ಚೌಡ್ಲಾಪುರ ಸೂರಿ ಶಿಕ್ಷಕರ ರಚಿತ ಕವನಗಳು

ಚೌಡ್ಲಾಪುರ ಸೂರಿ(ಸುರೇಶ್ ಸಿ.ಆರ್.)
ಶಿಕ್ಷಕರು.
ಸ.ಕಿ.ಪ್ರಾ.ಶಾಲೆ.ಕೋಟೆಹಾಳು.
ಸಿರುಗುಪ್ಪ ತಾಲೂಕು.
ಬಳ್ಳಾರಿ.ಜಿಲ್ಲೆ.
📲 9480106926

*******************************


"ನಂದಾದೀಪ"

ಮೋನು ತುಂಟ ಜಗದ ನೆಂಟ.
 ಸಂಕಟದಲಿ ಅಮ್ಮ ವ್ರತ
ಅರಿತನದಕೆ ಸತ್ಯಪ್ರಭವ.
ವಿಶ್ವದೂತ ಶಾಂತಿಧಾತ..
ಗುಜರಾತಿನ ಗಾಂಧೀತಾತ.

ಕರಿಯಬಿಳಿಯ ಒಡೆದ ಮನಸು
ಆಫ್ರಿಕಾದಲಿ ಆಯ್ತು ನನಸು.
ಹೋರಾಟ ಕಿಚ್ಚು ದೇಶದುಚ್ಚು
ಎಲ್ಲರಲ್ಲೂ ಅಚ್ಚುಮೆಚ್ಚು.
ಶಾಂತಿ ಬರ್ಲಿ ಬಾಳಿಗೆ
ಸ್ವಾತಂತ್ರ್ಯ ವದರೇಳಿಗೆ.

ಅಸಹಕಾರ ಮಂತ್ರಪಠಿಪ
ಆಂದೋಲನದ ಸುಪ್ರದೀಪ.
ಉಪವಾಸದ ಜಪತಪ
ಭಾರತದ ನಂದಾದೀಪ.
ಗುಂಡು ಮದ್ದು ಸಿಡಿದರು
ಜಗವೇ ಇವರ ಹಂದರು.
ಸೋಲೇ ಇಲ್ಲದ ದೇವರು
ಸ್ವಾತಂತ್ರ್ಯದ ಬಂದರು.

ಸಾಯೋ ಕಾಲ ಬಂದರು
ದೇಹವೆಲ್ಲ ಹರಿದರು
ದೇಶ ಸುತ್ತಿ ಬಂದರು.
ದುಷ್ಠಬೇರು ಕಿತ್ತರು.
ಜಾತಿಮತದ ನೆತ್ತರು
ಬೇರುಸಹಿತ ಹುತ್ತರು.
ಬಡವಬಲ್ಲಿದ ಯಾಕೆಂದರು.
ಎಲ್ಲ ಭಾರತಾಂಬೆ ಸುಪುತ್ರರು.

ಸತ್ಯಹರಿಶ್ಚ0ದ್ರ ಶ್ರವನ್ಕುಮಾರ್
ಬದಲಿಸಿತು ಜೀವನದಾರಿ.
ಅಸಹಕಾರ ಉಪವಾಸ ಸತ್ಯಾಹಿಂಸೆ
ತೋಡಿತು ಬ್ರಿಟಿಷರ ಗೋರಿ.
ಜಲಿಯನ ದುರಂತ ಮನಸಿಗೆ ಆಘಾತ
ಅಂದೇ ಶುರುವಾಯಿತು ಶಪಥ.
ಭಾರತ ಬಿಟ್ಟು ತೊಲಗಿ.. ಮಾಡು ಇಲ್ಲವೇ ಮಡಿ
ಬಿಳಿಮೂತಿಗಳೇ ಭಾರತವ ಬಿಡಿ.
ಹಚ್ಚಿದರು ರಾಷ್ಟ್ರಾಭಿಮಾನದ ಕಿಡಿ
ದಕ್ಕಿತು ಸ್ವಾತಂತ್ರ್ಯಕ್ಕೆ ಮುನ್ನುಡಿ.

ಗೂಡ್ಸೆ ಗುಂಡ್ಗೆ ಹಾರಿತು
ಜಗದ ನಂದಾದೀಪ.
ಈಗಲೂ ಎಲ್ಲರ ಆದರ್ಶದೀಪ.

ಚೌಡ್ಲಾಪುರ ಸೂರಿ✍

 "ಪಾಪದ ಕೂಪ"

ಇಳೆ ಒಣಗಿ ಕೆಂಡ ಕಕ್ಕುತಿಹದು.
ಎಲ್ಲೆಡೆ ಓಯಸಿಸ್ದೇ ಅಬ್ಬರ.
ಬಾಯ್ತೆರೆದ ಭುವಿ ...ಗುಟುಕು
ನೀರಿಗಾಗಿ ಒಡಲ ಬಗೆದರು ಬರಿ.......
ರಕ್ತವಸರುತಿಹದು!! ಇನ್ನೆಲ್ಲಿ ಜಲಾಮೃತ.

ಅಮೃತ ಉಕ್ಕುವ ಬಾವಿನೇ ಬಗೆದೆ.
ಪರಿಸರವ ಕೊಲೆಗೈದು...ಆಹಾ!!!...
ಶಾಮಿಯನ ಕೆಳಗೆ ಹೋಮಹವನ....
 ಕತ್ತೆ-ಕಪ್ಪೆಗೂ ಪೂಜೆ ,ಊರಕಾಯ್ವ ದೈವಸಂಭೂತರಿಗೆ ಹೋಳಿಗೆ ಪರೇವು.
ವಿಕರ ಬುದ್ಧಿಗೆ ದೇವರ ಪಾಠ.

ಹಳ್ಳ ಕೊಳ್ಳಗಳೇ ಗಗನ ಚುಂಬನ 
ಅಪಾರ್ಟ್ಮೆಂಟ್,  ಇನ್ನೆಲ್ಲಿ!! ಜಾಗಬಿಟ್ಟಾರು  ಅಮೃತಹನಿಗೆ.
ಕಣ್ಣರೆಪ್ಪೆ ಮಿಟುಕುವುದರೊಳೊಂದು
ಬೋರ್ವೆಲ್ಗಳ ಹಾವಳಿ !!ಕೊರೆದು.. ಕೊರೆದು..
ಗರ್ಭಪಾತಗೈದರೂ ತೊಟ್ಟಿಕಾದ ಹನಿ
ಸಾಕು ನಿಲ್ಲಿಸು.. ನಿನ್ನಿ ದೌರ್ಜನ್ಯವ!!
ರಕ್ತಾಸುರನಾಗುವ ಮೊದಲು ಜೀವಜಂತುಗಳಿಗೆ
ಒರೆತಯ ತೆಗೆದು ಕೊರೆತವ ನಿಲ್ಲಿಸು.

ಚೌಡ್ಲಾಪುರ ಸೂರಿ✍✍
👤👤👤👤👤👤👤👤👤👤👤👤👤

"ಭಾವಗುಚ್ಚ"

ಇನಿಯಳ ಧ್ವನಿ ತಡಕುತಿಹದು.
ಅದಾವುದೋ !!ಬತ್ತಿದ ಪದಪುಂಜದ ಕೊರತೆಗೆ
ಹುಡುಕಿದರೂ ತಡವಿದರು
ನೆನಪುಗಳ ಮಾಲೆ ಸುತ್ತಿಕೊಳ್ಳುತಿಹದು.

ಬೆಂಬಿಡದೆ ಮೆಲುಕುಗಳ ಬಗೆದಿಹನು
ಸಿಗದೆ ಮರೆಯಾಗುತಿಹದು.
ತಿಳಿಯಾಕಾಶವಾಯ್ತು ಸ್ಮೃತಿ ಪಟಲ
ಕಾಡುವ ನೆನಪುಗಳ ಬುತ್ತಿಗೆ ...
ನೆನಪಿನ ಬಟ್ಟಲೇ ತಡಬಡಿಸುತಿಹದು.

ತಿರುವಿದೆ ಪ್ರೀತಿಪಟಲದ  ಪುಟವ
ಅದರೊಳಗಿಹುದು ಪದಗುಚ್ಚದ..
 ವರ್ಣಲಾಂಕರದ ನುಡಿಜೇನು
ಮಾತಾ ಬದಿಗೆ ಬಂದಿಹದು.
ಕೂಸಿನ ಚೆಲುವ ತೊದಲಂತೆ
ಮೆಲ್ಲನೆ ಉದುರುತಿಹದು ..
ಸಿಡಿಲಬ್ಬರದ ಪಟಾಕಿಯಂತೆ.

ಸೆರೆಯಾತು... ನನ್ನ ಭಾವಾಗುಚ್ಛ.
ಕುಣಿಯಿತು ಹೃದಯಶರಧಿ.

ಚೌಡ್ಲಾಪುರ ಸೂರಿ✍

👤👤👤👤👤👤👤👤👤👤👤👤👤


"ಆಕ್ರಂದನ"

ಗರ್ಭದಲ್ಲಿ ಕೊಲ್ಲಬಾರದಿತ್ತೆ?
ಯಾತಕ್ಕಾಗಿ,....ಈ ಭುವಿಗೆ ತಳ್ಳಿದೆ.
ಜೊಳ್ಳು ಮೊಲೆಯ ಹಾಲ ಹೀರಲಾ?
ಬತ್ತಿದ ಎದೆಯಲ್ಲಿ ನನಗೇನು ಸಿಗುವುದು?  
ಅನುಕಂಪದ ಮಾತು ಹೊಟ್ಟೆ ತುಂಬಿಸದು..

ನಡುಬೀದಿಯಲ್ಲಿ ಹೆತ್ತವಳ 
ಆಕ್ರಂದನ, ಗೋಳು ಪಡಿಪಾಟಿಲು....
ಮೃಷ್ಟಾನ್ನಕ್ಕಲ್ಲ .. ತುತ್ತಿನ ಚೀಲ ಹೊತ್ತು 
ಕೊರಗುತ್ತಿರುವ ಜೀವ.... ನನಗೆಲ್ಲಿ ?..
ಅಮೃತ ನೀಡ್ಯಾಳು ಬತ್ತಿದ ಮೊಲೆಯಿಂದ!!.
ಸುಕ್ಕು ಕಟ್ಟಿದ ಚರ್ಮ ಚೀಪುವುದಷ್ಟೇ....

ಅಕ್ಷಿಪಟಲದೊಳಗೊಂದು ಭರವಸೆಯ ಕಿರಣ.
ಆಕಾಶಕ್ಕೆ ಕೈತಾಗಿಸಿದಂತೆ ದುಸ್ತರ ಬದುಕು.
ಕಾಮದ ನೋಟಗಳಿಗೆ ಹಸಿವಿನ ಕೂಗು ಕೇಳದು.
ಬಡವರ ಕೂಳಿನಲ್ಲಿ ಬದುಕುವರೆ ಹೆಚ್ಚು.
ನರಳಾಟದ ಗೋಳು ಜಗದೊಡೆಯನಿಗೆ ಮುಟ್ಟುವುದೇ?..

ನೆಲೆಯ ಗೂಡಿನಲ್ಲಿ ಜೀವವೇ ಸೊರಗುತ್ತಿದೆ
ಜೀವಂತ ಶವ ಮಾತ್ರ..ಇನ್ನೆಷ್ಟು ದಿನ ದೂಡಲಿ
ರಕ್ತವಸರುವ ಮೊಲೆಯ ಉಣ್ಣುತ್ತ....
ಹುಚ್ಚಾಟದ ಬಿಂಬ ಕಣ್ಣಮುಂದಿಹದು.

ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤


 ಅಕ್ಷರ ನುಡಿ

ತುಂಬಿಹದು ಹನ್ನೆರಡು
ಬದುಕಿನ ಕಾಯಕಕೆ.
ಪೂರ್ವಜನ್ಮಿಗರ ಪುಣ್ಯದ ಕೂಸಿಗೆ
ಅಕ್ಷರ ತೆರನೂಕುವ ಕೆಲಸ.

ಬಿರುಬಿಸಿಲು, ಕೆಂಡ ಕಕ್ಕುವ ಒಡಲು
ನೆತ್ತಿ ಉರಿಯುತಿರೇ ...ಬೇಡಾಪ್ಪ!! ಈ 
ದುಸ್ಸಾಹಸದ ಬದುಕು....
ಕೇಳಬೇಕಾಲವ್ವೆ ಸುಡುವ ಹೊಟ್ಟೆ.
ತಪ್ಪಿತು ತಾಳ ,,,ಹೊರಟಿತು 
ಶಾಲೆಗೆ ಮನಸಿನ ಮೇಳ. 

ಜಗತ್ಮೂರ್ತಿಗಳ ನುಡಿ ಕೊಂಚವೂ
ಕಿವಿಗೋಗದು.
ಮಾತುರುಳಿದಂತೆ ಮನದ ತಲ್ಲಣ.
ಆಡುಭಾಷೆ ಕಿವಿಬಡಿದೊಡೆ
 ಪದಪುಂಜಗಳು ಹೃದಯ ಹೊಕ್ಕವು.
ಮೆಲ್ಲನೆ ....ಮನಸೇ ಕದ್ದೆ.
ಹಾರುವ ಹಕ್ಕಿಗೆ ರೆಕ್ಕೆ ಕಟ್ಟಿ
ಜಗದಕಾಶವ ತೋರಿಬಿಟ್ಟೆ.

ಕಾಲ ಉರುಳಿತು ಶಾಲಾ ಮಂದಿರ
ಬೆಳೆಯಿತು.
 ಅಕ್ಷರದ ಕಿರುತಿ ಎಲ್ಲೆಡೆ ಮೊಳಗಿತು.
ಅಂದದೂರಿಗೆ ಚೆಂದದ ಆರತಿ
ಶಾಲೆಯೇ ಎಲ್ಲದಕೂ ಮೂರುತಿ.
ಜಾತಿಮತವಿಲ್ಲ ಬಡವ ಸಿರಿವಂತಿಕೆ
ಸುಳಿದಿಲ್ಲ....
ನೆಟ್ಟ ಸಸಿ ಫಲ ಬರುವಂತೆ..
ಪುಟ್ಟ ಪರಿಸರದ ಗೂಡ ಕಟ್ಟಿಹರು
ಅವರೇ..ನನ್ನಿ ಪೂಜಾಫಲಗಳು.

ಸಾರ್ಥಕದ ವೃತ್ತಿಗೆ ಅಕ್ಷರದ ಪಟ್ಟ
ಬದುಕಿನುದ್ದಕ್ಕೂ ಅನುಭವವೇ ಪಾಠ.
ಬೆಳೆಯಲಿ ..ಮೊಳಗಲಿ..ಶಿಕ್ಷಣದ ಬೆಟ್ಟ.
ಅದಾ ..ತುದಿ ಏರದೇ ಬಿಡೆನು.
ಇದೆ ನನ್ನ ಪಟ್ಟಾ...

ಚೌಡ್ಲಾಪುರ ಸೂರಿ✍
👤👤👤👤👤👤👤👤👤👤👤👤👤


 "ಕೈಭೂತ"🤳🤳

ಅದೊಂದು ಕಾಲವಿತ್ತು
ನಿತ್ಯ ಯೋಗ,ಧ್ಯಾನದ ಜಪ....
ಎಲ್ಲೆಡೆ ತೇಲುವ ಉಲ್ಲಾಸ, ಸಂತಸ..
ಇಳಿವಯಸ್ಸಿನವ ಹರೆಯದ ಕುಡಿಯಂತಿದ್ದ .

ಇಂದು ಕೈಯಲ್ಲೊಂದು ಜಗವ ಮರೆಸುವ
ಜಂಗಮವಾಣಿ...
ಕಾಯಿಪಲ್ಲೆಯಂತೆ ಸಿಗುತಿಹದು
ಬೆರಳ ತುದಿಯೊಳಗ
ಜಾಲತಾಣಗಳ ಸದ್ದಿಲ್ಲದಾಟ.

ಒಳಿತು ಕೆಡುಕೆ ವೈಶಿಷ್ಟ್ಯ.
ತಾನೊಂದು ಬಯಸಿದರೆ
ಬೇರೆಯದರ ಗುಡ್ಡೆರಾಶಿ.
ಮಂಗನ್ ಕೈಲಿ ಮಾಣಿಕ್ಯದಂತೆ
ಇದರುಚ್ಚು....
ಜೋತುಬಿದ್ದ ಚಿಗುರು ಮೀಸೆ ಕುಡಿಗಳು.
ಅಯ್ಯೋ!!! ನಾವೇನು ...ಎನ್ನೋ ಲಾಲನಿಯರು.
ಕೂಸಿಗೂ ಹಠ ,ಜೋತುಬಿದ್ದ ಗಡ್ಡಕ್ಕೂ ಸಂಕಟ.

ಬೀಗಬಿಜ್ಜರ ನಂಟು ಹಳಸಿದ ದಂಟು
ಮಾತಿಲ್ಲ ..ಕಥೆಯಿಲ್ಲ ...
ಬರಿ ಮೌನದ... ನಗು ಅಳು.
ಹೊಲಿಗೆಗೂ ನಿಲುಕದಾಯ್ತು 
ಸಂಬಂಧ ಸರೋವರ.
ಕಳ್ಳಕಾಕರಿಗೂ ಇದರಂಟು.
ನಿಂತಲ್ಲೇ ಸುಳ್ಳು ,ಮೋಸ ಪಥ.

ಸ್ವಪಟದ ಬಯಕೆ ಜೀವವೇ ತಿಂದಿತು
ಮಾತು ಮೌನ ಕೆಲಸ ಗೌಣ
 ಮೂರ್ಖ ಬೆಸುಗೆ ಮಲಿನ ಮನಸು
ಹಿತವಿರಲಿ  ಮಿತವಿರಲಿ
ಆರೋಗ್ಯದ ಅರಿವಿರಲಿ.

ಚೌಡ್ಲಾಪುರ ಸೂರಿ.✍
👤👤👤👤👤👤👤👤👤👤👤👤👤


 "ಹೃದಯಾರ್ತನಾದ"

ಬಗ್ಗದ ಕಂಬನಿಗೆ ನನ್ನೊಲವು ನಲುಗಿತು.
ಉಮ್ಮಳಿಸಿ ಉಮ್ಮಳಿಸಿ ಅಳುವು
ನೋವಿನ ತಿವಿತಕೆ.
ಸ್ತಬ್ಧವಾದ ಹೃದಯಗೂಡು.
ಅಮಲೋ? ಅಹಂಕಾರದ ಪ್ರೀತಿಯೋ?.

ನೆನಪುಗಳು ಕುಕ್ಕುತಿರೆ
ಕೆ0ಪ್ಯಾರೇವು ಅಕ್ಷಿಪಟಲ.
ಪ್ರೇಮಮಂದಿರದ ಆರ್ತನಾದ!!
ಚೀರಿದರು ಕಿರಿಚಿದರು ಕಣ್ಸನ್ನೆಯಲಿ
ನಿಲ್ಲದಾಗಿದೆ ಹಂಬಲಹನಿ.
ಬಯಸಿ ಬಯಸಿ ಮೆತ್ತಗಾಗಿದೆ
ಮುಗ್ದ ಮನಸ್ಸು.

