ರಾಜ-ರಾಣಿಯರ ಕಥೆಗಳು

ಝಾನ್ಸಿ ರಾಣಿ ಲಕ್ಷ್ಮೀಬಾಯಿ

 ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜನ್ಮ ಮತ್ತು ಬಾಲ್ಯ ಎರಡನೇ ಬಾಜೀರಾವ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೊಪಂತ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ ಕಾರ್ತಿಕ ಕೃಷ್ಣ ೧೪, ೧೭೫೭ ವರ್ಷ ಅಂದರೆ ಆಂಗ್ಲ ಪಂಚಾಂಗನುಸಾರ ೧೯ ನವೆಂಬರ ೧೮೩೫ ರಂದು ರಾಣಿ ಲಕ್ಷ್ಮೀಬಾಯಿಯ ಜನನವಾಯಿತು. ಆಕೆಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂತರು ಅವಳನ್ನು ಪ್ರೀತಿಯಿಂದ ‘ಮನುತಾಯಿ’ ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ಸುಂದರ ಮತ್ತು ತುಂಬಾ ಬುದ್ಧಿವಂತೆಯಾಗಿದ್ದಳು. ಮನುತಾಯಿಗೆ ೩-೪ ವರ್ಷವಿರುವಾಗಲೇ ಮಾತೃವಿಯೋಗ ಅನುಭವಿಸಬೇಕಾಯಿತು. ಅವಳು ಮುಂದೆ ಬ್ರಹ್ಮಾವರ್ತಾದ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.   ಲಕ್ಷ್ಮೀಬಾಯಿ ಯುದ್ಧಕಲೆಯ ಶಿಕ್ಷಣ ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧು ರಾವಸಾಹೇಬರವರೊಂದಿಗೆ ಕತ್ತಿವರಸೆ, ಬಂದೂಕು ಚಲಾಯಿಸುವುದು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನೈಪುಣ್ಯ ಪಡೆದುಕೊಂಡಳು. ಅವರ ಜೊತೆಯಲ್ಲಿಯೇ ಮನುತಾಯಿ ವಿದ್ಯಾಭ್ಯಾಸವನ್ನು ಮಾಡಿದಳು.   ಝಾನ್ಸಿ ರಾಣಿ ಲಕ್ಷ್ಮೀಬಾಯಿ  ವಿವಾಹ ಮನುತಾಯಿಗೆ ೭ ವರ್ಷವಿರುವಾಗ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಳಕರರವರೊಂದಿಗೆ ಅವಳ ವಿವಾಹವು ನೆರವೇರಿತು. ಮೋರೋಪಂತ ತಾಂಬೆಯವರ ಮನುತಾಯಿ ವಿವಾಹದ ನಂತರ ಝಾನ್ಸಿ ರಾಣಿಯಾದಳು. ವಿವಾಹದ ನಂತರ ಆಕೆಯನ್ನು ’ಲಕ್ಷ್ಮೀಬಾಯಿ’ ಎಂದು ಸಂಬೋಧಿಲಾಯಿತು.   ಪುತ್ರವಿಯೋಗದ ದುಃಖ ರಾಣಿ ಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಅಸುನೀಗಿತು. ಹಾಗಾಗಿ ರಾಣಿ ಲಕ್ಷ್ಮೀಬಾಯಿ ಮತ್ತು ಗಂಗಾಧರರಾವ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು.   ಲಕ್ಷ್ಮೀಬಾಯಿ ಮಗನನ್ನು ದತ್ತು ತೆಗೆದುಕೊಳ್ಳುವುದು ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ’ದಾಮೋದರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು ೧೮ ವರ್ಷದಲ್ಲೇ ವಿಧವೆಯಾದರು.   "ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ" ಆಂಗ್ಲರು ಹೊರಡಿಸಿದ ಹೊಸ ಆಜ್ಞೆಗನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಇರಲಿಲ್ಲ. ಈ ಆಜ್ಞೆಯ ಕುರಿತು ರಾಣಿ ಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸಿಯನ್ನು ತಾವು ವಶಪಡೆಸಿಕೊಳ್ಳುವುದಾಗಿ ತಿಳಿಸಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ ಘರ್ಜಿಸುತ್ತಾ "ನನ್ನ ಝಾನ್ಸಿಯನ್ನು ನಾನು ಎಂದಿಗೂ ಕೊಡುವುದಿಲ್ಲ" ಎಂದು ಗರ್ಜಿಸಿದಳು! ಇದನ್ನು ಕೇಳಿದ ಮೇಜರ ಎಲಿಸನು ಭಯಭೀತನಾಗಿ ಬರಿಗೈಯಲ್ಲಿ ಹಿಂತಿರುಗಿದನು.   ೧೮೫೭ ಸಂಗ್ರಾಮ   ೧೮೫೭ರ ಜನವರಿಯಲ್ಲಿ ಪ್ರಾರಂಭಗೊಂಡ ಸ್ವಾತಂತ್ರ ಸಂಗ್ರಾಮವು ಮೇ ೧೦ನೇ ತಾರೀಖಿನಂದು ಮೀರತನಲ್ಲಿ ಕಾಲಿಟ್ಟಿತ್ತು. ಮೀರತ, ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿ ಲಕ್ಷ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸಿಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರು ರಾಣಿ ಲಕ್ಷ್ಮೀಬಾಯಿಯನ್ನು ಜೀವಂತವಾಗಿ ಹಿಡಿದು ತರಲು ಸರ್ ಹ್ಯೂ ರೋಜ್ರನ್ನು ನೇಮಿಸಿದರು. ಸರ್ ಹ್ಯೂ ರೋಜ್ ಇವರ ಸೈನ್ಯವು ಝಾನ್ಸಿಯಿಂದ ಮೂರು ಮೈಲು ದೂರದಲ್ಲಿ ಬೀಡುಬಿಟ್ಟಿತು ಮತ್ತು ರಾಣಿಗೆ ಶರಣಾಗಲು ಸಂದೇಶ ಕಳಿಸಿತು. ಆದರೆ ಝಾನ್ಸಿ ರಾಣಿಯು ಶರಣಾಗದೆ ತಾನೇ ಮುಂದೆ ನಿಂತು ಎಲ್ಲರಿಗೆ ಹೋರಾಡಲು ಸ್ಫೂರ್ತಿ ನೀಡಿದಳು. ಯುದ್ಧ ಪ್ರಾರಂಭವಾಯಿತು. ಝಾನ್ಸಿಯ ಸೈನಿಕರು ಸತತವಾಗಿ ಫಿರಂಗಿಯಿಂದ ಗುಂಡುಗಳನ್ನು ಆಂಗ್ಲರ ಮೇಲೆ ಸಿಡಿಸಲು ಪ್ರಾರಂಭಿಸಿದರು. ಮೂರು ದಿವಸದ ನಂತರವೂ ಆಂಗ್ಲರಿಗೆ ಕೋಟೆಯ ಮೇಲೆ ವಿಜಯ ಸಾಧಿಸಲು ಸಾಧ್ಯವಾಗದಿದ್ದಾಗ ಸರ್ ಹ್ಯೂ ರೋಜ್ ಮೋಸದ ಮಾರ್ಗ ಹಿಡಿದರು. ಹೀಗೆ ಆಂಗ್ಲರು ಝಾನ್ಸಿಯ ಮೇಲೆ ವಿಜಯ ಸಾಧಿಸಿದರು. ಆಗ ರಾಣಿಯು ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿ ಕುದುರೆಯನ್ನೇರಿ ’ಜಯ ಶಂಕರ’ ಎಂಬ ಘೋಷಣೆಯನ್ನು ಮಾಡುತ್ತಾ ಆಂಗ್ಲ ಸೈನ್ಯವನ್ನು ಭೇದಿಸಿ ಮುನ್ನೆಡೆದಳು. ಈ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ತಂದೆ ಮೋರೋಪಂತರು ಅವಳೊಂದಿಗೆ ಇದ್ದರು. ಆದರೆ ಆಂಗ್ಲರೊಂದಿಗಿನ ಯುದ್ಧದಲ್ಲಿ ಮೋರೋಪಂತರು ಗಾಯಗೊಂಡು ಆಂಗ್ಲರ ಕೈಗೆ ಸಿಕ್ಕುಬಿದ್ದರು. ನಂತರ ಅವರಿಗೆ ಅವರನ್ನು ನೇಣಿಗೇರಿಸಲಾಯಿತು.   ಝಾನ್ಸಿ ರಾಣಿಯ ಮೂಲ ಚಿತ್ರ   ಕಾಲ್ಪಿಯ ಯುದ್ಧ ರಾಣಿ ಲಕ್ಷ್ಮೀಬಾಯಿಯು ೨೪ ಗಂಟೆಗಳಲ್ಲಿ ೧೦೨ ಮೈಲಿಗಳಷ್ಟು ದೂರ ಕುದುರೆ ಸವಾರಿ ಮಾಡಿ ’ಕಾಲ್ಪಿ’ ಎಂಬ ಊರು ತಲುಪಿದಳು. ಪೇಶ್ವೆಯವರು ಪರಿಸ್ಥಿತಿಯ ಅಭ್ಯಾಸವನ್ನು ಮಾಡಿ ರಾಣಿ ಲಕ್ಷ್ಮೀಬಾಯಿಗೆ ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದರು. ರಾಣಿ ಕೇಳಿದಷ್ಟು ಸೈನಿಕರನ್ನು ಅವಳಿಗೆ ನೀಡಿದರು. ಮೇ ೨೨ರಂದು ಸರ್ ಹ್ಯೂ ರೋಜ್ ಕಾಲ್ಪಿಯ ಮೇಲೆ ದಾಳಿ ಮಾಡಿದನು. ಯುದ್ಧ ಪ್ರಾರಂಭವಾದದ್ದನ್ನು ನೋಡಿ ರಾಣಿ ಲಕ್ಷ್ಮೀಬಾಯಿಯು ಕೈಯಲ್ಲಿ ಕತ್ತಿ ಹಿಡಿದು ಶರವೇಗದಿಂದ ಮುನ್ನುಗ್ಗಿದಳು. ರಾಣಿಯ ಹಲ್ಲೆಯನ್ನು ನೋಡಿ ಆಂಗ್ಲ ಸೈನ್ಯವು ಹಿಂದೆ ಓಡಿಹೋದರು. ಈ ಪರಾಭವದಿಂದ ದಿಗ್ಭ್ರಾಂತನಾದ ಸರ್ ಹ್ಯೂ ರೋಜ್ ಬಾಕಿ ಇದ್ದ ಸೈನ್ಯವನ್ನು ಯುದ್ಧಭೂಮಿಗೆ ಕೂಡಲೇ ಕರೆಸಿದನು. ಹೊಸ ಸೈನ್ಯದ ಮುಂದೆ ದಣಿದಿದ್ದ ಕ್ರಾಂತಿಕಾರರ ಆವೇಶ ಕಡಿಮೆಯಾಯಿತು. ಮೇ ೨೪ರಂದು ಕಾಲ್ಪಿಯನ್ನು ಆಂಗ್ಲರು ತಮ್ಮ ವಶಕ್ಕೆ ಪಡೆದುಕೊಂಡರು. ಕಾಲ್ಪಿಯಲ್ಲಿ ಪರಾಭವಗೊಂಡ ರಾವಸಾಹೇಬ ಪೇಶ್ವೆ, ಬಾಂದ್ಯದ ನವಾಬ, ತಾತ್ಯಾ ಟೋಪೆ, ಝಾನ್ಸೀಯ ರಾಣಿ ಮತ್ತು ಇತರ ಪ್ರಮುಖ ಸರದಾರರೆಲ್ಲರು ಗೊಪಾಳಪುರದಲ್ಲಿ ಒಂದು ಕಡೆ ಸೇರಿದರು. ಝಾನ್ಸಿ ರಾಣಿಯು ಗ್ವಾಲಿಯರನ್ನು ಆಂಗ್ಲರಿಂದ ವಶಕ್ಕೆ ಪಡೆಯಬೇಕೆಂದು ಸೂಚನೆ ನೀಡಿದಳು. ಗ್ವಾಲಿಯರನ ರಾಜ ಶಿಂದೆ ಬ್ರಿಟಿಷರ ಅನುಕರಣೆ ಮಾಡುತ್ತಿದ್ದರು. ರಾಣಿ ಲಕ್ಷ್ಮೀಬಾಯಿಯು ಮುಂದಾಳತ್ವ ವಹಿಸಿ ಗ್ವಾಲಿಯರನ್ನು ಗೆದ್ದು ಪೇಶ್ವೆಯವರ ಕೈಗಿಟ್ಟಳು.   ಸ್ವಾತಂತ್ರವೀರರ ಬಲಿದಾನ ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ್ ಹ್ಯೂ ರೋಜ್ಗೆ ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲರ ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನ ಕಡೆ ತಿರುಗಿಸಿದನು. ಜೂನ್ ೧೬ರಂದು ಆಂಗ್ಲರ ಸೈನ್ಯವು ಗ್ವಾಲಿಯರ‍ ತಲುಪಿತು. ರಾಣಿ ಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ್ ಹ್ಯೂ ರೋಜ್ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆಯನ್ನು ರಾಣಿ ತನ್ನ ಮೇಲೆ ಹೊತ್ತಳು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ದಾಸಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಭವ ಹೊಂದಬೇಕಾಯಿತು. ಜೂನ್ ೧೮ ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರನ್ನು ಬೇಧಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳನ್ನು ಬೇಧಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ’ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಯುಧ್ಹಕ್ಕೆ ಇಳಿದಿದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರುತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಳಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಆಕೆಯನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಆಕೆಗೆ ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು. ಜಗತ್ತಿನಾದ್ಯಂತ ಕ್ರಾಂತಿಕಾರರಿಗೆಲ್ಲ ಭಗತ ಸಿಂಗನ ತ್ಯಾಗ, ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಸಂಘಟನಾ ಶಕ್ತಿ ಹಾಗೆಯೇ ಝಾನ್ಸಿರಾಣಿಯ ಶೌರ್ಯವು ಸ್ಫೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀಬಾಯಿಯ ಚರಣಗಳಲ್ಲಿ ನಮನಗಳು. 
೧೮೫೭ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ವೀರರ ಗೌರವಾರ್ಥ ಭಾರತ ಸರಕಾರ ಬಿಡುಗಡೆ ಮಾಡಿದ ಅಂಚೆಚೀಟಿ      ಝಾನ್ಸಿ ರಾಣಿಯ ಗೌರವಾರ್ಥ ಭಾರತದ ಅಂಚೆಚೀಟಿ 

