ಶಿವಾನಂದ್ ಕರೂರ್ ಮಠ್
ಕನ್ನಡ ಶಿಕ್ಷಕರು, ಶ್ರೀ ಸೋಮೇಶ್ವರ ವಿದ್ಯಾಲಯ, ದಾವಣಗೆರೆ ೫೭೭೦೦೪,
ಮೊಬೈಲ್ -೯೯೦೧೬೬೨೫೨೭
====================================
ನರನ ನಾಲಿಗೆ.
ನರನ ಇಚ್ಚೆಯಂತೆ
ಒಳಿತಿಗೂ ಕೆಡುಕಿಗೂ
ಬಳಕೆಯಾಗುವುದು ಕಾಣ...
ನಂಬುವ ಕಿವಿಯಿರೆ
ಬಾಯ್ದಂಬುಲಕೆ
ಬೊಗಳುವುದು ಕಾಣ...
ಕಂಗಳೆರಡ ಮಸುಕಾಗಿಸಿ
ಅಂತಃಸತ್ವವ ಮಂಕಾಗಿಸಿ
ಎಲುಬಿಲ್ಲದೆ ಜೊಲ್ಲು ಸ್ರವಿಸೊ
ನೀಚ ನಾಲಿಗೆ ನಂಬಿ
ನ್ಯಾಯ ನೀಡದಿರು
ಜಾಣಕೂಸೆ....
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.
ಸಖೀ...
ಸಪ್ತ ಹೆಜ್ಜೆಗಳೊಡಗೂಡಿ
ಸಖ್ಯವಾದ ಸಖಿಯೆ
ಸಪ್ತ ಸ್ವರಗಳೊಡಗೂಡಿ
ಸಖೀಗೀತೆ ಹಾಡುವೆ
ಹಸಿಮುನಿಸು ಮೂಡಲು
ತುಸುನಗುವ ಕಾಯುವೆ
ಜೀವನಾಡಿ ನೀನು-ನಾನು
ಪ್ರತಿ ಜನ್ಮದಲ್ಲೂ ಕೂಡುವೆ
ದಾಂಪತ್ಯಕೆ ಸಾಕ್ಷಿಯಾಗಿ
ಕರುಳು-ರಕ್ತ ಹಂಚಿದೆ
ಬದುಕಿನುದ್ದ ನೀನು ಕರಗಿ
ಮನೆಮನವ ಬೆಳಗಿದೆ
ಮರೆಯಾದರು ನನ್ನ ದೇಹ
ಮರೆಯಲಾದೀತೆ ನಿನ್ನ ತ್ಯಾಗ..?
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.
ಕೌರವೇಂದ್ರ.
ಅರಿಯದಾದೆ ಯಾಕೆ
ಜಗದ ಸೂತ್ರಧಾರನ
ಅರಿಯದಾದೆ ಯಾಕೆ
ಶಕುನಿ ಪಗಡೆಯಾಟವ
ಅರಿಯದಾದೆ ಯಾಕೆ
ಧರ್ಮ ನೀತಿ ಸಾರವ
ಅರಿಯದೇ ಎಲ್ಲವನೂ
ಅಳಿದ್ಹೋದೆ ನೀ ಕುರುನಂದನ
ಮರೆಯಲಾರರು ಯಾರೂ
ನಿನ್ನ ತೋಳ್ಬಲವನ
ಮರೆಯಲಾರ ದಿನಪಸುತ
ನಿನ್ನ ಆ ಆಲಿಂಗನ
ಮರೆಯಲಾರ ಶಲ್ಯರಾಜ
ನಿನ್ನ ಮಾತೃತನವನ
ಧರ್ಮ ಮರೆತೆಯೇಕೊ
ಕರ್ಮ ಫಲವ ಕಾಣಲು
ರಟ್ಟೆ ಬಲಕೆ ಸಾಟಿಯಾರು
ಸರ್ಪಧ್ವಜ ನಿನದಲ್ಲವೇ..
ಜಟ್ಟಿ ಗಧೆಯ ಹೊಡೆತಕೆ
ಯಾರಾದರು ನಿಲ್ವರೇ..
ಸ್ನೇಹ ತೋರೊ ದಯಾ ಸಿಂಧು
ಸುಯೋಧನ ನೀನಲ್ಲವೇ...
ರಾಜ್ಯದೆರಡು ಊರು ಕೊಡದ
ಛಲದಂಕ ಮಲ್ಲ ನೀ...
ಊರು ಭಂಗವಾದರೂನು
ಶಕ್ತಿ ತೋರಿ ಮಡಿದೆ ನೀ..
