೆ.
ಯೋಚಿಸಲು ಪ್ರೇರೇಪಿಸುವುದಷ್ಟೇ ಈ ಲೇಖನದ ಉದ್ದೇಶ....

ಎಲ್ಲರಿಗೂ ಒಳ್ಳೆಯದಾಗಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹🌹
ದುಡಿದು ದುಡಿದು ಸವೆಯುತ್ತಿರುವ ರೈತರು.....

ತಿಂದು ತಿಂದು ಕೊಬ್ಬುತ್ತಿರುವ ಕೆಲವರು...........

ದುಡಿಯದೇ ತಿನ್ನುತ್ತಾ ಅನ್ನವೇ ವಿಷವಾಗಿ ಸಾಯುತ್ತಿರುವ ಹಲವರು..........

ವಿಶ್ವದಲ್ಲಿ ಅತಿಹೆಚ್ಚು ರೈತರನ್ನು ಹೊಂದಿರುವ ದೇಶ ಭಾರತ........

ಆದರೆ, ಎಲ್ಲಿಯೂ ಸಾರ್ವಜನಿಕ ಆಚರಣೆ ಇಲ್ಲದೆ, ಸಂಭ್ರಮ ಇಲ್ಲದೇ,ಚರ್ಚೆಗಳಿಲ್ಲದೇ, ಕೃತಜ್ಞತೆಗಳಿಲ್ಲದೇ....

ಮುಗಿದೇ ಹೋಯಿತು ರೈತರ ದಿನ ಡಿಸೆಂಬರ್ 23.................,

ದಬಾಂಗ್ ಸಿನಿಮಾ ಅಬ್ಬರದಲ್ಲಿ....

NRC - CAA ಪ್ರತಿಭಟನೆಯಲ್ಲಿ.....

ಸಚಿವ ಸಂಪುಟ ವಿಸ್ತರಣೆಯ ಕಾತುರದದಲ್ಲಿ.....

ಸರ್ಕಾರ ನಡೆಸುವ ಗೊಂದಲದಲ್ಲಿ..........

ಬಂಡಾಯ ಉಲ್ಬಣವಾಗುವ ಭಯದಲ್ಲಿ........

ಮುಂದಿನ ಚುನಾವಣೆ  ತಂತ್ರಗಳನ್ನು ಹಣೆಯುವುದರಲ್ಲಿ.......

ಜಾರ್ಖಂಡ್ ಚುನಾವಣಾ ಫಲಿತಾಂಶದ ಕುತೂಹಲದಲ್ಲಿ.....

ಧಾರವಾಹಿ - ರಿಯಾಲಿಟಿ ಶೋಗಳ ಮನರಂಜನೆಯಲ್ಲಿ.........

ಭಾನುವಾರದ ರಜೆಯ ಮೋಜಿನಲ್ಲಿ........

ಹೊಸ ವರ್ಷಾಚರಣೆಯ ಯೋಜನೆ ರೂಪಿಸುವ ಉತ್ಸಾಹದಲ್ಲಿ.......

ಆದರೆ,

ಆ ಉಳುವ ಯೋಗಿ ಮಾತ್ರ...........

ಹೇಳುವುದೇನು ?

ಬರೆಯಲು ಒಳ್ಳೆಯ ಪದಗಳು, ಭಾವನೆಗಳು, ಮನಮಿಡಿಯುವ ಘಟನೆಗಳು, ಆಕ್ರೋಶದ ನಿಂದನೆಗಳು, ಪರಿಹಾರದ ಸೂತ್ರಗಳು ಎಲ್ಲವೂ ನೆನಪಾಗುತ್ತದೆ.

ಪ್ರಯೋಜನವೇನು ?

ಅದೇ ಬಡಕಲು ಶರೀರ,
ಅದೇ ಮಾಸಿದ ಬಟ್ಟೆ,
ಅದೇ ಭುಜದ ಮೇಲಿನ ಟವಲ್,
ಅದೇ ಕುಡುಗೋಲು ಕೈಯಲ್ಲಿ,
ಅದೇ ನಿಟ್ಟುಸಿರು,
ಅದೇ ಬೇಡಿಕೆ,
ಅದೇ ಪ್ರತಿಭಟನೆ,
ಅದೇ ಕೀಟನಾಶಕ ಕುಡಿದು ಆತ್ಮಹತ್ಯೆ,
ಅದೇ ಸುದ್ದಿ,
ಅದೇ ಪರಿಹಾರ,

ಸದ್ಯಕ್ಕೆ ಸಾಮಾನ್ಯರಿಗೆ ಊಟಕ್ಕೇನು ಕೊರತೆ ಇಲ್ಲ,
ರಾಜಕಾರಣಿಗಳಿಗೆ ಓಟು ಕೊಳ್ಳಲು ಸಮಸ್ಯೆ ಇಲ್ಲ,
ಉದ್ಯಮಿಗಳಿಗೆ ವ್ಯಾಪಾರಕ್ಕೇನು ತೊಂದರೆ ಇಲ್ಲ,......

