ಇಡೀ ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ ಈ ಸೃಷ್ಟಿ ಮನುಷ್ಯನ ಸ್ವತ್ತು ಅಲ್ಲವೇ ಅಲ್ಲ
ನಮ್ಮ ಸುತ್ತ ಮುತ್ತ ಪ್ರಾಣಿ ಪಕ್ಷಿ ಮರ ಬೆಟ್ಟ ಗುಡ್ಡಗಳು ಹಳ್ಳ ನದಿ ಸರೋವರ ಸಮುದ್ರ ಸಾಗರ ಗಾಳಿ ಮಳೆ ಆಕಾಶ ಬೆಳಕು ಇವೆಲ್ಲವೂ ಇವೇ ಒಟ್ಟಾರೆ ಇವೆಲ್ಲವನ್ನು ಪರಿಸರ ಎನ್ನಬಹುದಲ್ಲವೇ
ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಪರಿಸರದೊಡನೆ ಅನ್ಯೋನ್ಯತೆಯೊಂದಿಗೆ ಜೀವಿಸಿ ಅಕ್ಷರದ ಅಂಗಳದಲ್ಲಿ ಕಲಿಯುವ ಮುನ್ನುಡಿಗೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಕ್ಲಸ್ಟರ್ ನ ನಮ್ಮೂರ ಸರ್ಕಾರಿ ಕನ್ನಡ ಶಾಲೆ ಕಲಾವಿಹೊಸಹಳ್ಳಿ ಶಾಲೆ
ಆತ್ಮೀಯ ಬಂಧುಗಳೇ ದಿನಾಂಕ 28-05-2020 ರಂದು ಈ ಶಾಲೆಯನ್ನು ನೋಡುವ ಸಲುವಾಗಿ ಭೇಟಿ ನೀಡಲಾಯಿತು.
ನೋಡಿದ ಮೇಲೆ ಈ ಶಾಲೆಯ ಬಗ್ಗೆ ಒಂದೆರಡು ಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು ಆದರೆ ಈ ಕಲಾವಿಹೊಸಹಳ್ಳಿ ಶಾಲೆ ಅದಕ್ಕೆ ಹೊರತಾಗಿ ನಮ್ಮ ಕನ್ನಡ ಶಾಲೆಗಳು ಇತರೆ ಶಾಲೆಗಳಿಗಿಂತ ಯಾವುದಕ್ಕೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ
ಶಾಲೆಯಲ್ಲಿ ಪರಿಸರ ಕಾಳಜಿ ,ಸ್ವಚ್ಛತೆ, ಆರೋಗ್ಯ ,ಕಲಿಕೆಗೆ ಹೆಚ್ಚು ಗಮನ ಹರಿಸಿ ವಿವಿಧ ಬಗೆಯ ಕಾರ್ಯ ಚಟುವಟಿಕೆಗಳನ್ನು ಶಾಲಾ ಪೋಷಕರೊಂದಿಗೆ ಪ್ರತಿ ವರ್ಷ ಕ್ರಿಯಾ ಯೋಜನೆ ತಯಾರಿಸಿ ಅದರಂತೆ ಹಂತ ಹಂತವಾಗಿ ಜ್ಞಾನ ದೇಗುಲದ ಪರಿಸರ ಮಿತ್ರ ಶಾಲೆಯನ್ನಾಗಿಸಿದ್ದಾರೆ
