ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ

ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ
ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ
ಸವಾಲುಗಳು ಮತ್ತು ಸಾಧ್ಯತೆಗಳು
       
 “ಸರ್ವರಿಗೂ ಶಿಕ್ಷಣ” ಎಂಬುದು ಮಕ್ಕಳ ಸಂವಿಧಾನ ಬದ್ದ ಹಕ್ಕು. ಈ ಶೀರ್ಷಿಕೆಯ ವ್ಯಾಪ್ತಿಯಲ್ಲಿ ವಿವಿಧ ಸಾಮಥ್ರ್ಯವುಳ್ಳ ಅಂದರೆ ವಿಕಲ ಚೇತನರು/ ವಿಶೇಷ ಅಗತ್ಯವುಳ್ಳ ಮಕ್ಕಳೂ ಇದ್ದಾರೆ. ಈ ಮಕ್ಕಳೂ ಸಹ ಇತರೆ ಮಕ್ಕಳ ಜೊತೆಯಲ್ಲಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬುದು ಸಂವಿಧಾನದ ಆಶಯ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಹಾಗೂ ಕಲಿಕೆಯಲ್ಲಿ ಭಿನ್ನತೆ ಇರುವ ಮಕ್ಕಳಿಗೆ ಶಿಕ್ಷಣದ ಅವಕಾಶ ಒದಗಿಸುವುದು ನಾಗರೀಕ ವ್ಯವಸ್ಥೆಯ ಜವಾಬ್ದಾರಿ. ಸಾಮಾನ್ಯ ಶಾಲೆಯಲ್ಲಿ ತರಗತಿಯ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮನ್ವಯಗೊಳಿಸುವುದು ಮಾನವ ಹಕ್ಕುಗಳ ಆಶಯಕ್ಕೆ ಪೂರಕವಾದುದು.
 ಇಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಎಂದರೆ ಯಾರು? ಅವರಿಗೇಕೆ ವಿಶೇಷ ಅಗತ್ಯ ಬೇಕು ? ಎಂಬಿತ್ಯಾದಿ ಪ್ರಶ್ನೆಗಳು ಉದ್ಬವಿಸುವುದು ಸಹಜ. “ಯಾವ ಮಕ್ಕಳು ಇತರೆ ಮಕ್ಕಳಂತೆ ಸಹಜವಾಗಿ ಕಲಿಯಲು ತೊಂದರೆ ಅನುಭವಿಸುತ್ತಾರೋ ಅಂತಹ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳು ಎನ್ನಲಾಗುತ್ತದೆ”.  ಸಹಜವಾಗಿ ಕಲಿಯಲು ನ್ಯೂನತೆಗಳು ಕಾರಣವಾಗಿರಬಹುದು. ಈ ನ್ಯೂನತೆಗಳೆಂದರೆ ದೃಷ್ಟಿದೋಷ, ಶ್ರವಣದೋಷ, ಬುದ್ದಿದೋಷ, ದೈಹಿಕದೋಷ, ಮತ್ತು ಕಲಿಕಾದೋಷ ಇತ್ಯಾದಿಗಳಿರಬಹುದು. ಈ ನ್ಯೂನತೆಳಿಂದ ಬಳಲುತ್ತಿದ್ದು ವಿಶೇಷ ಅಗತ್ಯತೆಯಿಂದ ಕಲಿಯಲು ಸಾಧ್ಯವಿರುವ ಮಕ್ಕಳನ್ನು ವಿಶೇಷ ಅಗತ್ಯವುಳ್ಳ ಮಕ್ಕಳೆಂದು ಕರೆಯುತ್ತಾರೆ. ಇಂತಹ ಮಕ್ಕಳಿಗೆ ಇತರರ ಅಗತ್ಯ ಇರುತ್ತದೆ. ಆ ಅಗತ್ಯ ಸ್ನೇಹಿತರಿಂದ ಇರಬಹುದು, ಶಿಕ್ಷಕರಿಂದ ಇರಬಹುದು, ಪಾಲಕರಿಂದ ಇರಬಹುದು ಅಥವಾ ಕೆಲವು ಸಾಧನ ಸಲಕರಣೆಗಳಿಂದ ಇರಬಹುದು.
 ವಿಶೇಷ ಅಗತ್ಯವುಳ್ಳ ಮಕ್ಕಳೂ ಸಹ ಇತರೆ ಮಕ್ಕಳಂತೆ ಬೆಳೆಯಲು, ವಿಕಾಸ ಹೊಂದಲು ಸಹಾಯಕವಾಗಲು ಕನಿಷ್ಠ ಪರಿಸರವನ್ನು ಒದಗಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿಯೇ ಇತರೆ ಮಕ್ಕಳ ಜೊತೆ ಶಿಕ್ಷಣ ನೀಡಲು ಇರುವ ವ್ಯವಸ್ಥೆಯೇ “ಸಮನ್ವಯ ಶಿಕ್ಷಣ”. ಅಂದರೆ ಕಲಿಕೆಯಲ್ಲಿ ಹಿಂದಿರುವ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಇತರೆ ಮಕ್ಕಳ ಜೊತೆಯಲ್ಲಿ ಸೇರಿಸಿ ನಿರೀಕ್ಷಿತ ಮಟ್ಟದ ಕಲಿಕೆ ಮೂಡಲು ರೂಪಿಸುವ ಒಂದು ವ್ಯವಸ್ಥೆಯಾಗಿದೆ.