ಎಲ್ಲದಕೂ ಕಾರಣನು
ಯದುನಂದನ ತಿಳಿಯೊ ನೀ....
ಒಳಿತು ಮಾತು ಕೇಳದೇನೆ
ಕುರುಕುಲವ ಕೊಂದೆ ನೀ.
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.
ಗಣಪ ನೀನೇಕೆ ಹೀಗೆ?
ಗಣಪ ಗಣಪ ವಿದ್ಯಾ ಗಣಪ ನಿನಗೆ ವಂದನೆ
ಡೊಳ್ಳು ಹೊಟ್ಟೆ ಏಕೆ ನಿನಗೆ ಹೇಳು ಸುಮ್ಮನೆ
ಕಂದ ಕೇಳು ನಿನ್ನನಪ್ಪಿ ಒಪ್ಪಿಕೊಂಡಿಹೆ
ಎಲ್ಲ ತಪ್ಪು-ಒಪ್ಪು ನುಂಗಿ ದಪ್ಪವಾಗಿಹೆ
ಗಣಪ ಗಣಪ ಗೌರಿ ಗಣಪ ನಿನಗೆ ವಂದನೆ
ಗಜದ ಕರ್ಣ ಏಕೆ ನಿನಗೆ ಹೇಳು ಸುಮ್ಮನೆ
ಕಂದ ಕೇಳು ಕಿವಿಯ ಗುಟ್ಟು ನಿನಗೆ ಹೇಳುವೆ
ಎಲ್ಲ ಕೇಳಿ ಒಳ್ಳೆದು ಉಳಿಸಿ ದೊಡ್ಡದಾಗಿದೆ
ಗಣಪ ಗಣಪ ಶಂಕರ ಸುತ ನಿನಗೆ ವಂದನೆ
ಚಿಕ್ಕ ಬಾಯಿ ಏಕೆ ನಿನಗೆ ಹೇಳು ಸುಮ್ಮನೆ
ಕಂದ ಕೇಳು ಮಾತನೊಂದ ನಿನಗೆ ಹೇಳುವೆ
ಮಾತು ಮುತ್ತು ಎಂದು ತಿಳಿದು ಚಿಕ್ಕದಾಗಿದೆ
ಗಣಪ ಗಣಪ ಶಕ್ತಿ ಗಣಪ ನಿನಗೆ ವಂದನೆ
ಇಲಿಯ ಮೇಲೆ ಏಕೆ ಕೂತೆ ಹೇಳು ಸುಮ್ಮನೆ
ಕಂದ ಕೇಳು ಚಿಕ್ಕ ಇಲಿಯು ಯಾಕೆಂದು ಹೇಳುವೆ
ಚಿಕ್ಕ ಆಸೆ ಕನಸನೇರಿ ಸವಾರಿ ಮಾಡಿಹೆ
ಗಣಪ ಗಣಪ ಗಜಮುಖನೇ ನಿನಗೆ ವಂದನೆ
ನಿನ್ನ ಒಂದು ದಂತ ಏಕೆ ಸಣ್ಣದಾಗಿದೆ
ಕಂದ ಕೇಳು ದ್ವಂದ್ವ ನೀತಿ ಇದರಲಿ ಅಡಗಿದೆ
ಅನಗತ್ಯವಾದುದೆಂದು ತೆಗೆದು ಹಾಕಿದೆ
ಗಣಪ ಗಣಪ ಅಭಯ ಹಸ್ತ ನಿನಗೆ ವಂದನೆ
ನಿನಗೆ ಕೈಗಳೇಕೆ ಹೆಚ್ಚು ಹೇಳು ಸುಮ್ಮನೆ
ಕಂದ ಕೇಳು ಕರದ ಮಹಿಮೆ ನಿನಗೆ ಹೇಳುವೆ
ಕಷ್ಟ ನಷ್ಟಗಳ ನೆರವಿಗೆ ಕೈ
ಸಿದ್ಧವಾಗಿದೆ
ಗಣಪ ಗಣಪ ಜಗನ್ನಾಥ ನಿನಗೆ ವಂದನೆ
ಮೋದಕವ ಕೈಯಲೇಕೆ ಹಿಡಿದೆ ಸುಮ್ಮನೆ
ಮುದ್ದು ಕಂದ ಸಿಹಿಯು ಬೇಕೆ ನಿನಗೆ ಸವಿಯಲು ಕಷ್ಟಪಟ್ರೆ ಫಲವು ನಿನದೆ
ಸಿಹಿಯ ತಿನ್ನಲು
ಗಣಪ ಗಣಪ ಎಷ್ಟು ಚೆಂದ ನಿನ್ನ ವರ್ಣನೆ
ಸರ್ವ ಸಿದ್ಧಿ ಬುದ್ಧಿ ನೀಡು ವಕ್ರತುಂಡನೆ.