ನನ್ದುಂಬಿಯ ಮೆಲುಕುಗಳ ಹಾವಳಿ
ಬಡಿತವೆಬ್ಬಿಸಿದೆ.
ಬಿರುಗಾಳಿ, ಸುನಾಮಿ ಬೀಸಿದರು
ಕೊಚ್ಚಿ ಹೋಗದಾಗಿದೆ ಸ್ಮೃತಿಪಠಲ.
ನೆರೆಹಾವಳಿಯಾದ್ರು !!! ಬರ್ರ್ಬದ
ನನ್ನನ್ನೇ ಕೊಚ್ಚಲು.
ಇನ್ನೆಷ್ಟು ಕಾಯಲಿ ಸೆರೆಯಾಗಲು.
ಬಂಧಿಸು ಇಲ್ಲ ಕೊಂದಿಸು .ನುಚ್ಚು ನೂರುಗಿಂತ
ಹುಚ್ಚುರೇ ಲೇಸು.

ಹೊಡೆದಿಯ ತಾಳ್ಮೆಯ ಕಟ್ಟೆ
ಭಾರವಾದ ಹೆಗಲಿಗೆ ಜಾರುವೆಯೇ?
ಮಡಿಲು ಬೇಡುವಾಸೆ.ಒಲವ ಅರಳಿಸು
ನೆನಪ ಬುತ್ತಿ ಬಿಚ್ಚುಣ್ಣು.
  ಸೇರುವಾಸೆ ಚಿಗುರೊಡೆಯಬಹುದು.
ಮೌನದೂರಿಗೆ ಸೇರುವ ಮುನ್ನ
ಬಡಿತವಾಲಿಸುವೆ.
ಸಂತಾಪವೋ?.. ಬೆಳೆದ ಪ್ರೇಮವೃಕ್ಷಕೆ 
ಮಂದಾಸ್ಮಿತ ಒಲವ ಹನಿಯೋ?.
ಕಾಯುವೆ ಚಣವೊತ್ತು ...ಉತ್ತರಕಲ್ಲ.
ಮರಳಿಗೂಡಿಗೆ!! ಇಲ್ಲ ಕಾಣದೂರಿಗೆ.

ಚೌಡ್ಲಾಪುರ ಸೂರಿ.✍

👤👤👤👤👤👤👤👤👤👤👤👤👤

"ಗರಿ ಮೂಡಿತು"
ಭಾವಪರವಶವಾಗದಿರಿ ನಿಮ್ಮೊಳಗೊಬ್ಬ 
ಸೇವಕನಿಹನು.
ಹೃದಯದಗೂಡಲಿ ಭಾರತಾಂಬೆಯ ಮಕ್ಕಳಿಹರು
ಜಾರಿದ ಕಂಬನಿ ಹೃದಯ ಕುಕ್ಕಿತು.

ನಮಗೂ ತಿಳಿಯಿತು ಶ್ರಮದ ದುಡಿಮೆ
 ತಿರಂಗ ಹಾರುವ ಕನಸೋಡಿದಿತ್ತು.
ಹಗಳಿರುಳೆನ್ನದೆ ಅದೆಷ್ಟೋ ..ಬುದ್ದಿಚಾತುರ್ಯರ 
ಜ್ಞಾನ ಕೆಲಸ.
ಭ್ರಮನಿರಸನವೆಂಬ ಕೊರಗು.

ಭಾವನಾ ತೋಟ ಹೊಡೆದಿತು ಜಗ್ಗದಿರಿ.
ನಮೆಮ್ಮೆ ವೈಚಾರಿಕ ನಕ್ಷತ್ರಗಳು ನೀವು
ವಿಶ್ವವೇ ನಮ್ಮತ್ತ ತಿರುಗಿಸಿಹಿರಿ
 ಭಾರತಾಂಬೆಯ ಮಡಿಲೊಳಗೆ ಇಸ್ರೋ
ಪರಿವಾರ.
"ಸೋಲೇ ಗೆಲುವಿನ ಮೆಟ್ಟಿಲು" ತಟ್ಟುತಿರಲಿ
ಒಲವಾಂತರಂಗವ .

ಒಂದಿಂಚೆ ಮುಳುವು ಚಂದ್ರನ ಮುಟ್ಟಲು
ಜನಿಸಲಿ ಮತ್ತೊಬ್ಬ ವಿಕ್ರಮ.
ಆತ್ಮಬಗೆದೇಳುವೆವು ಮುಟ್ಟದೊರೆತು
ಕನಸು ವಿರಮಿಸದು.
ಜಗವ ಗೆಲ್ಲುವ ಪುಣ್ಯನಾಡಿಗೆ
ಲೆಕ್ಕವಿರದು ಶ್ರಮಕೆ.

ಪ್ರಯತ್ನದ ಫಲವುಂಡು ಕೀರ್ತಿ
ಹಾರಿಸೋಣ.
ಇಂದಿನಿಂದಲೇ ವಿಕ್ರಮ ಮರುಜನ್ಮ
ಸಾದಿಪೆವು ನಾವು ಭಾರತೀಯ ಕುಡಿಗಳು.

 ಚೌಡ್ಲಾಪುರ ಸೂರಿ✍ 
👤👤👤👤👤👤👤👤👤👤👤👤👤


"ಕೆಡಿಸದಿರು ಜಲಾಮೃತ"

ದೇವಲೋಕದ ಮಹಿಮೆಯೋ ...ನನ್ನಿ ಮೊಗಕೆ.
ಪಾರ್ವತಿ ಈಶ್ವರ ಸುತನೆಂಬುದೇ ಮನಕೆ.
ಕಡುಬಿನ ಹೊಟ್ಟೆಗೆ  ಶಶಿಯ ಚೇಷ್ಟೆ
ಹರಿದ ಉದರಕೆ ಉರಗವೇ ಆಸರೆ.
ನನ್ನನೆಳೆಯಲು ಮೂಷಿಕ ವಾಹನ.
ಮಹಿಮೆಯ ಸಾರುವ ಮನ್ವಂತರರು.

ಜಗದಗಲ ಮಿಗಿಲಗಲ ನನ್ನಿ ವೈಭವ
ವರ್ಷವು ಶ್ರಾವಣದಲಿ ನನ್ನದೇ ಅಬ್ಬರ.
ತಿಲಕರೆಂದರು  ಏಕತೆಯ ಮೂರ್ತಿ
ಐಕ್ಯತೆಗೆ ನಾನೇ ಸುಂದರ ಸ್ಫೂರ್ತಿ.

ಮೀರಿಹದು ಜಾತಿಮತದ ಭಕ್ತಿ
ರಾಷ್ಟ್ರ ಕಟ್ಟುವ ದಿವ್ಯಶಕ್ತಿ.
ಸಂದೇಶದ ಹೂರಣವಿಟ್ಟು
ಒಗ್ಗೂಡಿಸಲು ಬಂದಿಹನು ನಾನು.

ವಿಜ್ಞೆಶ್ವರ ಏಕದಂತ ಗಜಾನನ ಎಂಬೆಂಟ ಹೆಸರು
ಲಡ್ಡು ಕಡುಬು ಚಕ್ಕಲಿಗೂ ನಂಟು.
ಹಾಲ್ಗಲ್ಲದ ,ಪಡ್ಡೆಯವರಿಗೂ ನನ್ನದೇ ಅಂಟು
ಓಣಿ ತುಂಬೆಲ್ಲ ನಗಾರಿ ನೈವೇದ್ಯದ ಗಂಟು.

ಎಲ್ಲೆಡೆ ಸಡಗರ ಸಂಭ್ರಮ ಹಸಿರ ತೋರಣ
ಬೀದಿ ಬೀದಿಗಳಲಿ ಗಣಪನ ಜಪ.
ಭವ್ಯ ವೇದಿಕೆಗೂ ಕಳೆ ತುಂಬಿಹರು
ಸಂಗೀತ ಸುಧೆ ಝೇಂಕಾರಿಸುತಿಹದು.
ಗಂಟೆ ನಿನಾದಗಳು ಮೊಳಗುತಿಹದು.

ಭಕ್ತಿ ಸುಧೆಗೆ ಮೆಚ್ಚೇನು ನಾನು
ಪರಿಸರ ಪೋಷಕರಾಗಿ ನೀವು
ಪ್ಲಾಸ್ಟರ್ ಪ್ಯಾರಿಸ್ ಬಿಟ್ಟುಬಿಡಿ
ಮಣ್ಣಿನ ಗಣಪನೇ ಗಟ್ಟಿಬಿಡಿ
ಜಲಕೆ ವಿಷವ ಹಾಕದಿರಿ
ಪರಿಸರ ರಕ್ಷಣೆ ಎನ್ನುತ್ತೀರಿ.

ಚೌಡ್ಲಾಪುರ ಸೂರಿ.✍✍
👤👤👤👤👤👤👤👤👤👤👤👤👤



"ಅಹಂ"

ಕೋಲ್ಮಿಂಚಿನ ನಾಚಿಕೆಯ ಮುತ್ತು
ನಯನಪಟಲವನ್ನೇ  ಮುತ್ತಿಹದು.
ತುದಿಯಂಚಿನ ನಗುವೇ
ಮನಕೆ ಬೀಗ ಜಡಿದಿಹದು.
ಒಲವಿಗೆ ಸೆರೆಯಾಗಿ.. ಹೃದಯಕ್ಕೆ
ಖೈದಿಯಾಗಿಹನು.

ಕನಸಿನ ಗೋಪುರವ ಕಟ್ಟಿ
ಹೃದಯ ರಥವನು ಎಳೆಯುತ...
ಪುಷ್ಪದೇಗುಲದಲಿ ಮಿಂದು
ಭಾವಾಂತರ0ಗದ ತೋಟದಲಿ ನಲಿಯೋಣ.
ಕದ್ದಹೃದಯಕೆ ಗೆಜ್ಜೆಕಟ್ಟಿ
ನಿನಾದ ಹೆಜ್ಜೆಯ ಹಾಕೋಣ.

ಡಬಡಬ.. ಎನುವ ಪುಟ್ಟಗೂಡಿಗೆ
ಮೆಲ್ಲನೆ ಕನಸ ರೆಕ್ಕೆ ಕಟ್ಟೋಣ.
ಸದ್ದಿರದೆ...ಪುಷ್ಪಕ ವಿಮಾನವಿಳಿಸಿ
ಭಾವನಾ ಲೋಕದಲಿ ಪಯಣಿಸೋಣ.
ಅಂಗೈಲಿ ನಿದಿರೆಯ ಕೂರಿಸಿ
ಮುಂಗುರುಳು ತಡಕದ  ಜಾದುಗೈಯೋಣ.

ಒಡತಿ ಇದಾವುದೂ ...ಸಟೆಯಲ್ಲ.
ಕನಸಿನ ಭ್ರಮೆಯಲ್ಲ ....
ಹುಚ್ಚಾಟದ ಪಂಜರವಲ್ಲ..
ನೆಟ್ಟ ಸಸಿ ನನದೆನ್ನುವ ಅಹಂ.
ಪಾದವು ಇಳೆಗೆ ಸೋಕದಂತೆ 
ಚಂದ್ರಲೋಕದ ಜಾಗವೇ ಕೊಂಡಿಹನು.

ಚೌಡ್ಲಾಪುರ ಸೂರಿ.✍✍
👤👤👤👤👤👤👤👤👤👤👤👤👤

 "ನನ್ನ ದೇವರು"

ಜಗದರಿವಿಲ್ಲದ  ಕಂಗಳು,
ಅರಳುವ ಮೊಗ್ಗುಗಳು.
ಬಾನಂಗಳದ ಶುಕ್ರನಂತೆ,
ನಳನಳಿಸುವ  ಮನ್ಮಥರು.

ಗರ್ಭಗುಡಿಯೊಳ್ ಇರದ,
ದೇವರ ಮೂರ್ತಿಗಳು.
ಪಾಪ-ಪುಣ್ಯದ ಗೋಜಿಲ್ಲದ,
ಪುಣ್ಯಾತ್ಮರು.

ಪಾದ ಸ್ಪರ್ಶ ಸೋಕಿದೊಡೆ,
ನವ ಚೈತನ್ಯ ಉಕ್ಕಿಸುವರು.
ಹೆಜ್ಜೆ ಹೆಜ್ಜೆಗೂ ಮತ್ತೇನೋ,
ಹೊಸತು ಹುಡುಕುವರು.

ತೊದಲಿಸಿದರು,ಬದಲಿಸಿದರು,
ಜಗಕೆ ದಿಕ್ಕು ತೋರುವರು.
ಆಸೆ-ಆಮಿಷವಿಲ್ಲದ ನಂಟು,
ಗೊತ್ತಿಲ್ಲದ ಭಂಟರು.

ಜಾತಿ,ಮತವ ಬದಿಗೊತ್ತಿ,
ಬೆರೆಯುವ ಹೃದಯಶೀಲರು.
ಮಾತಲ್ಲಿ,ಕಣ್ಣಲ್ಲಿ.
ನಿಸ್ವಾರ್ಥದ ಕುರುಹುಗಳು.

ಭಾವನಾ ಲೋಕದ,
ಭಾವಬಿಂದುಗಳು.
ಅಹಂಕಾರದ ಹಮ್ಮಿಲ್ಲ,
ಸದಾಚಾರ ಮರೆತಿಲ್ಲ.

ಮುದ್ದಾದ ನಗುವಿನಲ್ಲಿ,
ಮದರಂಗಿ ಹಚ್ಚುವರು.
ಪಟಪಟನೆ ಪಠಿಸುವ,
ಚಿನಕುರುಳಿ ಚಿಗರೆಗಳು.


ರಚನೆ:ಚೌಡ್ಲಾಪುರ ಸೂರಿ✍
👤👤👤👤👤👤👤👤👤👤👤👤👤

ಕಮ್ಮಟ.

ಬರಿ ಕಮ್ಮಟವಲ್ಲ.ಕಾವ್ಯದ ರಸವ
 ಹೆಕ್ಕುವ  ಕಮ್ಮಟ.
ಯುವ ಕವಿಗಳ ತೀಡುವ ಕಮ್ಮಟ.
ಚಿಂತಕರ ಚಾವಡಿಯಲ್ಲಿ,ಸಾಹಿತ್ಯದ
ಅರವಟ್ಟಿಗೆ ಇಟ್ಟು.
ಬಾಯಾರಿ ಬಸವಳಿದ ಕವಿ ಪುಂಗರಿಗೆ,
ಕಾವ್ಯಾಮೃತ  ನೀಡುವ ಕಮ್ಮಟ.

ಹಸನಾಗ ! ಹಂಬಲಿಸುವ, 
ಸಾಹಿತ್ಯದ ಮೊಳಕೆಗಳಿಗೆ.
ಪದಸಮುಚ್ಚಯ ಬಿತ್ತುವ ಕಮ್ಮಟ.
ಭಾವನಾ ಗೋಪುರಕ್ಕೆ ದೂಡಿ,
ಒಡಲೊಳು ಕುಣಿದು,ಬರಹದ
ಪಡಿಯಚ್ಛಾ ಗಿಸುವ ಕಮ್ಮಟ.

ಬದುಕಿನ ಬವಣೆಯನ್ನು,
ಸಾಮಾಜಿಕ ಸ್ತರದೊಳಗೆ.
ಇಂಚಿಂಚು ಬಿಡದೆ,ಲಿಪಿಸಿದ, ದಿಗ್ಗಜರ ದಿಗಂತವನು..
ಪಸರಿಸುವ ಕಮ್ಮಟ.
ಕಾವ್ಯ ಮೃಷ್ಟಾನರಸಿಕರ ಔತಣ ಕೂಟವಿದು.
ಬರಿ ಕಮ್ಮಟವಲ್ಲ, ಕಾವ್ಯದ ರಸವ
ಹೆಕ್ಕುವ ಕಮ್ಮಟ.
ರಚನೆ:ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤


"ಮೌನ"

ಅವಳ ಮೌನ,
ನನ್ನ ಮಾತು.
ಗೊಂದಲ ಗುಡಾದ ಮನಸ್ಸು.
ಬುಡವಿಲ್ಲದ ಹೃದಯ,
ಏಕೋ,ಏನೋ...

ಅವಳ ದಾರಿ,
ನೀರವ ಮೌನ.
ಬಿಕೋ ಏನ್ನುತ್ತಿರುವ  ಹೃದಯ ಮಂದಿರ.
ಬೆವರುವ ದೇಹ,
ಸನಿಹ ಬಂದಳೆನ್ನುವ ಕನಸು.

ಚಡಪಡಿಕೆಯ ತೊದಲ್ನುಡಿ..
ಮಾತಿಗೆ ದನಿಗೂಡಿಸಲು ಕಾರಣ ಸಿಗದು.
ಹಗಲಿರುಳು ಅವಳದ್ದೇ ಧ್ಯಾನ,
ಕೊಂಚ ಬಿಡುವಾದರು ಅವಳ ಸ್ಮೃತಿ,
ಎಲ್ಲದಕ್ಕೂ ಅವಳ ಮೌನವೇ ಉತ್ತರ.

ತಡಬಡಿಸಿದ ನನಸೇ0ಬ ಕನಸು.
ಚಿಗರಿತೆಂದರೆ,ಮತ್ತೆ ಮುದುಡಿತು.
ಆಗೊಮ್ಮೆ ,ಇಗೊಮ್ಮೆ ಮಾಯಜಾಲ.
ತುಟಿಯಂಚಿನಲಿ ಮಾತಿದ್ದರು,
ಮೌನಕ್ಕೆ ಶರಣು.
👤👤👤👤👤👤👤👤👤👤👤👤👤


"ಭಾರತೀಯ ಸುಪುತ್ರರು"

ಗಡಿಗಡಿಗಳಲ್ಲೂ ಹದ್ದಿನಕಣ್ಣು.
ಕಣಕಣಗಳಲ್ಲೂ ದೇಶಾಭಿಮಾನ.
ಶತ್ರುಗಳ ಗುಂಡಿಗೆ ಭಗೇವ,
ಪ್ರಚoಡ ವೀರಕಣ್ಮಣಿಗಳು.

ನರನಾಡಿಗಳಲ್ಲೂ ಭಕ್ತಿ ಪರಾಕಾಷ್ಠೆ.
ಕಣ್ಣಲ್ಲೇ ಜ್ವಾಲೆ ಉಕ್ಕಿಸುವ ,ಜ್ವಾಲಾಮುಖಿಗಳು.
ಕುಹಕಿಗಳ ಗುಂಡಿಗೆ ಎದೆಯೊಡ್ಡಿ,
ರಕ್ತ ಹೀರುವ ವೀರ ಸೇನಾನಿಗಳು.

ಮನೆಯೊಡತಿ ,ಕುಟುಂಬವೇಣಿಸದೆ..
ಕಾದಾಡಿ ಭಾರತಾಂಬೆಯ ರಕ್ಷಿಸುವ,ರಕ್ಷಣಾಧೂತರು.
ಪ್ರಾಣ ಪಕ್ಷಿ ಹಾರಿದರೂ, ಧ್ವಜವೆತ್ತಿ..
ವಿಜಯದುಂಬಿ ಮೊಳಗಿಸುವರು.

ಹಿಮದ ಮನೆಯಲ್ಲೂತರು,
ಕೊರೆವ ಚಳಿಗೆ ಬೆನ್ನೊಡ್ಡಿದರು.
ಬಿಸಿಲಿಗೆ ಬಸವಳಿದರು.ಅಂಗೈಯಲ್ಲಿ 
ಇಟ್ಟು ಭಾರತಾಂಬೆಯ ಪೂಜಿಸುವರು.
ಇವರೇ ಭಾರತಾಂಬೆಯ ಸುಪುತ್ರರು.
🙏🙏🙏🙏🙏🙏🙏

ರಚನೆ:ಚೌಡ್ಲಾಪುರ ಸೂರಿ.✍
👤👤👤👤👤👤👤👤👤👤👤👤👤


 'ನಿಮಗೂ ಮುಪ್ಪು ಬರುತ್ತೆ?...

ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ,
ಕಿಂಚಿತ್ತು ಬೇಸರಿಸದೆ ದುಡಿದೆವು.
ಕೊಟ್ಟಷ್ಟು ಹುಲ್ಲು, ನೀಡಿದಷ್ಟು ನೀರು,
ಅಂಗೈಯಲ್ಲಿ ಜೀವವಿಟ್ಟು ಬದುಕಿದೆವು.
ತಿನ್ನೋರ ಬಾಯಿಗೆ ದೂಡಲು...
ಯೌವ್ವನ ಮಾಸಿತು ಅನ್ನೋ ಕಾರಣ ಸಾಕೆ?.


ಏಕರೆಗಟ್ಟಲೆ ಹೊಲ ಉತ್ತೆವು,
ತಿಂದುಂಡು ಮಾರುವಷ್ಟು,ಫಸಲ ಕೊಟ್ಟೆವು,
ಸಾಲದ ಕುಣಿಕೆ ಭಾರವಾಯಿತೆಂದು,
ಹಗಲಿರುಳು ಲೆಕ್ಕಿಸದೆ ,ವಿರಾಮಕ್ಕೆ ಮಿತಿಯಿಟ್ಟು!
ನಿನ್ನಿ ಬದುಕಿಗೆ ಹೆಗಲೊಡ್ಡಿದ್ದು,...
ಹೇಗೆ? ..ಮರೆತು ಬದುಕುವೆಯಾ!.

ಭೀಕರ ಬರಗಾಲ ,ನಮಗೂ ಅರ್ಥವಾದಿತು.
ಹಸಿರ ಬದಲಿಗೆ ,ಕಸಕಡ್ಡಿ ತಿಂದು ಜೀವಹಿಡಿದೆವು.
ಭೂತಾಯಿ ಒಣಗಿ ,ಬೂದಿಯೆದ್ದರು..
ಧುಳೋಳಗೆ ಉಸಿರಕಟ್ಟಿದ್ದರು,,,
ಕಾಯಕದಲ್ಲೇ ಕೈಲಾಸ ಕಂಡವರು ನಾವು.
ಯೌವ್ವನ ಮಾಸಿತು ಅನ್ನೋ ಕಾರಣವೊಂದೇ?
ಸಾಕೇ!. ತಿನ್ನೋರ ಬಾಯಿಗೆ ಆಹಾರವಾಗಲು.
ನಿಮಗೂ ಮುಪ್ಪು ಬರುತ್ತೆ.ಅಲ್ಲವೇ?....

ರಚನೆ:ಚೌಡ್ಲಾಪುರ ಸೂರಿ.:
👤👤👤👤👤👤👤👤👤👤👤👤👤

 "ಕಾಡುವ ನೋವು"

ಜಗವರಿಯದ ಮೂರ್ಖರಾ!
ಹೆಣ್ಣು ಶಾಪವಲ್ಲ,ಜೀವನದ ಸ್ತoಭ.
ವಿಶ್ವದ ಕಣ್ಣು,ಸ್ಫೂರ್ತಿಯ ಸೆಲೆ.
ಬದುಕಿನ ನೆಲೆ.ಅಂತರ್ಯದ ಮಿಡಿತ.

ಜನಿಸುವಾಗಲೇ ನಿಮ್ಮಿ ರೋಧನ,
ತಾಯ್ತನದ ನೋವು ಅರಿವಿದೆಯೇ?..
ಹೆತ್ತು ಬೆಳೆಸುವ ಸಂಕಟ,ನಿಮಗೇನು ಗೊತ್ತು?
ಬರಿ ಖಾಲಿ ಮಾತು!..ಅವಹೇಳನ,ಚುಚ್ಚುನುಡಿ.

ಯಾವುದಕ್ಕೂ ಕಮ್ಮಿ ಇಲ್ಲ,
ಎಲ್ಲದರಲ್ಲೂ ಮುಂದು.ಪಾತ್ರ ನಮ್ದು!
ಹೆಸರು ನಿಮ್ಮದೇ?..ಅವಕಾಶಗಳಿಗೂ ಕಡಿವಾಣ,
ಹೆಣ್ಣು ಎಂಬ ರಾಗ.ಸೊಗಳಾಡಿತನ ಮಾತೇಕೆ?..

ಸೊರಗಿದರು ,ಕೊರಗಿದರು, ಅತ್ತರು-ನಕ್ಕರು.
ಕಾರಣವೂ ನೀವೇ.
ಅರಳುವ ಪುಷ್ಪಗಳು ಬಾಡಿದ್ದು,
ನಗುವ ಕಂಗಳು ಮೂಖವಾಗಿದ್ದು,
ಜನಿಸಲೊಲ್ಲೆ ಎನ್ನುವ ಹಸಿಗೂಸುಗಳು.
ಕಾಡುವ ಸಮಾಜಕ್ಕೆ ಮುಖಮಾಡಲು.

ರಚನೆ:ಚೌಡ್ಲಾಪುರ ಸೂರಿ.✍
👤👤👤👤👤👤👤👤👤👤👤👤👤


"ಪುನರಾಗಮನ"

ಅಂತಃಕರಣದ ಹೃದಯ ಮೃದಂಗ!
ಪ್ರೇಮಗಾಯನ ಮಾಡುತ್ತಿರೆ,
ಬೋಳಾದ ಮರಕೆ ಯೌವ್ವನ ಬಂದು
ಹುಚ್ಚೇದು ಕುಣಿದಂತೆ,ನನ್ನಿ ಒಡಲು..
ಇಂದೇಕೋ ಅಂಕೆಮೀರಿದೆ.

ಹಳೆದೇ ಹೊಸ ಪ್ರೇಮಕಾವ್ಯವಾಗಿದೆ ಇಂದು.
ಕಟ್ಟಿದ ಗೂಡಿಗೆ ಸುಣ್ಣ ಬಣ್ಣದ ಮೆರಗು.
ತೂತು ಬಿದ್ದ ಬಿಲಗಳಿಗೆ,ಸಾವಧಾನದ ಲೇಪನ.
ಮರೀಚಿಕೆಯಾಗಿದ್ದ ಪ್ರೀತಿಭಾಷ್ಯಕೆ ,
ಹೃದಯದೇಳೆ ಲಭಿಸಿದೆ.

ಜಡ್ಡಿಡಿದು ಮಲಗಿದ್ದ,ಮೂಲೆಯಲ್ಲಿ
ಕೊರಗಿದ್ದ,ನಗುವನ್ನೇ ತೊರೆದಿದ್ದ ನನ್ನಿ ಮನಕೆ , ನನ್ನವಳ ಪುನರಾಗಮನ.
ಹಳೆ ನೌಕೆಯಲಿ ಅದೇ ಪ್ರೇಮಪಯಣ!
ಗತಿಸಿದ ದಾರಿಯಲಿ ಹೊರಟಿದೆ.

ರಚನೆ:ಚೌಡ್ಲಾಪುರ ಸೂರಿ✍
👤👤👤👤👤👤👤👤👤👤👤👤👤


: ನಿನ್ನವರು ಯಾರಿಲ್ಲ?.

ಯಾರಿಹರು ನಮ್ಮವರೆಂದು.
ಧನದ ಹೊಳೆ ಹರಿದರೆ, ಅಲ್ಲಿಹರು.
ಬಡತನವಿರುವಲ್ಲಿ ಅನುಕಂಪವಷ್ಟೇ!.
ಬಡಾಯಿ ಮಾತುಗಳು,ಮೆಚ್ಚುಗಗೆ.

ಸೋತಾಗ ಮರುಗವರು,ಬರೀ.. ನಾಟಕೀಯತೆ.
ಗೆದ್ದಾಗ ನನ್ನವನು,ನನ್ನವರು,ನಮ್ಮವರು.
ಸಮಸ್ಯೆಗಳಿಗೆ ಧೂಡಿ, ಕೈಕೊಡವವರೇ  ಹೆಚ್ಚು.
ಇದ್ದಾಗ ತೆಗಳುವರು,ಸತ್ತಾಗ ಹೊಗಳುವರು.

ಬಂಧು,ಬೀಗರು ದುಡ್ಡಿದ್ದರಷ್ಟೇ,
ಸ್ವಾರ್ಥದ ಅಮಲಿನಲ್ಲಿ ತೇಲುವರು.
ಕಬಳಿಕೆಗೆ ಹಪಹಪಿಸುವರು.
ಸಮಯ ಕಾಯುವರು ,ಜೀವಂತ ಸಮಾಧಿಗೆ.

ಉಣ ಬುತ್ತಿಗೂ ,ದಾಹ ಜಲಕ್ಕೂ ಲೆಕ್ಕ..ಅವರದಿದ್ದಾಗ.
ಲಕ್ಷೋಪಲಕ್ಷ ಕೂಡಿಟ್ಟರು,ಬೇರೆಯವರದೆ ಚಿಂತೆ
ಸತ್ತಾಗ, ಶವಕ್ಕೂ ಬೆಲೆ ಕಟ್ಟವರು,ಬರೀ ಡಂಭಾಚಾರ.
ಯಾರಿಹರು? ನಿನ್ನವರೆಂದು...ಮನುಕುಲದಲ್ಲಿ.

ರಚನೆ:ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤


"ಪಯಣ ಹಾದಿ"

ಹಸಿರುಗುಚ್ಚಿನ ಪರಿಸರ.
ಕಾರ್ಮೋಡದ ಆಗಸ.
ಕಣ್ಮನಸೆಳೆವ ಸಾಲು ಸಾಲು ವೃಕ್ಷ ವನ.
ಸ್ವರ್ಗದ ಜೊತೆ ಪಯಣವೆನ್ನುವ ಭಾಸ.

ತೊಟ್ಟಿಕ್ಕುವ ಬಾನು. ಕೈಯೊಡ್ಡಿದ ಭುವಿ.
ದಾರಿಗುಂಟ ಜೀವಜಲಗಳ ರಾಶಿ.
ಎಲ್ಲೆಂದರಲ್ಲಿ ಹಚ್ಚಹಸಿರಿನ ಮೈಮಾಟ.
ಸುಗಂಧ ಸೂಸುವ ಪುಷ್ಪ ಘಮಲು

ಗರಿಬಿಚ್ಚಿ ಕುಣಿಯವ ಗಿಡಮರ.
ಸುಯ್ಯನೇ ಬೀಸುವ ತಂಗಾಳಿ.
ಜೀವರಾಶಿಗಳಿಗಂತೂ ಹಬ್ಬವೇ ಹಬ್ಬ.
ಧರೆಗಿಳಿದ ಇಂದ್ರಲೋಕ.

ತೆನೆಬಿಚ್ಚಿ ತೂಗುವ ಪೈರು.
ಚಿಗುರು ತುಂಬಿಹ ಬದುಬಂಕಗಳು.
ಸೌಂದರ್ಯದ ಸೊಬಗಿಗೆ,
 ಪಯಣದ ಹಾದಿ ಜಾದುಲೋಕದಂತಿತ್ತು.

ರಚನೆ:ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤


 "ತೊಲಗಲಿ"

ಜಡ್ಡು ಗಟ್ಟಿದೆ ಹೃದಯ ಕುಟೀರ.
ಜಡತ್ವ, ಅಹಂ,ತುಂಬಿದೆ ಅದರೊಳಗೆ.
ಮೆಟ್ಟಿ ನಿಂತಿದೆ ಯವ್ವೌನದ ಅಹಂಕಾರ.
ಜಕಣಾಚರಿ ಕೆತ್ತಿದರು ಜೀವಬರದಂತೆ.

ಪ್ರೇಮಲಾಲಿತ್ಯವಾಡಿದರೇನು?ರಪರಪನೆ ಪ್ರಾಣಪಕ್ಷಿ ಬಡಿದರು ಸದ್ದಿಲ್ಲದೆ,ಊನವಾದ ಮನ.
ಕಿಂಚಿತ್ತೂ ಅಳುಕದೆ,,ಮೌನದ ಗೂಡೊಳಗೆ ಸ್ತಬ್ಧ.
ಪ್ರೇಮದ್ವಾರವ ತಟ್ಟಿದರು..ಮಾತಿಲ್ಲ-ಕಥೆಯಿಲ್ಲ...


ಸುಕೋಮಲೆಂಬ ವ್ಯಾಮೋಹವ,ಮದವ..
ಪ್ರೀತಿವೃಕ್ಷದೊಳ್ ಕೂತರು,ನಿಸ್ತೇಜದ ಚಿಂತೆ.
ಮರ್ಕಟದ ಮನಸೋಮ್ಮೆ ಹಾರಿಬಿಡು..
ಜಡ್ಡು ಉಳಿಯುವುದ,ಹೊಳೆಯುವುದ...

ಚೌಡ್ಲಾಪುರ ಸೂರಿ...
👤👤👤👤👤👤👤👤👤👤👤👤👤


 "ಅಳಿಸ ಬೇಡ,ಉಳಿಸಿ ಬಿಡು"

ಸಾಕು ನಿಲ್ಲಿಸು,! ರುದ್ರ ನರ್ತನ.
ಕೊಲೆಯಲ್ಲ,ಸುಲಿಗೆಯಲ್ಲ ದಾರುಣ ಸಾವು.
ಮೃತ್ಯು ಕೂಪದಲ್ಲಿ ಪಾಪಿ ಜೀವಗಳು.
ಹಸಿವಿನ ಕೂಗು.ತೇಲುವ ಸೂರು.

ಆಕ್ರಂದನ ಮುಗಿಲು ಮುಟ್ಟಿದೆ.
ಸೌಂದರ್ಯ ಸೊಬಗು ರಾಡಿಯಾಗಿದೆ.
ಜಲಪಾತಗಳು ಜೀವ ನುಂಗುತ್ತಿವೆ..
ಗುಡ್ಡಗಾಡು ತರತರ ನುಡುಗುತ್ತಿವೆ.
ಸಾಕು ನಿಲ್ಲಿಸು!.

ರೆಪ್ಪೆಗೂ ನಿಲುಕದಾಗಿದೆ ಮಂಜು ನಗರಿ.
ಪ್ರವಾಹದ ನಂಜು ತುಂಬಿದೆ.
ಜೀವರಾಶಿ ಸತ್ತ ಹೆಣವಾಗುತ್ತಿದೆ..
ಸ್ವರ್ಗವ ಬಳಿಯುವ ಕೆಲಸ ನಿನ್ನದೇ?
ಸಾಕು ನಿಲ್ಲಿಸು.

ನಿಬ್ಬೆರಗೂ. ಎಲ್ಲವೂ ಒಡಲ ಗೂಡು.
ರಸ್ತೆ,ಬೆಟ್ಟಗುಡ್ಡ,ಸೂರು ಒಂದೇ ಎರಡೇ...
ತುತ್ತಿನ ಚೀಲಕ್ಕೂ ಪರದಾಟ.
ಸೂಜಿಯ ತುದಿಯಲ್ಲಿ ಜೀವ.
.ಮುಕುಟವ ಮುರಿಯದರು..
ಸಾಕು ನಿಲ್ಲಿಸು!.

ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤


"ಬೆಸುಗೆ"

ಮನಸ್ಸೋಳಗಿನ ಮಾತು,
ಕೇಳುವ ತವಕ.ಕಾರ್ಮೋಡದ ಭುಗಿಲು. 
ಪ್ರತಿಧ್ವನಿಯ ಊಹೆ,ಏನೋ,ಹೇಗೋ?..
ಕೊಂಚ ಭಯ.ನಿರಮ್ಮಳದ ಪ್ರಶ್ನೆ ಯಾವಾಗ?

ಹಾದಿ ಗತಿಸಿತು...ಮನದ ಸಂದೇಶ,
ಪ್ರತಿದಿನ ತುಂತುರು ಹನಿಯಂತೆ ಜಾರುತ್ತಿತ್ತು.
ಆಗೊಮ್ಮೆ!ಈಗೊಮ್ಮೆ. ಎದೆಯೊಳಗೆ ಢವಢವ.!!
ಕೊನೆಗೂ ನಿಲುಕಿದೆ ಮಾತಿನ ಚಾವಡಿಗೆ.

ಅಷ್ಟಕ್ಕೂ ಒಪ್ಪದ ಒಳಮನಸ್ಸು.
ಮತ್ತೇನೋ ಬಯಸಿತು!ಹಂಬಲಿಸಿತು.
ದಿಟವಾಗಿ ನೋಡಲೇ, ಮಾತಿನ ಮಂಟಪಕ್ಕೆ ಒಯ್ಯಲೇ ?.ಕಾಡಿತು ಮನವು.

ಅಪರೂಪದ ತೆರೆಯ ಸುಳಿಯಂತೆ .
ದಕ್ಕಿತೊಂದು ಸುಮಧುರ ಸಮಯ.
ಅಷ್ಟರೊಳಗೊಂದು ಬಿರುಗಾಳಿ, ಸುನಾಮಿ.
ಧುತ್ತನೆ !..ಆಗಸಕ್ಕೆ ಚುಂಬಿಸಿ ಬಿದ್ದ 
ಅಲೆಯಂತೆ, ಶಾಂತತೆ.
ನಲಿದಾಡಿತು. ಮನದ ಮಂದಿರ ,
ನಗುವಿನ ಶಿಖರದಲಿ...

ಚೌಡ್ಲಾಪುರ ಸೂರಿ."
👤👤👤👤👤👤👤👤👤👤👤👤👤

ಅವಳು...

ಭುವಿಯನ್ನೇ ಕೆಣಕುವಳು.
ಆಗಸಕ್ಕೂ ನಿಲುಕದವಳು.
ಸೌಂದರ್ಯದ ಗಣಿಯವಳು.
ಬಂಗಾರದ ನಗೆಯವಳು.

ನಯನದ ಅಪ್ಸರೆಯವಳು.
ಎದೆಗೆ ಮದರಂಗಿ ಗೀಚಿದವಳು.
ಕಣ್ಸನ್ನೆಯಲ್ಲಿ ಪ್ರೀತಿ ಬಲೆ ಹೆಣೆದವಳು.
ಹರಿವ ಝರಿ ತೊರೆಯಂತೆ ಅಪರಂಜಿಯವಳು.

ಮುದ್ದಾದ ಮುನಿಸಿನವಳು.
ಮಲ್ಲಿಗೆಯಂತ ಸೊಗಸು ಸಿರಿಯವಳು.
ತುಟಿಯಂಚಿನಲಿ ನಗುವ ಮುದ್ದಿನವಳು.
ಗುಳಿಗೆನ್ನೆಯ ಮಂದಾಸ್ಮಿಳವಳು.

ಭಾವದಲ್ಲೇ ಮಾತಿಗೆವಳು
ಹೃದಯ ಗುಡಿಯಲ್ಲಿ ಧ್ಯಾನಿಸುವಳು.
ಚೆಂದದ ಚ0ದಿರನ ಒಲವಿನವಳು.
ಅಂದದ ಮೊಗದವಳು.

ಬಾಳ ಪಯಣದ ಸ್ಫೂರ್ತಿ ಸೆಲೆಯವಳು.
ನೋವಿನಲ್ಲಿ ಮರುಗಿದವಳು.
ಪ್ರೀತಿಯನ್ನೇ ಪೊರೆದವಳು.
ದಾರಿ ದೀಪದ ಜ್ಯೋತಿಯವಳು.
👤👤👤👤👤👤👤👤👤👤👤👤👤
  

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತ,ಶಿಕ್ಷಣದ ಶಿಲ್ಪಿಗಳಿಗೆ ನನ್ನ ಚಿಕ್ಕ ಕವನ ಅರ್ಪಣೆ ನಿಮಗೆಲ್ಲ ಕೋಟಿ ನಮನಗಳು.