 ಕರ್ನಾಟಕದಲ್ಲಿ 1.47.999 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ 202 ಶೈಕ್ಷಣಿಕ ಬ್ಲಾಕ್‍ಗಳಿದ್ದು, ಪ್ರತಿ ಬ್ಲಾಕ್‍ಗೆ 3 ಜನರಂತೆ 606 ಜನ ಸಂಪನ್ಮೂಲ ವ್ಯಕ್ತಿಗಳು, ಹಾಗೂ ಪ್ರತಿ ಬ್ಲಾಕ್‍ಗೆ ಇಬ್ಬರಂತೆ 404 ಜನ ವಿಶೇಷ ಶಿಕ್ಷಕರು ಸಮನ್ವಯ ಶಿಕ್ಷಣದಲ್ಲಿ ಬಾಗಿಯಾಗಿದ್ದಾರೆ. ಅಲ್ಲದೇ 34 ಶೈಕ್ಷಣಿಕ ಜಿಲ್ಲೆಗೂ ಒಬ್ಬೊಬ್ಬ ಜಿಲ್ಲಾ ಸಂಯೋಜಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಿನ್ನಲೆ
 ‘ಸಮನ್ವಯ ಶಿಕ್ಷಣ’ದ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದ ಅಂಗವಿಕಲತೆ ಮಾನವನನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಹಿಂದಿನ ಕಾಲದಲ್ಲಿ ಇಂತಹವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು.
 ನಾಗರೀಕತೆ ಬೆಳೆದಂತೆಲ್ಲಾ ಮಾನವರ ಮನೋಭಾವನೆಗಳು ಬದಲಾಗುತ್ತಾ ಬಂದವು. ಇಂತಹವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶಗಳನ್ನು ನೀಡಿದಲ್ಲಿ ಸಮಾಜದ ಇತರರಂತೆ ಅವರೂ ಬದುಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಇವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಟ್ಟು ಇವರೂ ಕೂಡಾ ಸುಂದರ ಮತ್ತು ಆರೋಗ್ಯಕರ ವಾತಾವರಣದಲ್ಲಿ ಬೆಳೆದು ಸಮಾಜದ ಮುಖ್ಯ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬದ್ದವಾಗಿದೆ.
 1961 ರಲ್ಲಿ ಸರ್ವರಿಗೂ ಶಿಕ್ಷಣ ನೀತಿ ಜಾರಿಗೆ ಬಂದ ಮೇಲೆ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳು ಪ್ರಾರಂಭವಾದವು. ಆದರೆ ಈ ವಿಶೇಷ ಶಾಲೆಗಳಲ್ಲಿ ಕೆಲವೇ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಬಹಳ ಮಕ್ಕಳು ಇದರಿಂದ ವಂಚಿತರಾಗುತ್ತಿದ್ದರು. ಏಕೆಂದರೆ ಈ ವಿಶೇಷ ಶಾಲಾ ಶಿಕ್ಷಣ ವ್ಯವಸ್ಥೆ ತುಂಬಾ ದುಬಾರಿ ವೆಚ್ಚದ್ದಾಗಿದ್ದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಇದು ನಿಲುಕದ ನಕ್ಷತ್ರವಾಗಿತ್ತು.  ಇದನ್ನು ಗಮನಿಸಿದ ಸರ್ಕಾರ 1970 ರಲ್ಲಿ “ಸಮನ್ವಯ ಶಿಕ್ಷಣ’ವನ್ನು ಜಾರಿಗೆ ತಂದಿತು.
 1977 ರ ಸಂಸತ್ ಅಧಿವೇಶನದಲ್ಲಿ ‘ವಿಶ್ವ ಅಂಗವಿಕಲರ ದಿನಾಚರಣೆ’ ಆಚರಿಸಬೇಕೆಂಬ ಶಿಫಾರಸ್ಸು ಮಾಡಲಾಯಿತು. 1978-79ರ ಅಧಿವೇಶನದಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಸಂಪೂರ್ಣ ಸಹಬಾಗಿತ್ವ ಮತ್ತು ಸಮಾನತೆಯಿಂದ ಕೂಡಿರಬೇಕೆಂದು ತೀರ್ಮಾನಿಸಲಾಯಿತು. 1981 ನೇ ವರ್ಷವನ್ನು “ಅಂತರರಾಷ್ಟ್ರೀಯ ಅಂಗವಿಕಲರ ವರ್ಷ” ಎಂದು ಘೋಷಿಸಿ ಅಂಗವಿಕಲರ ದಿನಾಚರಣೆ ಆಚರಿಸಲಾಯಿತು.
 1982ರಲ್ಲಿ ವಿಶ್ವವ್ಯಾಪಿ ಅಂಗವಿಕಲರ ಯೋಜನಾ ಕಾರ್ಯಕ್ರಮದ ಮಾರ್ಗದರ್ಶನ ಕೈಪಿಡಿ ಹೊರತರಲಾಯಿತು.
 1983-92 ರ ವರ್ಷಗಳನ್ನು “ಅಂಗವಿಕಲರ ದಶಕ” ಎಂದು ಘೋಷಿಸಲಾಯಿತು. 1993ರಲ್ಲಿ ವಿಶ್ವಸಂಸ್ಥೆಯು ಅಂಗವಿಕಲರ ಸ್ಥಾನಮಾನ, ಹಕ್ಕುಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ನಿಯಮಗಳನ್ನು ರೂಪಿಸುವ ಬಗ್ಗೆ ತೀರ್ಮಾನ ಕೈಗೊಂಡಿತು. 1993-2002 ರ ವರೆಗಿನ ವರ್ಷಗಳನ್ನು ‘ಏಷಿಯಾ ಫೆಸಿಫಿಕ್ ಅಂಗವಿಕಲರ ವರ್ಷಗಳು’ ಎಂದು ಘೋಷಿಸಲಾಯಿತು.