​ಔರಂಗಜೇಬನನ್ನು ೨೭ ವರ್ಷ ಉತ್ತರ ಹಿಂದೂಸ್ಥಾನದಿಂದ ದೂರವಿಡುವ ಸಂಭಾಜಿರಾಜ ! ಸಂಭಾಜಿರಾಜರು ತಮ್ಮ ಅಲ್ಪಾಯುಷ್ಯದಲ್ಲಿ ಮಾಡಿರುವ ಅಲೌಕಿಕ ಕಾರ್ಯಗಳ ಪರಿಣಾಮವು ಸಂಪೂರ್ಣ ಹಿಂದೂಸ್ಥಾನದ ಮೇಲಾಯಿತು. ಆದುದರಿಂದ ಪ್ರತಿಯೊಬ್ಬ ಹಿಂದೂ ಬಾಂಧವರು ಅವರ ಬಗ್ಗೆ ಕೃತಜ್ಞರಾಗಿರಬೇಕು. ಅವರು ಔರಂಗಜೇಬನ ಎಂಟು ಲಕ್ಷ ಸೈನ್ಯವನ್ನು ಧೈರ್ಯದಿಂದ ಎದುರಿಸಿದರು ಹಾಗೂ ಬಹಳಷ್ಟು ಮೊಘಲ್ ಸರದಾರರನ್ನು ಯುದ್ಧದಲ್ಲಿ ಸೋಲಿಸಿ ಅವರಿಗೆ ಓಡಲು ಭೂಮಿ ಸಾಲದಂತೆ ಮಾಡಿದರು. ಇದರಿಂದ ಔರಂಗಜೇಬನು ಮಹಾರಾಷ್ಟ್ರದಲ್ಲಿ ದೀರ್ಘಕಾಲದವರೆಗೆ ಹೋರಾಡುತ್ತಿದ್ದನು ಹಾಗೂ ಸಂಪೂರ್ಣ ಉತ್ತರ ಹಿಂದೂಸ್ಥಾನವು ಅವನ ದಬ್ಬಾಳಿಕೆಯಿಂದ ಮುಕ್ತಗೊಂಡಿತು. ಇದು ಸಂಭಾಜಿರಾಜರ ಅತ್ಯಂತ ಮಹತ್ವಪೂರ್ಣ ಕಾರ್ಯ ಎಂದು ಹೇಳಬಹುದು. ಅವರು ಒಂದು ವೇಳೆ ಔರಂಗಜೇಬನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ಅಥವಾ ಅವನ ಗುಲಾಮಗಿರಿಯನ್ನು ಸ್ವೀಕರಿಸಿದ್ದರೆ, ಅವನು ಎರಡು-ಮೂರು ವರ್ಷಗಳಲ್ಲಿ ಪುನಃ ಉತ್ತರ ಹಿಂದೂಸ್ಥಾನಕ್ಕೆ ಹೋಗುತ್ತಿದ್ದನು; ಆದರೆ ಸಂಭಾಜಿರಾಜರ ತೀವ್ರ ಹೋರಾಟದಿಂದ, ೨೭ ವರ್ಷಗಳ ಕಾಲ ಔರಂಗಜೇಬನು ದಕ್ಷಿಣದಲ್ಲಿ ಸಿಕ್ಕಿಬಿದ್ದನು ಹಾಗೂ ಇದರಿಂದ ಉತ್ತರದಲ್ಲಿ ಬುಂದೇಲಖಂಡ, ಪಂಜಾಬ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹಿಂದೂಗಳ ಹೊಸ ಅಧಿಕಾರದ ಉದಯವಾಗಿ ಹಿಂದೂ ಸಮಾಜಕ್ಕೆ ಸಂರಕ್ಷಣೆ ಲಭಿಸಿತು. 
 ಸಂಭಾಜಿರಾಜರ ಸಾಮರ್ಥ್ಯದ ಬಗ್ಗೆ ಪೋರ್ತುಗೀಜರಿಗಿದ್ದ ಭಯ! 
 ಸಂಭಾಜಿರಾಜರು ಗೋವಾದ ಮೇಲೆ ಆಕ್ರಮಣ ಮಾಡಿ ಧರ್ಮಾಂಧ ಪೋರ್ತುಗೀಜರನ್ನು ವಶಕ್ಕೆ ತೆಗೆದುಕೊಂಡರು. ಅವರೊಂದಿಗೆ ಒಪ್ಪಂದ ಮಾಡಿ ಗೋವಾದ ಅವರ ಧರ್ಮಪ್ರಸಾರಕ್ಕೆ ತಡೆಯೊಡ್ಡಿದ್ದರಿಂದ ಗೋವಾ ಪ್ರದೇಶದಲ್ಲಿನ ಹಿಂದೂಗಳ ರಕ್ಷಣೆಯಾಯಿತು ಎಂಬುದು ಮರೆಯಲು ಅಸಾಧ್ಯವಾದ ಸಂಗತಿ. ಪೋರ್ತುಗೀಜರಿಗೆ ಸಂಭಾಜಿರಾಜರ ಬಗ್ಗೆ ಬಹಳ ಭಯವಿತ್ತು. ಅವರು ಆಂಗ್ಲರಿಗೆ ಬರೆದ ಪತ್ರದಲ್ಲಿ ‘ಸದ್ಯದ ಪರಿಸ್ಥಿತಿಯಲ್ಲಿ ಸಂಭಾಜಿ ಮಹಾರಾಜರೇ ಸರ್ವಶಕ್ತಿಮಾನರಾಗಿದ್ದಾರೆ, ಇದು ನಮ್ಮ ಅನುಭವವಾಗಿದೆ !’ ಎಂದು ನಮೂದಿಸಿದ್ದಾರೆ. ಶತ್ರುವಿನ ಈ ಪ್ರಮಾಣ ಪತ್ರವು ಮಹಾರಾಜರ ಸಾಮರ್ಥ್ಯದ ಕಲ್ಪನೆ ನೀಡುತ್ತದೆ. 
ನಿರಾಧಾರ ಮತಾಂತರಗೊಂಡವರಿಗೆ ಅಧಾರ ಸಂಭಾಜಿ ಮಹಾರಾಜರು!
ಶಿವಾಜಿ ಮಹಾರಾಜರು ನೇತಾಜಿ ಪಾಲಕರರನ್ನು ಪುನಃ ಹಿಂದೂ ಧರ್ಮಕ್ಕೆ ಬರಮಾಡಿಕೊಂಡ ವಿಷಯ ಎಲ್ಲರಿಗೂ ತಿಳಿದಿದೆ; ಆದರೆ ಸಂಭಾಜಿರಾಜರು ತಮ್ಮ ರಾಜ್ಯದಲ್ಲಿ ‘ಶುದ್ಧೀಕರಣಕ್ಕಾಗಿ’ ಸ್ವತಂತ್ರ ವಿಭಾಗವನ್ನು ಸ್ಥಾಪಿಸಿರುವುದು ಮಹತ್ತ್ವದ ವಿಷಯವಾಗಿದೆ. ಹರಸೂಲ ಎಂಬ ಊರಿನ ಕುಲಕರ್ಣಿ ಮನೆತನದ ಬ್ರಾಹ್ಮಣನ ಕಥೆಯು ಸಂಭಾಜಿರಾಜರ ಇತಿಹಾಸದಲ್ಲಿ ಬರೆದಿಡಲಾಗಿದೆ. ಒತ್ತಾಯಪೂರ್ವಕವಾಗಿ ಮುಸಲ್ಮಾನನಾಗಿದ್ದ ಈ ಕುಲಕರ್ಣಿಯು ಹಿಂದೂ ಧರ್ಮಕ್ಕೆ ಮರಳಲು ಬಹಳ ಪ್ರಯತ್ನಿಸುತ್ತಿದ್ದನು; ಆದರೆ ಸ್ಥಳೀಯ ಬ್ರಾಹ್ಮಣರು ಅವನಿಗೆ ಸಹಾಯ ಮಾಡುತ್ತಿರಲಿಲ್ಲ. ಕೊನೆಗೆ ಈ ಬ್ರಾಹ್ಮಣನು ಸಂಭಾಜಿರಾಜರನ್ನು ಭೇಟಿಯಾಗಿ ತನ್ನ ವ್ಯಥೆಯನ್ನು ಅವರ ಎದುರು ಮಂಡಿಸಿದನು. ಮಹಾರಾಜರು ತಕ್ಷಣ ಅವನ ಶುದ್ಧೀಕರಣದ ವ್ಯವಸ್ಥೆ ಮಾಡಿ ಅವನಿಗೆ ಪುನಃ ಸ್ವಧರ್ಮದಲ್ಲಿ ಪ್ರವೇಶ ನೀಡಿದರು. ರಾಜನ ಔದಾರ್ಯದಿಂದ ಬಹಳಷ್ಟು ಹಿಂದೂಗಳು ಪುನಃ ಸ್ವಧರ್ಮಕ್ಕೆ ಮರಳಿದರು!
ಸಂಭಾಜಿ ರಾಜರ ಜ್ವಲಂತ ಧರ್ಮಾಭಿಮಾನ!
ಜನರಿಗೆ ಸಂಭಾಜಿ ರಾಜರ ಬಲಿದಾನದ ಇತಿಹಾಸದ ಸರಿಯಾದ ಮಾಹಿತಿ ಇಲ್ಲ. ಸಂಭಾಜಿರಾಜರು ಫೆಬ್ರವರಿ ೧, ೧೬೮೯ ರಂದು ಸಂಗಮೇಶ್ವರದಲ್ಲಿ ಕೆಲವರ ಆಸ್ತಿಯ ಬಗೆಗಿನ ಜಗಳದ ಬಗ್ಗೆ ತಿಳಿದುಕೊಳ್ಳುತ್ತಿದ್ದಾಗ, ಗಣೋಜಿ ಶಿರ್ಕೆಯ ಪಿತೂರಿಯಿಂದ ಬಂಧಿಸಲ್ಪಟ್ಟರು. ಆಗ ಮೋಘಲರು ಲಕ್ಷಾಂತರ ಸೈನಿಕರ ಬಂದೋಬಸ್ತಿನಲ್ಲಿ ರಾಜರ ಮೆರವಣಿಗೆ ಮಾಡಿದರು. ಅವರಿಗೆ ಶಾರೀರಿಕ ಹಾಗೂ ಮಾನಸಿಕ ಯಾತನೆ ನೀಡಿದರು. ವಿದೂಷಕನ ಬಟ್ಟೆ ಹಾಕಿಸಿ, ಕಟ್ಟಿಗೆಯ ಪಂಜರದಲ್ಲಿ ಕೈ ಕಾಲುಗಳನ್ನು ಸಿಕ್ಕಿಸಲಾಯಿತು. ಆ ಕಾಲದ ಚಿತ್ರಕಾರನು ಬಿಡಿಸಿದ ರಕ್ತದಿಂದ ತುಂಬಿದ ಸ್ಥಿತಿಯಲ್ಲಿರುವ ಸಂಭಾಜಿರಾಜರ ಚಿತ್ರವು ಕರ್ನಾವತಿ (ಅಹಮದಾಬಾದ) ನಗರ್ ಎಂಬಲ್ಲಿ ಸಂಗ್ರಹಾಲಯದಲ್ಲಿ ಇಂದಿಗೂ ಇದೆ. ಆ ಚಿತ್ರದಲ್ಲಿ ಅಸಂಖ್ಯ ಯಾತನೆಗಳನ್ನು ಸಹಿಸುವ ಈ ತೇಜಸ್ವಿ ಹಿಂದೂ ರಾಜನ ದೃಷ್ಟಿಯು ಅತ್ಯಂತ ಕ್ರುದ್ಧವಾಗಿದೆ, ಎಂಬುದು ಕಾಣುತ್ತದೆ. ಸಂಭಾಜಿರಾಜರ ಸ್ವಾಭಿಮಾನದ ಪರಿಚಯವು ಆ ಕ್ರುದ್ಧ ದೃಷ್ಟಿಯಿಂದಲೇ ತಿಳಿಯುತ್ತದೆ. ಫೆಬ್ರವರಿ ೧೫, ೧೬೮೯ ರಂದು ಪೇಡಗಾವನ ಕೋಟೆಯಲ್ಲಿ ಔರಂಗಜೇಬನನೊಂದಿಗೆ ರಾಜರ ಮುಖತ ಭೇಟಿ ಆಯಿತು. ‘ಕಾಫೀರರ ರಾಜ ಸಿಕ್ಕಿದನು’ ಎಂದು ಔರಂಗಜೇಬನು ನಾಮಾಜು ಪಠಿಸಿ ಅಲ್ಲಾನ ಉಪಕಾರವೆಂದು ತಿಳಿದು ಅತ್ಯಾನಂದ ವ್ಯಕ್ತಪಡಿಸಿದನು. ಆಗ ಔರಂಗಜೇಬನ ಪ್ರಧಾನ ಮಂತ್ರಿ ಇರವಲಾಸಖಾನನು ಸಂಭಾಜಿರಾಜರಿಗೆ ಶರಣಾಗಲು ತಿಳಿಸಿದನು. ಸಂತಪ್ತಗೊಂಡ ಸಂಭಾಜಿ ರಾಜರು ಔರಂಗಜೇಬನಿಗಾಗಿ 'ಮುಜರಾ' ಮಾಡಲು ನಿರಾಕರಿಸಿದರು. ಅದೊಂದು ನಿರ್ಣಾಯಕ ಕ್ಷಣವಾಗಿತ್ತು. ಮಹಾರಾಜರು ವೈಯಕ್ತಿಕ ಸುಖದ ಅಭಿಲಾಷೆಗಿಂತಲೂ ಹಿಂದುತ್ವದ ಅಭಿಮಾನವನ್ನು ಮಹತ್ತ್ವದ್ದೆಂದು ತಿಳಿದಿದ್ದರು. ತಮ್ಮ ತಂದೆ ನಿರ್ಮಿಸಿದ ಸ್ವಾಭಿಮಾನದ ಮಹಾನ ಪರಂಪರೆಯನ್ನು ಅವರು ಕಾಪಾಡಿದರು. ಇದರ ನಂತರ ಎರಡು ದಿನಗಳಲ್ಲಿ ಔರಂಗಜೇಬನ ಅನೇಕ ಸರದಾರರು ಅವರ ಮನ ಒಲಿಸಲು ಪ್ರಯತ್ನಿಸಿದರು. ಅವರಿಗೆ ‘ಮುಸಲ್ಮಾನರಾದರೆ ಜೀವದಾನ ಸಿಗುವುದು’, ಎಂಬುದಾಗಿ ಹೇಳಲಾಯಿತು; ಆದರೆ ಸ್ವಾಭಿಮಾನಿ ಸಂಭಾಜಿ ರಾಜರು ಸತತವಾಗಿ ಈ ಮುಸಲ್ಮಾನ ಸರದಾರರನ್ನು ಅವಮಾನಗೊಳಿಸಿದರು. 
ಧರ್ಮಕ್ಕಾಗಿ ಬಲಿದಾನ ನೀಡಿ ಇತಿಹಾಸದಲ್ಲಿ ಅಮರರಾದ ಸಂಭಾಜಿ ರಾಜರು ! 
ಕೊನೆಗೆ ಆ ಪಾಪೀ ಔರಂಗಜೇಬ ಅವರ ಕಣ್ಣು ಕುಕ್ಕಿಸಿದನು, ನಾಲಿಗೆ ಕತ್ತರಿಸಿದನು ಆದರೂ ಮೃತ್ಯುವು ರಾಜನನ್ನು ಸ್ಪರ್ಷಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಅವರ ದಿವ್ಯ ಧರ್ಮಾಭಿಮಾನದಿಂದಾಗಿ ಅವರಿಗೆ ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು. ಮಾರ್ಚ ೧೨, ೧೬೮೯ ರಂದು ಯುಗಾದಿ ಹಬ್ಬವಿತ್ತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ ೧೧ ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿರಾಜರ ಕೊಲೆ ಮಾಡಲಾಯಿತು. ಅವರ ಮಸ್ತಕವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವರನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರುವರಿ ೧ ರಿಂದ ಮಾರ್ಚ ೧೧ ರವರೆಗೆ ಹೀಗೆ ೩೯ ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿರಾಜರು ಹಿಂದುತ್ವದ ತೇಜವನ್ನು ಬೆಳೆಸಿದರು. ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದನು. ಔರಂಗಜೇಬನು ಮಾತ್ರ ರಾಜಧರ್ಮವನ್ನು ತುಳಿಯುವ ಇತಿಹಾಸದ ದರಬಾರಿನಲ್ಲಿ ಅಪರಾಧಿಯಾದನು. 
 ಸಂಭಾಜಿ ರಾಜರ ಬಲಿದಾನದ ನಂತರ ಮಹಾರಾಷ್ಟ್ರದಲ್ಲಿ ನಡೆದ ಕ್ರಾಂತಿ!
 ಸಂಭಾಜಿ ರಾಜರ ಈ ಬಲಿದಾನದಿಂದ ಸಂಪೂರ್ಣ ಮಹಾರಾಷ್ಟ್ರವು ಹೊತ್ತಿ ಉರಿಯಿತು ಹಾಗೂ ಪಾಪಿ ಔರಂಗಜೇಬನ ಜೊತೆ ಮರಾಠರ ನಿರ್ಣಾಯಕ ಹೋರಾಟ ಪ್ರಾರಂಭವಾಯಿತು. ಆ ಕಾಲವನ್ನು ‘ಹುಲ್ಲಿನ ಕಡ್ಡಿಗೆ ಬರ್ಚಿಗಳು ಹುಟ್ಟಿಕೊಂಡವು ಹಾಗೂ ಮನೆಮನೆಗಳು ಕೋಟೆಗಳಾದವು, ಮನೆ ಮನೆಯಲ್ಲಿ ಮಾತೆ ಭಗಿನಿಯರೆಲ್ಲರೂ ತಮ್ಮ ಗಂಡಸರಿಗೆ ರಾಜನ ಹತ್ಯೆಯ ಸೇಡು ತೀರಿಸಲು ಹೇಳತೊಡಗಿದರು’, ಎಂದು ವರ್ಣಿಸಿದ್ದಾರೆ. ಸಂಭಾಜಿ ಮಹಾರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು. ಇದು ಮುನ್ನೂರು ವರ್ಷಗಳ ಹಿಂದಿನ ರಾಷ್ಟ್ರ ಜೀವನದಲ್ಲಿನ ಅತ್ಯಂತ ಮಹತ್ತ್ವದ ಅಂಗವಾಗಿತ್ತು. ಇದರಿಂದ ಇತಿಹಾಸದಲ್ಲಿ ತಿರುವು ಮೂಡಿತು. ಜನರ ಬೆಂಬಲದಿಂದ ಮರಾಠರ ಸೈನ್ಯ ಬೆಳೆಯುತ್ತ ಹೋಯಿತು ಹಾಗೂ ಸೈನ್ಯದ ಸಂಖ್ಯೆಯು ಎರಡು ಲಕ್ಷದವರೆಗೆ ತಲುಪಿತು. ಅಲ್ಲಲ್ಲಿ ಮೊಘಲರಿಗೆ ಪ್ರಖರವಾದ ವಿರೋಧ ಪ್ರಾರಂಭವಾಯಿತು ಹಾಗೂ ಕೊನೆಗೆ ಮಹಾರಾಷ್ಟ್ರದಲ್ಲಿಯೇ ೨೭ ವರ್ಷಗಳ ನಿಷ್ಫಲ ಯುದ್ಧದ ನಂತರ ಔರಂಗಜೇಬನ ಅಂತ್ಯವಾಯಿತು. ಮೊಘಲರ ಅಧಿಕಾರ ಕ್ಷೀಣಸಿ ಹಿಂದೂಗಳ ಶಕ್ತಿಶಾಲಿ ಸಾಮ್ರಾಜ್ಯವು ಉದಯಗೊಂಡಿತು.  
೨೭ ವರ್ಷ ಔರಂಗಜೇಬನ ಪಾಶವಿ ಆಕ್ರಮಣದ ವಿರುದ್ಧ ಮರಾಠರು ಮಾಡಿದ ಹೋರಾಟದಲ್ಲಿ ಹಂಬೀರರಾವ, ಸಂತಾಜಿ, ಧನಾಜಿಯಂತಹ ಅನೇಕ ಯೋಧರಿದ್ದರು; ಆದರೆ ಈ ಹೋರಾಟಕ್ಕೆ ತಿರುವು ಮೂಡಿದ್ದು ಸಂಭಾಜಿ ರಾಜರ ಬಲಿದಾನದಿಂದ ಆಗಿರುವ ಜಾಗೃತಿಯಿಂದಲೇ ಎಂಬುದನ್ನು ಮರೆಯುವಂತಿಲ್ಲ.