ಡಾಕ್ಟರು, ಆಕ್ಟರು, ಮೇಷ್ಟರು, ಲಾಯರು, ಆಡಿಟರು, ಬ್ರೋಕರು, ಆಫೀಸರು ಯಾರಿಗೂ ತೊಂದರೆ ಏನೂ ಇಲ್ಲ....

ನೋಡೋಣ ಮುಂದೆ..

ರೈತರೆಲ್ಲ ವಿಷ ಕುಡಿದು ಸತ್ತ ಮೇಲೆ, ಊಟಕ್ಕೆ ತೊಂದರೆಯಾದ ಮೇಲೆ ರೈತರನ್ನು ನೆನಪಿಸಿಕೊಳ್ಳೋಣ.......

ಅಲ್ಲಿಯವರೆಗೂ ಚೆನ್ನಾಗಿ ಊಟ ಮಾಡ್ಕೊಂಡು ಎಲ್ರೂ ಆರಾಮವಾಗಿರಿ.........

ಬೆಳಗಿನ ಬಿಸಿ ಬಿಸಿ ಕಾಫಿ ಟೀ, 
ನಂತರದ ಉಪ್ಪಿಟ್ಟು ಚಿತ್ರಾನ್ನ ಇಡ್ಲಿ ವಡೆ ದೋಸೆ,
ಮಧ್ಯಾಹ್ನದ ರೊಟ್ಟಿ ಚಪಾತಿ ಮುದ್ದೆ ಅನ್ನ, ಸಂಜೆಯ ಪಾನಿಪುರಿ, ಮಸಾಲಾ ಪುರಿ, ಬೇಲ್ ಪುರಿ, ವಡಾ ಪಾವ್, ಪಾವ್ ಬಾಜಿ, ರಾತ್ರಿಯ ಚಿಕನ್ ಮಟನ್ ರೋಟಿ, ದಾಲ್ ಪಾಲಾಕ್, ದೋಕ್ಲಾ, ಕಿಚಡಿ ಎಲ್ಲಾ ದುಡ್ಡು ಕೊಟ್ಟರೆ ಸಿಗುತ್ತದೆ.
ಮನೆಗೇ ತಂದು ಕೊಡುತ್ತಾರೆ.

ಫಾದರ್ಸ್ ಡೇ, ಮದರ್ಸ್ ಡೇ, ಚಿಲ್ಡ್ರನ್ಸ್ ಡೇ, ವ್ಯಾಲೆಂಟೈನ್ ಡೇ, ಆ ಡೇ ಈ ಡೇ....ಎಲ್ಲಾ ಸಂಭ್ರಮದಿಂದ ಆಚರಿಸಿ.....

ನೋಡೋಣ ಗಾಡಿ ಹೀಗೆ ಎಷ್ಟು ದೂರ ಹೋಗುತ್ತೆ ಅಂತ..........

ರೈತರ ಬೆವರಿನ ಘಮಲು,
ಶ್ರಮದ ನಿಟ್ಟುಸಿರು,
ನಿರಾಸೆಯ ಆಕ್ರಂದನ,
ನೋವಿನ ಕೂಗು,
ಈ ಸಮಾಜಕ್ಕೆ ತಟ್ಟುವವರೆಗೂ......

ಮನುಷ್ಯ ಪ್ರಾಣಿಗಳ ಸುಖಕ್ಕೆ ತೊಂದರೆಯೇನು ಇಲ್ಲ......

ಆತ್ಮವಂಚಕರು 
ನಾವು
ಆತ್ಮವಂಚಕರು...

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
🌹🌹🌹🌹🌹🌹🌹🌹🌹🌹🌹🌹🌹🌹🌹
ಭಕ್ತಿಯ ಸುಪ್ರಭಾತವಲ್ಲ,
ಬದುಕಿನ ಸುಪ್ರಭಾತ ಕೇಳಿ.......

ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ............

ಅಲೆಅಲೆಯಾಗಿ, ವಿವಿಧ ಶಭ್ದ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ.........

ಒಂದು ಮನೆಯಿಂದ ಹೆಣ್ಣಿನ ಧ್ವನಿ ತನ್ನ ಗಂಡನಿಗೆ...‌‌
" ನೋಡಿ ಸ್ಕೂಲ್ ಗೆ ಮಗೂನ ಸೇರಿಸ್ಲಿಕ್ಕೆ ನಾಳೇನೇ Last date.
ಏನ್ ಮಾಡ್ತೀರೊ ಗೊತ್ತಿಲ್ಲ. 10000 ರೂಪಾಯಿ ಇವತ್ತು ರಾತ್ರಿ ಒಳಗೆ adjust ಮಾಡಲಿಲ್ಲ ಅಂದ್ರೆ,
ನಾಳೆ ನೀವು ನಂದು, ನನ್ ಮಗೂದು ಹೆಣ ನೋಡ್ಬೇಕು ಅಷ್ಟೆ. "

ಇನ್ನೊಂದು ಮನೆಯಿಂದ ಗಂಡು ಧ್ವನಿ, ( ಸ್ವಗತ )
"ಅಮ್ಮ ಒಂದು ವಾರದಿಂದ ಒಂದೇ ಸಮನೆ ಕೆಮ್ತಾ ಇದಾರೆ. ಆಸ್ಪತ್ರೆಗೆ ಸೇರಿಸಬೇಕು ಅಂದ್ರೆ,
 250 ರೂಪಾಯಿ ಬೇಕು. ಅಷ್ಟು ದುಡ್ಡು ನನ್ನಿಂದ ಹೊಂದಿಸಲಿಕ್ಕೆ ಆಗ್ತಾ ಇಲ್ಲ.
ಛೆ, ಈ ನನ್ನ ಜನ್ಮಕ್ಕೆ ಬೆಂಕಿ ಹಾಕ.ಯಾಕಾದ್ರೂ ಬದುಕಿರಬೇಕು. "

ಮತ್ತೊಂದು ಮನೆಯೊಳಗಿನ ಗಂಡು ಧ್ವನಿ, ಕೋಪದಿಂದ,....
"ಲೇ, ನಾಳೆ ಒಳಗೆ ನಿಮ್ಮಪ್ಪನ ಮನೆಯಿಂದ 50000 ದುಡ್ಡು ತರಲಿಲ್ಲ ಅಂದ್ರೆ, ನಿನ್ನ - ಮಗೂನ,
ಇಬ್ಬರನ್ನು ಸಾಯಿಸಿ ಜ್ಯೆಲಿಗೆ ಹೋಗ್ ಬಿಡ್ತೀನಿ. ಹುಷಾರ್. ಇದೇ Last chance. "

ಮಗದೊಂದು ಮನೆಯಲ್ಲಿನ ಹೆಣ್ಣು ಧ್ವನಿ,‌ ಅಳುತ್ತಾ ತನ್ನ ಗಂಡನಿಗೆ,
"ಅಯ್ಯೋ ಮುಂಡೆ ಮಗನೆ, ತಿನ್ನೋಕೆ ಗತಿಯಿಲ್ಲ, ರಾತ್ರಿ ಕಂಠ ಪೂರ್ತಿ ಕುಡಿದು ದನಕ್ಕೆ ಹೊಡೆದಂಗೆ
ಹೊಡಿತೀಯ, ನಿನಗೆ ಬರಬಾರದು ಬರ. ದಾರಿಯಲ್ಲಿ ಓಡಾಡೊ ಯಾವುದಾದರೂ ಬಸ್ಸಿಗೆ ಸಿಕ್ಕಿ ಸಾವಾದ್ರೂ ಬರಬಾರದಾ ನಿನಗೆ. ನನ್ನ ಶಾಪ ತಟ್ಟಲಿ ನಿನಗೆ. "

