ಅಪ್ಪಾಜಿ ಎ ಮುಸ್ಟೂರು ರಚಿತ ಕವನಗಳು

ಅಪ್ಪಾಜಿ ಎ ಮುಸ್ಟೂರು 
ಶಿಕ್ಷಕರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬುಳ್ಳನಹಳ್ಳಿ 
ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ. 
ಮೊಬೈಲ್ ಫೋನ್ 8496819281



*ಓ ನನ್ನ ಸ್ಪೂರ್ತಿಯೇ*

ಓ ನನ್ನ ಸ್ಪೂರ್ತಿಯೇ
ನೀನಿರದೆ ನಾ ಹೇಗಿರಲಿ
ಚೆಲುವಿಲ್ಲ ಬಲವಿಲ್ಲ
ಛಲವಿಲ್ಲ ಈಗ ನನ್ನಲಿ



ಗೆಜ್ಜೆ ಘಲ್‌ ಎಂದರೆ ಗಮನ ನಿನ್ನೆಡೆಗೆ
ಎದೆ ಝಲ್‌ ಎಂದರೆ ಜೀವನ ಕವಲ್ದಾರಿಗೆ
ಕನಸಿನ ಕದವ ತಟ್ಟಿದೆ ನೀ
ನನಸಿನ ನೆತ್ತಿಯಲಿ ಕೂರು ಬಾ


ಜಾತಿಗಳ ಎಲ್ಲೆ ಮೀರಿ
ಜ್ಯೋತಿಯಂತೆ ಬೆಳಗೋ
ಪ್ರೀತಿಯೇ ನೀನೊಲಿದು ಬಾ
ಕತ್ತಲಾದ ಈ ಎದೆಗೆ


ಕಲ್ಲನ್ನು ಕರಗಿಸೋ ನೀನು
ಕಂಬನಿಗೆ ಕರಗದೇ ಹೋದೆಯೇನು
ಕನವರಿಕೆಯ ಕನ್ನಡಿಯಲ್ಲಿ
ನಿನ್ನ ಬಿಂಬಕಾಗಿ ನಾ ಹುಡುಕುತಿಹೆನು


ಅಂಬರದ ಹೊದಿಕೆಯಲಿ ನೀ
ಮರೆಯಾಗದೇ ಬಂದು

ಅಂತರಂಗವ ಸಂತೈಸು ಬಾ
ಓ ನನ್ನ ಸ್ಪೂರ್ತಿಯೇ...........
*ಅಮು ಭಾವಜೀವಿ*

*ಋಣ ಇದ್ದಷ್ಟು ಮಾತ್ರ*

ಇಷ್ಟು ದಿನದ ಅನುಬಂಧವ
ಕಳಚಿತು ಈ ಒಂದು ಕಾಗದ
ಮನದ ಭಾವಕೆ ತೊರೆವ
ನೋವು ಕಾಡಿದೆ ಇಂದು

ಬೇಕುಗಳ ನನಗೆ ನೀಡಿ
ಬೇಡಗಳ ದೂರ ದೂಡಿ
ಪ್ರೀತಿಯಲಿ ಸಲಹಿತ್ತು
ಕಳೆದುಕೊಂಡೆ ನಾ ಆ ಸಂಪತ್ತು 

ತನ್ನವನೆಂದು ಒಪ್ಪಿಕೊಂಡು
ಇಷ್ಟು ದಿನ ಅಪ್ಪಿಕೊಂಡು 
ಅನ್ನವನಿಟ್ಟು ಅಭಿಮಾನಿಸಿದ
ಊರ ತೊರೆಯುವಾಗ ತಬ್ಬಲಿಯಾದೆ ನಾನು 

ಈ ಅನುಬಂಧಕೆ ಕೊನೆಯಿಲ್ಲ
ಆದರೂ ಇಂದಿಗೆ ಮುಗಿಯಿತಲ್ಲ
ದೂರ ಹೋಗಿ ಬಾಳಲೇಬೇಕು
ಆ ಮಧುರ ನೆನಪಷ್ಟೆ ಸಾಕು 

ಹೋಗಿ ಬರುವೆ ಇನ್ನು ನಾನು 
ನೆನಪುಗಳ ಮೆಲುಕು ಹಾಕುತ್ತಾ 
ಬಾಳದೂಡುವೆ ಬವಣೆಯಿದ್ದರೂ
ಬದುಕಿದು ಋಣ ಇದ್ದಷ್ಟು ಮಾತ್ರ 

*ಅಮು ಭಾವಜೀವಿ*

*ನೀನಿರಲು ಸನಿಹ*
  """""""""""""

ತಂಗಾಳಿಯು ಕೂಡ ನನ್ನನ್ನು 
ತಣ್ಣಗೆ ಸವರಿ ಅಣಕಿಸುತ್ತಿದೆ 
ವಿರಹಕೆ ಮೈ ನಡುಗುತಿರಲು
ಕೊರೆವ ಛಳಿ ನಸುನಗುತಿದೆ
ಬಾ ಗೆಳತಿ ನೀಡಿಷ್ಟು ಪ್ರೀತಿ
ಈ ಏಕಾಂತದಿ ನಾ ಸಂತನಾಗಲಾರೆ

ಹರೆಯವೆಂಬ ತುಂಟ ಕೋತಿಗೆ
ಒಲವೆಂಬ ಸುರೆಯ ಕುಡಿಸಿ
ನಡು ಬೀದಿಯಲಿ ಕೈಬಿಟ್ಟಿರೆ
ಅವಿತು ಕೂರುವುದೇ ಅಮಲಿನಲಿ
ನಿನ್ನಾಣತಿಯಂತೆ ನಾ ನಡೆಯಬೇಕು
ನಿನ್ನೊಂದಿಗಿದ್ದು ನಾನೆಲ್ಲ ಪಡೆಯಬೇಕು

ಚೆಲುವ ಹೂದೋಟದಿ ನೀನರಳಿ 
ಒಲವ ಹಂಬಲಿಸಿ ಬಂದೆ ನಾ ಬಳಿ 
ನಿನ್ನಧರ ಮಧು ಸವಿಯಬೇಕು 
ಲತೆಯಂತೆ ನಿನ್ನ ಸುತ್ತಿರಬೇಕು
ಆಣತಿಯ ನೀಡು ಓ ತರುಣಿ
ನಾ ನಿನಗಾಗಿ ಕಾಯ್ವ ಧರಣಿ

ಸ್ವರ್ಗದ ಹಿತ ತಂತೀ ಸ್ಪರ್ಶ 
ನದಿಯಂತೆ ಉಕ್ಕಿತು ಹರ್ಷ
ಇನ್ನಿಲ್ಲ ನನಗೆ ವಿರಹ
ಸದಾ ನೀನಿರಲು ನನ್ನ ಸನಿಹ

*ಅಮುಭಾವಜೀವಿ*