 ಭಾರತದ ಸಂವಿಧಾನವೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದು ಸ್ವಾಗತಾರ್ಹ. 86ನೇ ಭಾರತ ಸಂವಿಧಾನ ತಿದ್ದುಪಡಿ ಪ್ರಕಾರ ‘14 ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ’ ಜಾರಿಗೆ ಬಂದಿತು. ಇದರಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡಾ ಸೇರಿದ್ದಾರೆ. 1992 ರ ಭಾರತೀಯ ಪುನರ್ವಸತಿ  ಪರಿಷತ್ತು ಕಾಯಿದೆ ಪ್ರಕಾರ ‘ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ತರಬೇತಿ ಹೊಂದಿದ ಶಿಕ್ಷಕರಿಂದ ಬೋಧನೆ ಮಾಡುವ ಪದ್ದತಿ’ ಜಾರಿಗೆ ಬಂದಿತು. 1995ರ ಅಂಗವಿಕಲ ವ್ಯಕ್ತಿಗಳ(ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಹಾಗೂ ಸಂಪೂರ್ಣ ಸಹಬಾಗಿತ್ವ) ಕಾಯ್ದೆಯ ಪ್ರಕಾರ ‘18 ವರ್ಷದವರೆಗೆ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯತೆಗೆ ತಕ್ಕಂತೆ ಸೂಕ್ತ ಶಿಕ್ಷಣ ನೀಡುವುದು’. 1999ರ ರಾಷ್ಟ್ರೀಯ ಹಿತರಕ್ಷಣಾ ಕಾಯಿದೆ ಪ್ರಕಾರ ‘ತೀವ್ರ ತರದ ದೋಷವುಳ್ಳ ಮಕ್ಕಳಿಗೆ ವಿಶೇಷ ಸೇವೆ ಮತ್ತು ಸಹಕಾರ ನೀಡುವುದು’.
 ಹೀಗೆ ವಿವಿಧ ಸ್ವರೂಪಗಳಲ್ಲಿ ಸಮನ್ವಯ ಶಿಕ್ಷಣ ಬೆಳೆದು ಬಂದಿತು. ಅಂಗವಿಕಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಬೇಕಾದರೆ  ಶಿಕ್ಷಣವೇ ಅದಕ್ಕೆ ಸಂಜೀವಿನಿಯಾಗಬೇಕು. ಈ ಅಂಗವಿಕಲ ಮಕ್ಕಳ ಬಗ್ಗೆ ಜನರಲ್ಲಿ ಹುದುಗಿರುವ ಮೂಢನಂಬಿಕೆ, ಮತೀಯತೆ, ಜಾತೀಯತೆ, ಅಂಧಶ್ರದ್ದೆ ಮುಂತಾದ ಸಂಕುಚಿತ ಭಾವನೆಗಳನ್ನು ಶಿಕ್ಷಣದಿಂದ ಮಾತ್ರ ಹೋಗಲಾಡಿಸಲು ಸಾಧ್ಯ. ಈ ದಿಸೆಯಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ(ಒಊಖಆ) ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಾದ UಓಇSಅಔ, UಓಆP, Iಐಔ, UಓIಅಇಈ ಗಳ ಸಹಕಾರದೊಂದಿಗೆ ವಿವಿಧ ಹಂತಗಳಲ್ಲಿ ಸಮನ್ವಯ ಶಿಕ್ಷಣ ನೀಡುತ್ತಾ ಬಂದಿದೆ.
ಸಮನ್ವಯ ಶಿಕ್ಷಣದ ಔಚಿತ್ಯ
 ಸಮಾನ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ಸಾಗುತ್ತಿರುವ ನಾವುಗಳು ಪ್ರತಿಯೊಂದು ಮಗುವಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕಾದುದು ಬಾಗೀದಾರರ ಕರ್ತವ್ಯ. ನಮ್ಮಲ್ಲಿ ಮೇಲ್ಮಟ್ಟದ ಬುದ್ದಿಮತ್ತೆಯವರಿಗೂ ಮತ್ತು ಸಾಮಾನ್ಯ ಬುದ್ದಿಮತ್ತೆಯವರಿಗೂ ಕಲಿಯಲು ಪ್ರತ್ಯೇಕ ಶಿಕ್ಷಣ ವ್ಯವಸ್ಥೆಗಳಿಲ್ಲ. ಪ್ರತಿಯೊಂದು ಮಗುವೂ ದೈಹಿಕವಾಗಿ, ಮಾನಸಿಕವಾಗಿ ಅದ್ವಿತೀಯ ಮತ್ತು ತುಲನಾತೀತ. ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಸವಾಲೆನಿಸುವ ಕಾರ್ಯಕ್ರಮಗಳನ್ನು ಇಂತಹ ನೆಲೆಯಿಂದ ನೋಡಬೇಕಾದ ಮನೋಭೂಮಿಕೆ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕಾಗಿದೆ. ಏಕೆಂದರೆ ಪ್ರತಿಯೊಬ್ಬ ಮಗುವೂ ತನ್ನದೇ ಆದ ಸಾಮಥ್ರ್ಯ ಹೊಂದಿದ್ದು, ಅದರ ಬಲವರ್ಧನೆಗಾಗಿ ಶಿಕ್ಷಣ ಅವಶ್ಯಕ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ, ಸಾಮಾಜೀಕರಣ, ಶಿಕ್ಷಣ, ಉದ್ಯೋಗ ಇವೆಲ್ಲವೂ ವ್ಯಕ್ತಿಯಲ್ಲಿ ರೂಪುಗೊಳ್ಳಲು ಸಾಮಾನ್ಯ ಶಿಕ್ಷಣ ಕ್ರಮ ಸಹಾಯ ಮಾಡುತ್ತದೆ. ಹಾಗಾಗಿ ಸಮನ್ವಯ ಶಿಕ್ಷಣ ಯಾರಿಗೂ ಹೊರೆಯಲ್ಲ. ಬದಲಾಗಿ ಅದು ವ್ಯಕ್ತಿಗಳ ನಡುವೆ ಪ್ರೀತಿ, ಸಾಮರಸ್ಯ, ಸಮಾನತೆ, ಸ್ವಾವಲಂಬನೆ, ಸಹಬಾಳ್ವೆ, ಹೊಂದಾಣಿಕೆಗಳನ್ನು ಬೆಳೆಸುವ ಸಮಾಜಿಕ ಹಂದರವನ್ನು ಬಂಧಗೊಳಿಸುವ ಸಾಧನವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸಮನ್ವಯ ಶಿಕ್ಷಣದ ವ್ಯಾಪ್ತಿ
 * ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಅವರಿರುವ ಸ್ಥಳದಿಂದ ಸಾಮಾನ್ಯ ಶಾಲೆಗೆ ಸೇರಿಸುವುದು ಮಾತ್ರವಲ್ಲ, ಎಲ್ಲಾ ಮಕ್ಕಳಿಗೂ ಅವಕಾಶ ಮಾಡಿಕೊಡುವುದು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳು ಕಲಿಯುವಂತೆ ಶಾಲೆಗಳನ್ನು ರೂಪಿಸುವುದು.
 *  ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನದ ಪ್ರಾಥಮಿಕ ಕೌಶಲ್ಯ ನೀಡಲು ಪೋಷಕರಿಗೂ ಅರಿವನ್ನು ಮೂಡಿಸುವುದು.
 *  ಸಮನ್ವಯ ಶಿಕ್ಷಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಯ ಅವಿಭಾಜ್ಯ ಅಂಗವಾಗಿರುತ್ತಾರೆ. ಅವರ ಶೈಕ್ಷಣಿಕ ಅಗತ್ಯತೆಗಳನ್ನು ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿಯೇ ಪೂರೈಸಲಾಗುತ್ತದೆ.
 *  ಮೆದುಳಿನ ಪಾಶ್ರ್ವವಾಯು, ಆಟಿಸಂ ಮತ್ತು ಬಹು ವಿಕಲತೆ ಹೊಂದಿದ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡುವುದು.
 *  ಸ್ಥೂಲವಾಗಿ ಎಲ್ಲಾ ಚಟುವಟಿಕೆಗಳನ್ನು ಎಲ್ಲಾ ಮಕ್ಕಳಿಗೂ ಒದಗಿಸಿಮಗುವನ್ನು ನಿರೀಕ್ಷಿತ ಮಟ್ಟಕ್ಕೆ ತಲುಪುವಂತೆ ವ್ಯವಸ್ಥೆ ಮಾಡುವುದು ಸಮನ್ವಯ ಶಿಕ್ಷಣದ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಮಗುವೂ ಭಾಗವಹಿಸುವಂತಹ ಚಟುವಟಿಕೆಗಳನ್ನು ರೂಪಿಸುವುದು ಸವಾಲಾದರೂ ಕಾರ್ಯರೂಪಕ್ಕೆ ರುವುದು ಅನಿವಾರ್ಯವಾಗಿದೆ.
ಸಮನ್ವಯ ಶಿಕ್ಷಣದ ಉದ್ದೇಶಗಳು
 * ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳಂತೆ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವರ ಸಾಮಥ್ರ್ಯಕ್ಕೆ ತಕ್ಕಂತೆ ಅವಕಾಶಗಳನ್ನು ಕಲ್ಪಿಸುವುದು.
 * ವಿಶೇಷ ಅಗತ್ಯವುಳ್ಳ ಮಕ್ಕಳು ಇತರೆ ಮಕ್ಕಳ ನಡುವೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು.
 * ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಇತರರಲ್ಲಿ ಇರಬಹುದಾದ ಋಣಾತ್ಮಕ ಮನೋಭಾವನೆಯನ್ನು ಹೋಗಲಾಡಿಸಿ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೇಪಿಸುವುದು.
 * ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನ ಮಟ್ಟ ಅವರ ಪೌರ ಹಕ್ಕುಗಳನ್ನು ಭದ್ರಗೊಳಿಸುವುದು.
 * ವಿಶೇಷ ಅಗತ್ಯವುಳ್ಳ ಮಕ್ಕಳು ಸಮಾಜವನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಿ ಸ್ವಾವಲಂಬಿ ಜೀವನವನ್ನು ನೆಡೆಸಲು ಸಾಧ್ಯವಾಗುವಂತೆ ಮಾಡುವುದು.
 * ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೇವಲ ಅನುಕಂಪ ತೋರಿಸದೇ ಸಮಾನ ಅವಕಾಶಗಳನ್ನು ಕಲ್ಪಿಸುವ ಮನೋಭಾವವನ್ನು ಶಿಕ್ಷಕರಲ್ಲಿ ಹಾಗೂ ಸಮುದಾಯದವರಲ್ಲಿ ಬೆಳೆಸುವುದು.