"ಜ್ಞಾನ ಪ್ರಭು"

ಜ್ಞಾನ ದೀಪವೂ ನೀನು,
ಆರದಿರು ಎಂದಿಗೂ, ಎಂದೆ0ದಿಗೂ.
ಸಹಸ್ರ ಸಹಸ್ರ ಮುದ್ದು ಹಣತೆಗಳ,
ಹಚ್ಚಿ ಜಗವ ಬೆಳಗುತಿರು.

ಅಂಧಕಾರದ ಕಾರ್ಮೋಡವ ಕಿತ್ತು,
ಸುಜ್ಞಾನದ ಜ್ಯೋತಿ ಹಚ್ಚು.
ಅಳಿಯುತಿರುವ ಮೌಲ್ಯಗಳಿಗೆ ಎದೆಯಪ್ಪಿ,
ಉಸಿರ ತಾಕಿಸು.

ಹಳೆಯದೊರಗುಡಿ ಹೊಸತು ಹುಡುಕಿ,
ನವ್ಯಲೋಕವ ಸೃಷ್ಟಿಸಿ ಬಿಡು.
ತಪ್ಪು ಒಪ್ಪುಗಳ ತಿದ್ದಿ ತೀಡಿ,ಅದಮ್ಯ
ಚೇತನದ ಸ್ಫೂರ್ತಿಸೆಲೆಯಾಗು.

ಅಕ್ಷರ ದಾಹದ  ಕಣ್ಮಣಿಗಳ,
ಹಸಿವ ನೀಗಿಸುವ ,ಬಾಳಿನ ಪ್ರಭುವಾಗು.
ಮೌಲ್ಯಗಳ ಬಿತ್ತಿ,ಆದರ್ಶವ ಉತ್ತಿ.
ಜಗದ ಶಿಲ್ಪಿಯಾಗು .

ಚೌಡ್ಲಾಪುರ ಸೂರಿ✍✍
👤👤👤👤👤👤👤👤👤👤👤👤👤

ಮರುಕವೋ! ಜೀವ ಭಯವೋ?

ಪರಿಸರ,ಪರಿಸರ ಎಂದು 
ಹೀಗೇಕೆ ಗೊಣಗುವಿರಿ.
ಪರಿಸರವ ತಿಂದುಂಡು ತೇಗಿ,
ಈಗ ನೆನಪಾಯಿತೇ? ಪರಿಸರದ ಕಾಳಜಿ...
ಮರುಕವೋ? ಜೀವ ಭಯವೋ!!

ಹಗಲು,ರಾತ್ರಿ ಎನ್ನದೇ,
ಸಾವಿರಾರು ಅಡಿ ಕೊರೆದು,
ಭುವಿಯ ಗರ್ಭಪಾತ ಮಾಡಿದಿರಲ್ಲ...
ಆಗೆಲ್ಲಿ!!...
ಬದುಕು ಬರಡಾದಾಗ ನೆನಪಾಯಿತೇ..
ಮರುಕವೋ! ಜೀವ ಭಯವೋ?

ಕೆರೆಯ ನುಂಗಿ,ಹಳ್ಳ-ಕೊಳ್ಳ
ಬಳಿದು ಬಾಚಿದಿರಲ್ಲ,ನಿನ್ನೀ
ಸ್ವಾರ್ಥದ ಭವ್ಯ ಅರಮನೆ ಕಟ್ಟಲು.
ಆಗೆಲ್ಲಿ! ನಿಸ್ವಾರ್ಥತೆ....
ಧುತ್ತನೆ! ನೆನಪಾಯಿತೇ..
ಮರುಕವೋ! ಜೀವ ಭಯವೋ?

ಧನದ ವ್ಯಾಮೋಹಕ್ಕೆ,
ಮುಂದಾಲೋಚಿಸದೆ..ಕಂಡ
ಕಾಡೆಲ್ಲ ಲೂಟಿಗೈದೆ....
ಅಡವಿ ಕಡಿದು,ಮಳೆಗೆ ಗೋಗರೆದೆ!
ಈಗ ನೆನಪಾಯಿತೇ...ಪ್ರಕೃತಿ!..
ಮರುಕವೋ! ಜೀವ ಭಯವೋ?

ಬೆಟ್ಟ-ಗುಡ್ಡವ ಅಗೆದು,
ಪ್ರಕೃತಿನ ವಿಕೃತಿಗೈದು,
ಒಂಚೂರು ಬಿಡದೆ ನೆಲಸಮ 
ಮಾಡಿದಿರಿ,ಆಗೆಲ್ಲಿತ್ತು!!  ವಿವೇಕತನ.
ಚಂದಾಗಿ ಬಾಳಿದಿರಾ..ಅವಿವೇಕಿಗಳೇ..
ಈಗ ನೆನಪಾಯಿತಾ...
ಮರುಕವೋ! ಜೀವ ಭಯವೋ?..

ರಚನೆ:ಚೌಡ್ಲಾಪುರ ಸೂರಿ.
👤👤👤👤👤👤👤👤👤👤
ಮುಗ್ಧ ಮನಸ್ಸು.

ಇಂದೇಕೋ! ಆನಂದ ಭಾಷ್ಪ,ಹೃದಯ ಮೀಟುತ್ತಿದೆ ಆ ಮುಗ್ಧ ಮಗುವಿನ ಕಂಗಳು ಕಂಡು. ಮಾತು ಬರದೆ ,ನಾನೆಲ್ಲಿದೆನ್ನೋ ಎಂಬುದೇ ಮರೆತು ಹೋಗಿ ಒಮ್ಮೆಲೇ ಕಣ್ಣು ಜಿನುಗ ತೊಡಗಿತು. ಅಂತಹ ಪ್ರಕರಣ ಇಂದು ನಮ್ಮ ಶಾಲೆಯಲ್ಲಿ ನೆಡೆಯಿತು.ವಿದ್ಯಾರ್ಥಿ ಹೆಸರು ಶೇಖರ್,  ಕಡು ಬಡತನ ವಿದ್ಯಾರ್ಥಿ 5ನೇ ತರಗತಿವರೆಗೆ ನನ್ನ ವಿದ್ಯಾರ್ಥಿಯಾಗಿ ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿ ,ಮೊರಾರ್ಜಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇಂದು ನಮ್ಮ ಶಾಲೆಯನ್ನು ಬಿಟ್ಟು ಹೋದಾಗ ಕಣ್ಣೀರಧಾರೆ ಕೊಡಿಯಾಗಿ ಹರಿಯಿತು,ದಾಖಲಾತಿ ಮಾಡಿಸಿ ವಾಪಸ್ಸು ಬಂದಾಗ ಕಿಲಕಿಲ ನಗುವಿನೊಂದಿಗೆ ಓಡಿ ಬಳಿ ಬಂದು ನಿಂತಾಗ ಏನೋ ಆಶ್ಚರ್ಯ, ಆ ಮುಗ್ಧ ಮಗುವಿನ ಕೈಯಲ್ಲಿ ಒಂದು ಹಳದಿ ಪ್ಯಾಕೆಟ್ ಇತ್ತು ,ಆ ಪ್ಯಾಕೆಟ್ ಬಿಚ್ಚಿ ನನ್ನ ಮುಂದೆ ಇಟ್ಟಾಗ , ತುಟಿ ಬಿಚ್ಚದೆ ಬಿಕ್ಕಿ ಬಿಕ್ಕಿ ಅತ್ತೇ .ಏಕೆಂದರೆ ,ಏನು ಅರಿಯದ ಮುಗ್ಧ ಮಗು ನನಗಾಗಿ ಒಂದು ಜೊತೆ ಬಟ್ಟೆ,ಟವೆಲ್,ಬನಿಯನ್ ಒಂದು ಸ್ವೀಟ್ ಬಾಕ್ಸ್ ತಂದಿದ್ದ.ಹೇಗೆ ಪ್ರತಿಕ್ರಿಯಿಸ ಬೇಕು ಎಂದು ತಿಳಿಯದೆ ಮೂಖವಿಸ್ಮಿತನಾದೆ. ಒಮ್ಮೆಲೇ ತಬ್ಬಿಕೊಂಡು ಗಳಗಳನೆ ಅತ್ತು ,ಮಗುವಿನ ಗುರು ಭಕ್ತಿಗೆ ಋಣಿಯದೆ,ಇಂತಹ ಯುಗದಲ್ಲೂ ಗುರು ಶಿಷ್ಯರ ಸಂಬಂಧ ಕಂಡು ರೋಮಾಂಚನವಾಯಿತು ಮನಸ್ಸು.ನಿಮ್ಮ ಮುಂದೆ ಹಂಚಿಕೊಳ್ಳುವ ಮನಸ್ಸಾಯಿತು.ತಪ್ಪಿದ್ದಲ್ಲಿ ಕ್ಷಮೆ ಇರಲಿ.
"ಮುಗ್ದ ಮಗುವಿಗೆ ನನ್ನ ಹೃದಯ ನಮನಗಳು "

ಚೌಡ್ಲಾಪುರ ಸೂರಿ

👤👤👤👤👤👤👤👤👤👤
"ಬಿಸಿಲು"

ಬೆಂದು ಬೆಂಡಾದ ಭುವಿ
ಬೆಂಕಿ ಉಗುಳುವ  ನೇಸರ,
ಬೋಳಾದ ಗಿಡಮರ.
ಧಗೆಯೇರುವ ದಾಹ.
ಸದ್ದಿಲ್ಲದೆ ಸೂಸುವ ಬಿಸಿಗಾಳಿ.

ಸೊರಗುವ ಜೀವಜಂತು.
ಸ್ಮಶಾನವಾದ ಕೆರೆಕಟ್ಟೆ.
ಅಲೆದರು ಸಿಗದ ನೆರಳು.
ಎಲ್ಲಿ ನೋಡಿದರೂ ಭಾಸ್ಕರನ್ನದ್ದೆ
ಆರ್ಭಟ.
ಬಸವಳಿದ ದೇಹ ತಂಪಲ್ಲಿ ಲೀನ.

ಜಲದ ಹಾಹಾಕಾರ,
ನಿಸರ್ಗ ದೇವತೆಗಿಲ್ಲ ಮಮಕಾರ.
ಝಳಪಿಸುವ ಕಿರಣಗಳಿಗೆ,
ಎಲ್ಲೆಡೆ ಕಾಡ್ಗಿಚ್ಚು ಹಬ್ಬಿದೆ.
ಬಿಸಿಲ ಪ್ರಖರತೆಗೆ ,
ಸೋತು ಸೊರಗಿಹನು ಹುಲು ಮಾನವ.

ರಚನೆ:ಚೌಡ್ಲಾಪುರ ಸೂರಿ.

👤👤👤👤👤👤👤👤👤👤👤👤
"ಬೊಬ್ಬೆ"

ಪರಿಸರವ ಉಂಡು ತೇಗಿದವರು.
ಬೊಬ್ಬೆ ಹಾಕುತಿಹರು.
ಜಲ ನುಂಗಿ, ಕಾಡ ಬಗಿದು
ನಾಡ ಸ್ಮಶಾನ ಮಾಡಿಹರು.

ಹಳ್ಳ ಕೊಳ್ಳ ಖಾಲಿ ಮಾಡಿ
ಜೀವ ಜಲ ಹುಡುಕುತಿಹರು.
ಬೆಟ್ಟ ಗುಡ್ಡ ಒಡಲ ಕೊರೆದು,
ಗರ್ಭಪಾತ ಮಾಡಿಬಿಟ್ಟರು.

ಗಾಳಿ ಮಳೆ ಕಾಣಸಿಗದೆ,
ದಿಕ್ಕೆಟ್ಟು ನಿಂತಿಹರು.
ಸೂರ್ಯನ ತಾಪಕ್ಕೆ,
ಬಸವಳಿದು ಬದುಕುತಿಹರು.

ಕಾಡಬಿಟ್ಟು  ನಾಡಕಡೆ
ಹೆಜ್ಜೆ ಇಟ್ಟ ಕಾಡಮೃಗಗಳು.
ಪ್ರಾಣಭಯದ ಭೀತಿಯಿಂದ,
ಸಿಕ್ಕರವರ ಮೇಲೆ ಎರಗುವವು.

ಎಲ್ಲಾ ಬಾಚಿ ಬಳಿದು,
ಬೊಬ್ಬೆ  ಹಾಕುತ್ತಿರೆ! ಏನು ಪ್ರಯೋಜನ..
ದುರಾಸೆ ದೂಡಿ,
ಗಿಡವ ನೆಡು ವಿಶ್ವ ಮಾನವ...

ರಚನೆ:ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤
"ಮತ್ತದೇ....

ಬಹುದಿನಗಳ ತೊಳಲಾಟಕೆ
ಮುಕ್ತಿ ಸಿಕ್ಕಿತೆ0ದು ಮನ ಮಿಡಿಯಿತು.
ಹೊಸ ಗರಿಕೆಗೆ ಶಶಾಂಕ ಬಾಯ್ದೆರೆದಂತೆ,
ಹೃದಯದ ಬಾಗಿಲು ತೆರೆದು ಕುಳಿತಿತು.

ದುಗುಡ, ದುಮ್ಮಾನಗಳು ಮನದ 
ಮೂಲೆಯಿಂದ ಹಾರಿದವು.
ಹೊಸ ಚೇತನದ ಅಲೆಯೊಳಗೆ,
ಪ್ರೀತಿ ಸೆಲೆ ಚಿಮ್ಮಿತು.

ಬತ್ತಿದ ನಯನಾಕ್ಷಿಗಳು,
ಆನಂದ ಭಾಷ್ಪವ ಸುರಿಸಿದವು.
ಸೋತು ಮೆತ್ತಗಾದ,ಬಸವಳಿದ
ಜೀವಕ್ಕೆ ,ಕೊಂಚ ನಿಟ್ಟುಸಿರು.

ದಣಿದರು ನಿದ್ರೆ ಬಾರದ,
ದೇಹಕ್ಕಿಂದು ರಾಜ ನಿದ್ರೆ.
ನನಸೋ,ಕನಸೋ ..
ಮತ್ತದೇ....ತೊಳಲಾಟ......

ರಚನೆ,ಚೌಡ್ಲಾಪುರ ಸೂರಿ.
👤👤👤👤👤👤👤👤👤👤
"ನನ್ನಪ್ಪ"

ಹೆಗಲಲ್ಲಿ ಹೊತ್ತು,
ಹಾದಿ ಬೀದಿಯಲ್ಲಿ ರಾಜನಂತೆ,
ಹೊತ್ತು ತಿರುಗಿದವನು. ಕಷ್ಟವ 
ತಾನುಂಡು,ಸುಖದಲ್ಲಿ ಪೊರೆದವ,
ನನ್ನಪ್ಪ.

ತುತ್ತು ತುತ್ತಿಗೆ ಪರದಾಡಿ,
ಅಮೃತವ ನನಗಿಕ್ಕಿ.
ನೋವಿನ ಭಾದೆ ಸರಿಸಿ,
ಎಲ್ಲರಂತೆ ಸಲಹಿದವ,
ನನ್ನಪ್ಪ.

ಸಾಲವ ಲೆಕ್ಕಿಸದೆ,
ಧನಿಕರಿಗೆ ಹೊಲವಿಟ್ಟು,
ವಿದ್ಯಾಮೃತವನಿತ್ತು, 
ಸಮಾಜದಲ್ಲೊಂದು ಮೂರ್ತಿ ಕಡೆದವ
ನನ್ನಪ್ಪ.

ಜಾತಿ ಧರ್ಮದ ಸೋಗಿಲ್ಲದೆ,
ಪ್ರೀತಿ ವಿಶ್ವಾಸವ ಬಿತ್ತಿ,
ಕರುಣಾಮಯಿಯಾಗು,
ಎಂದರಸಿ ಬೆಳೆಸಿದವ,
ನನ್ನಪ್ಪ.

ಸೊಗಳಾಡಿ ಮಾತನಾಡದ,
ದುಷ್ಟರ ಕಡುವೈರಿ.
ಕಷ್ಟದಲ್ಲೂ ಮರುಗಿದರು,
ಭ್ರಷ್ಟತೆಗೆ ಕೈ ಚಾಚದವ, ನಿಷ್ಟುರ
ನುಡಿಯುವ ನನ್ನಪ್ಪ.

ಮೌನದಲ್ಲಿ ಮಾತಾಗಿ,
ನೋವಿನಲ್ಲೂ ಮುಖ ಅರಳಿಸಿ,
ನಗುವ,ನಗು ಮೊಗದ ನಂದಾದೀಪ.
ಬಾಳಿಗೆ ಬೆಳಕಾದ ನನ್ನಿ ಆಶಾಕಿರಣ,
ನನ್ನಪ್ಪ.

ರಚನೆ:ಚೌಡ್ಲಾಪುರ ಸೂರಿ✍

👤👤👤👤👤👤👤👤👤👤👤👤👤
ನನ್ನಾಕೆ.

ಅಚ್ಚು.

ಅವಳೆಂದರೆ ಅಚ್ಚು,
ಅವಳೆಂದರೆ ಹುಚ್ಚು,
ಅವಳೆಂದರೆ ಮೆಚ್ಚು,
ಅವಳೆಂದರೆ ನೆಚ್ಚು,
ಅವಳೇ ನನ್ನಾಕೆ.

ಅಲೆ.

ಜೀವದ ಸೆಲೆ,
ಬದುಕಿನ ನೆಲೆ.
ಸ್ನೇಹದ ಅಲೆ,
ಪ್ರೀತಿಯ ಓಲೆ.
ಅವಳೇ ನನ್ನಾಕೆ.

ಲೀಲೆ

ಅವಳೇ ಗಾನಲೀಲೆ,
ಅವಳೇ ಸೌಂದರ್ಯ ಲೀಲೆ,
ಅವಳೇ ನಾದಲೀಲೆ.
ಅವಳೇ  ಗಾಂಧರ್ವ ಲೀಲೆ.
ಅವಳೇ ನನ್ನಾಕೆ.

ಮುತ್ತು

ಅವಳೇ ಕಡಲ ಮುತ್ತು.
ಅವಳೇ ಮನೆಯ ಸಂಪತ್ತು,
ಅವಳೇ  ಬದುಕಿನ ನತ್ತು
ಅವಳೇ ನನ್ನ ಸೊತ್ತು
ಅವಳೇ ನನ್ನಾಕೆ.

ರಚನೆ:ಚೌಡ್ಲಾಪುರ ಸೂರಿ




"ಸನ್ನಿಧಿಯಲ್ಲಿ ನಾನು"

ಭಾಸ್ಕರನ ಉದಯದಲ್ಲಿ.
ಜಿನಿಗಿಡುವ ಮಳೆಯಲಿ,..
ನೇತ್ರಾವತಿಯಲ್ಲಿ ಮುಳುಗಿರೆ
 ಮಂಜುನಾಥನ ಜಪವಗೈದು.
ಗುಡಿಯ ಸುತ್ತಿ,
ಮನದಲ್ಲಿ ಭಜಿಸಿ,
ಬಿಚಿಟ್ಟೆ ನೋವನು,
ಹರಕೆಯ ಹೊತ್ತು.
ಪುಳಕಿತಗೊಂಡೆ ದರುಶನ
 ಭಾಗ್ಯದಿ.
ಕಣ್ಣಾ0ಚಲಿ ಜಿನುಗಿತು
 ಆನಂದದ ಭಾಷ್ಪವು.
ಇಂದ್ರಾದಿ ಲೋಕದಲಿ,
 ಮುಳುಗಿದೆ ಸಂಭ್ರಮದ 
ಅಲೆಯಲ್ಲಿ.