 
 
**ಚಿತ್ರದುರ್ಗದ ಪಾಳೆಗಾರರು
ಚಿತ್ರದುರ್ಗವು ಮಧ್ಯ ಕರ್ನಾಟಕದಲ್ಲಿದೆ. ಈಗ ಅದು ಜಿಲ್ಲೆಯ ಮುಖ್ಯ ಸ್ಥಳ. ಅದಕ್ಕೆ ತನ್ನದೇ ಆದ ರೋಚಕ ಇತಿಹಾಸವಿದೆ. ಹದಿನಾರರಿಂದ ಹದಿನೆಂಟನೆಯ ಶತಮಾನಗಳ ಮಧ್ಯಂತರದಲ್ಲಿ, ಅದು ಚಿತ್ರದುರ್ಗದ ಪಾಳೆಗಾರರ ವಂಶದ ರಾಜಧಾನಿಯಾಗಿತ್ತು. ಈ ರಾಜವಂಶವನ್ನು, ಮತ್ತಿ ತಿಮ್ಮಣ್ಣ ನಾಯಕನು ಸ್ಥಾಪಿಸಿದನು.(೧೫೬೮-೮೮) ಅವನದು ಬೇಡರ ಸಮುದಾಯಕ್ಕೆ ಸೇರಿದ ಕಾಮಗೇತಿ ವಂಶ. ತಿಮ್ಮಣ್ಣ ನಾಯಕನು ಹೊಳಲ್ಕೆರೆ, ಚಿತ್ರದುರ್ಗ ಮತ್ತು ಹಿರಿಯೂರು ಪ್ರದೇಶಗಳ ಒಡೆಯನಾಗಿದ್ದನು. ಅವನ ಪರಾಕ್ರಮವನ್ನು ಮೆಚ್ಚಿಕೊಂಡ ವಿಜಯನಗರ ಸಾಮ್ರಾಜ್ಯದ ಅರಸರು, ಆ ಪಾಳೆಯಪಟ್ಟನ್ನು ತಮ್ಮ ಆಶ್ರಯಕ್ಕೆ ತೆಗೆದುಕೊಂಡರು. ಅವನ ನಂತರ ಪಟ್ಟಕ್ಕೆ ಬಂದ ಓಬಣ್ಣ ನಾಯಕನು(೧೫೮೮-೧೬೦೨) ಚಿತ್ರದುರ್ಗದ ಕೋಟೆಯೊಳಗಡೆ, ಒಂದು ಪಟ್ಟಣವನ್ನು ನಿರ್ಮಿಸಿದನು. ಅವನ ವಾರಸುದಾರನಾದ ಕಸ್ತೂರಿರಂಗನಾಯಕನು(೧೬೦೨-೧೬೫೨) ಮಾಯಕೊಂಡ, ಅಣಜಿ, ಸಂತೆಬೆನ್ನೂರು ಮುಂತಾದ ಪ್ರದೇಶಗಳನ್ನು ವಶಪಡಿಸಿಕೊಂಡು ಪಾಳೆಯಪಟ್ಟನ್ನು ವಿಸ್ತರಿಸಿದನು. ಸಮರ್ಥ ಆಡಳಿತಗಾರನೂ ವೀರನೂ ಆದ ಇಮ್ಮಡಿ ಮದಕರಿ ನಾಯಕನು(೧೬೫೨-೭೪) ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದನು. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಆಡಳಿತಗಾರನನ್ನು ನೇಮಿಸಿದನು. ದುರದೃಷ್ಟವಶಾತ್, ಈ ಕ್ರಮದ ಪರಿಣಾಮವಾಗಿ ಒಳಜಗಳಗಳು ಹೆಚ್ಚಾದವು. ಪಾಳೆಯಗಾರರಿಗೂ ಈ ಪ್ರಾದೇಶಿಕ ಅಧಿಕಾರಿಗಳಿಗೂ ನಡುವೆ ಯುದ್ಧಗಳೂ ನಡೆಯುತ್ತಿದ್ದವು.   ಈ ಮನೆತನಕ್ಕೆ, ಸೇಡು-ಪ್ರತಿಸೇಡು, ರಕ್ತಪಾತಗಳ ಸುದೀರ್ಘ ಇತಿಹಾಸವೇ ಇದೆ. ಈ ಸನ್ನಿವೇಶವು ಚಿಕ್ಕಣ್ಣನಾಯಕ, ಲಿಂಗಣ್ಣನಾಯಕ, ಭರಮಣ್ಣನಾಯಕ ಮತ್ತು ದೊಣ್ಣೆ ರಂಗಣ್ಣನಾಯಕರ ಕಾಲದಲ್ಲಿ ಬಹಳ ತೀವ್ರವಾಯಿತು. ದಳವಾಯಿ ಮುದ್ದಣ್ಣ ಮತ್ತು ಅವನ ಸೋದರರು ಖಳನಾಯಕರ ಪಾತ್ರವನ್ನು ವಹಿಸಿದರು. ಅವರನ್ನು ಸೋಲಿಸಿ ಪಟ್ಟಕ್ಕೆ ಬಂದ ಭರಮಣ್ಣನಾಯಕ ಮತ್ತು ದೊಡ್ಡ ಮದಕರಿನಾಯಕರ ಕಾಲದಲ್ಲಿ ಸ್ವಲ್ಪ ಮಟ್ಟಿನ ಶಾಂತಿ ಹಾಗೂ ಸಮೃದ್ಧಿಗಳನ್ನು ಪಡೆಯುವುದು ಸಾಧ್ಯವಾಯಿತು. ಅದು, ರಾಜ್ಯದ ವಿಸ್ತರಣೆಯ ಕಾಲವೂ ಆಯಿತು. ಕಿರಿಯ ಮದಕರಿನಾಯಕನ ಕಾಲದಲ್ಲಿ(೧೭೫೪-೭೯) ಚಿತ್ರದುರ್ಗವು ಬಹಳ ಪ್ರಭಾವಶಾಲಿಯಾದ ರಾಜ್ಯವಾಗಿ ಬೆಳೆಯಿತು. ಅಧಿಕಾರಕ್ಕಾಗಿ ಸ್ಪರ್ಧಿಸುತ್ತಿದ್ದ ಹೈದರ್ ಆಲಿ ಮತ್ತು ಮರಾಠರಿಬ್ಬರೂ ಕಿರಿಯ ಮದಕರಿನಾಯಕನ ನೆರವನ್ನು ಬಯಸುತ್ತಿದ್ದರು. ಮೊದಲು ಹೈದರ್ ಆಲಿಯ ಪರವಾಗಿಯೇ ಇದ್ದ ಮದಕರಿನಾಯಕನು ಅವನಿಗೆ ಬಹಳ ನೆರವು ನೀಡಿದನು. ಅದರಲ್ಲಿಯೂ ನಿಡಗಲ್ಲನ್ನು ಗೆಲ್ಲುವ ಕಾರ್ಯದಲ್ಲಿ, ಅವನ ಸಹಾಯ ಮುಖ್ಯವಾಗಿತ್ತು. ಆದರೂ ಒಳಗೊಳಗೇ ಅವರಿಬ್ಬರ ನಡುವೆ, ಅತೃಪ್ತಿ ಹಾಗೂ ಅಸಮಾಧಾನಗಳ ಹೊಗೆಯಾಡುತ್ತಿತ್ತು. ಆದ್ದರಿಂದಲೇ, ಮರಾಠರು ಮತ್ತು ಹೈದರಾಬಾದಿನ ನಿಜಾಮರು ಒಂದಾಗಿ, ಹೈದರ್ ಆಲಿಯ ಮೇಲೆ ಆಕ್ರಮಣ ಮಾಡಿದಾಗ ಮದಕರಿನಾಯಕನು ಮೌನವಹಿಸಿದನು. ಇದರಿಂದ ಕುಪಿತನಾದ ಹೈದರ್‌ಆಲಿಯು ದೊಡ್ಡ ಸೈನ್ಯದ ಸಂಗಡ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದನು. ಸುದೀರ್ಘವಾದ ಯುದ್ಧದ ನಂತರ ಮದಕರಿನಾಯಕನು ಸೋಲನ್ನು ಒಪ್ಪಬೇಕಾಯಿತು. ಅವನು ಸೆರೆಯಾಳಾಗಿ, ದೂರದ ಶ್ರೀರಂಗಪಟ್ಟಣದಲ್ಲಿ ಸಾಯುವುದರೊಂದಿಗೆ ಪಾಳೆಯಗಾರರ ವಂಶದ ಇತಿಹಾಸವು ಕೊನೆಯಾಯಿತು.   ಚಿತ್ರದುರ್ಗದ ರಕ್ತರಂಜಿತವೂ ರೋಮಾಂಚಕವೂ ಆದ ಚರಿತ್ರೆಯೂ ಚರಿತ್ರಕಾರರನ್ನೂ ಸಾಹಿತಿಗಳನ್ನೂ ಬಹುವಾಗಿ ಆಕರ್ಷಿಸಿದೆ. ಅವರು ಈ ವಂಶದ ಆಳ್ವಿಕೆಯ ಬೇರೆ ಬೇರೆ ಹಂತಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ. ಹುಲ್ಲೂರು ಶ್ರೀನಿವಾಸ ಜೋಯಿಸರು ಈ ರಾಜವಂಶದ ಇತಿಹಾಸವನ್ನು ಕುರಿತು ವ್ಯಾಪಕವಾದ ಸಂಶೋಧನೆ ನಡೆಸಿದರು. ಎಂ.ಎಸ್. ಪುಟ್ಟಣ್ಣನವರು ಚಿತ್ರದುರ್ಗದ ರಾಜವಂಶದ ಏಳುಬೀಳುಗಳನ್ನು ಕುರಿತು ‘ಚಿತ್ರದುರ್ಗದ ಪಾಳೆಗಾರರು’ ಎಂಬ ಮಹತ್ವದ ಪುಸ್ತಕವನ್ನು ಬರೆದಿದ್ದಾರೆ. ಪ್ರಸಿದ್ಧ ಕಾದಂಬರಿಕಾರರಾದ ತ.ರಾ.ಸು. ಅವರು ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಹೊಸಹಗಲು’ ಮತ್ತು ‘ವಿಜಯೋತ್ಸವ’ ಎಂಬ ಕಾದಂಬರಿಗಳ ಸರಣಿಯಲ್ಲಿ, ಪಾಳೆಗಾರರು ಮತ್ತು ಅವರ ದಳವಾಯಿಗಳ ನಡುವಿನ ಸಂಘರ್ಷವನ್ನು ಬಹಳ ಶಕ್ತಿಶಾಲಿಯಾದ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ, ಆವರಿಗೆ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ‘ದುರ್ಗಾಸ್ತಮಾನ’ ಕಿರಿಯ ಮದಕರಿನಾಯಕನ ಅಭಿವೃದ್ಧಿ ಮತ್ತು ದುರಂತಗಳನ್ನು ಕಟ್ಟಿಕೊಡುವ ಕಾದಂಬರಿ.   ಹೀಗೆ ಚಿತ್ರದುರ್ಗದ ಇತಿಹಾಸವು ಕೇವಲ ತನ್ನ ಕಥೆಯನ್ನು ಮಾತ್ರವಲ್ಲ, ಮಧ್ಯಕಾಲೀನ ಕರ್ನಾಟಕದ ಹತ್ತು ಹಲವು ಪಾಳೆಯಪಟ್ಟುಗಳ ಕಥೆಯನ್ನು ಪ್ರತಿಫಲಿಸುತ್ತದೆ.