 * ಪ್ರತಿ ಮಗು ತನ್ನಲ್ಲಿ ಹುದುಗಿರುವ ಸಾಮಥ್ರ್ಯಗಳ ಸಂಪೂರ್ಣ ಸಿದ್ದಿಗೆ ಶಿಶುಸ್ನೇಹಿ ಕಲಿಕಾ ಪರಿಸರ ಒದಗಿಸುವುದು.
ಸಮನ್ವಯ ಶಿಕ್ಷಣದ ಮಾದರಿ
 ಸಮನ್ವಯ ಶಿಕ್ಷಣವು ಹಲವಾರು ಮಾದರಿಗಳನ್ನು ಒಳಗೊಂಡಿರುತ್ತದೆ.
 ವಸತಿ ರಹಿತ ವಿಶೇಷ ಶಾಲೆ: ತೀವ್ರ ಸ್ವರೂಪದ ನ್ಯೂನತೆ ಇರುವ ಮಕ್ಕಳನ್ನು ಅವರ ನ್ಯೂನತೆನುಗುಣವಾಗಿ ವಿಶೇಷ ಶಾಲೆಗೆ ಸೇರಿಸಿ ಶಿಕ್ಷಣ ನೀಡುವ ಪದ್ದತಿ. ಈ ಶಾಲೆಯಲ್ಲಿ ವಿಶೇಷ ಪಠ್ಯಕ್ರಮ,  ಬೋಧನಾ ವಿಧಾನ ಮತ್ತು ಪೂರಕ ಚಟುವಟಿಕೆಗಳ ಮೂಲಕ ಇತರೆ ಮೂಲಭೂತ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಶಾಲಾ ವೇಳೆಯ ನಂತರ ಈ ಮಕ್ಕಳೂ ಕೂಡಾ ಇತರೆ ಮಕ್ಕಳಂತೆ ಮನೆಗೆ ಹೋಗುವುದರಿಂದ ಶಾಲಾ ವಾತಾವರಣ ಮತ್ತು ಮನೆಯ ವಾತಾವರಣ ಎರಡಕ್ಕೂ ಹೊಂದಿಕೊಳ್ಳವಂತೆ ಸಮನ್ವಯಗೊಳಿಸಲಾಗಿದೆ.
 ವಿಶೇಷ ತರಗತಿ ಮಾದರಿ : ತರಗತಿ ಶಿಕ್ಷಕರು ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಸಾಮಾನ್ಯ ಶಾಲೆಯಲ್ಲಿಯೇ ವಿಶೇಷ ತರಗತಿ ನೆಡೆಸುವ ಯೋಜನೆಯಾಗಿದೆ. ಶಾಲೆಯಲ್ಲಿ ವೈಯಕ್ತಿಕ ಬೋಧನಾ ಸೌಲಭ್ಯವನ್ನೊದಗಿಸಿ ಮಗುವಿನ ವಿಶೇಷ ಕೊರತೆ ತುಂಬಲು ಪೂರಕ ಸಾಧನ ಸಲಕರಣೆಗಳಿರುತ್ತವೆ.
 ಸಂಪನ್ಮೂಲ ಕೊಠಡಿ ಮಾದರಿ : ಸಾಮಾನ್ಯ ಶಾಲಾ ತರಗತಿಯಲ್ಲಿ ಪೂರ್ಣಾವಧಿ ವಿದ್ಯಾರ್ಥಿಯಾಗಿದ್ದು, ಅಗತ್ಯವೆನಿಸಿದಾಗ ಆ ಶಾಲೆಯಲ್ಲಿರುವ ಸಂಪನ್ಮೂಲ ಕೊಠಡಿಗೆ ಒಂದು ಅಥವಾ ಎರಡು ಗಂಟೆ ಕರೆತಂದು ನ್ಯೂನತೆಯ ಸ್ವರೂಪಕ್ಕನುಗುಣವಾಗಿ ಸಾಧನ ಸಲಕರಣೆ ಮತ್ತು ಬೋಧನೋಪಕರಣಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ವಿಶೇಷ ಸೌಲಭ್ಯವನ್ನೊದಗಿಸುವ ಪದ್ದತಿಯಾಗಿದೆ.
 ಸಂಚಾರಿ ಶಿಕ್ಷಕ ಮಾದರಿ: ಸಾಮಾನ್ಯ ಶಿಕ್ಷಕರು ಸಾಮಾನ್ಯ ಶಾಲ ವ್ಯವಸ್ಥೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕಲಿಕಾ ಕೊರತೆ ಮತ್ತು ವಿಶೇಷ ಸೌಲಭ್ಯ ಒದಗಿಸಲು ಸಾಧ್ಯವಾಗದಿರುವಾಗ ತಜ್ಞರೆನಿಸಿದ ವಿಶೇಷ ಶಿಕ್ಷಕರನ್ನು/ಸಂಪನ್ಮೂಲ ಶಿಕ್ಷಕರನ್ನು ಕರೆಸಿ ನ್ಯೂನತೆಯ ಮಕ್ಕಳಿಗೆ ವಿಶೇಷ ಕಲಿಕಾ ಸೌಲಭ್ಯಗಳನ್ನು ಒದಗಿಸುವ ಮಾದರಿಯಾಗಿದೆ.
 ಸಂಮಿಶ್ರಣ ಮಾದರಿ : ಸಂಪನ್ಮೂಲ ಕೊಠಡಿ ಯೋಜನೆ ಮತ್ತಿ ಸಂಚಾರಿ ಶಿಕ್ಷಕ ಯೋಜನೆಗಳಿಂದ ಕೂಡಿದ ಮಾದರಿಯೇ ಸಂಮಿಶ್ರಣ ಮಾದರಿ. ಇದರಲ್ಲಿ ಅನೇಕ ಚಟುವಟಿಕೆಗಳು ಮತ್ತು ಯೋಜನೆಗಳು ಮಿಶ್ರಣಗೊಂಡಿರುತ್ತವೆ.