ಶಾಲೆಯ ಆವರಣದಲ್ಲಿ ಹಚ್ಚ ಹಸಿರಿನ ಬನಸಿರಿ, ಬಣ್ಣ ಬಣ್ಣದ ಕುಸುಮಗಳು, ಮಕ್ಕಳ ಕಣ್ಮನ ಸೆಳೆಯುವ ಕುಂಡಗಳು, ಸಭ್ಯತೆಯ ಮಾನವೀಯ ಮೌಲ್ಯಗಳನ್ನು ಸಾರುವ ಗೋಡೆ ಬರಹಗಳು, ಜೀವನದ ಉತ್ಕೃಷ್ಟತೆಗೆ ಸ್ಫೂರ್ತಿದಾಯಕ ಚಿತ್ರಪಟಗಳು, ಪರ್ವತದ ಇಳಿ ಜಾರಿನ ಕಲ್ಲು ಬಂಡೆಗಳ ನಡುವೆ ನೀರು ಜಿನುಗುವ ಹಾಗೆ ಪ್ರಾತ್ಯಕ್ಷತೆ, ಸಸ್ಯ ಮತ್ತು ಪ್ರಾಣಿ ವಿಕಾಸದೆಡೆಗೆ ಸಾಗುವ ಚಿತ್ರ ಸದೃಶ್ಯ, ಜ್ಞಾನ ದೇಗುಲಕ್ಕೆ ಪ್ರವೇಶಿಸುವ ಮುನ್ನ ಮಕ್ಕಳು ಜ್ಞಾನದಾತ ವಿಘ್ನೇಶ್ವರ ನಮಿಸುವ ಪೂಜಾ ಮಂದಿರ ಹೀಗೆ ಒಂದೇ ಎರಡೇ ಈ ಶಾಲೆಯು ಕೈಗೊಂಡ ಕೈಂಕರ್ಯ
ಶಾಲೆಯ ಹಿಂಬದಿಯಲ್ಲಿ ಸಾವಯವ ಕೃಷಿಯ ಮೇಳ ಅಕ್ಷರ ದಾಸೋಹಕ್ಕೆ ಬೇಕಾದ ಎಲ್ಲ ಬಗೆಯ ತರಕಾರಿ, ಸೊಪ್ಪು, ಬಾಳೆ, ನೇರಳೆ, ಸಮೃದ್ಧಿ ದಾಸೋಹದ ಶಾಲೆಯ ಆಗರವೇ ಸರಿ
ಸುಂದರ ಪರಿಸರ ಸುಂದರ ಶಾಲೆ ನಿರ್ಮಾಣ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಇನ್ನು ಶಾಲೆಯ ಒಳಗೆ ಕೊಠಡಿಗಳ ಗೋಡೆಗಳ ವಿನ್ಯಾಸ ಅದ್ಭುತ ಕಲಾ ವಿನ್ಯಾಸಗಳು ಒಂದಷ್ಟು ಖಾಲಿ ಜಾಗ ಬಿಡದೆ ಕಲಿಕೆಗೆ ಪೂರಕವಾದ ಚಟುವಟಿಕೆ ಆಧಾರಿತ ಭಿತ್ತಿ ಪತ್ರಗಳು ವಿಧವಿಧ ವಿನ್ಯಾಸದ ಕಲಿಕಾ ಸಾಮಗ್ರಿಗಳು ಉತ್ತಮ ಗುಣಮಟ್ಟದ ನೆಲಹಾಸು ಸಂತಸದಾಯಕ ಕಲಿಕೆಗೆ ಮಕ್ಕಳಿಗೆ ಇದಕ್ಕಿಂತ ಸೌಭಾಗ್ಯದ ಸಂಗತಿಯಿದೆಯೇ
ಜಗತ್ತು ತಂತ್ರಜ್ಞಾನದ ಹಾದಿಯಲ್ಲಿ ಮುನ್ನಡೆಯುತ್ತಿರುವ ಹಾದಿಯಲ್ಲಿಯೇ ಮಕ್ಕಳಿಗೂ ಇದರ ಸದುಪಯೋಗಕ್ಕಾಗಿ ಸ್ಮಾರ್ಟ್ ಟಿವಿ ಕಂಪ್ಯೂಟರ್ ಜ್ಞಾನ ಭಂಡಾರದ ಗ್ರಂಥಾಲಯ ಇತ್ಯಾದಿ ಆಧುನಿಕ ಸುಸ್ಥಿತ ಉಪಕರಣಗಳನ್ನು ಹೊಂದಿರುವುದು ಶಾಲೆಯ ಹೆಮ್ಮಯೇ ಸರಿ
ಇಲ್ಲಿ ಶಿಕ್ಷಣ ಪೂರೈಸಿದ ಮಕ್ಕಳು ಮುಂದಿನ ವ್ಯಾಸಂಗಕ್ಕಾಗಿ ಮೊರಾರ್ಜಿ ದೇಸಾಯಿ ಆದರ್ಶ ಶಾಲೆ ಕಿತ್ತೂರು ರಾಣಿ ಚೆನ್ನಮ್ಮ ಇತ್ಯಾದಿ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ಶಾಲೆಯ ಶಿಕ್ಷಕರ ಗುಣಮಟ್ಟದ ಕಲಿಕೆಯ ಬದ್ಧತೆಗೆ ಕೈಗನ್ನಡಿ ನಿದರ್ಶನ.