***ರಾಜ ವಿಕ್ರಮಾದಿತ್ಯ (೬ನೇ ಶತಮಾನ)

೬ನೇ ಶತಮಾನದಲ್ಲಿ, ರಾಜ ವಿಕ್ರಮಾದಿತ್ಯ ಉಜ್ಜೈನನ್ನು ಪೂರ್ಣವಾಗಿ ಆಳಿದನು. ಅವನ ರಾಜ್ಯದಲ್ಲಿ, ಎಲ್ಲಾ ಕಾಯಿದೆಗಳು ಮತ್ತು  ಕ್ರಮ ವ್ಯವಸ್ಥೆಯು ಧರ್ಮಶಾಸ್ತ್ರದ ಅನುಸಾರ ಆಧರಿಸಲ್ಪಟ್ಟಿತ್ತು ಮತ್ತು ಉತ್ತಮವಾಗಿದ್ದವು.   ಅವನ ರಾಜ್ಯವು ಅರಭಸ್ಥಾನದವರೆಗೂ ವಿಸ್ತಾರವಾಯಿತು ಮತ್ತು ರಾಜನು ಉದಾರ ಸ್ವಭಾವದವನಾಗಿದ್ದು ಯಾವಾಗಲೂ  ತನ್ನ ಜನರ ನೆಮ್ಮದಿಯನ್ನು ನೋಡುತ್ತಿದ್ದನು. ವಿಕ್ರಮಾದಿತ್ಯನ ತಂದೆ ಮಹೇಂದ್ರದತ್ತ, ತಾಯಿ ಸೌಮ್ಯದರ್ಶನ ಮತ್ತು ತಮ್ಮ ಬಾರತುಹರಿ. ಅರಭಸ್ಥಾನ ಆಳುವವರನ್ನು ವಿಕ್ರಮಾದಿತ್ಯನು ಸೋಲಿಸಿದನು ಮತ್ತು ಆ ಪ್ರದೇಶವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. “ಬರಹಂ ಭೀನ್ ಸೋಯಿ" ಎಂಬ ಪದ್ಯದಲ್ಲಿ ಈ ಜಯವನ್ನು ಸುಂದರವಾಗಿ ವರ್ಣಿಸಲಾಗಿದೆ. ವಿಕ್ರಮಾದಿತ್ಯನು ೬೦ ವರ್ಷಗಳ ಆಳುವಿಕೆಯಲ್ಲಿ, ೨೫ ವರ್ಷ ಯುದ್ಧದಲ್ಲಿ ಕಾಲಕಳೆದನು. ಉದಾರ ಸ್ವಭಾವದ ಪ್ರಭುವಾಗಿದ್ದು ಯಾವಾಗಲೂ ಅವನ ಜನರ ನೆಮ್ಮದಿಗಾಗಿ ಯೋಚಿಸಿದನು ಮತ್ತು ಹಾಗೆಯೇ ಆಳಿದನು. ಅವನು ಶೈವ ಧರ್ಮದ ಅನುಯಾಯಿ ಆಗಿದ್ದರೂ ಸಹ, ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಿದನು. ಧನವಂತ್ರಿ, ಶಪಾನಕ, ಅಮರ ಸಿಂಗ್ ಶಂಕು, ವೇಟಲ್ ಭಟ್, ಖಾರಪರ, ಕಾಳಿದಾಸ, ವರಾಹಮಿಹಿರ ಮತ್ತು ವಾರುಚೀ ಇವು ಅವನ ಮಂತ್ರಾಲೋಚನ ಗೃಹದ ೯ ರತ್ನಗಳು. - ಪರಮಪೂಜ್ಯ ಪರಶುರಾಮ ಮಾಧವ ಪಾಂಡೆ ಮಾಹಾರಾಜರು, ಅಕೋಲಾ, ಮಹಾರಾಷ್ಟ್ರ.
 