 ವಿಶೇಷ ಐಕ್ಯತಾ ಮಾದರಿ : ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಾಮಾನ್ಯ ಮಕ್ಕಳೊಡನೆ ಸಾಮಾನ್ಯ ಪಠ್ಯಕ್ರಮವನ್ನು ಅಳವಡಿಸಿಕೊಂಡು ಬೋಧಿಸುವುದರ ಜೊತೆಗೆ ತರಗತಿ ಶಿಕ್ಷಕರೇ ನ್ಯೂನತೆ ಇರುವ ಮಕ್ಕಳ ವಿಶೇಷ ಕಲಿಕಾ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುವ ಯೋಜನೆ.
 ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ಕಲಿಯುತ್ತಿರುವಾಗ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಸವಾಲೆನಿಸುವ ಇಂತಹ ಮಕ್ಕಳು ಕೆಲವು ನಿರ್ದಿಷ್ಟ ವೈಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ.
ವಿಶೇಷ ಅಗತ್ಯವುಳ್ಳ ಮಕ್ಕಳ ಲಕ್ಷಣಗಳು
 ಓದು-ಬರಹದಲ್ಲಿ ಸ್ಪಷ್ಟತೆ ಇಲ್ಲದಿರುವುದು.
 ಓದುವಾಗ ಬರೆಯುವಾಗ ಪುಸ್ತಕಗಳನ್ನು ತುಂಬಾ ಸಮೀಪದಲ್ಲಿಟ್ಟುಕೊಳ್ಳುವುದು.
 ಆಗಾಗ್ಗೆ ಕಣ್ಣು ಉಜ್ಜಿಕೊಳ್ಳುವುದು.
 ಪದೆ ಪದೇ ಕಿವಿ ಕೆರೆದುಕೊಳ್ಳುವುದು.
 ಮಾತನಾಡುವ ಕಡೆಗೆ ತಲೆಯನ್ನು ತಿರುಗಿಸಿಕೊಳ್ಳುವುದು.
 ನಿರ್ದೇಶನಗಳನ್ನು ಪುನಃ ಹೇಳುವಂತೆ ಕೇಳುವುದು.
 ಉಕ್ತಲೇಖನ/ನೋಟ್ಸ ಬರೆದುಕೊಳ್ಳುವಲ್ಲಿ ಕಷ್ಟಪಡುವುದು.
 ಮಾತನಾಡುವವರ ಸುಳಿವು ಪಡೆಯಲು ಜಾಗರೂಕರಾಗಿ ಅವರನ್ನು ಗಮನಿಸುವುದು.
 ತಡೆದು ತಡೆದು ಮಾತನಾಡುವುದು/ತೊದಲುವುದು.
 ಚಲನ-ವಲನದಲ್ಲಿ ತೊಂದರೆ ಪಡುವುದು.
 ಕುಳಿತುಕೊಳ್ಳಲು, ನಿಂತುಕೊಳ್ಳಲು, ನಡೆಯಲು ಕಷ್ಟಪಡುವುದು.
 ಕೈಕಾಲುಗಳಲ್ಲಿ ಅನೈಚ್ಛಿಕ ಚಲನೆ ಕಂಡುಬರುವುದು.
 ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ತೊಂದರೆ ಕಂಡುಬರುವುದು.
 ನಿರ್ದೇಶನಗಳನ್ನು ಅರ್ಥೈಸಿಕೊಳ್ಳುವಲ್ಲಿ ಕಷ್ಟಪಡುವುದು.
 ತನ್ನ ವಯಸ್ಸಿನ ಇತರೆ ಮಕ್ಕಳಂತೆ  ತರಗತಿ ಚಟುವಟಿಕೆಯಲ್ಲಿ ಭಾಗವಹಿಸದಿರುವುದು.
 ಅತಿಯಾದ ಚಟುವಟಿಕೆ/ಅತೀ ಕಡಿಮೆ ಚಟುವಟಿಕೆಯಿಂದ ಇರುವುದು
ವಿಶೇಷ ಅಗತ್ಯವುಳ್ಳ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು
 ಶಿಕ್ಷಕರು ಹೇಳಿದ ಸೂಚನೆ ಅಥವಾ ಪಾಠವನ್ನು ಗ್ರಹಿಸದಿರುವುದು ಮತ್ತು ಅರ್ಥೈಸಿಕೊಳ್ಳದಿರುವುದು.
 ಅರ್ಥೈಸಿಕೊಂಡ ವಿಷಯವನ್ನು ಅಭಿವ್ಯಕ್ತಪಡಿಸಲು ಸಾಧ್ಯವಾಗದಿರುವುದು.’
 ಓದು-ಬರಹದಲ್ಲಿ ಸ್ಪಷ್ಟತೆ ಇಲ್ಲದಿರುವುದು.
 ಕಪ್ಪು ಹಲಗೆ ಮೇಲಿನ ಬರವಣಿಗೆಯನ್ನು ಗುರುತಿಸದಿರುವುದು.
 ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು.
 ದೈನಂದಿನ ಕೆಲಸ ನಿರ್ವಹಿಸದಿರುವುದು.
 ಕಲಿತದ್ದನ್ನು ಬೇಗ ಮರೆಯುವುದು ಮತ್ತು ಸಾಮಾನ್ಯ ವಸ್ತುಗಳನ್ನು ಗುರುತಿಸಲು ವಿಫಲವಾಗುವುದು.