ಮಕ್ಕಳ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಶಾಲಾ ವಿವಿಧ ಬಗೆಯ ಸಮವಸ್ತ್ರ ಶೂ ಪಾದರಕ್ಷೆಗಳು ಎಲ್ಲವೂ ವಿನೂತನ
ಆಲೋಚನೆ ಅಳವಡಿಕೆ.
ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ದಿನಾಚರಣೆಗಳನ್ನು ಇಲ್ಲಿನ ಪೋಷಕ ಗ್ರಾಮಸ್ಥರು ತಮ್ಮ ಮನೆಯ ಹಬ್ಬಗಳಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆಚರಿಸುವುದು ಇಲ್ಲಿ ವಿಶೇಷ.
ಇಂತಹ ಅಪರೂಪ ಪರಿಸರ ಶಾಲೆಯನ್ನಾಗಿ ಬದಲಾಯಿಸಿದ ಹೆಮ್ಮೆ ಶ್ರೀಯುತ ಮುಖ್ಯ ಶಿಕ್ಷಕರಾದ ಸುರೇಶ್ ಸರ್ 13 ವರ್ಷಗಳಿಂದ ತನು ಮನ ಶಾಲೆಗಾಗಿ, ಮಕ್ಕಳಿಗಾಗಿ, ಅರ್ಪಿಸಿದ್ದಾರೆ
ಪ್ರತಿ ಯೋಜನೆಯ ಹಿಂದೆ ದೂರದೃಷ್ಟಿ, ವೈಚಾರಿಕತೆ, ಸೃಜನಶೀಲತೆಯಿಂದ ಈ ಮಾದರಿ ಪರಿಸರ ಮಿತ್ರ ಶಾಲೆಯನ್ನು ಕಟ್ಟಿದ್ದಾರೆ ಇದಕ್ಕೆ ಪೂರಕ ಬೆಂಬಲವಾಗಿ ಶಾಲಾ ವರ್ಗ ಪೋಷಕ ವರ್ಗ ಸಮುದಾಯ ದಾನಿಗಳ ಸಹಕಾರದೊಂದಿಗೆ ಶಾಲೆಯನ್ನು ಪೋಷಿಸಿ ಬೆಳೆಸಿದ್ದಾರೆ ಈ ಎಲ್ಲರಿಗೂ ನನ್ನದೊಂದು ಸಲಾಂ
ಇವರ ಶಾಲಾ ಕೈಂಕರ್ಯದ ಮಹತ್ವದ ಸಾಕ್ಷಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಲಭಿಸಿದೆ
ತಮ್ಮ ಶಾಲೆಯ ಭೇಟಿಯ ಸವಿನೆನಪಿಗಾಗಿ ಕಾಣಿಕೆ ನೀಡಿ ಬೀಳ್ಕೊಟ್ಟರು
ನನ್ನ ವೃತ್ತಿ ಬದುಕಿಗೆ ಸ್ಫೂರ್ತಿಯಾದ ಈ ಶಾಲೆ ತಮಗೂ ಸ್ಫೂರ್ತಿಯಾಗಲಿ ಸಮಯವಿದ್ದಾಗ ಒಮ್ಮೆ ಸಂದರ್ಶಿಸಿ ದಾನಿಗಳ ಪ್ರೋತ್ಸಾಹ ಸಹಕಾರ ಸದಾ ಹೀಗೆ ಕನ್ನಡ ಶಾಲೆಗಳತ್ತ ಸಾಗಲಿ ಎಂಬ ಚಿಂತನೆಯೊಂದಿಗೆ ಎಲ್ಲರಿಗೂ ನಮಸ್ಕರಿಸುತ್ತಾ ಮನೋಹರ್ ಆರ್ ಸಂಪನ್ಮೂಲ ಶಿಕ್ಷಕರ ಕೇಂದ್ರ (ಶಿಕ್ಷಕರ ಕೈಪಿಡಿ)