 
**ಚಾವುಂಡರಾಯ (ಕ್ರಿ.ಶ.೯೪೦-೯೮೯)
ಚಾವುಂಡರಾಯನು ಸಾಹಿತ್ಯ ಮತ್ತು ಸಂಸ್ಕೃತಿಗಳ ಪೋಷಕನೆಂದು ಪ್ರಸಿದ್ಧನಾಗಿರುವ ಹಾಗೆ, ಸಾಹಿತಿಯೆಂದು ಹೆಸರುವಾಸಿಯಾಗಿಲ್ಲ. ಅವನು, ತನ್ನ ಹುಟ್ಟು ಮತ್ತು ಆಸಕ್ತಿಗಳಿಂದ ಜೈನಧರ್ಮಕ್ಕೆ ಸೇರಿದವನು. ಆದರೆ, ತಾನು ಮೊದಲು ಬ್ರಹ್ಮಕ್ಷತ್ರಿಯವಂಶಕ್ಕೆ ಸೇರಿದ್ದು, ಅನಂತರ ಕ್ಷತ್ರಿಯಧರ್ಮಕ್ಕೆ ಸೇರಿದೆನೆಂದು ಹೇಳಿಕೊಳ್ಳುತ್ತಾನೆ. ಯುದ್ಧತಂತ್ರದಲ್ಲಿ ಪರಿಣಿತನಾಗಿದ್ದ ಚಾವುಂಡರಾಯನು, ಮಾರಸಿಂಹ-,(೯೬೩-೯೭೪) ಮತ್ತು ನಾಲ್ಕನೆಯ ರಾಚಮಲ್ಲರ (೯೭೪-೯೯೯) ಆಳ್ವಿಕೆಯಲ್ಲಿ ಕಾರ್ಯನಿರತನಾಗಿದ್ದನೆಂದು ಹೇಳಲಾಗಿದೆ. ಕ್ರಿ.. ೯೯೯-೧೦೦೪ ಅವಧಿಯಲ್ಲಿ ರಾಜ್ಯಭಾರ ಮಾಡಿದ ರಾಚಮಲ್ಲ- ಅಥವಾ ರಕ್ಕಸಗಂಗನ ಕಾಲದಲ್ಲಿಯೂ ಸ್ವಲ್ಪ ಸಮಯ ಚಾವುಂಡರಾಯನು ಇದ್ದಿರಬಹುದೆಂಬ ಊಹೆಗೆ ಕೆಲವು ಪುರಾವೆಗಳಿವೆ. ರಾಜರುಗಳು, ದಕ್ಷಿಣ ಕರ್ನಾಟಕದ, ಪಶ್ಚಿಮ ತಲಕಾಡು ಗಂಗರ ಪ್ರಸಿದ್ಧವಾದ ವಂಶಕ್ಕೆ ಸೇರಿದವರುಚಾವುಂಡರಾಯನು, ಮಂತ್ರಿಯೂ ಸೇನಾನಾಯಕನೂ ಆಗಿದ್ದರಿಂದ, ಬಹಳ ಪ್ರಭಾವಶಾಲಿಯಾಗಿದ್ದನು. ರಾಜಾದಿತ್ಯ, ವಜ್ಜಳದೇವ, ಗೋವಿಂದ ಮುಂತಾದ ರಾಜರುಗಳೊಂದಿಗೆ, ಬಾಗೆಯೂರಕೋಟೆ, ಉಚ್ಚಂಗಿಕೋಟೆ, ಗೋಣಿಯೂರ ಬಯಲು ಇತ್ಯಾದಿ ಊರುಗಳಲ್ಲಿ, ಅವನು ನಡೆಸಿದ ಯುದ್ಧಗಳನ್ನು ಕುರಿತ ವಿವರಗಳು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದಾಖಲೆಯಾಗಿವೆ. ಅವನು, ತನ್ನ ಪರಾಕ್ರಮದ ಕುರುಹಾಗಿ ರಣರಂಗಸಿಂಗ, ಸಮರ ಪರಶುರಾಮ ಮುಂತಾದ ಬಿರುದುಗಳನ್ನೂ ಪಡೆದಿದ್ದಾನೆ. ಆದರೂ, ಇಂಥ ದಾಖಲೆಗಳು ಚಾವುಂಡರಾಯನ ಪರಾಕ್ರಮದ ಪ್ರಶಂಸೆಯಲ್ಲಿ ನಿರತವಾಗಿರುವಷ್ಟು, ಯುದ್ಧಗಳ ಬಗೆಗಿನ ವಿವರಗಳನ್ನು ದಾಖಲೆ ಮಾಡುವ ಆಸಕ್ತಿ ತೋರಿಸುವುದಿಲ್ಲ.
 ಚಾವುಂಡರಾಯನ ಸಾಹಿತ್ಯಸೃಷ್ಟಿಯು, ಕ್ರಿ.. ೯೭೮ ರಲ್ಲಿ ರಚಿತವಾದಚಾವುಂಡರಾಯಪುರಾಣಕ್ಕೆಸೀಮಿತವಾಗಿದೆ. ಇದನ್ನುತ್ರಿಷಷ್ಠಿಲಕ್ಷಣಮಹಾಪುರಾಣವೆಂದೂ ಕರೆಯಲಾಗಿದೆ. ಇದು, ಪಂಡಿತರಲ್ಲದ ಸಾಮಾನ್ಯ ಜೈನರಿಗಾಗಿ ರಚಿತವಾಗಿರುವ ಪುಸ್ತಕ. ಇದರಲ್ಲಿ, ಇಪ್ಪತ್ನಾಲ್ಕು ಜೈನ ತೀರ್ಥಂಕರರುಗಳ ಜೀವನವನ್ನು ಸರಳವಾದ ಗದ್ಯದಲ್ಲಿ ನಿರೂಪಿಸಲಾಗಿದೆ. ವೃಷಭನಾಥನಿಂದ ಮೊದಲಾಗಿ ವರ್ಧಮಾನ ಮಹಾವೀರನವರೆಗೆ, ಎಲ್ಲ ತೀರ್ಥಂಕರರೂ ಇದರ ವ್ಯಾಪ್ತಿಯೊಳಗೆ ಬರುತ್ತಾರೆ. ಇಪ್ಪತ್ನಾಲ್ಕರ ಸಂಖ್ಯೆಗೆ, ಇತರ ಜೈನಮಹನೀಯರನ್ನೂ ಸೇರಿಸುವುದರಿಂದ ೬೩ ಜನರಾಗುತ್ತಾರೆ. ಚಾವುಂಡರಾಯಪುರಾಣವು, ಸಂಸ್ಕೃತದಲ್ಲಿ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ರಚಿಸಿರುವ ಮಹಾಪುರಾಣ ಮತ್ತು ಪಂಪನ ಆದಿಪುರಾಣಗಳಿಂದ ಪ್ರಭಾವಿತವಾಗಿದೆ. ದೊಡ್ಡ ವಿದ್ವಾಂಸನಾಗಿದ್ದ ಚಾವುಂಡರಾಯನು, ಅನೇಕ ಸಂಸ್ಕೃತ ಮತ್ತು ಪ್ರಾಕೃತ ಕೃತಿಗಳಿಂದ, ಹಲವು ವಾಕ್ಯಗಳನ್ನು ಉದ್ಧರಿಸುತ್ತಾನೆ. ಚಾವುಂಡರಾಯಪುರಾಣದಲ್ಲಿ ಜೈನ ಮಾದರಿಯನ್ನು ಅನುಸರಿಸುವ ರಾಮಾಯಣದ ಕಥೆಯೂ ಸಂಗ್ರಹ ರೂಪದಲ್ಲಿ ಬಂದಿದೆ.
 ಅಲ್ಲೊಂದು ಇಲ್ಲೊಂದು ಪದ್ಯವು ಬಂದರೂ, ಕೂಡ ಚಾವುಂಡರಾಯಪುರಾಣವು ಕನ್ನಡದ ಮೊದಮೊದಲ ಗದ್ಯಕೃತಿಗಳಲ್ಲಿ ಒಂದು. ಅದು ತನ್ನ ಕಾಲದ ಒಂದು ಬಗೆಯ ಕನ್ನಡಕ್ಕೆ, ಕನ್ನಡಿ ಹಿಡಿಯುತ್ತದೆ. ಸಾಹಿತ್ಯದ ವಿದ್ಯಾರ್ಥಿಗೆ ಪುಸ್ತಕವು ಬಹಳ ನೀರಸವಾಗಿದೆಯೆಂದು ಹೇಳದೆ ವಿಧಿಯಿಲ್ಲ. ಅದು, ತಾನು ಹೇಳಬೇಕಾದ ಸಂಗತಿಗಳನ್ನು ಗದ್ಯೀಯ(ಪ್ರೊಸಾಯಿಕ್) ಎನ್ನಬಹುದಾದ ಶೈಲಿಯಲ್ಲಿ ಹೇಳುತ್ತದೆ.
 ಚಾವುಂಡರಾಯನು ಬರೆದಿರುವ ಇನ್ನೊಂದು ಕೃತಿಯು, ‘ಚರಿತ್ರಸಾರ’. ಅದು ಸಂಸ್ಕೃತದಲ್ಲಿದೆ. ಅದು ಜೈನಧರ್ಮಕ್ಕೆ ಸೇರಿದ ಸನ್ಯಾಸಿಗಳು ಮತ್ತು ಗೃಹಸ್ಥರ ಗುಣ-ಲಕ್ಷಣಗಳನ್ನೂ ವರ್ತನೆಯನ್ನೂ ವಿವರಿಸುವ ಪುಸ್ತಕ.
 ಹೀಗೆ, ಒಂದೆರಡು ಗ್ರಂಥಗಳನ್ನು ಬರೆದಿದ್ದರೂ ಚಾವುಂಡರಾಯನು ಪ್ರಸಿದ್ಧವಾಗಿರುವುದು, ಶ್ರವಣಬೆಳಗೊಳದಲ್ಲಿರುವ ಭಗವಾನ್ ಬಾಹುಬಲಿಯ ಏಕಶಿಲಾ ವಿಗ್ರಹದ ಸ್ಥಾಪನೆಗೆ ಕಾರಣನಾದವನೆಂದು. ಚಂದ್ರಗಿರಿ ಬೆಟ್ಟದ ಮೇಲೆ ನಿಂತಿರುವ ಭವ್ಯವಿಗ್ರಹದ ಪಾದಮೂಲದಲ್ಲಿರುವ ಶಾಸನಗಳು, ಸಂಗತಿಯನ್ನು ಖಚಿತಪಡಿಸುತ್ತವೆ. ಶಾಸನಗಳು ಮರಾಠೀ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಇರುವುದು, ಕುತೂಹಲಕಾರಿಯಾದ ಸಂಗತಿ. ಚಾವುಂಡರಾಯನು ವಿಗ್ರಹದ ಪೂಜೆ ಮತ್ತು ನಿರ್ವಹಣೆಗಳಿಗೆ ಅಗತ್ಯವಾದ ದಾನ ದತ್ತಿಗಳನ್ನೂ ಉದಾರವಾಗಿ ನೀಡಿದನು. ಸೇವೆಯನ್ನು ನಂತರ ಬಂದಿರುವ ಅನೇಕ ಪುಸ್ತಕಗಳು ದಾಖಲಿಸಿವೆ ಮತ್ತು ಪ್ರಶಂಸಿವೆ.
 ರನ್ನ, ನಾಗಚಂದ್ರ, ನೇಮಿಚಂದ್ರಯತಿ ಮುಂತಾದ ಕವಿಗಳು ಚಾವುಂಡರಾಯನ ಸಾಹಿತ್ಯಪ್ರೇಮವನ್ನು ಪ್ರಶಂಸಿದ್ದಾರೆ.
 ಹೀಗೆ, ಮಧ್ಯಕಾಲೀನ ಕರ್ನಾಟಕದ ಇತಿಹಾಸದಲ್ಲಿ ರಾಜಕಾರಣಿ ಮತ್ತು ಕಲಾಪೋಷಕನಾಗಿ ಚಾವುಂಡರಾಯನ ಸ್ಥಾನವು ಭದ್ರವಾಗಿದೆ.
 
 
***ದಾನಚಿಂತಾಮಣಿ ಅತ್ತಿಮಬ್ಬೆ
ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿರನ್ನನು ತನ್ನ ’ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪ್ರಾಯಶಃ ರನ್ನನಿಂದಲೇ ಬರೆಯಲ್ಪಟ್ಟ, ಗದಗು ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿರುವ ಒಂದು ಶಾಸನದಲ್ಲಿ ಮತ್ತು ಪೊನ್ನನ ’ಶಾಂತಿಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ಕುರಿತ ಮಾಹಿತಿಗಳು ದೊರಕಿವೆ.   ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಅವಳ ಪೂರ್ವಜರು, ಈಗ ಆಂಧ್ರಪ್ರದೇಶದಲ್ಲಿರುವ ವೆಂಗಿಮಂಡಲದ ಪುಂಗನೂರು ಪ್ರದೇಶದಿಂದ ಬಂದವರು. ಮಲ್ಲಪ್ಪಯ್ಯ ಮತ್ತು ಅಪ್ಪಕಬ್ಬೆ ಅವಳ ತಾಯಿ-ತಂದೆಯರು. ಅವಳ ತಂದೆಯು ಕಲೆ ಮತ್ತು ಸಾಹಿತ್ಯಗಳ ದೊಡ್ಡ ಪೋಷಕನಾಗಿದ್ದನು. ಪೊನ್ನನು ಅವನ ಆಶ್ರಿತನಾಗಿದ್ದವನು. ಚಾಲುಕ್ಯ ಚಕ್ರವರ್ತಿಯಾದ ಆಹವಮಲ್ಲ ಸೋಮೇಶ್ವರನ ಸಮರ್ಥ ಸೇನಾನಿಯಾಗಿದ್ದ ನಾಗದೇವನು ಅತ್ತಿಮಬ್ಬೆಯ ಪತಿ. ಅತ್ತಿಮಬ್ಬೆಯ ಸೋದರಿಯಾದ ಗುಂಡಮಬ್ಬೆಯೂ ಅವನ ಪತ್ನಿಯಾಗಿದ್ದಳು. ಅಣ್ಣಿಗದೇವನು ಅತ್ತಿಮಬ್ಬೆಯ ಮಗ. ನಾಗದೇವನ ಆಕಾಲಮರಣದ ನಂತರ ಗುಂಡಮಬ್ಬೆಯು ಸಹಗಮನ ಮಾಡಿದಳು. ತನ್ನ ಪತಿ ಮತ್ತು ಸೋದರಿಯರನ್ನು ಕಳೆದುಕೊಂಡ ವಿಷಾದದಲ್ಲಿ ಮುಳುಗಿದ ಅತ್ತಿಮಬ್ಬೆಯು ದುಃಖವನ್ನು ನುಂಗಿಕೊಂಡು ಧಾರ್ಮಿಕವಾದ ಸರಳ ಜೀವನವನ್ನು ನಡೆಸಿದಳು. ಅವಳ ಜೀವನವು ಕಲೆಗಳು ಮತ್ತು ಧರ್ಮದ ಪುನರುಜ್ಜೀವನಕ್ಕೆ ಮೀಸಲಾಯಿತು. ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ’ದಾನಚಿಂತಾಮಣಿ’ ಎಂಬ ಬಿರುದನ್ನು ಪಡೆದಳು.   ಅತ್ತಿಮಬ್ಬೆಯು ಲಕ್ಕುಂಡಿಯಲ್ಲಿ ಒಂದು ವಿಶಾಲವಾದ ಜೈನ ಬಸದಿಯನ್ನು ನಿರ್ಮಿಸಿದಳು. (ಕ್ರಿ.ಶ. ೧೦೦೭) ಆ ದೇವಾಲಯದ ನಿರ್ವಹಣೆಗೆ ಅಗತ್ಯವಾದ ದಾನ - ದತ್ತಿಗಳನ್ನೂ ಅವಳೇ ನೀಡಿದಳು. ೧೫೦೦ ರತ್ನಖಚಿತವಾದ ಬಂಗಾರದ ಜಿನಬಿಂಬಗಳನ್ನು ಮಾಡಿಸಿ ಭಕ್ತರಿಗೆ ದಾನವಾಗಿ ನೀಡಿದಳು. ಪೊನ್ನನ ’ಶಾಂತಿಪುರಾಣ’ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು.   ಅವಳ ಮರಣದ ನಂತರ ಸ್ಥಾಪಿತವಾದ ಅನೇಕ ಶಾಸನಗಳು ಮತ್ತು ನಂತರದ ಪೀಳಿಗೆಗಳ ಹಲವು ಕವಿಗಳು ಅವಳ ಹಿರಿಮೆಯನ್ನು ಹೊಗಳಿದ್ದಾರೆ. ಆದರೆ, ರನ್ನನು ರಚಿಸಿರುವ ಪದ್ಯಗಳು ತಮ್ಮ ಸಾಹಿತ್ಯಕ ಗುಣಕ್ಕಾಗಿಯೂ ಸ್ಮರಣೀಯವಾಗಿವೆ. ಅವನು ಅವಳ ಪಾವಿತ್ರ್ಯವನ್ನು ಗಂಗಾನದಿಯ ನೀರಿಗೆ, ಬಿಳಿಯ ಆರಳೆಗೆ ಮತ್ತು ಕೊಪ್ಪಳನಗರದಲ್ಲಿರುವ ಪವಿತ್ರವಾದ ಬೆಟ್ಟಕ್ಕೆ ಹೋಲಿಸಿದ್ದಾನೆ.
 
