ದೊಡ್ಡರಂಗೇಗೌಡರ ಭಾವಗೀತೆಗಳು

ಮೆರೆಯಬೇಡವೋ ಮನುಜ / Mereyabedavo Manuja

ಮೆರೆಯಬೇಡವೋ ಮನುಜ....
ಅಂತರಾಳದ ಅಂಕೆ ಮೀರಿ,
ಕೊಂಕು ಬೀರಿದೆ ಸುಂಕ ಕಾದಿದೆ...

ನೀತಿ ಮೀರದೆ, ನೀನು ಭ್ರಾಂತಿ ಕಾಣದೆ,
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ.
ಡಂಭಾಚಾರವು ಏಕೋ ಏಕೋ?
ತುಂಬಾ ತೋರಿಕೆ ಏಕೋ ಏಕೋ?
ಸಹಜವಾಗಿ ಬಾಳಿ ಬದುಕಯ್ಯ...
                                                         ಮೆರೆಯಬೇಡವೋ ಮನುಜ....

ಡೌಲು ತೋರದೆ, ಎಂದು ಕೇಡು ಹೊಂಚದೆ,
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ.
ಪೊಳ್ಳು ಜಂಭವು ಸಾಕೋ ಸಾಕೊ
ಸುಳ್ಳು ವಂಚನೆ ಸಾಕೋ ಸಾಕೊ
ಸ್ನೇಹದಿಂದ ಲೋಕ ನೋಡಯ್ಯ...
                                                         ಮೆರೆಯಬೇಡವೋ ಮನುಜ....


ಮಾತಾಡೇ ನೀರೆ ಮಾತಾಡೆ... / Maatade neere maatade...

ಮಾತಾಡೇ ನೀರೆ ಮಾತಾಡೆ
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                         ಮಾತಾಡೇ...

ಸುಮ್ಮನೆ ಇದ್ದರು ಕೆಣಕುತ ಬಂದು
ಬಿಮ್ಮನೆ ಕುಳಿತರು ಬಳಸುತ ನಿಂದು
ಒಡನಾಡ ಬಂದೋಳು ನೀನಲ್ಲವೇ
ಹರೆಯದ ಸಿರಿ ಮಿಂಚಿ ಮೆರೆವಾಗ
ಹುರುಪಿನ ಸಿಹಿ ಹಂಚಿ ಹರಿವಾಗ 
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                        ಮಾತಾಡೇ...


ಹುಣ್ಣಿಮೆ ಮೂಡಲು ಕಣ್ಣಲೆ ಕರೆದು
ತಣ್ಣನೆ ಹೊತ್ತಲಿ ನಲ್ಮೆಯ ಮಿಡಿದು
ಜೊತೆಯಾಗಿ ಬೆರೆತೋಳು ನೀನಲ್ಲವೇ
ಒಸಗೆಯ ಬಿಸಿ ತಾಗಿ ನಗುವಾಗ
ಬೆಸುಗೆಯ ಸುಖ ಸಾರ ಸಿಗುವಾಗ
ಮನಸಾರೆ ನಿನ್ನ ನಾನು ಒಲಿದಾಗ, ಪ್ರೀತಿ ತಂದಾಗ
ಬರಬಾರದೇ ಬಳಿಗೆ ಬರಬಾರದೇ
                                                                       ಮಾತಾಡೇ...

                                                                                               - ಪ್ರೊ. ದೊಡ್ಡರಂಗೇಗೌಡ




ಮುಂಜಾನೆ ಮಂಜೆಲ್ಲ ಚಂದಾಗೈತೆ.. / Munjaane manjella chandaagaite

ಮುಂಜಾನೆ ಮಂಜೆಲ್ಲ ಚಂದಾಗೈತೆ..
ಸಂಗಾತಿ ತುಟಿ ಹಂಗೆ, ಹವಳಾದ ಮಣಿ ಹಂಗೆ ಹೊಳಪಾಗೈತೆ...

ಸಂಪಿಗೆ ತೂಗಿ ಚೆಂಡು ಹೂ ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ
                                                          ಮುಂಜಾನೆ ಮಂಜೆಲ್ಲ....

ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದ್ಹಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರೆದ್ಹಂಗೈತೆ.

                                                          ಮುಂಜಾನೆ ಮಂಜೆಲ್ಲ....

                                                                                              - ಪ್ರೊ. ದೊಡ್ಡರಂಗೇಗೌಡ


ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಬಂದದ್ದೆಲ್ಲ ಈಸ ಬೇಕಯ್ಯ ಗೆಣೆಯ,
ಕಾಣದ್ದಕ್ಕೆ ಚಿಂತೆ ಯಾಕಯ್ಯ,
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.
ಏಳು ಬೀಳು ಇರುವುದೇನೆ ಇಲ್ಲಿ ಹುಟ್ಟಿ ಬಂದ ಮೇಲೆ
ಸುಖ ದುಃಖ ಕಾಡೋದೇನೆ ಉಪ್ಪುಖಾರ ತಿಂದ ಮೇಲೆ 
ಕಷ್ಟ ಮೆಟ್ಟಿ ಸಾಗ ಬೇಕಯ್ಯ ಓ ಗೆಣೆಯ 
ಕೈಯ ಚೆಲ್ಲಿ ಕೊರಗ ಬೇಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.
ಪ್ರೀತಿಪ್ರೇಮ ನಡೆದ ಮೇಲೆ ತಪ್ಪೋದಿಲ್ಲ ರಾಸಲೀಲೆ
ಕದ್ದುಮುಚ್ಚಿ ನಡೆಯೋ ವೇಳೆ ಮನಸಿನಲ್ಲಿ ತೂಗುಯ್ಯಾಲೆ
ಒಳಗೆ ಹೊರಗೆ ಯಾಕೆ ಬೇಕಯ್ಯ ಓ ಗೆಣೆಯ
ಕಣ್ಣು ತೆರೆದು ಲೋಕ ನೋಡಯ್ಯ
ಗೋಣು ಹಾಕಿ ಕೂಡ ಬ್ಯಾಡ, ಗತ್ತಿನಾಗೆ ಬಾಳ ನೋಡ.

                                                                - ಪ್ರೊ. ದೊಡ್ಡರಂಗೇ ಗೌಡ