ದಡಬಡ ಬೆಟ್ಟವ ಏರಿ,
ಧೀರ್ಘಉಸಿರಲಿ  ಕರ 
 ಮುಗಿದು ಬೇಡಿಹೆನು,
 ಅಣ್ಣಪ್ಪ ದೇವರಿಗೆ.
ತಿರುಗುತಿರೆ ಕಾಲಿಗೆ ಚಕ್ರವ
 ಕಟ್ಟಿ ,ಮರೆಯದೆ ಕೈ ಬೀಸಿ
 ಕರೆಯಿತು ಮ್ಯೂಜಿಯಂ ಎಂಬ
 ಜ್ಞಾನ ಶಾಲೆ.
ಲಕ್ಷ ಕಡ್ಡಿಯ ತಾಜ್ಮಹಲ್ 
ಮೆರಗು ನೀಡುತ್ತಿತು,
 ಎಲ್ಲರ ಸೆಳೆತಕ್ಕೆ.
ಗರಿಗರಿ ಎಂದು ನೀರೆಯಂತೆ ನಾಚುವ ಎರಡ್ಸಾವಿರ ನೋಟುಗಳದ್ದೇ ಅಬ್ಬರ.
ವೈಭೋಗದಲ್ಲಿ ಮಿಂದೇಳಿಸುವ
 ವರ್ಣಚಿತ್ರಗಳ ಕಲರವ.
ಕಣ್ಮನ ಸೆಳೆಯುವ ಪಿಟೀಲು,
 ಮೃದಂಗಿಗಳು.
ಅಣುಕಿಸುವ ಕನ್ನಡಿ,
ಬೆಚ್ಚಿದೆ ಅದ ನೋಡಿ.

ಬಡಿದಾಡುತಿತ್ತು ಹಸಿವನ ಚೀಲ
 ಕಾಲೋಡಿತ್ತು ಮೃಷ್ಟಾನ್ನದತ್ತ.
ಮುದುಕದೆಲೆಯ ಬಂದಿತು,
ಸಿಹಿಯನ್ನು ತಂದಿತು.
ತಿಳಿಸಾರು ಮಜ್ಜಿಗೆ 
ದೇಹವ ತಣಿಸಿತು.
ಮನೆಗೊಂದಿಷ್ಟು ಸರ,ಬಳೆ,ಪ್ರಸಾದವ 
ಕೊಂಡು .
ಒಪ್ಪದ ಮನಕೆ ಸಂತೈಸುತ
ಊರಿನ ದಾರಿಯ ಹಿಡಿದೆ.

ರಚನೆ:ಚೌಡ್ಲಾಪುರ ಸೂರಿ
*******************************


"ಚಾರ್ಮಾಡಿ ಘಾಟ್"
               (ಕಂಡಿದ್ದು)

ಅತ್ತಿತ್ತ ಎತ್ತ ನೋಡಿದರತ್ತ
ಕಾನನವೇ ತುಂಬಿಹದು.
ಉರಗದ ಸೊಂಟದಂತೆ,
ತಿರುವು ಮುರುವುಗಳ ಆರ್ಭಟ.

 ಸದ್ದಿಲ್ಲದೆ ನುಗ್ಗುವ ವಾಹನಗಳು.
ಕ್ಷಣ ಕ್ಷಣಕ್ಕೂ ಹೃದಯ ಬಡಿತದ,
ಅಲಾಪನ.
ಮೈ ಜುಮ್ಮೆನಿಸಿದ ಪ್ರಪಾತಗಳು.
ಆಗಸವ ಚುಂಬಿಸುವ ಬೆಟ್ಟಗುಡ್ಡಗಳು.

ಭೋರ್ಗರೆಯುವ ಜಲರಾಶಿ.
ತೊಟ್ಟಿಕ್ಕುವ ಜೇನಹನಿ,
ಬಿಸಿಲಿಗೆ ಮೈಯೊಡ್ಡದ,
ಸಹಸ್ರಪದಿ ವೃಕ್ಷಗಳು.
ಸ್ವಚ್ಛ0ದವಾಗಿ ತೇಲುತಿರುವ,
ಖಗಮೃಗಗಳು.

ಮೆಲ್ಲನೆ ಧರೆಗಿಳಿದ
ತುಂತುರು  ಮಳೆಗಾನ.
ನಿಬ್ಬೆರಗಿಸುವ ನೀಲಿಪರ್ವತಗಳು.
 ಭಾಸ್ಕರನ ಚುಂಬನ,
ಕೋಗಿಲೆಗಳ ಮಧುರ ಗಾಯನ.

ರಚನೆ:ಚೌಡ್ಲಾಪುರ ಸೂರಿ
*******************************








"ಕಾತುರ"
ಮೊದಲ ಭೇಟಿ,
ಮೊದಲ ಕುಡಿ ನೋಟ,
ಮೊದಲಾಗುವ ಕಾತುರ.

ಮೊದಲ ಮುಗುಳ್ನಗೆ,
ಜಾರುವ ಕೆನ್ನೆ..
ತಡಕುವ ಕಾತುರ.

ಹೃದಯವ ಬಿಚ್ಚಿ,
ಮನದ ಮೂಲೆಯಲ್ಲಿ,
ಹುಚ್ಚೇದ್ದು ಕುಣಿಯುವ ಕಾತುರ.

ಅವಳ ಬರುವಿಕೆ,
ಪುಟಿದ ಮನಸ್ಸು,
ಅವಳೊಡನೆ ಬೆರೆತು,ತೇಲುವ ಕಾತುರ.

ನಗುಮೊಗದಿ, ಕಿರುನಗೆ
ಚೆಲ್ಲುವ,ಕೆಂದುಟಿಯ 
ತಾವರೆ ನೋಡುವ ಕಾತುರ.

ಹಂಸಬಳ್ಳಿ,ಸುಂದರಲತೆ,
ನಯನ ಮನೋಹರಿಯ,
ನಯನದಲ್ಲಿ ಅಡಗಿಸಿಕೊಳ್ಳುವ ಕಾತುರ.

ನಾಟ್ಯವನಿತೆ,ಗಾನ ಸಿರಿ,
ನಂದಗೋಕುಲೆ, ಅವಳ
ಕಲೆಯಲ್ಲಿ ಬೆರೆವ ಕಾತುರ.

ಜೀವನಾಡಿ,ಪ್ರೇಮ ದೇವತೆ,
ಮನದ ನೈದಿಲೆ, ಭಾವ ಸಂಗಮ.
ಭಾವ ಸಖನಾಗುವ ಕಾತುರ.

ನವಿರಾದ ಮಾತು,
ಸಿಹಿಜೇನು,ಸಿಹಿ ಮುತ್ತಿಗೆ
ದುಂಬಿಯಾಗುವ ಕಾತುರ.

ರಚನೆ:ಚೌಡ್ಲಾಪುರ ಸೂರಿ


"ಹಡೆದವ್ವ"

ಸೃಷ್ಟಿಕರ್ತೆ ಹಡೆದವ್ವ
ನಿನ್ನ ಮರೆಯುವುದುಂಟೆ?

ಮಮ್ಮಲ ಮರುಗಿ 
ಜೀವ ನೀಡಿದೆ.
ಕಷ್ಟದಲ್ಲಿ ನಲುಗಿ
ಸಾಕಿ ಬೆಳೆಸಿದೆ.

ಪ್ರೀತಿ ಮಾಧುರ್ಯದಲ್ಲಿ
ಹೊತ್ತು ತಿರುಗಿದೆ.
ಉಪವಾಸದಲ್ಲಿ ಬೆಂದು,
ತುತ್ತು ನೀಡಿ,ಹೊಟ್ಟೆ  ತುಂಬಿಸಿದೆ.

ಬಿಸಿಲಿಗೆ ಬಸವಳಿಯದಂತೆ,
ಸೆರಗ ಮುಚ್ಚಿದೆ.
ಅಸಹ್ಯ ಪಡದೆ,
ಕೈತುಂಬಾ ಬಾಚಿ ಬಳಿದೆ.

ಹರಿದ ಬಟ್ಟೆಯ ತೊಟ್ಟು,
ಹೊಸದು ಉಡಿಸಿದೆ.
ತೊದಲ ಮಾತಿಗೆ,
ಭಾಷೆ ರೂಪ ಕೊಟ್ಟೆ.

ನೋವುಂಡು ಪ್ರೀತಿ,
ಮಮಕಾರವ ನೀಡಿದೆ.
ಸೋತಾಗ ಬೆನ್ನತಟ್ಟಿ,
ಆತ್ಮಸ್ಥೈರ್ಯವ ಬೆಳೆಸಿದೆ.

ಕುಟುಕು ಮಾತು ಆಲಿಸದೆ,
ತನ್ನ ಸರ್ವಸ್ವವ ನಂಬಿದೆ.
ಅಂಗಲಾಚಿ ಕಾಡಿ, ಬೇಡಿ
ಕೇಳಿದ ದಯಪಾಲಿಸಿದೆ.

ಸಮಾಜವೇ ಹಂಗಿಸಿದರೂ,
ಸ್ಫೂರ್ತಿ ನೀಡಿದೆ.
ಕಗ್ಗಲನ್ನು ಕೆತ್ತಿ,
ಮೂರ್ತಿ ರೂಪ ಇಟ್ಟೆ.

ಹೃದಯದಲ್ಲಿ ದುಃಖ ತುಂಬಿ,
ಆನಂದ ಭಾಷ್ಪ ಹರಿಸಿಬಿಟ್ಟೆ.
ತೊಟ್ಟಿಲಲ್ಲಿ ತೂಗಿ,
ಸುಖ ನಿದ್ರೆಯಲಿ ತೇಲಿಸಿದೆ.

ಜಗದ ದೇವತೆಯೇ, 
ತಾಳ್ಮೆಮೂರ್ತಿಯೇ,
ಸಹನ ರೂಪಿಣಿನಿಯೇ,
ತ್ಯಾಗಮಯಿಯೇ,
ನಿನ್ನ ಮರೆತರೆ ಬದುಕುಸಾಧ್ಯವೇ?
ನನ್ನ ಹಡೆದವ್ವನೇ ನನ್ನ ಸ್ವರ್ವಸ್ವ..🙏🏻

ರಚನೆ:ಚೌಡ್ಲಾಪುರ ಸೂರಿ.

"ನಾವಿಬ್ಬರು"

ನಾವಿಬ್ಬರು ಗೆಳೆಯರು,
ಜೀವದ ಒಡನಾಡಿಗಳು.
ಪ್ರೀತಿಸಿದವರಲ್ಲ,
ಮೋಹಿಸಿದವರಲ್ಲ,
ಅಂತರಂಗದಲ್ಲಿ ಬೆರೆತವರು.

ಕಷ್ಟಸುಖದಲ್ಲಿ ಒಂದಾಗಿ,
ನೋವು ನಲಿವುಗಳಿಗೆ ಮುಂದಾಗಿ,
ಸಹಬಾಳ್ವೆಗೆ ತಲೆಬಾಗಿ,
ಎಲ್ಲರ ಹಿತಕ್ಕೆ ಬದುಕಿದವರು.

ದೂರಾಲೋಚನೆಗಳು ನಮಗಿಲ್ಲ,
ಸ್ನೇಹದ ವಂಚಕರು ನಾವಲ್ಲ,
ಭಂಡತನ,ಸ್ವಾರ್ಥದ ಚಟ ಗೊತ್ತಿಲ್ಲ,
ಮನದ ಮಿಡಿತ ಮರೆತವರಲ್ಲ.

ಸೌಂದರ್ಯ ಆರಾಧನೆ, ಹಣದ ಶ್ರೀಮಂತಿಕೆ ಸುಳಿಯುವುದಿಲ್ಲ,
ಹೃದಯ ಸಿರಿವಂತಿಕೆ ಹೇಳುವಂತಿಲ್ಲ,
ನಮ್ಮತನವ ಮಾರುವುದಿಲ್ಲ,
ಮುದ್ದಿನ ಒಡನಾಟಕೆ ಬೆರಗಾದವರಿಲ್ಲ.

ನಾವಿಬ್ಬರು ಗೆಳೆಯರು,
ಸ್ನೇಹದ ಮಂದಿರ ಕಟ್ಟುವರು.

ರಚನೆ:ಚೌಡ್ಲಾಪುರ ಸೂರಿ


"ನನ್ನವನು ಅಸಾಮಾನ್ಯ"

ತೊದಲ ಮಾತಿನಲ್ಲಿ ನಗಿಸುವ,
ನಗೆ ಚಂದಿರ..
ಖುಷಿಯಲಿ ಹಾಡಿ ಕುಣಿಯುವ,
ನಾಟ್ಯ ಮಯೂರ.
ಸಿಡುಕಿನಲ್ಲಿ ನಗುವ,
ಹುಣ್ಣಿಮೆಯ ಚಂದಿರ.
ಆಟಿಕೆಗಳ ಮುರಿದು ಜೋಡಿಸುವ,ಕಲಾವಂತ.
        /ನನ್ನವನು ಅಸಾಮಾನ್ಯ/

ಬಿಸಲಲ್ಲಿ ಬಸವಳಿಯದೆ
 ಆಡುವ,ಚಂದದ ಆಟಗಾರ.
ಸೋತರು ಗೆದ್ದನೆಂದು ಬಿಗುವ,
ಹಠಗಾರ.
ಕೋತಿಯಂತೆ ಮರವ ಏರಿ,
 ಜಿಗಿದು ಕುಪ್ಪಳಿಸುವ ಜಾದುಗಾರ.
ಹಳ್ಳ ಕೊಳ್ಳ ಅಂಜದೆ ಈಜುವ,
ಛಲಗಾರ.
        /ನನ್ನವನು ಅಸಾಮಾನ್ಯ/

ಚೆಂದದಿ ಬಟ್ಟೆಯ ಉಟ್ಟು,
ಅಂದದಿ ಮೊಗವ ತೋರುವ ಮನ್ಮಥ.
ಗೆಳೆಯರ ಜೊತೆಗೂಡಿ
 ನಲಿಯುವ ಮೋಡಿಗಾರ.
ಕೃಷ್ಣ ರಾಧೆಯ ನಾಚಿಸುವ,
ಸೌಂದರ್ಯಯ ರಾಜ.
ಎಲ್ಲರ ಹೃದಯ ಕದಿಯುವ,
ಕನಸುಗಾರ.
        /ನನ್ನವನು ಅಸಾಮಾನ್ಯ/

ರಚನೆ:ಚೌಡ್ಲಾಪುರ ಸೂರಿ


"ಬಂಗಾರ"

ಹಾಲ್ಗಲ್ಲದ ಒಡೆಯ
ಗುಳಿಕೆನ್ನೆಯ ಬೇಡಗ,
ತೆವಳುತ,ಈಜುತಾ ,
ಪುಟ್ಟ ಪುಟ್ಟ 
ಹೆಜ್ಜೆಯನೀಡುವ.... 
ಪುಟ್ಟ ಬಂಗಾರ.

ಮಾತಿನ ಮೋಡಿ,
 ನಗಿಸುವ ಪಟಾಕಿ.
ಸಿಕ್ಕರೆ ಬಿಡೆನು,
 ಮುರಿದೇ ತೀರುವನು.
ನಿಂತಲ್ಲಿ ನಿಲ್ಲದೆ,
ಓಣೊಣಿ ಅಲೆವನು..
ಜಗಳವೇ ಆಟ, 
ಗೆದ್ದನೆಂಬ ಹಠ.

ಹೆತ್ತವರ ಸಿಟ್ಟಿಗೆ,
ಪೆಚ್ಚುಮೊರೆಯ ನಂಟು.
ಎಲ್ಲರ ಕಾಡಿಸಿ,
ಮನವ ಗೆಲ್ಲುವನು.
ಅಜ್ಜ ಅಜ್ಜಿಯ ಭಂಟ,
ಅತ್ತೆ ಮಾವರ ನೆಂಟ.
ಕ್ಷಣಕ್ಕೊಂದು ವೇಷ,
ತೋರಿಸುವನು ಆವೇಶ.
ಹೃದಯದ ಚೋರ,
ಮುಗುಳುನಗೆಯ,
ಬಂಗಾರ.....

ರಚನೆ:ಚೌಡ್ಲಾಪುರ ಸೂರಿ.

"ಪ್ರೇಮದ ಶಶಿಗಾಗಿ"

 ಹುಣ್ಣಿಮೆ ಬೆಳದಿಂಗಳಲ್ಲಿ,
ಹೊಂಬಣ್ಣವ ಚೆಲ್ಲಿ,
ಚಿತ್ತಾರವ ಬಿಡಿಸಿ,ಪುಷ್ಪವರವಿ
ಕಂಗಳು ಮಿಟುಕಿಸದೆ...
ದಾರಿಯಲ್ಲಿ ಕಾಯುತ್ತಿರುವೆ,
ಪ್ರೇಮದ ಶಶಿಗಾಗಿ...

ಚಟಪಟ ಚಡಪಡಿಸುತ
ಮನದ ಮೂಸೆಯಲ್ಲಿ,
ಹೃದಯದ ಬಾಗಿಲು ತೆರೆದು,
ಪ್ರೀತಿ ಗೂಡು ಹೆಣೆಯಲು...
ಕಾದು ಕುಂತಿರುವೆ...
ಪ್ರೇಮದ ಶಶಿಗಾಗಿ...

ಮನದಲ್ಲಿ ತುಂಬಿಕೊಂಡು.
ಪ್ರೀತಿ ಗೋಪುರವ ಕಟ್ಟಿ,
ಕಲ್ಪನಾಲೋಕದಲ್ಲಿ ವಿಹರಿಸುತ,
ಧ್ಯಾನಿಸುತ, ಜಪಿಸುತ,ಪಠಿಸುತ
ಬರುವಿಕೆಯ ದಾರಿಯಲಿ,,
ಜಾತಕ ಪಕ್ಷಿಯಂತೆ ಕಾದು
 ಕುಳಿತಿರುವೆ ಪ್ರೇಮದ ಶಶಿಗಾಗಿ.

ರಚನೆ:ಚೌಡ್ಲಾಪುರ ಸೂರಿ


"ಹೆಮ್ಮೆಯ ಕಾರ್ಮಿಕರು" 

ನಿತ್ಯವೂ ಅಲೆದಾಟ..
ಒಂದೊತ್ತಿನ ಗಂಜಿಗಾಗಿ.
ಸಿಕ್ಕರೆ ಕೆಲಸ,ದಾಹ 
ತೀರಿದಷ್ಟು ಸಂತಸ.
ಕೈಮೈ ಪರಸಿಕೊಂಡರು
ಹಠದಿ ಕಾಯಕ ಮಾಡುವರು.
ಅವರೇ ನಮ್ಮ ಕಾರ್ಮಿಕರು..


ಜಾತಿ ಮತದ ಹಂಗಿಲ್ಲ,
ವೃತ್ತಿಧರ್ಮ ಮರೆತಿಲ್ಲ.
ಸ್ವಾಭಿಮಾನದಲ್ಲಿ ಬದುಕಿದವರು.
ಕೆಲಸ ನಿಷ್ಠೆಗೆ ರಕ್ತ ಹರಿಸ್ಯಾರು,
ದ್ರೋಹದ  ವಂಚಕರಲ್ಲ,
 ಮನದಲ್ಲಿ ತುಂಬಿಹದು ಕಾಯಕ ಶ್ರದ್ದೆ.
 ಅವರೇ ನಮ್ಮ  ಬಾಳ ಬೆಳಗುವ ಕಾರ್ಮಿಕರು.