**ಅಮೋಘವರ್ಷ ನೃಪತುಂಗ (ಕ್ರಿ.ಶ.814-878)
ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಹೆಸರುವಾಸಿಯಾದ ಚಕ್ರವರ್ತಿಗಳಲ್ಲಿ ನೃಪತುಂಗನೂ ಒಬ್ಬನು. ಇದಕ್ಕೆ ಕೇವಲ ಅವನ ಯುದ್ಧವಿದ್ಯೆಯಲ್ಲಿನ ಪರಿಣತಿ ಕಾರಣವಲ್ಲ. ಕನ್ನಡನಾಡು ಎಂಬ ಪರಿಕಲ್ಪನೆಯನ್ನು ರೂಪಿಸುವುದರಲ್ಲಿ ಅವನು ವಹಿಸಿದ ಪಾತ್ರ ಹಾಗೂ ಕರ್ನಾಟಕದ ಸಂಸ್ಕೃತಿಗೆ ಅವನು ನೀಡಿದ ವಿಶಿಷ್ಟ ಕಾಣಿಕೆಗಳು ಈ ಮನ್ನಣೆಗೆ ಕಾರಣವಾಗಿವೆ. ರಾಷ್ಟ್ರಕೂಟ ರಾಜವಂಶಕ್ಕೆ ಸೇರಿದ ನೃಪತುಂಗನು ತನ್ನ ತಂದೆಯಾದ ಮೂರನೆಯ ಗೋವಿಂದನ ನಂತರ ಪಟ್ಟಕ್ಕೆ ಬಂದನು. ಬರೋಡಾ ಮತ್ತು ಸಂಜಾನಗಳ್ಲಿ ದೊರೆತಿರುವ ತಾಮ್ರಪತ್ರಗಳು, ಮಣ್ಣೆಯಲ್ಲಿ ಸಿಕ್ಕಿರುವ ಶಿಲಾಶಾಸನ ಹಾಗೂ ಅರೇಬಿಯಾದಿಂದ ಬಂದ ಪ್ರವಾಸಿ ಸುಲೈಮಾನನ ಬರವಣಿಗೆಯು ನೃಪತುಂಗನ ಆಳ್ವಿಕೆಯನ್ನು ಕುರಿತು ಸಮೃದ್ಧವಾದ ಮಾಹಿತಿಯನ್ನು ಒದಗಿಸುತ್ತವೆ. ಈಗ ಆಂಧ್ರಪ್ರದೇಶದಲ್ಲಿದ್ದು ಮಳಖೇಡ್ ಎಂದು ಕರೆಸಿಕೊಳ್ಳುತ್ತಿರುವ ಮಾನ್ಯಖೇಟವು ಅವನ ರಾಜಧಾನಿಯಾಗಿತ್ತು.   ನೃಪತುಂಗನ ಆಳ್ವಿಕೆಯುದ್ದಕ್ಕೂ ಅವನಿಗೆ ತನ್ನ ಸೋದರಮಾವನಾದ ಕಕ್ಕ ಮತ್ತು ಸಮರ್ಥ ಸೇನಾನಿಯಾದ ಬಂಕೆಯನ ನೆರವು ದೊರಕಿತು. ಹೊರಗಿನ ಮತ್ತು ಒಳಗಿನ ಶತ್ರುಗಳ ಬಾಹುಳ್ಯದಿಂದ ಅವನ ಆಡಳಿತದ ಮೊದಲ ಹಂತವು ಯುದ್ಧಮಯವಾಗಿತ್ತು. ಅವನ ನೆರೆಹೊರೆಯ ರಾಜರುಗಳಾದ ಗಂಗರು, ಗುರ್ಜರ ಪ್ರತಿಹಾರಿಗಳು ಮತ್ತು ಪಲ್ಲವರು ಯಾವಾಗಲೂ ಈ ಕಿರಿಯ ದೊರೆಯನ್ನು ಸೋಲಿಸಲು ಹೊಂಚುಹಾಕುತ್ತಿದ್ದರು. ಇಮ್ಮಡಿ ವಿಜಯಾದಿತ್ಯ ಮತ್ತು ಶಂಕರಗಣರು ಅವನ ಆಂತರಿಕ ಶತ್ರುಗಳಾಗಿದ್ದರು. ಆದರೂ ಗಂಗ ಶಿವಮಾರ, ವೆಂಗಿಯ ವಿಜಯಾದಿತ್ಯ ಮತ್ತು ಗಂಗ ರಾಚಮಲ್ಲರ(ಕ್ರಿ.ಶ.೮೩೧) ಮೇಲೆ ನಿರ್ಣಾಯಕವಾದ ಗೆಲುವುಗಳನ್ನು ಪಡೆಯುವುದರ ಮೂಲಕ ನೃಪತುಂಗನು ತನ್ನ ಸಾಮರ್ಥ್ಯವನ್ನು ಸ್ಪಷ್ಟಪಡಿಸಿದನು. ಆದರೆ ಗಂಗರು ಮತ್ತು ರಾಷ್ಟ್ರಕೂಟರ ನಡುವಿನ ವೈಮನಸ್ಯವು ಹಾಗೆಯೇ ಮುಂದುವರಿಯಿತು. ನೃಪತುಂಗನ ಮಗಳಾದ ಚಂದ್ರಬಲಬ್ಬೆ ಮತ್ತು ಗಂಗ ರಾಜ ಮೊದಲನೆಯ ಬೂತುಗನ ನಡುವೆ ನಡೆದ ವಿವಾಹವು ಈ ವೈಷಮ್ಯವನ್ನು ಕೊಂಚ ಕಾಲ ಹಿನ್ನೆಲೆಗೆ ಸರಿಸಿತು.   ಅನಂತರ ನೃಪತುಂಗನು ತನ್ನ ಸ್ವಂತ ಮಗನಾದ ಕೃಷ್ಣ ಮತ್ತು ತನ್ನ ಸೇನಾಧಿಪತಿಯಾಗಿದ್ದ ಬಂಕೆಯನ ಮಗ ಧ್ರುವನ ವಿರೋಧವನ್ನು ಎದುರಿಸಬೇಕಾಯಿತು. ಗುರ್ಜರ ಪ್ರತಿಹಾರ ವಂಶಕ್ಕೆ ಸೇರಿದ ಮೊದಲನೆಯ ಭೋಜನು ಇನ್ನೊಬ್ಬ ಪ್ರಬಲ ಶತ್ರುವಾಗಿದ್ದನು. ಈ ಎಲ್ಲ ಸಂಘರ್ಷಗಳಲ್ಲಿ ಬಹುಮಟ್ಟಿಗೆ ಜಯಶಾಲಿಯಾಗಿಯೇ ಉಳಿದಿದ್ದು ನೃಪತುಂಗನ ಸಾಮರ್ಥ್ಯ ಹಾಗೂ ಧೈರ್ಯಗಳಿಗೆ ಸಾಕ್ಷಿಯಾಗಿದೆ. ಇವರಲ್ಲದೆ ಅಂಗ, ವಂಗ, ಮಗಧ ಮತ್ತು ಮಾಳವ ರಾಜರುಗಳ ಮೇಲೆ ಕೂಡ ಅವನು ವಿಜಯಿಯಾದನೆಂದು ಹೇಳಲಾಗಿದೆ. ನರಲೋಕಚಂದ್ರ ಮತ್ತು ಸರಸ್ವತೀ ತೀರ್ಥಾವತಾರ ಎನ್ನುವುದು ಅವನ ಅನೇಕ ಬಿರುದುಗಳಲ್ಲಿ ಎರಡು.   ನೃಪತುಂಗನ ಆಳ್ವಿಕೆಯು ಕೇವಲ ಯುದ್ಧ ಮತ್ತು ರಕ್ತಪಾತಗಳಿಂದ ತುಂಬಿರಲಿಲ್ಲ. ಅವನು ಕಲೆ ಹಾಗೂ ಸಂಸ್ಕೃತಿಗಳ ಪೋಷಕನೂ ದಾರ್ಶನಿಕನೂ ಆಗಿದ್ದನು. ಶ್ರೀ ವಿಜಯನ ಕವಿರಾಜಮಾರ್ಗದ ರಚನೆಯಲ್ಲಿ ಅವನು ವಹಿಸಿದ ಪಾತ್ರವು ಚೆನ್ನಾಗಿ ದಾಖಲೆಯಾಗಿದೆ. ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿಯಾದ ಕವಿರಾಜಮಾರ್ಗವು ಅವನಿಂದಲೇ ರಚಿತವಾದುದೆಂದು ನಂಬಲಾಗಿತ್ತು. ಆ ಗ್ರಂಥದ ಆಶಯಗಳಿಗೆ ಚಕ್ರವರ್ತಿಯ ಸಮ್ಮತಿ ಇತ್ತು ಎನ್ನುವುದು, ಕೃತಿಯೊಳಗಡೆಯೇ ಬರುವ ನೃಪತುಂಗದೇವಾನುಮತ ಎನ್ನುವ ಮಾತಿನಿಂದ ಗೊತ್ತಾಗುತ್ತದೆ. ಕಾವ್ಯಮೀಮಾಂಸೆ, ವ್ಯಾಕರಣ, ಛಂದಸ್ಸು ಮುಂತಾದ ವಿಷಯಗಳನ್ನು ವಸ್ತುವಾಗಿ ಹೊಂದಿರುವ ಕವಿರಾಜಮಾರ್ಗವು ಕನ್ನಡ ನಾಡು, ನುಡಿ ಮತ್ತು ನಾಡಿಗರ ಬಗ್ಗೆ ಅನೇಕ ಮಹತ್ವದ ಮಾತುಗಳನ್ನು ಹೇಳುತ್ತದೆ. ಕನ್ನಡ ಪ್ರದೇಶದ ಭೌಗೋಳಿಕ ಗಡಿಗಳನ್ನು ಕುರಿತ ಮಾಹಿತಿ ಅಂತೆಯೇ ಕನ್ನಡಿಗರು ಮತ್ತು ಕನ್ನಡ ಭಾಷೆಯ ಸ್ವರೂಪವನ್ನು ಕುರಿತ ಅನೇಕ ಮಾಹಿತಿಗಳು ಇಲ್ಲಿ ವಿಪುಲವಾಗಿ ದೊರೆತಿವೆ. ಅಂತೆಯೇ ಕನ್ನಡ ಸಾಹಿತ್ಯದ ಪ್ರಾಚೀನತೆ ಹಾಗೂ ಆ ಕಾಲದ ಸಂಸ್ಕೃತಿಯನ್ನು ಅರಿಯಲು ಮತ್ತು ಅರ್ಥ ಮಾಡಿಕೊಳ್ಳಲು ಈ ಪುಸ್ತಕವು ವಿಶಿಷ್ಟ ಆಕರವಾಗಿದೆ. ಆಧುನಿಕ ವಿದ್ವಂಸರಾದ ಮುಳಿಯ ತಿಮ್ಮಪ್ಪಯ್ಯ, ಎಂ.ಎಂ. ಕಲಬುರ್ಗಿ, ಕೆ.ವಿ.ಸುಬ್ಬಣ್ಣ, ಶೆಲ್ಡನ್ ಪೊಲಾಕ್, ಷ. ಶೆಟ್ಟರ್ ಮುಂತಾದವರು ಕವಿರಾಜಮಾರ್ಗವನ್ನು ಕನ್ನಡದ  ಬಹು ಮುಖ್ಯ ಕೃತಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ.
 
 
****ಕಿತ್ತೂರು ರಾಣಿ ಚೆನ್ನಮ್ಮ (1778-1829)


ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ. ಕಿತ್ತೂರಿನ ಇತಿಹಾಸವು ಕ್ರಿ.ಶ. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಗೌಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ " ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು. ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ಥಾನದಲ್ಲಿ ಮೊಗಲ ಬಾದಶಾಹಿ ನಿರ್ಬಲವಾಗಿತ್ತು. ದಕ್ಷಿಣದಲ್ಲಿ ಸ್ವರಾಜ್ಯದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಗಾರರು. ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠಾ ಹಾಗು ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಷರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರ ಸರ್ಜನು ೧೧ ಸೆಪ್ಟೆಂಬರ ೧೮೨೪ ರಂದು ವಾರಸದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ. ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ! ೧೩ ಸೆಪ್ಟೆಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ. ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ! ಚೆನ್ನಮ್ಮ ಹುಟ್ಟಿದ್ದು ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು. ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಾಳೆ. ಅದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೆ ಅಪೇಕ್ಷಿಸಿದಾಗ, ಚೆನ್ನಮ್ಮ ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಸಹ ಮಾಡಿದ್ದಾಳೆ. ೨೧ ಅಕ್ಟೋಬರ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು. ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. ೧೮೨೪ ಡಿಸೆಂಬರ್ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಡಿಸೆಂಬರ್ ೩ ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಡಿಶಂಬರ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳುಗುತ್ತಾರೆ. ಡಿಸೆಂಬರ್ ೫ ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್ ೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೫ ಫೆಬ್ರುವರಿ ೨ ರಂದು ನಿಧನಹೊಂದುತ್ತಾಳೆ. ಮುಂದೆ ಮೇ ೨೦ರಂದು ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ ಹೋರಾಟ ನಿಂತಿರುವದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ. ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ ೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ ೩೦೦ ರೂಪಾಯಿ ಬಹುಮಾನ ಕೊಡುತ್ತದೆ. ಮೇ ೧೮೩೦ ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦ ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ ೧೮೩೦ ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿಯಿದೆ. ೧೮೩೧ ಜನೆವರಿ ೨೬ ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ.