ಇನ್ನೊಂದು ಮನೆಯ ಹೆಣ್ಣು ಧ್ವನಿ, ತನ್ನ ಮಗಳಿಗೆ,..
" ಲೇ, ಕಾಲೇಜಿನಲ್ಲಿ ಅದ್ಯಾವನೋ ಹಿಂದೆ ಬೈಕಿನಲ್ಲಿ ಓಡಾಡ್ತಾ ಇದೀಯಂತೆ. ಇದೇ ಲಾಸ್ಟು.
ಇನ್ನೊಂದ್ಸಾರಿ ಈ ವಿಷ್ಯಾ ನನ್ ಕಿವಿಗೆ ಬಿದ್ರೆ, ನಾನೇ ನೇಣಾಕಿ ಸಾಯಿಸಿ ಬಿಡ್ತೀನಿ ಹುಷಾರ್. "

Digital India, Smart city, Global leader, E-Governence,
ಹೀಗೆ ಅನೇಕ ಕನಸುಗಳನ್ನು ಜನರಲ್ಲಿ ಬಿತ್ತುತ್ತಿರುವ ಸರಕಾರಗಳು,
ಕೆಳ ಮಧ್ಯಮ ವರ್ಗದ ಜನರ ಬದುಕು ಬವಣೆಗಳನ್ನು ಮೇಲಿನಿಂದ ನೋಡುತ್ತಿರುವಂತಿದೆ,

ಅಯ್ಯಾ ಮಂತ್ರಿಗಳೆ, ಅಧಿಕಾರಿಗಳೆ, 
ಸ್ವಲ್ಪ ಕೆಳಗಿಳಿದು ಬನ್ನಿ.
ಗಮನಿಸಿ ನಮ್ಮನ್ನು ನಿಮ್ಮ ಮುಂದಿನ ಯೋಜನೆಗಳನ್ನು ರೂಪಿಸುವ ಮೊದಲು.

ಏಕೆಂದರೆ ನಿಜವಾದ ಕೆಳ ಮಧ್ಯಮ ವರ್ಗದ ಬದುಕು ಈಗಲೂ ಇದೇ ರೀತಿಯ ಬೆಳಗಿನ ನೋವಿನ ಸುಪ್ರಭಾತಗಳೊಂದಿಗೆ ಪ್ರಾರಂಭವಾಗುತ್ತದೆ.

ಇನ್ನು ರಾತ್ರಿಯ ಕರಾಳ ಬದುಕು ನರಕವನ್ನೇ ದರ್ಶನ ಮಾಡಿಸುತ್ತದೆ.
ಹೊಟ್ಟೆ ತುಂಬಿದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ.

ಈ ಸುಪ್ರಭಾತ ಹಸಿದವರಿಗೆ, 
ನೋವು ಅನುಭವಿಸಿದವರಿಗೆ,
ಕಷ್ಟಕ್ಕೆ ಸ್ಪಂದಿಸುವವರಿಗೆ ಮಾತ್ರ...

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
ವಿವೇಕಾನಂದ. ಹೆಚ್.ಕೆ
🌹🌹🌹🌹🌹🌹🌹🌹🌹🌹🌹🌹🌹🌹🌹

" ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು "

ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ  ಜನರಿಗಾಗಿ  ಯೇಸು ಕ್ರಿಸ್ತ ಆ ದೇವರಲ್ಲಿ ಪ್ರಾರ್ಥಿಸಿದರು.....

ಇಂದು ಅದೇ ವ್ಯಕ್ತಿ ವಿಶ್ವದ ಅತ್ಯಂತ ಹೆಚ್ಚು ಜನ ಆರಾಧಿಸುವ ದೇವರಾಗಿದ್ದಾರೆ‌. ಈಗ ಒಳಿತಿಗಾಗಿ ಜನ ಅವರನ್ನು ಪ್ರಾರ್ಥಿಸುತ್ತಿದ್ದಾರೆ.

ಅಲ್ಲಾಹು - ಬ್ರಹ್ಮ - ಪೌರಾಣಿಕ ಆಧ್ಯಾತ್ಮಿಕ ನಂಬಿಕೆಯ ದೇವರಾದರೆ  ಜೀಸಸ್ ಮನುಷ್ಯರಾಗಿದ್ದು ಐತಿಹಾಸಿಕ ದೇವರಾದವರು.

ಇಡೀ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಎಲ್ಲಾ ದೇವರುಗಳು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಗಳೆಂದು ಸೃಷ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಮಾತ್ರ ನಾವೇ ಉತ್ತರ ಹುಡುಕಿಕೊಳ್ಳಬೇಕು....!!!