ಮೇಲುಕೀಳಿನ ತಂಟೆ ಬಲ್ಲವರಲ್ಲ.
ಕಾಯಕವೇ ಜೀವನ,
ಕರ್ಮದಿಂದಲೇ ಪಾವನ.
ಭ್ರಷ್ಟ ಸಮಾಜದಲ್ಲಿ ,
ನಿಯತ್ತಿಗೆ
ಬದುಕಿ,ಬಾಳ ಹಸನ 
ಮಾಡಿಕೊಂಡ ಹಸನ್ಮುಖಿಗಳು.
ಅವರೇ ನಮ್ಮ ಕಾರ್ಮಿಕರು.

ಪೆನ್ಶನ್ ಟೆನ್ಷನ್ ಇಲ್ಲ,
ಅಕ್ರಮ ಆಸ್ತಿ ಪಾಸ್ತಿ ಬೇಕಿಲ್ಲ.
ಗಟ್ಟಿ ರಟ್ಟೆಯಲಿ ಗುಡ್ಡ
ಹೊರಬಲ್ಲೆವು ಆತ್ಮವಿಶ್ವಾಸದಿ.
ಎನ್ನುತ್ತಾ ಬಾಳ ಬಂಡಿ ನೂಕವರು
ಅವರೇ ನಮ್ಮ ಕಾರ್ಮಿಕರು.

ಸಿಕ್ಕ ಪಂಚಾಮೃತದಲ್ಲಿ ಕುಟುಂಬ
 ಸಲಹುವ ಸಾಹುಕಾರರು.
ವೃದ್ದಾಶ್ರಮಕ್ಕೆ ಹೆತ್ತವರ ನೂಕದೇ,
ಹೆಗಲ ಮೇಲೆ ಹೊತ್ತು ಸಾಕುವ,
ಬಂದು ಬೀಗರಲಿ ಬೆರೆತು.
ಸಂತಸದಿ ಬದುಕುವ..
ಬದುಕಿನ ಕಣ್ಮಣಿಗಳು..
ಅವರೇ ನಮ್ಮ ಕಾರ್ಮಿಕರು.

ರಚನೆ:ಚೌಡ್ಲಾಪುರ ಸೂರಿ

*******************************
"ನನ್ನವಳು"

ಮಲೆನಾಡಿನ ತಪ್ಪಲಿನಲ್ಲಿ,
ಕೊರೆಯುವ ತಂಪಿನಲ್ಲಿ
ಸೂರ್ಯ ಮೂಡಿ,
ಪಕ್ಷಿಗಳು ಝೆ0ಕಾರಿಸಿ,
ಉನ್ಮಾದದಲಿ ತೇಲುವ,
ಸವಿಯಾದ ಸಮಯದಲ್ಲಿ
ಉದಯಿಸಿದವಳೇ ಈ ಅಪ್ಸರೆ...

ಸೌಂದರ್ಯ ಒತ್ತಿಹಳು
ಸಂಸ್ಕೃತಿ ಬೆಳಗುವಳು.
ನಯನದಲಿ ಕೊಲ್ಲುವ,
ಮಾಯ ಜಿಂಕೆ...
ಹಣೆಗೆ ತಿಲಕವ ಇಟ್ಟು,
ಕಿವಿಗೆ ಬಂಗಾರವ ತೊಟ್ಟು.
ಹೆಜ್ಜೆಗೆ ಗೆಜ್ಜೆಯ ಕಟ್ಟಿ,
ಬಳೆಗಳ ನಾದಗೈಯುವ,
ನಾದಲೀಲೆ...

ಕಣ್ಣುಹುಬ್ಬಲೇ ಹೃದಯ 
ತಿವಿಯುವ,ಕೆಂದುಟಿಯ
ತಾವರೆ..
ಹಾಲುಗಲ್ಲದ ಅರಸಿ,
ಮುತ್ತಿದರೆ ಜಾರುವ,
ಗುಳಿಗೆನ್ನೆಯ ಸುಂದರಿ.
ಸೀರೆಯನ್ನುಟ್ಟು ಜಗಕೆ
ಮೆರಗು ನೀಡುವ ಮಯೂರಿ..

ನಕ್ಷತ್ರಗಳ ನಾಚಿಸುವ,
ಮಿನುಗು ತಾರೆ.
ಸಾಹಿತ್ಯಕ್ಕೆ ಜೀವ ತುಂಬಿ,
ಉತ್ತುಂಗಕ್ಕೆ ಮೆರೆಸುವ,
ಗಾನಗಂಧರ್ವೆ..
ಇವಳ ಸಪ್ಪಳಕ್ಕೆ ,ಎಲ್ಲರ
 ಹೃದಯ ಕುಣಿಸುವ,
ನಾಟ್ಯಪ್ರವೀಣೆ...
ಒಡಲಲ್ಲಿ ಸಂಸ್ಕೃತಿ ತುಂಬಿ
ಎಲ್ಲೆಡೆ ಪಸರಿಸಲು ಹವಣಿಸುವ
ಚೆಂದದ ಚೆಲುವೆ...

ಇವಳೇ ನನ್ನವಳು, ಮನದ ನೈದಿಲೇ....


ರಚನೆ:ಚೌಡ್ಲಾಪುರ ಸೂರಿ.

*******************************

"ಪ್ರೇಮ ಪಯಣ"

ಜೀವನವೇ ಹಾಗೆ..!
ಎತ್ತ ಸಾಗುವುದೋ ತಿಳಿಯದು..
ಎಲ್ಲಿ ತಲುಪುವುದೋ ಅರಿಯದು..
ಯಾವ ಋಣವೋ..,
ಯಾವ ಅನುಬ0ಧವೋ..,
ಯಾವ ಹಿನ್ನೆಲೆಯಲ್ಲಿ ನೋಡಿದರೂ ಗುರುತಿಲ್ಲದವರು...
ಪರಿಚಯ ದೂರದ ಮಾತು.
ಇಂದು ಸನಿಹವಾಗುತ್ತಿರುವುದು ರುಜುವಾತು...

ಮೊದಮೊದಲು ಸಹಜತೆ.
ದಿನಕಳೆದಂತೆ ಸ್ನೇಹಪರತೆ.
ಮುಂದುವರಿದ ಆತ್ಮೀಯತೆ...
ಆತ್ಮೀಯತೆ ಪ್ರೇಮದ ಶಿಖರವೇರಿತೆ..?!
ಪ್ರತಿಕ್ಷಣವೂ ತಳಮಳ..
ತಲೆದೋರಿತು ಕಳವಳ..
ಏಕೋ,ಹೇಗೋ..
ಏನೋ ಒಂಥರಾ..
ಮೊದಲ ಮಾತು,
ಮೊದಲ ನೋಟ.
ಮೊದಲ ನಗು.
ಪ್ರೇಮ ಪಯಣದ ದಾರಿ ಸಾಗಿತೇ...?
ಮನದ ದುಗುಡ ದೂರವಾದೀತೇ...!

ರಚನೆ:ಚೌಡ್ಲಾಪುರ ಸೂರಿ

*******************************

ಸ್ವಪ್ನ....

ನನ್ನರಸಿ ಬಂದಿಹಳು ..
ಬಾಗಿಲ ಬಳಿ ನಿಂತಿಹಳು.
 ಏನೆ0ದು! ಹಾಡಿ ಕರೆಯಲಿ
 ಅವಳ, ನನ್ನ ಅರಮನೆಗೆ.
ಅಮೃತ ಜಲದಿ 
ಬಾಗಿಲ ತೊಳೆದು.
ಅರಿಶಿನ ಕುಂಕುಮ ಹಚ್ಚಿ ..
ಪುಷ್ಪ ರಾಶಿಯ ಚೆಲ್ಲಿ, ಸಿದ್ದಗೊಳಿಸಿಹೆನು.

ಏನೆಂದು? ಹಾಡಿ ಕರೆಯಲಿ
 ನನ್ನರಸಿಯ ...
ಭಜಂತ್ರಿಯರು ಮೇಳವ
 ಮೇಳೈಸಿ ....
ತಂತಿ ನಾದವ ಮಿಟುತಿಹರು.
ಬಂದು ಬೀಗರು !! ಸಂತೋಷದಿ
 ಬಲಗಾಲು ಇಡು ಎನ್ನುವರು.


ಹೇಗೆ ? ಹಾಡಿ ಕರೆಯಲಿ,,,
 ನನ್ನರಸಿಯ ...
ನನ್ನ  ಮನೆಯ ಲಕ್ಷ್ಮಿ ಎಂದು
 ಹರಸುವರು ಹಲವರು...
ಸಂತಾನ ಬೆಳೆದು,ದೊಡ್ಡದಾಗಲಿ
ಎನ್ನುವರು ಕೆಲವರು ...
ಹೇಗೆ ಕರೆಯಲಿ ನನ್ನರಸಿಯ ನನ್ನ ಅರಮನೆಗೆ.

ಸಂಭ್ರಮದ ಸಡಗರ ಕಂಡು.
ನಾಚಿ ನೀರಾದಳು ನನ್ನವಳು.
ಮೆಲ್ಲಮೆಲ್ಲನೆ ಕಾಲನಿಟ್ಟು ,
ತೆರದಿ ಬಾಗಿಲ ಹೊಕ್ಕು... ನನ್ನರಸಿಯ ಪ್ರವೇಶಕ್ಕೆ,, ಹೃದಯವೇ ಕುಣಿದಾಡಿತು.
 ಹುಚ್ಚೇದು !!!
ಕಣ್ತೆರೆದೇ  ಸ್ವಪ್ನವಾಯಿತು ಎಲ್ಲವೂ......

ರಚನೆ:ಚೌಡ್ಲಾಪುರ ಸೂರಿ.





"ಹಾತೊರೆ"

ಬೆರೆತ ಭಾವನೆಗಳು ,
ಹೃದಯದಲಿ ಹುದುಗಿ.
ಪದೇಪದೇ ಚಡಪಡಿಸುತ್ತಿದೆ.
ಮೌನವು ತಬ್ಬಿಬ್ಬಾಗಿ!!
 ಭಾವನೆಗಳು ಹೊರಹೋಗಲು,
ಸಮಯವ ಹುಡುಕುತಿದೆ.
ಏನೋ ದುಗುಡ,
ಏನೋ ಕಳವಳ,
ಸಿಗುವುದೋ,ಬಾರದ ಲೋಕಕ್ಕೆ
ಲಗ್ಗೆ ಇಡುವುದೋ....
ಅರಿಯದಾಗಿದೆ ಮನ.
ಆದರೂ ಕೊಂಚ ಉಸುರುತ್ತಿದೆ
ಹೃದಯಾಂತರಂಗ...
  ಮರಳಿ ಗೂಡು ಸೇರಲು.
ಪಂಜರದೊಳ್ ಅವಿತಿರುವ,
ಮೂಖಪಕ್ಷಿಯು ,,
ಬಾಹ್ಯ ಪ್ರಪಂಚಕ್ಕೆ ಲಗ್ಗೆ 
ಇಡಲು ಹವಣಿಸುವಂತೆ..
ಇಂದೇಕೋ ಹೃದಯಪಕ್ಷಿಯು,
ಹಾತೊರೆಯುತ್ತಿದೆ..

ರಚನೆ:ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤


"ಪಟ್ಟ ಕಟ್ಟೋಣ"

ಎಚ್ಚರನಾಗು ಮತದಾರ ಪ್ರಭುವೇ..
ಹಗಲಿರುಳು ಶ್ರಮಿಸುವ
ಸೇವಕನ ಆಯ್ಕೆ ಮಾಡು.
ಸೇವೆಯೇ ದೈವ ಎನ್ನುವ 
ಮಾಂತ್ರಿಕನ ಆರಿಸು.

ನಾನು ಬಡವ,ನಾನು ರೈತ
ಮಾತಿನಲ್ಲಿ.
ಕೋಟಿ,ಕೋಟಿ ಅವರೆ0ಡಿರ! ಮಕ್ಕಳ ಖಾತೆಯಲ್ಲಿ.
ಹಣ,ಹೆಂಡ ಹಂಚುವ
ದುಷ್ಟನಿಂದ ದೂರವಿರು.
ಅಪ್ಪ-ಅಣ್ಣ, ಅಕ್ಕ-ತಂಗಿ,ಮಾವ-ಅಳಿಯ ಎನ್ನುವ ಕಪಟಿಗೆ
ಮರುಳಾಗಬೇಡ ಪ್ರಭುವೇ.

ಹಳ್ಳಿಗಳ ಶ್ರೇಯಸ್ಸು,
ಯುವಕರಿಗೆ ಕೆಲಸವೆಂಬ
ಭಾಷಣ ಬಿಗಿದು ಮತವ
 ಬೇಡುವರು.
ಅಧಿಕಾರಕ್ಕಾಗಿ! ಜಾತಿ
 ಧರ್ಮಗಳಿಗೆ  ಬೆಂಕಿಹಚ್ಚಿ
ಸಾಮರಸ್ಯ ಕದಡುವರು.
ಜಾಗೃತನಾಗು ಮತದಾರ ಪ್ರಭು.

ನೋಟಿಗಾಗಿ ವೋಟು ಬೇಡ.
ಸ್ವಚ್ಛ ,ಪಾರದರ್ಶಕ ,ಸರ್ಕಾರವ
ಆರಿಸೋಣ.
 ಕಾಯಕ ಯೋಗಿಗೆ ಪಟ್ಟವ
ಕಟ್ಟೋಣ.
ದೇಶ ರಾಜ್ಯದ ಹಿತಕ್ಕಾಗಿ
ತಪ್ಪದೆ ಮತದಾನ ಮಾಡೋಣ.

ರಚನೆ:ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤
"ಕಾರಣೀಭೂತ"

ಎಲ್ಲಿ ನೋಡಿದರೂ ತುಂಬಿ ಹರಿಯುವ,,
ಹಳ್ಳ-ಕೊಳ್ಳ,ಕೆರೆ-ಕಟ್ಟೆಗಳು.
ಭೂತಾಯಿಯೇ ಹಸಿರ ಹೊದ್ದು,
ಮಲಗಿದ್ದಳು..
ನೆಮ್ಮದಿಯಲ್ಲಿತ್ತು ಜೀವಜಗತ್ತು.
ಅತಿಬುದ್ಧಿ ಜೀವಿ,ಜಲವ ನುಂಗಿದ....


ಸಿಕ್ಕ ಸಿಕ್ಕಲ್ಲಿ ಭೂತಾಯಿ
 ಒಡಲ ಕೊರೆದ.
 ಉಕ್ಕಿದ ಜಲವ ಕಂಡು,
ದುರಾಹಂಕಾರಿಯದ.
ಇಳೆಯ ಜಲವ ಬಸಿದು,
ಬರಿ ಒಡಲು ಮಾಡಿಬಿಟ್ಟ.

ಜೀವರಾಶಿಗಳು ಸೊರಗುತ್ತಿವೆ,
ನಿನ್ನ ನೀಚ ಕೃತ್ಯಕೆ.
ಮರಗಿಡಗಳು ಒಣಗಿ,
ಅಸ್ಥಿಪಂಜರದಂತೆ ನಿಂತಿವೆ.
ನಿಲ್ಲಲು ನೆರಳಿಲ್ಲ, ಕುಡಿಯಲು ನೀರಿಲ್ಲ, ಏನನ್ನಾದರೂ ಉಳಿಸಿದ್ದಿಯಾ??


ಮಳೆರಾಯನಿಗೆ ಶಪಿಸುತ,
ನಿನ್ನ ಕರ್ಮವ ದೇವರ
 ಮೇಲೊರಿಸಿ,......
ಮುಗಿಲಿಗೆ ಕೈ ಒಡ್ಡಿ
ಕಾದು ಕುಂತಿರುವೆ..
ಪಾಪದಕೊಡತುಂಬಿಹದು!
ಇನ್ನಾದರೂ ಉಳಿಸಿ,ಬೆಳಸು...
ಗಿಡಮರ,ಜಲವ...

ರಚನೆ:ಚೌಡ್ಲಾಪುರ ಸೂರಿ..

👤👤👤👤👤👤👤👤👤👤👤👤
"ನನ್ನವಳು"

ಹಣೆಗೆ ಕೆಂಪು ತಿಲಕವನಿಟ್ಟು,
ನೀಳ ಜಡೆಗೆ ಮಲ್ಲಿಗೆ ಪೋಣಿಸಿ,
ಇಳಕಲ್ ರೇಷ್ಮೆಯ ಸೀರೆಯನುಟ್ಟು..
ಬಳ್ಳಿಯಂತೆ ಬಳುಕುವ ವೈಯಾರಿ
ಇವಳು ನನ್ನವಳು...

ಸೌಂದರ್ಯವನ್ನೇ ಬಂಗಾರವಾಗಿಸಿ.
ಶಾಸ್ತ್ರಕ್ಕೊಂಚೂರು ಆಭರಣ ಧರಿಸಿ,
ಮೂತಿಯ ತಿರುಗಿಸಿ
ಮನದಲ್ಲೇ ಶಪಿಸುವ
ಮಾಯದ ಮೋಡಿ
ಇವಳು ನನ್ನವಳು...

ಚೆಲುವರಾಶಿಯ ಹೊಂಬಣ್ಣ,
ಹೃದಯಬಡಿಸುವ ನಯನಗಳು,
ಮುತ್ತಿಟ್ಟರೆ ಜಾರುವ ಗುಳಿಕೆನ್ನೆಗಳು,
ಸಿಡಿಲಬ್ಬರದ ಮಾತಿನ ಮಾಟಗಾರ್ತಿ
ಇವಳು ನನ್ನವಳು...

ಸಂಸಾರದ ನೊಗ ಹೊತ್ತು,
ಬೀಗರು,ಬಿಜ್ಜರ ಚಾಕರಿ ಮಾಡಿ,
ಕಷ್ಟದೊಳ್ ಎಲ್ಲರನು ಸಲಹುತ,
ನೋವು0ಡು,ನಲಿವು ಚೆಲ್ಲುವ ,
ನಗೆಮಲ್ಲಿಗೆಯ ಚೆಲುವೆ
ಇವಳು ನನ್ನವಳು...

👤👤👤👤👤👤👤👤👤👤👤👤👤👤👤
 "ಬೆಡಗಿ"
ಸಂಸ್ಕೃತಿಯ ಸೌಂದರ್ಯೆ!
ನಿನಗಾರು ಸಾಟಿ?
ಸಿಡಿಲಬ್ಬರದ ಬೆಡಗಿ
ನಿನ್ನ ಮೀರಿಸುವವರಾರು?.

ತಾಳ್ಮೆಯ ಶಾಂತಿದೇವತೆ,
ಕರುಣೆಯ ಕಡಲಿನ ರೂಪಸಿ
ನಿನಗಾರು ಸಾಟಿ?
ನೊಂದರು ನಗುವ
ನಗುಮುಖದ ಮನೋಹರಿ.
ನಿನಗಾರು ಸಾಟಿ!!

ಕಾಡ್ಗಿಚನ್ನೇ ನಯನದಲ್ಲಿ
ತುಂಬಿರುವ ನಯನ ಮನೋಹರಿ.
ಪುಷ್ಪವನ್ನೇ ನಾಚಿಸುವ
ಪುಷ್ಪ ಸುಂದರಿ.
ನಿನಗಾರು ಸಾಟಿ!!

ಅಂತರಾಳದ ಪ್ರೀತಿಯ,
ಬಿತ್ತುವ ಪ್ರೇಮದ ಬೆಡಗಿ.
ಸಾಹಿತ್ಯಲೋಕದಲ್ಲಿ ಮಿನುಗುವ,
ಸಾಹಿತ್ಯದ ಬೆಡಗಿ.
ನಿನಗಾರು ಸಾಟಿ!!.