ಮಹಾರಾಣಾ ಪ್ರತಾಪ

ಬಾಲ ಮಿತ್ರರೇ, ಭಾರತದ ಇತಿಹಾಸದಲ್ಲಿ ಮಹಾರಾಣ ಪ್ರತಾಪರ ಹೆಸರು ಅಜರಾಮರವಾಗಿದೆ. ಮಹಾರಾಣ ಪ್ರತಾಪರು ರಾಜಸ್ಥಾನದ ಶೂರವೀರ ಮತ್ತು ಸ್ವಾಭಿಮಾನಿ ರಾಜರಾಗಿದ್ದರು.  ಜಯಪುರದ ರಾಣಾ ಮಾನಸಿಂಗನು ಅಕಬರನಿಂದ ರಾಜ್ಯಕ್ಕೆ ಕಷ್ಟವಾಗಬಾರದೆಂದು ತನ್ನ ತಂಗಿಯನ್ನು ಅಕಬರನಿಗೆ ಕೊಟ್ಟು ಮದುವೆ ಮಾಡಿದನು. ಒಂದು ಸಲ ತನ್ನ ವೈಭವವನ್ನು ಪ್ರದರ್ಶಿಸಲು ರಾಣಾ ಮಾನಸಿಂಗನುದಿಲ್ಲಿಗೆ ಹೋಗುವಾಗ ದಾರಿಯಲ್ಲಿ ಮಹಾರಾಣ ಪ್ರತಾಪರನ್ನು ನೋಡಲು ಕುಂಭಲಗಢಕ್ಕೆ ಹೋದನು. ಮಹಾರಾಣಾ ಪ್ರತಾಪರು ಅವರೆಲ್ಲರನ್ನು ಯೋಗ್ಯವಾಗಿ ಸತ್ಕರಿಸಿದರು ಆದರೆ ಜೊತೆಯಲ್ಲಿ ಕುಳಿತು ಊಟ ಮಾಡುವುದಿಲ್ಲ ಎಂದು ತಿಳಿಸಿದರು. ಏಕೆ ಜೊತೆಯಲ್ಲಿ ಊಟ ಮಾಡುವುದಿಲ್ಲವೆಂದು ರಾಣಾ ಮಾನಸಿಂಗನು ಕೇಳಿದಾಗ ಮಹಾರಾಣಾ ಪ್ರತಾಪರು ಹೇಳುತ್ತಾರೆ, "ರಾಜ್ಯವನ್ನು ಉಳಿಸಿಕೊಳ್ಳಬೇಕೆಂಬ ಕಾರಣದಿಂದ ತನ್ನ ಮನೆಯ ಹೆಣ್ಣು ಮಕ್ಕಳನ್ನು ಮೊಗಲರಿಗೆ ಮದುವೆ ಮಾಡಿಕೊಟ್ಟಂತಹ ಸ್ವಾಭಿಮಾನ್ಯ ಶೂನ ರಾಜಪೂತನೊಂದಿಗೆ ನಾನು ಕುಳಿತು ಊಟ ಮಾಡುವುದಿಲ್ಲ".  ಮಹಾರಾಣಾ ಪ್ರತಾಪರ ಉತ್ತರವನ್ನು ಕೇಳಿ ಮಾನಸಿಂಗನು ಕೋಪದಿಂದು ಊಟದ ತಟ್ಟೆಯನ್ನು ಅರ್ಧದಲ್ಲಿಯೇ ಬಿಟ್ಟು ಎದ್ದನು ಮತ್ತು ಕೋಪದಿಂದ ಹೇಳಿದನು, "ಮಹಾರಾಣಾ ಪ್ರತಾಪ! ಯುದ್ಧದಲ್ಲಿ ನಿನ್ನ ಸರ್ವನಾಶ ಮಾಡದಿದ್ದರೆ ನನ್ನ ಹೆಸರು ಮಾನಸಿಂಗನೇ ಅಲ್ಲ!"  ಸ್ವಲ್ಪ ಸಮಯದ ನಂತರ ಮಾನಸಿಂಗನು, ಅಕಬರನ ಮಗ ಸಲೀಂ ಮತ್ತು ಪ್ರಚಂಡ ಸೈನ್ಯದೊಂದಿಗೆ ಮಹಾರಾಣಾ ಪ್ರತಾಪರ ಮೇಲೆ ಯುದ್ಧಕ್ಕಾಗಿ ಹೊರಟನು. ಸುದ್ದಿ ತಿಳಿದ ಕೂಡಲೇ ಮಹಾರಾಣಾ ಪ್ರತಾಪನು ತತ್ಪರತೆಯಿಂದ ಅರಾವಲಿ ಪರ್ವತದ ಮೇಲಿಂದ ಕೆಳಗೆ ಬರುತ್ತಿದ್ದ ಶತ್ರು ಸೈನ್ಯದ ಮೇಲೆ ದಾಳಿ ಮಾಡಿ ಅವರ ಅಧಿಕಾಂಶ ಸೈನಿಕರನ್ನು ಮಣ್ಣುಪಾಲು ಮಾಡಿದರು. ಮಹಾರಾಣಾ ಪ್ರತಾಪರ ಕತ್ತಿಯಿಂದ ಸಲೀಂನ ವಧೆಯಾಗಬೇಕಿತ್ತು ಆದರೆ ಆ ಹೊಡೆತವು ಸಲೀಂನ ಆನೆಗೆ ಬಿತ್ತು ಮತ್ತು ಸಲೀಂನು ಉಳಿದನು. ಮಹಾರಾಣಾನ ಭಯದಿಂದ ಮಾನಸಿಂಗನು ಸೈನ್ಯದ ಹಿಂದೆ ಅವಿತುಕೊಂಡಿದ್ದನು. ಮಹಾರಾಣಾ ಪ್ರತಾಪನು ತನ್ನ ಹೊಳೆಯುವ ಕತ್ತಿಯ ಸಹಾಯದಿಂದ ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲೇ ಶತ್ರುಸೈನಿಕರ ಹೊಡೆತದಿಂದ ಮಹಾರಾಣ ಪ್ರತಾಪರ ಕುದುರೆ ’ಚೇತಕ’ನ ಕಾಲಿಗೆ ಪೆಟ್ಟಾಯಿತು. ಇಂತಹ ಸ್ಥಿತಿಯಲ್ಲೂ ಸಹ ಆ ಸ್ವಾಮಿನಿಷ್ಟ ಕುದುರೆಯು ತನ್ನ ಸ್ವಾಮಿಯ ಪ್ರಾಣವನ್ನು ಉಳಿಸಲು ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಅಷ್ಟರಲ್ಲೇ ದಾರಿಯಲ್ಲಿ ಒಂದು ಸಣ್ಣನದಿ ಎದುರಾಯಿತು. ಚೇತಕನು ಆ ಸ್ಥಿತಿಯಲ್ಲೇ ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿ ಒಂದೇ ಜಿಗಿತಕ್ಕೆ ನದಿಯನ್ನು ದಾಟಿತು, ಆದರೆ ಹೃದಯ ಬಡಿತವು ನಿಂತಿದ್ದರಿಂದ ಚೇತಕ ಅಲ್ಲೇ ಪ್ರಾಣ ಬಿಟ್ಟಿತು.  ಮಹಾರಾಣಾ ಪ್ರತಾಪರು ಹಿಂದೆ ತಿರುಗಿ ನೋಡಿದಾಗ ಅಕಬರನ ಸೈನ್ಯದಲ್ಲಿ ಸೇರಿದ್ದ ಅವನ ತಮ್ಮ ಶಕ್ತಿಸಿಂಗನು ನಾಲ್ಕು-ಐದು ಮೊಗಲ ಸೈನಿಕರನ್ನು ಹೊಡೆಯುತ್ತಿದ್ದನು. ಇದನ್ನು ನೋದಿ ಮಹಾರಾಣಾ ಪ್ರತಾಪರು ಆಶ್ಚರ್ಯ ಚಕಿತರಾದರು. ಅಷ್ಟರಲ್ಲೇ ಆ ಸೈನಿಕರನ್ನು ಸಾಯಿಸಿದ ಶಕ್ತಿಸಿಂಗನು ಮಹಾರಾಣಾ ಪ್ರತಾಪರ ಬಳಿಗೆ ಬಂದು ಅವರನ್ನು ಆಲಂಗಿಸಿಕೊಂಡು, "ಅಣ್ಣಾ, ನಾನು ಮೊಗಲರ ಸೈನ್ಯದಲ್ಲಿದ್ದೀನಿ, ಆದರೆ ನಿಮ್ಮ ಅಸೀಮ ಶೌರ್ಯ, ಪರಾಕ್ರಮದಿಂದ ನೀವೇ ನನ್ನ ಆದರ್ಶರಾಗಿದ್ದೀರಿ. ನಾನು ನಿಮ್ಮ ಕುದುರೆಗಿಂತಲೂ ತುಚ್ಛವಾಗಿದ್ದೇನೆ."  ಮೇವಾಡದ ಇತಿಹಾಸವನ್ನು ಬರೆದ ಕರ್ನಲ್ ಟಾಂಡ್ ಮಹಾರಾಣಾ ಪ್ರತಾಪರ ಬಗ್ಗೆ ಹೇಳುತ್ತಾ, "ಉತ್ಕಟ ಮಹತ್ವಾಕಾಂಕ್ಷಿ, ಶಾಸನ ನಿಪುಣತೆ ಮತ್ತು ಅಪರಿಮಿತ ಸಂಪತ್ತಿನ ಬಲದಿಂದ ಅಕಬರನು ದೃಢ ನಿಶ್ಚಯಿ, ಧೈರ್ಯಶಾಲಿ, ಉಜ್ವಲ ಕೀರ್ತಿಮಾನ ಮತ್ತು ಸಾಹಸಿ ಮಹಾರಾಣಾ ಪ್ರತಾಪರ ಆತ್ಮಬಲವನ್ನು ಬೀಳಿಸಲು ಪ್ರಯತ್ನಿಸಿದನು, ಆದರೆ ಅದು ನಿಷ್ಫಲವಾಯಿತು".  
ಪ್ರೀತಿಯ ಮಕ್ಕಳೇ, ಈಗ ನಿಮಗೆ ಶೂರ ವೀರ ಮತ್ತು ಸ್ವಾಭಿಮಾನಿ ಮಹಾರಾಣಾ ಪ್ರತಾಪರ ಕಥೆಯು ತಿಳಿಯಿತು. ನಾವೆಲ್ಲರೂ ಎಲ್ಲಾ ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿದರೆ ಅವರೂ ನಮ್ಮನ್ನು ಪ್ರೀತಿಸುತ್ತಾರೆ. ಇದು ನಿಮಗೆ ಕುದುರೆ ಚೇತಕನಿಂದ ಕಲಿಯಲು ಸಿಕ್ಕಿರಬಹುದು. ಆ ಸ್ವಾಮಿನಿಷ್ಟ ಕುದುರೆಯು ಪ್ರಾಣದ ಚಿಂತೆಯನ್ನು ಬಿಟ್ಟು ತನ್ನ ಸ್ವಾಮಿಯ ಪ್ರಾಣವನ್ನು ಉಳಿಸಿತು. ನಾವೂ ಸಹ ಎಲ್ಲರನ್ನೂ ಪ್ರೀತಿಸಬೇಕು. ಹಾಗೆಯೇ ನಮ್ಮ ಮಾತೃಭೂಮಿಯ ರಕ್ಷಣೆಗಾಗಿ ಸದಾ ತತ್ಪರರಾಗಿರಬೇಕು.