  ಬೆಳವಣಿಗೆಯ ಮೈಲುಗಲ್ಲುಗಳನ್ನು ತಲುಪದಿರುವುದು.
ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರಣಗಳು
 ಮಕ್ಕಳಿಗೆ ಅವಶ್ಯವಿರುವ ಸಾದನ ಸಲಕರಣೆಗಳನ್ನು ಒದಗಿಸುವಲ್ಲಿ ಕೊರತೆ.
 ಸಾಧನ ಸಲಕರಣೆಗಳ ಉಪಯುಕ್ತತೆ ಮತ್ತು ನಿರ್ವಹಣೆಯಲ್ಲಿ ಮಾಹಿತಿ ಇಲ್ಲದಿರುವಿಕೆ.
 ಪೂರಕ ಬೋಧನಾ ಸಾಮಗ್ರಿಗಳ ಕೊರತೆ.
 ಪಠ್ಯಕ್ರಮದಲ್ಲಿ ಅವಶ್ಯ ಮಾರ್ಪಾಡಿನ ಕೊರತೆ.
 ಶಿಕ್ಷಕರು ವೈಯಕ್ತಿಕ ಗಮನ ನೀಡದಿರುವುದು.
 ಸಂವಹನ ಮತ್ತು ಬಹುಮಾಧ್ಯಮಗಳ ಬಳಕೆಯಲ್ಲಿ ಕೊರತೆ.
 ದಪ್ಪ ಅಕ್ಷರ(ಉಬ್ಬು ಅಕ್ಷರ)ದಲ್ಲಿ ಮುದ್ರಣವಾಗಿರುವ ಪುಸ್ತಕಗಳ ಕೊರತೆ.
 ಏಕಾಗ್ರತೆ ಕೊರತೆ, ಓದುವಾಗ ಸ್ಪಷ್ಟ ಉಚ್ಚಾರ ಇಲ್ಲದಿರುವುದು.
ವಿವಿಧ ವಿಕಲ ಚೇತನ ಮಕ್ಕಳ ಅವಶ್ಯಕತೆಗಳು
ಶ್ರವಣದೋಷವುಳ್ಳ ಮಕ್ಕಳ ಅಗತ್ಯತೆಗಳು:
 ತರಗತಿಯಲ್ಲಿ ಕಪ್ಪು ಹಲಗೆ ಮತ್ತು ಶಿಕ್ಷಕರ ಮುಖಭಾವ ಕಾಣುವಂತ ಸ್ಥಳದಲ್ಲಿ ಇವರನ್ನು ಕೂಡಿಸಬೇಕು.
 ಸಂಭಾಷಣೆಗೆ ಹೆಚ್ಚಿನ ಅವಕಾಶ ನೀಡುವುದು.
 ಸಂಪನ್ಮೂಲ ಕೊಠಡಿಯ ಸಂಪೂರ್ಣ ಬಳಕೆ.
 ಸಂಜ್ಞಾ ತರಬೇತಿ.
ದೃಷ್ಟಿದೋಷವುಳ್ಳ ಮಕ್ಕಳ ಅಗತ್ಯಗಳು:
 ತರಗತಿ ಕೊಠಡಿಯಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ.
 ಕಪ್ಪು ಹಲಗೆ ಮೇಲೆ ಬಿಳಿ/ಹಳದಿ ಬಣ್ಣದ ಸೀಮೆ ಸುಣ್ಣದ ಬಳಕೆ.
 ದೃಕ್ ಶ್ರವಣ ಮಾಧ್ಯಮಗಳ ಬಳಕೆ ಮತ್ತು ಪಾಠಗಳನ್ನು ಮುದ್ರಿಸಿದ ಧ್ವನಿಸುರುಳಿಗಳ ಬಳಕೆ.
 ನೇತ್ರ ವೈದ್ಯರಿಂದ ತಪಾಸಣೆ ಮತ್ತು ಸೂಕ್ತ ಕನ್ನಡಕ ಬಳಕೆ.
 ಬ್ರೈಲ್ ಲಿಪಿ, ಅಬಾಕಸ್ ಮತ್ತು ಟೇಲರ್‍ಫ್ರೇಮ್ ಬಳಕೆ.
ಬುದ್ದಿ ದೋಷವುಳ್ಳ ಮಕ್ಕಳ ಅಗತ್ಯಗಳು:
 ಮಗುವಿನ ಬುದ್ದಿಶಕ್ತಿಗನುಗುಣವಾಗಿ ವೈಯಕ್ತಿಕ ಶೈಕ್ಷಣಿಕ ಕಾರ್ಯಕ್ರಮಗಳು.
 ಹೆಚ್ಚು ಮೂರ್ತ ಮತ್ತು ನೈಜ ವಸ್ತುಗಳ ಬಳಕೆ.
 ಸಣ್ಣ ಪ್ರಗತಿಯನ್ನೂ ಪ್ರಶಂಸಿಸುವುದು.
 ಪುನರಾವರ್ತನೆಯ ಅಭ್ಯಾಸ.
 ಮಧ್ಯೆ ಮಧ್ಯೆ ಲಘು ವಿಶ್ರಾಂತಿ.
 ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು.
 ಮನೋವೈದ್ಯರ ಸಲಹೆ ಮತ್ತು ಅನುಸರಣೆ.
 ಮಕ್ಕಳ ಪೋಷಕರಿಗೆ ಆಪ್ತ ಸಲಹೆ ಮತ್ತು ಮಾರ್ಗದರ್ಶನ.
ಚಲನಾಂಗ ದೋಷವುಳ್ಳ ಮಕ್ಕಳ ಅಗತ್ಯಗಳು:
 ಸಾಧನೋಪಕರಣ ಧರಿಸಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ.