ವಿಶ್ವದಾದ್ಯಂತ ಈಗ ಬಹುತೇಕ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಹಿಂದೆ ಇದ್ದ ಯುದ್ಧಗಳ ಜಾಗವನ್ನು ಈಗ ಭಯೋತ್ಪಾದನೆ ಎಂಬ ಭೂತ ಆಕ್ರಮಿಸಿಕೊಂಡಿದೆ. ಮರೆಯಲ್ಲಿ ನಿಂತು ಮಾಯಾವಿಯಂತೆ ಜನರನ್ನು ಕೊಲ್ಲುತ್ತಾ ಸಾಗುತ್ತಿದೆ. ಅಮಾಯಕರ ನೆತ್ತರು ಹರಿಯುತ್ತಿದೆ.

ಇಂತಹ ಸಂದರ್ಭದಲ್ಲಿ ಜೀಸಸ್ ನೆನಪಾಗುತ್ತಾರೆ.
ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ ಎಂಬ ಅಮೋಘ ಸಂದೇಶ ನೀಡಿದವರು ಯೇಸು.
ಆದರೆ ಈಗ ಪ್ರೀತಿಸುವುದು ಇರಲಿ, ಗೆಳೆಯರನ್ನು, ನೆರೆಹೊರೆಯವರನ್ನು ನಂಬಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ...

ಧರ್ಮ ಬೆಳೆದಂತೆಲ್ಲಾ ಅದರ ಆಚರಣೆಯಲ್ಲಿ ಮೂಡನಂಬಿಕೆಗಳು, ಮತಾಂತರಗಳು, ವಿಭಾಗಗಳು ಕ್ರಿಶ್ಚಿಯನ್ ಧರ್ಮದಲ್ಲೂ ಬೆಳೆದು ಬಂದವು.‌ ಮತಾಂಧ ಜನರಿಂದ ಧಾರ್ಮಿಕ ಕಾರಣಗಳಿಗಾಗಿ ಅಪಾರ ಹಿಂಸೆ ಸಹ ನಡೆದಿದೆ.

ಆದರೆ ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮ ಸೇವಾ ಮನೋಭಾವವನ್ನು, ಸರಳತೆಯನ್ನು, ನಾಗರಿಕ ಪ್ರಜ್ಞೆಯನ್ನು, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತು. ಮುಖ್ಯವಾಗಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.

ಆಡಳಿತದಲ್ಲಿ ಧಮನಕಾರಿ ಧೋರಣೆ, ಯುದ್ಧ, ಆಕ್ರಮಣ ಇದ್ದರೂ ವ್ಯಕ್ತಿ ಸ್ವಾತಂತ್ರ್ಯ, ವಿಶಾಲ ಮನೋಭಾವ, ಮಹತ್ವಾಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಹೆಚ್ಚು ಜನಪ್ರಿಯವೂ ಸಹನೀಯವೂ ಆಗಿದೆ. ಅದಕ್ಕೆ ಕಾರಣ ಜೀಸಸ್ ಅವರ ಸರಳ ಭೋದನೆಗಳು ಮತ್ತು ಮಾನವೀಯ ಕಳಕಳಿಯ ವಿಚಾರ ಸರಣಿಗಳು.

ವಿಶ್ವದ ಎರಡು ಮಹಾಯುದ್ಧಗಳಲ್ಲಿ ಕ್ರಿಶ್ಚಿಯನ್ ಧರ್ಮದ ದೇಶಗಳದೇ ಪ್ರಮುಖ ಪಾತ್ರ, ಹಾಗೆಯೇ ಧರ್ಮ ಒಂದು ಅಫೀಮು ಎಂದು ಆಕ್ರೋಶ ಭುಗಿಲೆದ್ದು ಕ್ರಾಂತಿಕಾರಕ ಚಿಂತನೆ ರೂಪ ಪಡೆದದ್ದು ಕ್ರಿಶ್ಚಿಯನ್ ಧರ್ಮದಲ್ಲೇ..

ಹೀಗೆ ತನ್ನ ‌ಚಿಂತನೆಗಳಿಂದಲೇ ಇಂದು ವಿಶ್ವದ ಜನಸಂಖ್ಯೆಯಲ್ಲಿ ಅತಿಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸು ಕ್ರಿಸ್ತನನ್ನು ನೆನೆಯುತ್ತಾ....

ವಿಶ್ವ ಶಾಂತಿಗಾಗಿ ಜನರಲ್ಲಿ ಪ್ರಾರ್ಥಿಸುತ್ತಾ....

ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.