ಶಿಬಿ ಚಕ್ರವರ್ತಿಯ ತ್ಯಾಗ ಮನೋಭಾವ

ಮಕ್ಕಳೇ, ಶಿಬಿ ಚಕ್ರವರ್ತಿಯು ಧರ್ಮಾಚರಣೆಯಿಂದ ಬಹಳ ಉತ್ತಮ ರೀತಿಯಲ್ಲಿ ತನ್ನ ರಾಜ್ಯವನ್ನು ಆಳುತ್ತಿದ್ದನು. ಅವನು ತ್ಯಾಗಕ್ಕೆ ಪ್ರಸಿದ್ಧನಾಗಿದ್ದನು. ಇವನ ಪ್ರಸಿದ್ಧಿಯು ದೇವತೆಗಳನ್ನು ತಲುಪಿತು. ಇವನ ತ್ಯಾಗವನ್ನು ಪರೀಕ್ಷಿಸಬೇಕೆಂದು ಯಮಧರ್ಮ ಮತ್ತು ಅಗ್ನಿದೇವನು ಒಂದು ತಂತ್ರವನ್ನು ಹೂಡಿದರು.  ಒಂದು ದಿನ ಶಿಬಿ ಚಕ್ರವರ್ತಿಯು ರಾಜಸಭೆಯಲ್ಲಿದ್ದಾಗ ಭಯಭೀತವಾಗಿದ್ದ ಒಂದು ಪಾರಿವಾಳವು ಶಿಬಿ ಚಕ್ರ ವರ್ತಿಯ ಸಿಂಹಾಸನದ ಬಳಿ ಸಾರಿ, “ಮಹಾಪ್ರಭೂ, ಒಂದು ದೊಡ್ಡ ಗಿಡುಗವು ನನ್ನನ್ನು ಹಿಡಿದು ತಿನ್ನಲೆಂದು ಅಟ್ಟಿಸಿ ಕೊಂಡು ಬರುತ್ತಿದೆ. ನಾನು ಪ್ರಾಣಭಯದಿಂದ ತತ್ತರಿಸಿ ಹೋಗಿದ್ದೇನೆ. ಆದುದರಿಂದ ದಯಾಳುಗಳಾದ ತಾವು ನನಗೆ ಆಶ್ರಯ ಕೊಟ್ಟು ನನ್ನನ್ನು ರಕ್ಷಿಸಿರಿ" ಎಂದು ಮೊರೆಯಿಟ್ಟಿತು. ಶಿಬಿ ಚಕ್ರವರ್ತಿಯು ಕನಿಕರದಿಂದ ಆ ಪಕ್ಷಿಯನ್ನು ಎತ್ತಿಕೊಂಡು ತನ್ನ ತೊಡೆಯ ಮೇಲೆ ಇರಿಸಿಕೊಂಡು ಅದರ ತಲೆಯನ್ನು ಸವರತೊಡಗಿದನು. ಪಾರಿವಾಳವು ಶಿಬಿ ಚಕ್ರ ವರ್ತಿಯ ಔದಾರ್ಯವನ್ನು ಮೆಚ್ಚಿ ಆತನ ತೊಡೆಯ ಮೇಲೆ ನಿರ್ಭಯದಿಂದ ಕುಳಿತುಕೊಂಡಿತು. ಅಷ್ಟರಲ್ಲಿ ಒಂದು ಗಿಡುಗವು ತನ್ನ ಕೊಳ್ಳೆಯನ್ನು ಹುಡುಕುತ್ತಾ ಅಲ್ಲಿಗೆ ಬಂದಿತು.  ಪಾರಿವಾಳವು ಚಕ್ರ ವರ್ತಿಯ ತೊಡೆಯ ಮೇಲೆ ಕುಳಿತಿರುವುದನ್ನು ಕಂಡಿತು. ಅದು ಚಕ್ರವರ್ತಿಯ ಬಳಿ ಸಾರಿ “ಮಹಾಪ್ರಭೂ, ನಾನು ನನ್ನ ಆಹಾರಕ್ಕಾಗಿ ಈ ಪಾರಿವಾಳವನ್ನು ಅಟ್ಟಿಸಿಕೊಂಡು ಇಲ್ಲಿಯವರೆಗೂ ಬಂದಿದ್ದೇನೆ. ನಾನು ಹಸಿವಿನಿಂದ ಬಳಲಿದ್ದೇನೆ. ನಿಮ್ಮ ತೊಡೆಯ ಮೇಲೆ ಕುಳಿತಿರುವ ಪಕ್ಷಿಯು ನನ್ನ ಆಹಾರವಾಗಿದೆ. ಅದನ್ನು ದಯವಿಟ್ಟು ನನಗೆ ಕೊಟ್ಟು ನನ್ನನ್ನು ಹಸಿವಿನ ಸಂಕಟದಿಂದ ಮುಕ್ತಗೊಳಿಸಿರಿ" ಎಂದು ಪ್ರಾರ್ಥಿಸಿತು. ಆಗ ಶಿಬಿ ಚಕ್ರವರ್ತಿಯು “ಎಲೈ ಗಿಡುಗನೇ, ನಾನು ಈ ಪಕ್ಷಿಗೆ ಅಭಯವನ್ನಿತ್ತಿದ್ದೇನೆ. ಆದುದರಿಂದ ಏನೇ ಆದರೂ ಸರಿ, ಅದನ್ನು ನಿನಗೆ ಬಿಟ್ಟು ಕೊಡಲಾರೆ" ಎಂದನು. ಆಗ ಗಿಡುಗವು, “ಚಕ್ರವರ್ತಿಯೇ, ನೀನು ಧರ್ಮಾಚರಣೆಗೆ ಮತ್ತು ತ್ಯಾಗಕ್ಕೆ ಪ್ರಸಿದ್ಧನಾಗಿರುವೆ. ನಿನ್ನ ಬಳಿಗೆ ಹಸಿದು ಬಂದಿರುವವರಿಗೆ ನ್ಯಾಯವಾಗಿ ಸಿಗಬೇಕಾದ ಆಹಾರವು ಸಿಗದಂತೆ ಮಾಡುವುದು ನ್ಯಾಯವೇ?" ಎಂದು ಪ್ರಶ್ನಿಸಿತು. ಆಗ ಶಿಬಿ ಚಕ್ರವರ್ತಿಯು ಒಂದೆರಡು ನಿಮಿಷ ಆಲೋಚಿಸಿದನು. ಪಾರಿವಾಳಕ್ಕೆ ಅಭಯವನ್ನಿತ್ತು ಆಶ್ರಯ ನೀಡಿದ ಬಳಿಕ ಅದನ್ನು ಶತ್ರುವಿನ ಕೈಗೊಪ್ಪಿಸುವುದು ನೀತಿ ಬಾಹಿರವಾಗಿದೆ. ಆದರೆ ಹಸಿದು ಬಂದಿರುವ ಪಕ್ಷಿಯ ಆಹಾರವನ್ನು ತಪ್ಪಿಸಿದಂತೆಯೂ ಆಗಿದೆ. ಈಗೇನು ಮಾಡಲಿ? ಎನ್ನುವ ಉಭಯ ಸಂಕಟದಲ್ಲಿ ಸಿಲುಕಿದನು. ತಕ್ಷಣ ಗಿಡುಗನನ್ನು ಕುರಿತು “ಎಲೈ ಗಿಡುಗನೇ, ನೀನು ಹಸಿದಿರುವೆಯಲ್ಲವೇ? ನಿನ್ನ ಹಸಿವನ್ನು ನೀಗಿಸಿದರಾಯಿತಲ್ಲವೇ? ಅದಕ್ಕಾಗಿ ಬೇಕಷ್ಟು ಮಾಂಸವನ್ನು ಕೊಡಿಸುವೆ" ಎಂದನು. ಗಿಡುಗವು ತನಗೆ ಪಾರಿವಾಳವನ್ನೇ ಬಿಟ್ಟು ಕೊಡಬೇಕೆಂದು ಪಟ್ಟು ಹಿಡಿಯಿತು. ಕೊನೆಗೆ ಶಿಬಿಯು “ಎಲೈ ಗಿಡುಗನೇ, ಅಭಯ ನೀಡಿದ ಪಕ್ಷಿಯನ್ನು ನಿನಗೆ ಖಂಡಿತವಾಗಿ ಬಿಟ್ಟು ಕೊಡಲಾರೆ. ಅದು ಧರ್ಮ ಮತ್ತು ನ್ಯಾಯ ಬಾಹಿರವಾಗಿದೆ. ನಿನ್ನ ಹಸಿವನ್ನು ಹಿಂಗಿಸಲು ಪಾರಿವಾಳದ ತೂಕದಷ್ಟೇ ಮಾಂಸವನ್ನು ನನ್ನ ದೇಹದಿಂದ ಕಡಿದು ನಿನಗೆ ಒಪ್ಪಿಸುವೆ" ಎಂದನು. ಇದಕ್ಕೆ ಗಿಡುಗವು ಒಪ್ಪಿ ಕೊಂಡಿತು.  ರಾಜಸಭೆಯು ಈ ಅನಿರೀಕ್ಷಿತ ಘಟನೆಯನ್ನು ಕಾತರದಿಂದ ವೀಕ್ಷಿಸುತ್ತಿತ್ತು. ಚಕ್ರವರ್ತಿಯು ಒಂದು ಖಡ್ಗವನ್ನು ಮತ್ತು ಒಂದು ತಕ್ಕಡಿಯನ್ನು ತರಲು ಸೇವಕರಿಗೆ ಆಜ್ಞಾಪಿಸಿ ಅವುಗಳನ್ನು ತರಿಸಿಕೊಂಡನು. ತಕ್ಕಡಿಯ ಒಂದು ತಟ್ಟೆಯಲ್ಲಿ ಪಾರಿವಾಳವನ್ನು ಇಟ್ಟು ಅಷ್ಟೇ ತೂಕದ ಮಾಂಸವನ್ನು ಇನ್ನೊಂದು ತಟ್ಟೆಯಲ್ಲಿ ಹಾಕುವುದಕ್ಕಾಗಿ ತನ್ನ ಎಡ ತೋಳನ್ನು ತುಂಡರಿಸಲು ಖಡ್ಗವನ್ನು ಎತ್ತಿದನು! ಇಡೀ ರಾಜಸಭೆಯಲ್ಲಿ ಕೋಲಾಹಲವೆದ್ದಿತು. ಆದರೆ ಇನ್ನೇನು ಚಕ್ರವರ್ತಿಯು ತನ್ನ ತೋಳನ್ನು ತುಂಡರಿಸ ಬೇಕೆನ್ನುವಷ್ಟರಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು. ಗಿಡುಗನು ಯಮಧರ್ಮನಾಗಿಯೂ, ಪಾರಿವಾಳವು ಅಗ್ನಿ ದೇವನಾಗಿಯೂ ಪ್ರತ್ಯಕ್ಷರಾದರು. ಚಕ್ರವರ್ತಿಯು ಅಂಜಲೀಬದ್ಧನಾಗಿ ತಲೆ ಬಾಗಿ ದೇವತೆಗಳಿಗೆ ವಂದಿಸಿದನು. ಇಬ್ಬರೂ ದೇವತೆಗಳು ಚಕ್ರವರ್ತಿಯ ತ್ಯಾಗ ಮನೋಭಾವದ, ಧರ್ಮಪರಿಪಾಲನೆಯ ಪ್ರವೃತ್ತಿಯನ್ನು ಮೆಚ್ಚಿ, ಅವನು ದೀರ್ಘಕಾಲ ಸುಖವಾಗಿ ಬಾಳಲಿ ಎಂದು ಹರಸಿ ಅಂತರ್ಧಾನರಾದರು.  
ಮಕ್ಕಳೇ, ಯಾವಾಗಲೂ ಧರ್ಮವನ್ನು ಪಾಲಿಸಿ, ತ್ಯಾಗ ಮನೋಭಾವವನ್ನು ಮೈಗೂಡಿಸಿಕೊಳ್ಳಿರಿ, ನ್ಯಾಯೋಚಿತವಾಗಿ ನಡೆಯಿರಿ.
 
 
****ಶಿವಾಜಿ ಮಹಾರಾಜರ ಗುರುಕಾಣಿಕೆ
೧೭ನೇ ಶತಮಾನದಲ್ಲಿ, ಶಿವಾಜಿ ಮಹಾರಾಜರೆಂಬ ರಾಜರೊಬ್ಬರು ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು. ಒಂದು ದಿನ ಶಿವಾಜಿ ಮಹಾರಾಜರು ರಾಜಸಭೆಯಲ್ಲಿ ಕಾರ್ಯಭಾರ ಮಾಡುವಾಗ ಯಾರೋ ಭಿಕ್ಷೆ ಬೇಡುವುದು ಕೇಳಿಸಿತು. ಅದು ತನ್ನ ಗುರು ರಾಮದಾಸ ಸ್ವಾಮಿಗಳ ಧ್ವನಿ ಎಂದು ಅರಿತು ಕೂಡಲೆ ಅವನು ಓಡಿ ಹೋಗಿ ಅವರನ್ನು ಆದರದಿಂದ ಒಳಗೆ ಕರೆದುಕೊಂಡು ಬಂದನು. ಗುರುಗಳಿಗೆ ಪೂಜೆಯನ್ನು ಮಾಡಿ ಅವರು ಅನ್ನ ಗ್ರಹಣ ಮಾಡಿದ ನಂತರ ಶಿವಾಜಿಯು ಒಂದು ಚೀಟಿಯಲ್ಲಿ ಏನೋ ಬರೆದು ಗುರುಗಳಿಗೆ ನೀಡಿದರು. ಗುರುಗಳೊಂದಿಗೆ ಇದ್ದ ಇತರ ಜನರಿಗೆ ಆಶ್ಚರ್ಯವಾಯಿತು. ಶಿವಾಜಿಯು ಗುರುಗಳಿಗೆ ರಾಜಭೋಜನ ನೀಡಬಹುದು, ಅರ್ಪಣೆ ನೀಡಬಹುದು ಎಂದು ವಿಚಾರ ಮಾಡುತ್ತಿದ್ದರು. ಆದರೆ ಶಿವಾಜಿ ಮಹಾರಾಜರು ಒಂದು ಸಣ್ಣ ಚೀಟಿಯಲ್ಲಿ ಏನು ಬರೆದಿರಬಹುದು ಅನಿಸಿತು. ಏನು ಬರೆದಿರುವನೆಂದು ಅರಿತಿದ್ದ ಗುರುಗಳು ಜನರ ವಿಚಾರಗಳಿಗೆ ಉತ್ತರ ನೀಡಲು ಅವರಲ್ಲೊಬ್ಬನಿಗೆ ಚೀಟಿಯಲ್ಲಿ ಏನಿದೆ ಎಂದು ಜೋರಾಗಿ ಓದಿ ಹೇಳಲು ಹೇಳಿದರು. ಆ ಚೀಟಿಯಲ್ಲಿ ಶಿವಾಜಿಯು ತನ್ನ ಸಂಪೂರ್ಣ ರಾಜ್ಯವನ್ನು ಗುರುಗಳ ಚರಣಗಳಿಗೆ ಸಮರ್ಪಿಸಿದ್ದನು. ಗುರುಗಳು ಕೇಳಿದರು, "ಎಲ್ಲವನ್ನು ಅರ್ಪಿಸಿಬಿಟ್ಟರೆ ನೀನೇನು ಮಾಡುವೆ?" ಆಗ ರಾಜನು ಉತ್ತರಿಸಿದನು, "ನಾನು ನಿಮ್ಮ ಸೇವೆ ಮಾಡಿಕೊಂಡಿರುವೆನು". ಆಗ ಗುರುಗಳು ಹೇಳಿದರು, "ಸರಿ ನಡಿ ಹಾಗಿದ್ದರೆ ನಾವು ಮನೆ ಮನೆಗೆ ಹೊಗಿ ಭಿಕ್ಷೆ ಬೇಡೋಣ". ಕೂಡಲೇ ರಾಜನು ಒಳಗೆ ಹೋಗಿ ಸಾಧಾರಣ ಉಡುಪುಗಳನ್ನು ಧರಿಸಿ ಬಂದನು. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿದ ನಂತರ ಎಲ್ಲರೂ ವಿಶ್ರಾಂತಿಗಾಗಿ ಮರದಡಿ ಕೂತರು. ಶಿವಾಜಿಯ ಗುರುಸೇವೆಯ ತಳಮಳವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಗುರುಗಳು ಹೇಳಿದರು, "ನನಗೆ ರಾಜ್ಯದಿಂದೇನು ಲಾಭ? ಹಾಗಾಗಿ ನನಗೆ ನೀನು ನೀಡಿರುವ ರಾಜ್ಯವನ್ನು ನಾನು ಇಟ್ಟುಕೊಳ್ಳುವುದಿಲ್ಲ. ಇಂದಿನಿಂದ ನಾನು ನಿನ್ನನ್ನು ನನ್ನ ರಾಜ್ಯವನ್ನು ನೋಡಿಕೊಳ್ಳಲು ನೇಮಿಸುತ್ತೇನೆ". ನಮ್ರತೆಯಿಂದ ಶಿವಾಜಿಯು ಗುರುಗಳ ಅರಮನೆಗೆ ಹಿಂತಿರುಗಿದನು ಮತ್ತು ಅವರ ರಾಜ್ಯಭಾರವನ್ನು ಮಾಡಿದನು.

[ಮೇಲಿನ ಕಥೆಯಿಂದ ಶಿವಾಜಿಯು ತನ್ನ ಗುರು ಮತ್ತು ದೇವರನ್ನು ಎಷ್ಟು ಪ್ರೀತಿಸುತ್ತಿದ್ದನೆಂದು ತಿಳಿಯುತ್ತದೆ. ಹಾಗಾಗಿಯೇ ಅವನು ತನ್ನ ಇಡೀ ರಾಜ್ಯವನ್ನು ಗುರುಗಳಿಗೆ ಅರ್ಪಿಸಿದನು. ರಾಜನಾದವನು ತನ್ನ ರಾಜ್ಯವನ್ನು ದೇವರ ರಾಜ್ಯವೆಂದು ಆಳಬೇಕೆಂದು ಇದರಿಂದ ತಿಳಿಯುತ್ತದೆ. ನಮ್ಮ ಬಳಿ ಶಿವಾಜಿ ಮಹಾರಾಜರಷ್ಟು ಆಸ್ತಿ ಇಲ್ಲ. ಆದರೂ ಸಹ ನಾವು ದೇವರಿಗೆ ನಮ್ಮ ಬುದ್ಧಿ, ಮನಸ್ಸು ಅರ್ಪಿಸಬಹುದು.]