 ಸಾಧನ ಸಲಕರಣೆಗಾಗಿ ಸೂಕ್ತ ಸ್ಥಳಾವಕಾಶ.
 ಬೌತಿಕ ಪರಿಸರ ಹೊಂದಾಣಿಕೆ(ರ್ಯಾಂಪ್ಸ್, ಹಿಡಿಕಂಬಿಗಳು)
 ಮೂಳೆ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ.
 ಅಗತ್ಯವಿದ್ದಲ್ಲಿ ಗಾಲಿ ಕುರ್ಚಿಗಳ ಬಳಕೆ.
ಕಲಿಕಾದೋಷವುಳ್ಳ ಮಕ್ಕಳ ಅಗತ್ಯಗಳು:
 ಹಂತಹಂತವಾಗಿ ಕಲಿಯಲು ಅವಕಾಶ ನೀಡುವುದು.
 ಬಹು ಇಂದ್ರಿಯ ಕಲಿಕಾ ಅನುಭವ ಒದಗಿಸಿ ಉತ್ತೇಜಿಸುವುದು.
 ಪರಿಹಾರಾತ್ಮಕ ಬೋಧನೆ.
 ಮನೋವೈದ್ಯರಿಂದ ತಪಾಸಣೆ ಮತ್ತು ಸಲಹೆ.
ವಿ.ಅ.ಮ.ಕಲಿಕೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು
* ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ವಿ.ಅ.ಮಕ್ಕಳಿಗೆ ವೈಯಕ್ತಿಕ ಗಮನ ನೀಡುವುದು.
* ವಿ.ಅ.ಮಕ್ಕಳಿಗೂ ಮತ್ತು ಇತರೆ ಮಕ್ಕಳಿಗೂ ಸಹ ಸಂಬಂದಿತ ಕಲಿಕೆ ಮೂಡಿಸುವುದು.
* ವಿ.ಅ.ಮಕ್ಕಳಿಗೂ ಮತ್ತು ಇತರೆ ಮಕ್ಕಳಿಗೂ ಏಕರೂಪದ ಪಠ್ಯಕ್ರಮದಿಂದ ಕಲಿಸುವುದು.
* ವಿ.ಅ.ಮಕ್ಕಳ ಪಾಲಕರ ಮನವೊಲಿಸಿ ಶಾಲೆಗೆ ಕರೆತರುವುದು. ಅಂದರೆ ಪಾಲಕರಲ್ಲಿನ ನಕಾರಾತ್ಮಕ  ದೋರಣೆಯನ್ನು ಸಕಾರಾತ್ಮಕವಾಗಿ
   ಬದಲಾಯಿಸುವುದು.
* ಸರ್ಕಾರಿ ಸೌಲಭ್ಯಗಳ ನಂತರ ಈ ಮಕ್ಕಳು ಶಾಲೆ ತೊರೆಯುವುದು.
* ಎಲ್ಲಾ ಶಾಲೆಗಳಲ್ಲೂ ಸೂಕ್ತ ಸಂಪನ್ಮೂಲ ಕೊಠಡಿ ವ್ಯವಸ್ಥೆ ಇಲ್ಲದಿರುವುದು.
* ಶಿಕ್ಷಕರ ಸಕಾರಾತ್ಮಕ ಮನೋಭಾವನೆ ಮತ್ತು ಅವಧಾರಣೆಯ ಕೊರತೆ.
* ಶಿಕ್ಷಕರಿಗೆ ಅವಶ್ಯಕ ಸಂಪನ್ಮೂಲದ ಕೊರತೆ.
ಸಾಧ್ಯತೆಗಳು
* ಶಿಕ್ಷಕರ ಮತ್ತು ಪಾಲಕರ ಮನೋಧೋರಣೆಯಲ್ಲಿ ಬದಲಾವಣೆ ಆಗಬೇಕು.
* ಪ್ರತೀ ಶಾಲೆಯಲ್ಲಿ ವಿ.ಅ.ಮಕ್ಕಳ ಅಗತ್ಯತೆಗನುಗುಣವಾಗಿ ಸಂಪನ್ಮೂಲ ಕೊಠಡಿ ಸೌಲಭ್ಯ ಒದಗಿಸುವುದು.
* ವಿ.ಅ.ಮಕ್ಕಳ ಅಗತ್ಯತೆಗನುಗುಣವಾಗಿ ಸಾಧನ ಸಲಕರಣೆ ವಿತರಣೆಗೆ ಸೂಕ್ತ ಕ್ರಮ.
* ಬೋಧನೆ ಮತ್ತು ಕಲಿಕೆ ಮಾಹಿತಿ ತಂತ್ರಜ್ಞಾನ ಬಳಕೆ.
* ವರ್ಷಕ್ಕೆರಡು ಬಾರಿ ವಿ.ಅ.ಮಕ್ಕಳ ಆರೋಗ್ಯ ತಪಾಸಣೆ ಮತ್ತು ಅದರ ಅನುಸರಣೆ.
* ತರಗತಿ ಕೊಠಡಿಯೊಳಗೆ ಗಾಲಿ ಕುರ್ಚಿ ಅಥವಾ ಟ್ರೈಸೈಕಲ್ ಬಳಸಲು ಸೂಕ್ತ ಸ್ಥಳಾವಕಾಶ ಒದಗಿಸುವುದು.
* ವಿ.ಅ.ಮಕ್ಕಳಿಗೆ ಸೂಕ್ತವಾದ ಪಠ್ಯಕ್ರಮ ರಚನೆ