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.
ಅರಿವೇ ಗುರು
ಗುರುವೇ ಬ್ರಹ್ಮ ಗುರುವೇ ವಿಷ್ಣು
ಗುರುವೇ ಸಾಕ್ಷಾತ್ ಮಹೇಶ್ವರ
ಅರಿವೇ ಗುರುವು ಎನ್ನುವ ತತ್ವವ
ಮನದಲಿ ಮೂಡಿಸೋ ಈಶ್ವರ ||ಪ||
ಮಾತೆಯ ಮಮತೆ ನೀಡುವ ಗುರುಗಳೆ
ಸಾವಿರ ಶರಣು ನಿಮ್ಮಡಿಗಳಿಗೆ
ವಿದ್ಯೆಯನರಸಿ ಬುದ್ಧಿಯ ಕಲಿಯಲು
ಹರಸಿರಿ ನಮ್ಮನು ಅನುಘಳಿಗೆ
ಹರನೇ ಮುನಿದರು ಅಭಯವ ನೀಡುವೆ
ಮನ್ನಿಸು ನಮ್ಮಯ ತಪ್ಪುಗಳ
ತಪ್ಪನು ತಿದ್ದಿ ಗುರಿಯನು ಸೇರಲು
ದಯೆಯನು ಕರುಣಿಸು ಓ ದೇವ
ಕರಗಳ ಜೋಡಿಸಿ ಬೇಡುತ ಬಂದಿಹೆ
ಕರಕುಶಲಗಳನು ನೀ ಕಲಿಸು
ವಿದ್ಯೆಗೆ ಬುದ್ದಿಗೆ ಸದ್ಗುಣ ಸಿದ್ಧಿಗೆ
ಸವಿ ಅಮೃತವನು ನೀನುಣಿಸು
ಕತ್ತಲೆ ಕಳೆಯೊ ಜ್ಯೋತಿಯು ನೀನು
ಬೆಳಗುವ ಬದುಕ ಉದ್ಧರಿಸು
ತಂದೆ ತಾಯಿ ಬಂಧುವು ನೀನು
ಕೈಹಿಡಿದೆಮ್ಮನು ಮುನ್ನೆಡೆಸು. ||ಪ||
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.
ಎಲ್ಲೆ ಮೀರದಿರು
ಪರಕ್ಕೆ ವಿರೋಧವಿವುದು
ಎಲ್ಲೆಡೆಯೂ ಎಲ್ಲದರಲಿ,
ಕಲಿಯುಗದ ಸಹಾಯಕೆ
ಕೃತಕತೆಯ ಕೃತಜ್ಞತೆಯು,
ಶಿಷ್ಟಚಾರವೆಂಬುದಿಲ್ಲಿ
ಉಪದೇಶದಲಿ ಮಿನುಗಿ
ಮರೀಚಿಯಾಗುವ ಕಾಲವಿದು ಕಾಣ..
ಎಲ್ಲೇ ಇರು
ಎಲ್ಲೆಯ ಮೀರದೆ
ಹೆಜ್ಜೆಯ ನೀನಿಕ್ಕುವಂತಾಗು
ಜಾಣಕೂಸೆ..
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.
ಹೃದಯ...
ಮಿಡಿತವಿದೆ ಸದ್ದಿನೊಂದಿಗೆ
ಹಂಚುವ ಭಾವನೆಗಳು ಮೌನ
ಸಾಗರ ಮೀರುವ ವಿಶಾಲತೆ
ಭಿನ್ನರುಚಿಗಳ ಐಕ್ಯ ಗಾನ
ಹೃದಯವಿದು ಬಲು ಹಗುರ
ಭಾವನೆಗಳಿಂದಾಗಿ ಭಾರ
ಮಿಡಿಯುತಿದೆ ದಣಿವಿಲ್ದೆ
ಒಳಿತು ಸದ್ದುಗಳ ಆಗರ
ಬಂದೊದಗುವ ಕೆಡುಕುಗಳು
ಹಿಮ್ಮರಳಿವೆ ಅಲೆಯಂತ
ಆತ್ಮೀಯತೆಯ ಮುತ್ತುಗಳು
ಸಿಕ್ಕುತಲಿವೆ ಮೊಗೆದಂತೆ
ರಚನೆ,
ಶಿವಾನಂದ್ ಕರೂರ್ ಮಠ್
ಶಿಕ್ಷಕರು, ದಾವಣಗೆರೆ.