ಸುಮಧುರ ಕಂಠವ ಹೊತ್ತ,
ಸಿರಿಕಂಠದ ಬೆಡಗಿ.
ಸಿಹಿಧ್ವನಿಯ,ಎಲ್ಲರ ಮನಗೆಲ್ಲುವ,
ಅಮೃತ ಮಾತಿನ ಬೆಡಗಿ.
ನಿನಗಾರು ಸಾಟಿ!!.

👤👤👤👤👤👤👤👤👤👤👤👤👤👤
"ತುಂಟ"

ಅಜ್ಜಿಯ ಸೆರಗಿಗೆ,
ಕೈಯನು ಚಾಚಿ,
ಮನದಲಿ ಖುಷಿಯ
ಬರಹವ ಗೀಚಿ,
ಬಸ್ಸನು ಏರಿ,
ನಗುವನು ಬೀರಿ,
ಅಜ್ಜಿಯ ದಾರಿಲಿ ಹೊರಟಿಹೆನು.

ಅಜ್ಜಿಯ ಬಜ್ಜಿಯ ..
ಹೋಳಿಗೆ ತುಪ್ಪವ..
ಗಪಗಪ ಸವಿಯಲು..
ಮಾವು,ನೇರಳೆ,ಹಲಸಿನ
ವಾಸನೆ,,ಮನಸನು ಕೆದಕುತಿದೆ.

ಹಳ್ಳ,ಕೊಳ್ಳ ಎಲ್ಲೆಡೆ
ಈಜಿ,ಮಾವನ ಬೈಗುಳ!
 ಕೇಳಿದ ಕಿವಿಯಲ್ಲಿ ಬಿಟ್ಟು...
ಚಿನ್ನಿದಾoಡು, ಕ್ರಿಕೆಟು ಬ್ಯಾಟು
ಕೈಯಲಿ ಹಿಡಿದು,
ಓಣಿಯ ತಿರುಗಿ
ಗೆಳೆಯರು ಕೂಡಿ.
ಕುಣಿ !ಕುಣಿ!ಕುಣಿದಾಡಿದೆವು.

ಕೋತಿಯಾಗಿ ಮರವನ್ನು ಏರಿ,
ಮರಕೋತಿ ಆಡುವೆವು.
ಸವೆದ ಟೈರಿಗೆ ಹಗ್ಗವ ಕಟ್ಟಿ..
ತಂಪಿನ ಮರದಲಿ ,
ಜೋಕಾಲಿ ಜೀಕಿ
 ನಲಿದಾಡಿದೆವು.
ತುಂಟರ ತುಂಟ ,
ನಿನ್ನಯ ಬಂಟ.
ಅಟ್ಟುವೇ ನಿನ್ನ ಪಟ್ಟಣಕೆ
ಎನ್ನುವ ಹಾಗೆ  ಪೀಡಿಸಿ ಅಜ್ಜಿಯ ಕಾಡುವೆನು....

ರಚನೆ:ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤👤
ಆರಂಭ...

ಮೋಡವು ಕವಿದು..☁
ಗುಡುಗು ಬಡಿದು..🌩
ಮಳೆಯನು ಸುರಿಸುತ,⛈
ಮನವನು ತಣಿಸುತ,
ಇಳಿದನು ಇಳೆಗೆ ಮಳೆರಾಯ...☔



ಮೋಡಗಳ ಆಟಕೆ..⛈
ಮಳೆಯ ರಭಸಕೆ..💦
ತುಂಬಿ ತುಳುಕಿದವು
ನದಿ ಸರೋವರಗಳು..

ಸ್ವರಗಳ ಹೊರಡಿಸುತ,
ಹೆಜ್ಜೆಯ ಹಾಕುತ,
ಕಡಲನು ಸೇರಲು ..
ಓಡಿದ ಜಲಪಾತಗಳು...


ಒಣಗಿದ ಗರಿಕೆಯು,
ತಟ್ಟನೆ ಚಿಗುರಿ..
ಹಸಿರಿನ ಸಿರಿಯು
ಎಲ್ಲೆಡೆ ಹರಡಿ
ನೋಡುಗರ ಮನದೂಗಿಸಿದವು..

ತುಂತುರು ಮಳೆಯ
ಸ್ಪರ್ಶಕೆ ಸಿಲುಕಿ,
ಪುಳಕಿತನಾದನು,
ಕಾಯಕ ಯೋಗಿ.
ನೇಗಿಲ ಹಿಡಿದು,
ಉತ್ತಿ ಬಿತ್ತಲು ಹೊರಟಿಹನು.


ರಚನೆ:
 ಚೌಡ್ಲಾಪುರ ಸೂರಿ

👤👤👤👤👤👤👤👤👤👤👤👤👤👤👤
 "ಗಣಿ ಮಂದಿ"

ಗಣಿನಾಡಿನ ಪ್ರಭುಗಳು
ಗಣಿಧಣಿಗಳಲ್ಲ,
ಹೃದಯಧಣಿಗಳು.
ಬಿಸಿಲಿಗೆ ಕಪ್ಪಾದರೂ
ಕಸ್ತೂರಿ ಮನಸ್ಸಿನವರು.

ಖಡಕರೊಟ್ಟಿ ಬದನೆಕಾಯಿ
ಮೆಯ್ದವರು.
ಕಿಂಟಲ್ ಗಟ್ಟಲೆ ಹತ್ತಿ,ಭತ್ತ
ಹೆತ್ತೋರು.
ಅವರೇ ಗಣಿನಾಡಿನ ಹುಲಿಗಳು.
ದಪ್ಪ ಮೀಸೆ ಬಿಟ್ಟವರು
ಪೈಲ್ವಾನ್ ಸೋಲ್ಸವರು.
               
         /ಗಣಿನಾಡಿನ ಪ್ರಭುಗಳು/

ಕಚ್ಚೆ ಧೋತ್ರ ಉಟ್ಟವರು.
ನಿಯತ್ತಿನ ಬುದ್ಧಿ ಇದ್ದವರು.
ಅಂಬು,ಉಂಬು, ತಿಕ್ಕ,ಕೋಡಿ
ನಮ್ಮ ಭಾಷೆ ಅನ್ನೋರು.
ಬೆಂಗಳೂರು, ಮಂಗಳೂರು ಕನ್ನಡ ಕಂಡು ಕಿಸುಕ್ಕೆಂದು
ನಕ್ಕವರು.

  /ಗಣಿನಾಡಿನ ಪ್ರಭುಗಳು/

ದೊಡ್ಡಾಕೆಂದು ಮಗಳನ್ನು
ಮದುವೆ ಮಾಡಿ ಬಿಟ್ಟರು.
ಶಾಲೆ ಗೀಲಿ ಒಲ್ಲೆ ಎಂದು
ಹೊಲವ ಧಣಿಗೆ ಇಟ್ಟರು.
ಹೆಬ್ಬಟ್ಟು ಒತ್ತಿ ಇರೋ
ಹೊಲವ ಕಳಕಂಡು ಬಿಟ್ಟಾರು..
ಸಾಲದ ಸುಳಿಗೆ ಸಿಕ್ಕಿ.
ಎಣ್ಣೆ ಕುಡಿದು ಬಿಟ್ಟಾರು...

 /ಗಣಿನಾಡಿನ ಪ್ರಭುಗಳು/.
👤👤👤👤👤👤👤👤👤👤👤👤👤

 'ಮರೆತೋದವೆ?..

ಹಗಲು ಇರುಳೆನ್ನದೇ,
ಜಪಿಸುವ ಈ ಹೃದಯವ..
ತೊರೆದು ಬದುಕುತ್ತಿರುವೆಯೇ?
ನನ್ನ ಮನದ ಮಂದಾರ.

ಪ್ರೀತಿಯಾಗಸದಲ್ಲಿ ತೇಲಾಡಿದ
ದಿನಗಳ ಮರೆತೆಯೇ?
ಕ್ಷಣಕ್ಷಣಕ್ಕೂ ಹೃದಯ ಮೀಟಿದ
ನಿನ್ನ ನೆನಪುಗಳನ್ನು ದೂಡಿದೆಯೇ?

ಊಟ ನಿದ್ರೆಯ ಭಂಗಿಸಿ
ಸಂದೇಶಕ್ಕಾಗಿ ಹಾತೊರೆಯುತ್ತಿದ್ದ,,,
ಪ್ರೀತಿಯಾ ಮರೆತೆಯೇ?
ನಿನ್ನ ಹೆಸರನ್ನು ಮರೆಮಾಚಿದಾಗ
ವಿಲ ವಿಲ ಒದ್ದಾಡಿದ
ಕ್ಷಣಗಳು ನಿನ್ನಲ್ಲಿ ಉಳಿದಿಲ್ಲವೇ?

ಎಷ್ಟೋ ಕಷ್ಟಕಾರ್ಪಣ್ಯಗಳನ್ನು
ಬಿಸುಟಿ ಓಡಿಬಂದು ಆಲಿಂಗಿಸಿದ ,ಆಲಿಂಗನವ ಮರೆತೆಯೇ?
ಇನ್ನಾದರೂ ನೆನಪುಗಳಿಗೆ ಮರುಜನ್ಮವಿದೆಯೇ? ಗೆಳತಿ.

ಪ್ರೀತಿಯ ತೊರೆದು
ನೆನಪಿನ ಬುತ್ತಿಯಾಗಿ ಉಳಿಯುತ್ತಿಯಾ? ಗೆಳತಿ.
ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ...
ಆ ನೆನಪುಗಳು ಮರೆತೊದವೆ ???.

ರಚನೆ. ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤

 "ಜೀವದ ಸೆಲೆ "
ನಿನ್ನ ಒಡನಾಟದಿ..
ಮರ ಚಿಗುರಿದಂತೆ..
ಮನ ಚಿಗುರಿತು.
ನಿನ್ನಯ ಮಂದಹಾಸದಿ..
ಪುಟಿದೆದ್ದಿತು ಬತ್ತಿದ ಹೃದಯ.

ಬೆಂಡಾಗಿ,ಬಸವಳಿದು ಸುಟ್ಟು,
ಕರಕಲಾದ ಈ ಜೀವಕ್ಕೆ..
ನಿತ್ಯ ಸಂಜೀವಿನಿ ಆಯ್ತು!
ನಿನ್ನ ನಗುವಿನ ಅಲೆ..

ಕೊಚ್ಚಿ ಹೋಯಿತು ದುಃಖದ ಸುನಾಮಿ,
ಸಾಗರದ ಅಲೆಗಳಲ್ಲಿ..
ನಿನ್ನೊಡಗೂಡಲು ತೇಲುತ್ತಿದೆ
ಹುಚ್ಚು ಮನಸ್ಸು ಪ್ರೀತಿಯ ಬಯಕೆಯಲ್ಲಿ...

ಬದುಕಿಗೆ ಜೀವ ತುಂಬಿದೆ,
ಖುಷಿಯಲಿ ವಿರಮಿಸಲು..
ಎಂದೆಂದಿಗೂ ಒಡನಾಡಿಯಾಗು
ಜೀವದ ಒಡತಿ ನನ್ನನ್ನು ಸಂತೈಸಲು..

ಜೀವದ ಸೆಲೆಯಾಗಿ,
ಹೃದಯದಲಿ ಬಂಧಿಯಾಗು ನಿತ್ಯನಿರಂತರ...
ನಿನ್ನದೇ ಸುಳಿಗಾಳಿಯಲ್ಲಿ,
ಜೀವ ಸವೆಸುವೆ ತೋರದೆ ಆತುರ...
👤👤👤👤👤👤👤👤👤👤👤👤👤

"ಯುಗಾದಿ"

ಚೈತ್ರದ ಚಿಗುರು,
ಚಿಗುರಿನ ಒಗರು,
ತರುತಿದೆ ಪ್ರಕೃತಿಗೆ ಹೊಸ ಮೆರಗು.
ಬರುತ್ತಿದೆ  ನವ ವರುಷ
ತರುತ್ತಿದೆ ಹೊಸ ಹರುಷ.

ದುಃಖ ದುಮ್ಮಾನಗಳ ಮರೆಸಲು,
ಸುಖ ಶಾಂತಿ ನೆಲೆಸಲು,
ಬೇವು ಬೆಲ್ಲ ಸವಿಯಲು,
ಬರುತ್ತಿದೆ ನವ ವರುಷ
ತರುತ್ತಿದೆ ಹೊಸ ಹರುಷ.

ಚಿಗುರುವ ಮರಗಿಡ,
ಕೂಗುವ ಕೋಗಿಲೆ,
ಕುಣಿಯುವ ಖಗಮೃಗ,
ಸಂತಸ ಹಂಚುವ ಕಾಲ.
ಬರುತ್ತಿದೆ ನವ ವರುಷ
ತರುತ್ತಿದೆ ಹೊಸ ಹರುಷ.

ಹೊಸತನವಿದು ವಸಂತಕಾಲ.
ರೈತರ ಮೊಗದಿ ಸಂತಸತಂದು,
ಹೊನ್ನಾರು ಹೂಡಿ,ಉತ್ತುವ ಕಾಲ
ಬರುತ್ತಿದೆ ನವ ವರುಷ
ತರುತ್ತಿದೆ ಹೊಸ ಹರುಷ.🍃

ರಚನೆ..ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤

 "ಅವನಾರು"

ಹೇ, ಮನದೆನ್ನೆಯೇ?
ಸ್ವಪ್ನಲೋಕದ ಸುಂದರಿಯೇ
ವರ್ಣಿಸಲಾಸದ್ಯ ನಿನ್ನ
ಸೌಂದರ್ಯದ ಸಿರಿಯ...
ಜಗದ ಸೌಂದರ್ಯ ನಿನ್ನಲ್ಲಿಯೇ
ಸೃಷ್ಟಿಸಿದ .ಸೃಷ್ಟಿಕರ್ತನಾರು?...

ಕಲ್ಪನಾ ಲೋಕದಲ್ಲಿ
ಮುಳುಗಿ ,ತೆಗೆದ
ಚೆಲುವಿನ ಪದಗಳು.
ಹಾಲ್ಗೆನ್ನೆಯ ಒಡತಿ.
ಮಂದಹಾಸದ ಗೆಳತಿ,
ಕೆಂದುಟಿಯ ಪ್ರಣತಿ,
ನಿನ್ನ ಕಡೆದವರು ಯಾರು?....

ಕರೆಯುವ ರೆಪ್ಪೆಗಳು,
ನಾಚುವ ಮೊಗವು.
ಬಳುಕುವ ನಡುವ
ಬೆಸೆಯುವ ಹೃದಯವ,
ಹಂಸ ನಡಿಗೆಯ ಒಡತಿಯೇ
ಕೆತ್ತಿದ ಶಿಲ್ಪಿ ಅವನಾರು?......

ನೀಳವಾದ ಜಡೆಯ,
ಮುತ್ತಿಕ್ಕುವ ಹಣೆಯ...
ಕಡಲನ್ನೆ ತನ್ನೊಳಗೆ
ಅಡಗಿಸಿರುವ ನಯನಗಳು.
ಕೈ ಬೀಸಿ ಕರೆಯುವ
ಸಹೃದಯಿ ಕರಗಳು.
ಪಟಪಟನೆ ಪಠಿಸುವ
ಪಟ್ಟಾದರಸಿಯೆ ನೀನು.
ನಿನ್ನ ಬಿಂಬಿಸಿದ ಬಿಂಬಕನಾರು?

ರಚನೆ: ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤

 "ಪೊಳ್ಳು"

ಪ್ರೀತಿ ಪ್ರೇಮ ಎಂಬುದು
ಬರೀ ಪೊಳ್ಳು ನೋಡಣ್ಣ.
ಸಮಯವರಿತ ಪ್ರೀತಿ ಇದು
ದಿಟ ನೋಡಣ್ಣ.

ಜಗವ ನನ್ನ ಮುಂದೆ
ಎಂದು ಪುಂಗಿ ಬಿಡುವರು
ನೀನೆ  ನನ್ನ  ಪ್ರಾಣ
ಎಂದು ಪ್ರಣಯ ಬೇಡುವರು.

ಇವಳೇ ಪ್ರೇಮಪಕ್ಷಿ ಎಂದು
ಜಗಕೆ ಸಾರುವರು.
ತಂದೆ ತಾಯಿ ಕಂಡಾಗ
ಮೂಕರಂತೆ ತಡಬಡಿಸುವರು.

ದಿನವೂ ಉರುಳಿದಂತೆ
ದೂರ ಓಡುವರು.
ನೆನಪಿನಲ್ಲಿ ಕಾಲ ಕಳೆಯುತ್ತ
ಜೀವನ ದೂಡುವರು.

ರಚನೆ: ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤

 ಸಮಸ್ತ ನನ್ನ ಆತ್ಮೀಯ ಸ್ನೇಹಿತೆಯರಿಗೆ ಮತ್ತು ಸಹೋದರಿಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು.ಹೆಣ್ಣನ್ನು ಪೂಜಿಸೋಣ,ಆರಾಧಿಸೋಣ ಮತ್ತು ಸಮಾಜಮುಖಿಯಾಗಿ ಹಾಗೂ ಅವರೂ ಕೂಡ ಸಮಾನರು ಎಂಬ ಅರಿವನ್ನು ಮೂಡಿಸೋಣ.ಅವರಿಗಾಗಿ ನನ್ನ ಕವನ ಅರ್ಪಣೆ.

 "ಬದಲಾಗೋಣ"

ಹೆರುವೆ ಹೊರುವೆ
ಕಣ್ಣ ರೆಪ್ಪೆಯಂತೆ ರಕ್ಷಿಸುವೆ.
ಹೃದಯ ತುಂಬಾ ತುಂಬಿಕೊಂಡು
ನೋವಿನಲ್ಲೂ ನಲಿಯುವೆ.
ಆದರೂ ತಾತ್ಸಾರ ಹೆಣ್ಣು ಎಂಬ
ಕಾರಣಕ್ಕೆ...

ಅಂಧಕಾರದಲ್ಲಿ ಮುಳುಗಿ ,
ಹೆತ್ತತಾಯಿಯ ದೂಡುತಿರುವೆ
ವೃದ್ದಾಶ್ರಮಕ್ಕೆ.,
ಒಡಲಲ್ಲಿ ಇಟ್ಟುಕೊಂಡು,
ಕಷ್ಟಸುಖವ ತಾಳಿಕೊಂಡು
ಸಾಕಿ ಸಲಹಿ ಬೆಳೆಸಿದಳು..
ಆದರೂ ತಾತ್ಸಾರ ಹೆಣ್ಣು ಎಂಬ
ಕಾರಣಕ್ಕೆ...

ಕೂಲಿ ನಾಲಿ ಮಾಡಿ ನಿನ್ನ,
ಬೊಗಸೆಯಲ್ಲಿ ಬೆಳೆಸಿದಳು,
ತನ್ನ ರಕ್ತ ಬಸಿದು
ಕಡಲ ಮುತ್ತಿನಂತೆ ಕಾಯ್ದವಳು.
ಆದರೂ ತಾತ್ಸರ ಹೆಣ್ಣು ಎಂಬ
ಕಾರಣಕ್ಕೆ...

ಅಂಧಕಾರಕ್ಕೆ ಮುಕ್ತಿ ನೀಡಿ
ದೇವತೆಯಂತೆ ಪೂಜಿಸೋಣ
ನಮ್ಮ ಸ್ತ್ರೀಕುಲವನ್ನು.
ಜನನಿಗೆ ಜೈ ಎನ್ನೋಣ ಬನ್ನಿ
ಮನುಜ ಕುಲದ ಬಂಧುಗಳೇ...🙏🏻.

ರಚನೆ:ಚೌಡ್ಲಾಪುರ ಸೂರಿ.
Nps ಅಧ್ಯಕ್ಷರು.
ಸಿರುಗುಪ್ಪ.
👤👤👤👤👤👤👤👤👤👤👤👤👤

"ಮಿನುಗುವ ತಾರೆ"

ಅಬ್ಬಬ್ಬಾ! ಎ0ತಹ,ಸೋಜಿಗ
ಮಿನುಗುವ ಕಂಗಳು.
ಕುಣಿದಾಡುವ ಎಳೆಮನಸ್ಸುಗಳು.
ಕಡಲಿನಾಳದ ಮುತ್ತುಗಳು
ಸರಸ್ವತಿಯ ಪುತ್ರ ರತ್ನಗಳು.
            / ಅಬ್ಬಬ್ಬಾ/

ದೇವರ ರೂಪದ ಮೂರ್ತಿಗಳು
ಜಗವರಿಯದ ಮನಸ್ಸುಗಳು
ಎಲ್ಲರ ನಗಿಸುವ ನಗೆ ಪಟಾಕಿಗಳು
ಗುರು ಹಿರಿಯರ ಮೆಚ್ಚಿಸುವ ಮೇಧಾವಿಗಳು.
                    /ಅಬ್ಬಬ್ಬಾ/

ಜಾತಿ ಧರ್ಮ ಮೀರಿದ
ಎಲ್ಲರ ಒಡನಾಡಿಗಳು
ಎಲ್ಲರ ನಾಚಿಸುವ
ನಯನ ತಾರೆಗಳು
ಬಿಸಿಲ .ಬೆಳದಿಂಗಳ ಲೆಕ್ಕಿಸದೇ
ಕುಣಿದಾಡುವ ಕಣ್ಮಣಿಗಳು.
                        /ಅಬ್ಬಬ್ಬಾ/

ಕೀಟಲೆ ಮಾಡುವ
ಕಿಂದರಿ ಜೋಗಿಗಳು
ಅಂಜದೆ ನುಡಿಯುವ
ಎಳೆ ಮುತ್ತುಗಳು
ಕಲ್ಪನಾ ಲೋಕದ
ನಿಲುಕದ ನಕ್ಷತ್ರಗಳು.
                /ಅಬ್ಬಬ್ಬಾ/.

ರಚನೆ:ಚೌಡ್ಲಾಪುರ ಸೂರಿ.
👤👤👤👤👤👤👤👤👤👤👤👤👤


‬"ಜಾಗೃತನಾಗು"

ಪ್ರಾಣಕೊಡು ಸ್ವಾರ್ಥಬಿಟ್ಟು
ಭ್ರಷ್ಟರಿಂದ ದೂರವಿದ್ದು
ಕಪಟ ರಾಜಕಾರಣಿಗಳ ಕಪಟತನಕ್ಕೆ
ಮರುಳಾಗಬೇಡ.
/ಜಾಗೃತನಾಗು/

ಪ್ರಾಣವನ್ನೇ ಒತ್ತೆ ಇಟ್ಟರು
ಧೀರ ಸೇನಾನಿಗಳು
ಅವರ ರಕ್ತವನ್ನೇ ಕುಡಿಯುತಿಹರು
ದುಷ್ಟ ದುರಳ ರಾಜಕಾರಣಿಗಳು.
/ ಜಾಗೃತನಾಗು/

ದೇಶವನ್ನೇ ಬಾಚಿ ಬಳಿದು
ವಂಶವನ್ನು ಬೆಳೆಸುತ್ತಿರುವರು
ಇವರ ಮಧ್ಯೆ ಮನುಜ ಸಿಲುಕಿ
ನಲುಗುತಿಹನು.
 /ಜಾಗೃತನಾಗು/

ಹಗರಣ ಸರಮಾಲೆ ಮಾಡಿ
ದೇಶವನ್ನೇ ಪಣಕಿಟ್ಟವರು
ವಂಶ ಎಂಬ ಸ್ವಾರ್ಥದಿಂದ
ತಾಯ್ನಾಡನ್ನು ಮಾರುತಿಹಾರು.
/ಜಾಗೃತನಾಗು/

ಕೋಟಿ ಕೋಟಿ ಲೂಟಿಗೈದು
ಹತ್ತಾರು ಪಕ್ಷ ಮಾಡಿಕೊಂಡು
ಯುದ್ದ ಗೆದ್ದ ವೀರನಂತೆ
ಮೆರೆಯುತ್ತಿರುವ ದುಷ್ಟನಿಂದ
/ ಜಾಗೃತನಾಗು/

ಹಾದಿ ಬೀದಿಗಳ ತುಂಬಾ
ಫೋಟೋ ಹಾಕಿಕೊಂಡು
ಹಣ ಹೆಂಡ ಹಂಚಿ
ಅಣ್ಣಾ  ಹಜಾರೆ ಸೋಲಿಸುವವರು.
     /ಜಾಗೃತನಾಗು/.

ರಚನೆ:ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤

 "ತುಡಿತ"

ಭಾವದ ಬಂಧ
ಮನದ ಅಂದ
ಹೇಗೆ ಹೇಳಲಿ...

ಪ್ರೀತಿಯ ಕಂಪು
ಕಿವಿಯ ಇಂಪು
ಹೇಗೆ ಹೇಳಲಿ...

ನೇತ್ರದ ನೋಟ
ಚೆಲುವಿನ ಮಾಟ
ಹೇಗೆ ಹೇಳಲಿ...

ಹರೆಯದ ಪ್ರಾಯ
ಪ್ರೀತಿಯ ಮಾಯ
ಹೇಗೆ ಹೇಳಲಿ...

ಹೃದಯದ ಮಿಡಿತ
ಮನದ ತುಡಿತ
ಹೇಗೆ ಹೇಳಲಿ...

ವಿರಹದ ನೋವ
ಬಯಕೆಯ ಕಾವ
ಹೇಗೆ ಹೇಳಲಿ....

ನಿನ್ನಯ ಶ್ವಾಸ
ನೀಡುತಿರಲು ತ್ರಾಸ
ಹೇಗೆ ಹೇಳಲಿ...

ಮಾತಿನ ಮೌನ
ಮಿನುಗುವ ಮನ
ಹೇಗೆ ಹೇಳಲಿ

ಒಡಲ ನುಡಿ.
ಒಲವಿನ ಕಿಡಿ.
ಹೇಗೆ ಹೇಳಲಿ

ಕಾಯುತಿರುವೆ ಬಿಚ್ಚಿಡಲು ಅಂತರಾಳದ ಬುತ್ತಿಯ ನಾನು...
ಬರಬಾರದೆ ನನ್ನ ಬಳಿಗೆ ಒಮ್ಮೆ ನೀನು...

ರಚನೆ :ಚೌಡ್ಲಾಪುರ ಸೂರಿ.
           9480106926
👤👤👤👤👤👤👤👤👤👤👤👤👤

"ಪ್ರೀತಿಯ ಅಮಲು"

ನೆತ್ತಿಗೇರಿದೆ ಪ್ರೀತಿಯ ಅಮಲು.
ಕೇಳದಾಗಿದೆ ಮನಸು,
ಬೇಡವಾಗಿದೆ ಒಡನಾಡಿಗಳು,
ಕಾಣದಾದರು ಜನ್ಮದಾತರು.
                       /ನೆತ್ತಿಗೇರಿತು/

ಪ್ರಪಂಚವೇ ನಶ್ವರವೆನಿಸಿದೆ,
ಸ್ವರ್ಗವೇ ಪಾದಕ್ಕೆರಗಿದೆ,
ನಿಸರ್ಗವೇ ಮಂಕೆನಿಸಿದೆ.
ಕರ್ಕಶವೆನಿಸಿದೆ ಖಗಗಳ ಧ್ವನಿ.
                  / ನೆತ್ತಿಗೇರಿದೆ/

ಪ್ರೀತಿಯೇ ದೇವರು
ಎನ್ನುವ ಭ್ರಮೆಯಲ್ಲಿ,
ಕಣ್ಮರೆಯಾಯಿತು ಸಕಲವು
ನರಕದೊಳ್ ಇದ್ದರು ಸ್ವರ್ಗವೆಂಬ ಅಮಲು.
                      /ನೆತ್ತಿಗೇರಿತು/

ಮರುಗಿತು ಬೇರೆ ಮನಸು
ಅದರಗೊಡವೇನು ಎಂದಿತು
ಹುಚ್ಚು ಮನಸ್ಸು,
ನಗುವು ನಲಿವು ಶಾಶ್ವತ
ಎನುತಿದೆ ಅಮಲು.
ಹೃದಯ ಬೆಂಡಾದರು
ಶಿಖರದಲಿ ತೇಲುತ್ತಿದೆ
                 /ನೆತ್ತಿಗೇರಿದೆ/
👤👤👤👤👤👤👤👤👤👤👤👤👤

"ಮೋಹಕ ತಾರೆ"

ನನ್ನವಳು  ಚೆಲುವಿಕೆ
ಸೌಂದರ್ಯ ಹೊದ್ದಿಹಳು
ಸೌಂದರ್ಯ ದೇವತೆ
ಅವಳೇ ನನ್ನ ಮೋಹಕ ತಾರೆ

ಸೌಂದರ್ಯ ಸ್ಪರ್ಧೆಗೆ ಹೋದವಳಲ್ಲ
ಅವಳ ಸೌಂದರ್ಯಕೆ
ಮನಸೋಲದವರಿಲ್ಲ
ಅವಳೇ ನನ್ನ ಮೋಹಕ ತಾರೆ

ಸೂರ್ಯನನ್ನೇ ಚುಂಬಿಸುವಳು
ಶಶಿಯನ್ನೇ ನಾಚಿಸುವಳು
ನಕ್ಷತ್ರಗಳನ್ನೆ ಮರೆಮಾಡುವಳು
ಅವಳೇ ನನ್ನ ಮೋಹಕ ತಾರೆ

ತಾವರೆ ಪುಷ್ಪದಂತೆ ನಗುವಿನವಳು
ಹಂಸದ ನಡಿಗೆಯವಳು
ಇಬ್ಬನಿಯಂತೆ ನಾಚುವಳು
ಅವಳೇ ನನ್ನ ಮೋಹಕ ತಾರೆ

ಸೂಕ್ಷ್ಮತೆ ಅರಿತವಳು
ನನ್ನಯ ಹೃದಯದಲಿ
 ಗೂಡು ಕಟ್ಟಿಹಳು
ಭಾವನೆಯಲ್ಲಿ ತೇಲಾಡಿದವಳು
ಅವಳೇ ನನ್ನ ಮೋಹಕ ತಾರೆ.

ರಚನೆ:ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤

 "ಕಾಯಕ ಯೋಗಿ"

ಹಗಲಿರುಳು ಲೆಕ್ಕಿಸದೆ
ನಿತ್ಯನಿರಂತರ,ಬೆವರು
ಸುರಿಸಿ ದುಡಿಯುವವನೇ
ನಮ್ಮ ಕಾಯಕ ಯೋಗಿ.

ಜಾತಿ,ಧರ್ಮ ಎನ್ನದೇ
ಸಹಬಾಳ್ವೆ ಮೆರೆಯುವ
ಮೇಲು-ಕೀಳು ಅನ್ನದೆ
ಎಲ್ಲರೊಡನೆ ಬೆರೆತವನೇ
ನಮ್ಮ ಕಾಯಕ ಯೋಗಿ.

ಲಾಭ ನಷ್ಟ ನೋಡದೆ
ಖರ್ಚು ಲೆಕ್ಕಕ್ಕಿಡದೇ
ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿ
ಬೆಳೆಯನ್ನು ಬೆಳೆಯುವವನೇ
ನಮ್ಮ ಕಾಯಕ ಯೋಗಿ.

ಸಂತೆಯಲ್ಲಿ ಕಾಣಲಿಲ್ಲ
ಒಂದೊಳ್ಳೆ ಬೆಲೆ.
ಗಗನ ನೋಡುತಿಹದು
ಸಾಲವೆಂಬ ಶಿಖರ.
ಬಾಳನ್ನೆ ಬದಿಗೊತ್ತಿ,
ಸಮಾಜ ಸಾಕುವವನೇ
ನಮ್ಮ ಕಾಯಕ ಯೋಗಿ.

ಸುಳ್ಳು -ಪೊಳ್ಳು ಮಾತನಾಡಿ
ಓಟು ಪಡೆದು,
ಹಿಂದೆ ನೇಣು ಕುಣಿಕೆ
ತೂಗು ಹಾಕುತಿಹರು
ಹುಸಿ ಭರವಸೆಗೆ
ಮನವಗೊಡದೆ
ಪ್ರಜಾಪ್ರಭುತ್ವಕ್ಕೆ ಜೈ ಅನ್ನುವವರು
ಅವರೇ ನಮ್ಮ ಕಾಯಕ ಯೋಗಿ.

ರಚನೆ:ಚೌಡ್ಲಾಪುರ ಸೂರಿ.
9480106926
👤👤👤👤👤👤👤👤👤👤👤👤👤

 "ಒಡಲ ನುಡಿ"
ಪ್ರೀತಿ ಕಾಣದ ಹೃದಯಕ್ಕೆ
ಸಿಕ್ಕೇ ನೀನು.
ಸಿಕ್ಕ ಸಂತಸದಿ
ಕುಣಿದೆ.
ನನಗರಿವಿಲ್ಲದೇ ಹೃದಯದೊಳ್
ಮಾತನಾಡಿದೆ.
ಪ್ರತಿಕ್ಷಣವೂ ನಿನಗಾಗಿ
ತವಕಿಸಿದೆ.
ಪ್ರತಿ ದಿನವು ನಿನಗಾಗಿ
ದಾರಿ ಹುಡುಕಿದೆ.
ಮಧುರ ಮಾತಿಗಾಗಿ
ಚಡಪಡಿಸಿದೆ.
ನೂರೆಂಟು ಆಸೆ ಹೊತ್ತು
ಗೂಡು ಕಟ್ಟಿದೆ.
ಪ್ರತಿ ಕನಸು ನಿನದಾಗಲೆ0ದು
ದೇವರಲಿ ಬೇಡಿದೆ.
ನನ್ನೊಳಗೆ ಅಡಗಿರುವ
ಭಾವನಾ ಲಹರಿಯನು
ಕಾಗದದಿ ಗೀಚಿದೆ.
ಹೃದಯದ ಬರಹ ನೀಡಲು
ಹಾದಿಲಿ ಕಾದೆ
ನಿನ್ನ ಕಾಣದೆ ಕಂಗಲಾಗಿ
ಸದಾ ಜಪಿಸುತಿವೆ
 ಒಡಲ ನುಡಿಗಳು.
ರಚನೆ:ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤

 "ಭಾಸವಾಯಿತು"

ಮುಂಜಾನೆಯ ಮಂಜಿನಲಿ
ಕೊರೆಯುವ ಚಳಿಯಲಿ
ದೇಹ ನಡುಗುವಾಗ
ಬೆಚ್ಚಗೆ ಮಾಡಿದಾ0ಗ
ಭಾಸವಾಯಿತು.

ಹಕ್ಕಿಗಳ ಕಲರವ
ತೂಗುವ ಮರ -ಗಿಡ
ಸುಯ್ಯನೇ ಬೀಸುವ ಗಾಳಿ
ಮುಚ್ಚಿದ ನೇತ್ರಗಳು
ಬಿಗಿದಪ್ಪಿದಂತೆ
ಭಾಸವಾಯಿತು.

ದಡಬಡ ಜಳಕವ ಮಾಡಿ
ತಡವರಿಸಿ ಕೂಳ ತಿಂದು
ಹೊರಟೆ ನನ್ನ ಕಾಯಕಕೆ
ನಾನ್ ನಿನ್  ಜೊತೆಗೂಡುವೆ
ಎಂದು ಪೀಡಿಸಿದಂತೆ
ಭಾಸವಾಯಿತು.

ಬಿರಬಿರನೆ ಕೆಲಸವ ಮಾಡಿ
ದುರುಳರ ದೂಡಿ
ಮನೆಗೆ ಹೊರಟೆ
ಬಾಗಿಲಲಿ ನಿಂತು ಕೈ
ಬೀಸಿ ಕರೆದಂತೆ
ಭಾಸವಾಯಿತು.

ದುಡಿದ ದೇಹದಿ
ಬಸವಳಿದು ಕುಂತಾಗ
ನಲ್ಲೆಯು ಬಂದು
ಪ್ರೀತಿ ಮಾತಾಡಿದಾ0ಗ
ಭಾಸವಾಯಿತು.

ಬೇಸರದಿ ಯಾವುದೋ
ದೂರಾಲೋಚನೆಗಳು
ಮನದಲಿ ಮನೆಮಾಡಿದಾಗ
ಕಣ್ಣೀರು ಒರೆಸಿದಾ0ಗ
ಭಾಸವಾಯಿತು.

ಮನಸು ತಲ್ಲಣಿಸಿ
ಅಂಧಾಕಾರದಲಿ ಅವಿತಾಗ
ಕಷ್ಟಕ್ಕೆ ಕೈ ಒಡ್ಡಿ
ಸುಖದಲ್ಲಿ ತೇಲಾಡಿಸಿದಂತೆ
ಭಾಸವಾಯಿತು.

ರಚನೆ: ಚೌಡ್ಲಾಪುರ ಸೂರಿ
👤👤👤👤👤👤👤👤👤👤👤👤👤

ನನ್ ಗೆಳೆಯ

ತಪ್ಪು ತಿದ್ದಿ ಸರಿ ದಾರಿ
ತೋರಬಲ್ಲ ಅವಾ
ಗುರುವಲ್ಲ
ನನ್ ಗೆಳೆಯ

ಕ್ಷಣ ಕ್ಷಣಕ್ಕೂ ಜೊತೆಯಾಗಿ
ಸಹೋದರಲೊಬ್ಬನಾಗಿ
ಆಸ್ತಿ ಐಶ್ವರ್ಯ ವ್ಯಾಮೋಹಿಸದವ
ಅವಾ ಸಹೋದರನಲ್ಲ
ನನ್ ಗೆಳೆಯ

ಕಷ್ಟ ಕಾರ್ಪಣ್ಯಕ್ಕೆ ಮರುಗಿ
ಕಸ್ಟದೊಳ್ ಭಾಗಿಯಾಗಿ
ಮುನ್ನಡೆಸುವವ
ಅವಾ ತಂದೆಯಲ್ಲ
ನನ್ ಗೆಳೆಯ

ಮಡಿಲಲ್ಲಿ ಮಲಗಿಕೊಂಡು
ಕೈಯ ಮೇಲೆ ಕೈಯ ಒತ್ತಿ
ಸಾವಿನ ಜೊತೆ ಸರಸವಾಡುವವ
ಅವಾ ತಾಯಿಯಲ್ಲ
ನನ್ ಗೆಳೆಯ

ಧನ ಸಂಪತ್ತಿಗೆ ಪ್ರೀತಿಸದೆ
ಸೌಂದರ್ಯವ ವ್ಯಾಮೋಹಿಸದೆ
ಬಡತನವ ಆರಾಧಿಸುವವ
ಅವಾ ಪ್ರೀತಿಸಿದ ಗೆಳತಿಯಲ್ಲ
ನನ್ ಗೆಳೆಯ
  1. ರಚನೆ:ಚೌಡ್ಲಾಪುರ ಸೂರಿ